ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ 16 ಕಡೆ ಸ್ಕೈವಾಕ್‌ : ಪಾಲಿಕೆ ಸಭೆಯಲ್ಲಿ ಅನುಮೋದನೆ ಪಡೆಯಲು ಸಿದ್ಧತೆ

Last Updated 25 ಏಪ್ರಿಲ್ 2017, 20:31 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಖಾಸಗಿ ಸಹಭಾಗಿತ್ವದಲ್ಲಿ 16 ಪಾದಚಾರಿ ಮೇಲ್ಸೇತುವೆಗಳ (ಸ್ಕೈವಾಕ್‌)  ಟೆಂಡರ್‌ಗಳಿಗೆ ಬುಧವಾರ ನಡೆಯುವ ಸಾಮಾನ್ಯ ಸಭೆಯಲ್ಲಿ   ಅನುಮೋದನೆ ಪಡೆಯಲು ಸಿದ್ಧತೆ ಮಾಡಿಕೊಂಡಿದೆ.

‘ವಾಹನ ಸಂಚಾರ ದಟ್ಟಣೆ ಹೆಚ್ಚು ಇರುವ, ಕೂಡು ರಸ್ತೆಗಳಿರುವ 137 ಸ್ಥಳಗಳಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಬಿಬಿಎಂಪಿ ಉದ್ದೇಶಿಸಿತ್ತು. ಈ ಪೈಕಿ  9 ಕಡೆ ಈಗಾಗಲೇ ನಿರ್ಮಾಣವಾಗಿವೆ. 8 ಕಡೆ ಕಾಮಗಾರಿಗಳು ಪ್ರಗತಿಯಲ್ಲಿವೆ. 15  ಕಾಮಗಾರಿಗಳ ಟೆಂಡರ್‌ ಅನುಮೋದನೆ ಸಿಕ್ಕಿದ್ದರೂ ಕಾರಣಾಂತರಗಳಿಂದ ಕೆಲಸ ಪ್ರಾರಂಭವಾಗಿಲ್ಲ’ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಇನ್ನುಳಿದ 102 ಸ್ಕೈವಾಕ್‌ಗಳಿಗೆ ನಾಲ್ಕೈದು ಬಾರಿ ಟೆಂಡರ್‌ ಕರೆದರೂ ಯಾರೂ ಆಸಕ್ತಿ ತೋರಿಸಿರಲಿಲ್ಲ.  ಬಳಿಕ ಅಲ್ಪಾವಧಿ ಟೆಂಡರ್‌ ಕರೆದಾಗ 16 ಸ್ಕೈವಾಕ್‌ಗಳ ನಿರ್ಮಾಣಕ್ಕೆ ಕೆಲವು ಕಂಪೆನಿಗಳು ಆಸಕ್ತಿ ತೋರಿವೆ. ಈ ಟೆಂಡರ್‌ ಪಾಲಿಕೆ ಸಾಮಾನ್ಯ ಸಭೆಯ ಅನುಮೋದನೆ ಕೋರಲಾಗಿದೆ’ ಎಂದರು.

‘ಸಾಮಾನ್ಯ ಸಭೆಯ ಕಾರ್ಯಸೂಚಿಯಲ್ಲಿ 16 ಸ್ಕೈವಾಕ್‌ಗಳ ಟೆಂಡರ್‌ಗೆ ಅನುಮೋದನೆ ಪಡೆಯುವ ಬಗ್ಗೆ ಮಾತ್ರ ಪ್ರಸ್ತಾಪಿಸಲಾಗಿದೆ. ಇನ್ನೂ 13ಕಡೆ ಅವುಗಳನ್ನು ನಿರ್ಮಿಸಲು ಕಂಪೆನಿಗಳು ಆಸಕ್ತಿ ತೋರಿಸಿವೆ. ಅವುಗಳನ್ನು ಹೆಚ್ಚುವರಿ ಕಾರ್ಯಸೂಚಿಯಾಗಿ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದರು.

ಖಾಸಗಿ ಸಹಭಾಗಿತ್ವ: ‘ಪಾದಚಾರಿ ಮೇಲ್ಸೇತುವೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತಿದೆ.  ಕಾಮಗಾರಿ ಗುತ್ತಿಗೆ ಪಡೆಯುವ ಸಂಸ್ಥೆ ಸ್ವಂತ ವೆಚ್ಚದಲ್ಲಿ ಮೂಲಸೌಕರ್ಯ ನಿರ್ಮಿಸಬೇಕಾಗುತ್ತದೆ. 30 ವರ್ಷ ಅವರೇ ನಿರ್ವಹಣೆ ಹೊಣೆ ಹೊರಬೇಕು.  ಆಸುಪಾಸಿನ ಪಾದಚಾರಿ ಮಾರ್ಗಗಳ ನಿರ್ವಹಣೆಯನ್ನೂ ನೋಡಿಕೊಳ್ಳಬೇಕು.  ನೆಲಬಾಡಿಗೆ, ಜಾಹೀರಾತು ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಾಗುತ್ತದೆ’ ಎಂದು ಅವರು ವಿವರಿಸಿದರು. 

₹ 22 ಕೋಟಿ ಆದಾಯ ನಿರೀಕ್ಷೆ: ‘ಪ್ರತಿ ಸ್ಕೈವಾಕ್‌ನಿಂದಲೂ ಪಾಲಿಕೆಗೆ ವರ್ಷಕ್ಕೆ ಸರಾಸರಿ  ₹ 5 ಲಕ್ಷ ನೆಲಬಾಡಿಗೆ ಬರಲಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಯವಾಗುತ್ತದೆ. ಇಲ್ಲಿ ಜಾಹೀರಾತು ಪ್ರದರ್ಶಿಸುವ ಕಂಪೆನಿಯವರು  ಪ್ರತಿ ತಿಂಗಳು ಚದರ ಮೀಟರ್‌ಗೆ ₹ 260ರಂತೆ  ಜಾಹೀರಾತು  ತೆರಿಗೆ ಪಾವತಿಸಬೇಕಾಗುತ್ತದೆ. ಪ್ರತಿಯೊಂದು ಸ್ಕೈವಾಕ್‌ನಿಂದ ವಾರ್ಷಿಕ ₹ 12 ಲಕ್ಷ ಆದಾಯ ಬರಲಿದೆ. 137 ಪಾದಚಾರಿ ಮೇಲ್ಸೇತುವೆಗಳಿಂದ ಪಾಲಿಕೆಗೆ ವರ್ಷಕ್ಕೆ  ₹22 ಕೋಟಿಗೂ ಹೆಚ್ಚು ಆದಾಯ ನಿರೀಕ್ಷೆ ಮಾಡಲಾಗಿದೆ’ ಎಂದು  ವಿವರಿಸಿದರು.

ವಿರೋಧ: ‘ಸೌತ್‌ ಎಂಡ್ ವೃತ್ತದ ಪಟಾಲಮ್ಮ ರಸ್ತೆಯ ಪೆಟ್ರೋಲ್‌ `ಬಂಕ್‌ ಮುಂಭಾಗದಲ್ಲಿ ಸ್ಕೈವಾಕ್‌ ನಿರ್ಮಾಣ ಅನಗತ್ಯ’ ಎಂದು ಯಡಿಯೂರು ವಾರ್ಡ್‌ನ ಪಾಲಿಕೆ ಸದಸ್ಯೆ ಪೂರ್ಣಿಮಾ ರಮೇಶ್‌ ಹೇಳಿದ್ದಾರೆ. ಈ ಬಗ್ಗೆ ಅವರು ಮೇಯರ್‌ ಅವರಿಗೆ  ಮಂಗಳವಾರ ಮನವಿ ಸಲ್ಲಿಸಿದರು. ‘ಇದರಿಂದ ಜನರಿಗೆ ಅನುಕೂಲವಾಗದು. ಜಾಹೀರಾತು ಏಜೆನ್ಸಿಗಳು ಹಾಗೂ ಭ್ರಷ್ಟ ಅಧಿಕಾರಿಗಳ ಜೇಬು ತುಂಬಲಿದೆ’ ಎಂದಿದ್ದಾರೆ.

ಸಭೆಯ ಕಾರ್ಯಸೂಚಿ : ವಾರ್ಡ್‌ವಾರು ಸ್ವಚ್ಛತಾ ಮಾರ್ಷಲ್‌ಗಳನ್ನು  ಹಾಗೂ ಪ್ರತಿ ವಲಯಕ್ಕೆ ಜೂನಿಯರ್‌ ಕಮಿಷನರ್‌ಗಳನ್ನು ನೇಮಿಸುವ ವಿಚಾರವೂ ಸಭೆಯ ಕಾರ್ಯಸೂಚಿಯಲ್ಲಿದೆ.

ರಸ್ತೆಗೆ ಟಿಪ್ಪು ಹೆಸರು– ಇಂದು ನಿರ್ಧಾರ?
ಕಲಾಸಿಪಾಳ್ಯ ಬಸ್‌ ನಿಲ್ದಾಣದಿಂದ ಚಾಮರಾಜಪೇಟೆ ಒಂದನೇ ಮುಖ್ಯ ರಸ್ತೆ ಮೂಲಕ ಮೈಸೂರು ರಸ್ತೆಯನ್ನು ಸೇರುವ  ‘ಆಲೂರು ವೆಂಕಟರಾಯ  ರಸ್ತೆ’ಗೆ ‘ಟಿಪ್ಪು ಸುಲ್ತಾನ್‌ ಅರಮನೆ ರಸ್ತೆ’ ಎಂದು ಮರುನಾಮಕರಣ ಮಾಡುವ ವಿಷಯವೂ ಕಾರ್ಯಸೂಚಿಯಲ್ಲಿದೆ. ರಸ್ತೆಯ ಹೆಸರು ಬದಲಾವಣೆಗೆ ಆಕ್ಷೇಪ ಅಥವಾ ಸಲಹೆಗಳನ್ನು ಸಲ್ಲಿಸಲು ಬಿಬಿಎಂಪಿ 2015ರ ಮೇ 15ರಂದು   ಪ್ರಕಟಣೆ ನೀಡಿತ್ತು. ಒಟ್ಟು 10  ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ವಿದ್ವಾಂಸ ಎಂ.ಚಿದಾನಂದಮೂರ್ತಿ,  ಕನ್ನಡ ಸಂಘ ಸಂಸ್ಥೆಗಳ ಒಕ್ಕೂಟಗಳ ಆಕ್ಷೇಪಣೆಗಳೂ  ಇದರಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT