ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದರೆ ಗಂಧ ಹೊಮ್ಮುವುದೇಕೆ?

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಮೊದಲ ಮಳೆಯ ಸೊಗಸಿಗೆ ಮರುಳಾಗದವರುಂಟೆ? ಆ ಸೊಗಸಿಗೆ ಇನ್ನಷ್ಟು ಪುಳಕ ತರುವ ಮಣ್ಣಿನ ಘಮಲನ್ನು ಸವಿಯದೆ ಇರಲು ಸಾಧ್ಯವಾದೀತೆ? ಘಮಗುಡುವ ಆ ಗಂಧವೇ ಅಲ್ಲವೇ ಎಷ್ಟೋ ಕವಿಗಳ ‘ಮಳೆ ಕವಿತೆ’ಗಳಿಗೆ ಸ್ಫೂರ್ತಿಯಾಗಿರುವುದು?
 
ಆದರೆ ಆ ಸುವಾಸನೆ ಹೇಗೆ ಬರುತ್ತದೆ? ಅದು ನಿಜಕ್ಕೂ ಮಣ್ಣಿನ ವಾಸನೆಯೇ? ಅದಕ್ಕೆ ಕಾರಣ ಏನಿರಬಹುದು ಎಂದು ಎಂದಾದರೂ ಯೋಚಿಸಿದ್ದೇವೆಯೇ?
 
ಇಂಥ ಯೋಚನೆಯೊಂದು 1964ರಲ್ಲೇ ಹುಟ್ಟಿಕೊಂಡಿತ್ತು. ಆಸ್ಟ್ರೇಲಿಯಾದ ಇಸಾಬೆಲ್ ಜಾಯ್‌ ಬಿಯರ್ ಹಾಗೂ ಆರ್‌.ಜಿ. ಥಾಮಸ್ ಎಂಬ ಇಬ್ಬರು ವಿಜ್ಞಾನಿಗಳು ಇದೇ ಪ್ರಶ್ನೆಯನ್ನು ಎದುರಿಗಿಟ್ಟುಕೊಂಡು ಈ ಸುಗಂಧದ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ತೊಡಗಿಕೊಂಡಿದ್ದರು. ಆಗಲೇ ಈ ಗಂಧಕ್ಕೊಂದು ಹೆಸರನ್ನೂ ಇಟ್ಟರು. ಅದೇ ‘ಪೆಟ್ರಿಕೋರ್’ (ಪೆಟ್ರ –ಕಲ್ಲು, ಇಕೋರ್ –ದೇವರ ರಕ್ತ–ಪುರಾತನ ಕಾಲದ ನಂಬಿಕೆ).
 
ಅವರ ನಂತರ ಮಳೆಯ ಈ ಸುವಾಸನೆ ಕುರಿತು ಸಾಕಷ್ಟು ಅಧ್ಯಯನಗಳು, ಸಂಶೋಧನೆಗಳೂ ನಡೆದವು. ಅದರ ಪ್ರಕಾರ ಈ ಗಂಧಕ್ಕೆ ಕಾರಣವನ್ನೂ ಕಂಡುಕೊಳ್ಳಲಾಯಿತು.
 
ಮಳೆ ಬಂದಾಗ ಈ ರೀತಿ ಮಣ್ಣಿನಿಂದ ಸುಗಂಧ ಹೊಮ್ಮಲು ಮುಖ್ಯ ಕಾರಣ ಬ್ಯಾಕ್ಟೀರಿಯಾ. ಆ ಬ್ಯಾಕ್ಟೀರಿಯಾದ ಹೆಸರು ಅಕ್ಟಿನೊಮೈಸೆಟಿಸ್. ಮಣ್ಣಿನ ಒಳಗಿನ ತೇವದ ವಾತಾವರಣದಲ್ಲಿ ಈ ಬ್ಯಾಕ್ಟೀರಿಯಾಗಳು ಬೀಜಕಗಳನ್ನು ಸೃಷ್ಟಿಸುತ್ತವೆ.
 
ಮಳೆ ಬಂದು ಭೂಮಿಗೆ ನೀರಿಳಿಯುತ್ತಿದ್ದಂತೆ, ಅದರೊಂದಿಗೆ ಈ ಬೀಜಕಗಳು ಬೆರೆತು ಹೊರಗೆ ಹೊಮ್ಮುತ್ತವೆ. ಮಳೆ ನಿಂತ ಮೇಲೆ ಗಾಳಿಯೊಂದಿಗೆ ಇವು ಬೆರೆತು ಈ ರೀತಿ ಸುವಾಸನೆಯನ್ನು ಬೀರಲು ಕಾರಣವಾಗುತ್ತವೆ.
 
ಸುವಾಸನೆ ಬೀರುವಲ್ಲಿ, ಇನ್ನೂ ಒಂದು ಮುಖ್ಯ ಸಂಗತಿ ಎಂದರೆ, ಕಲ್ಲು ಹಾಗೂ ಮಣ್ಣಿನಲ್ಲಿ ಬಹು ದೀರ್ಘ ಕಾಲ ಶೇಖರಣೆಗೊಂಡ ಸಸ್ಯಗಳ ತೈಲ. ಈ ತೈಲವು ಮಳೆ ನೀರಿನೊಂದಿಗೆ ಮಿಶ್ರಗೊಳ್ಳುವುದೇ ಸುಗಂಧಕ್ಕೆ ಕಾರಣವಂತೆ.

ವಾಯು ಅವಲಂಬಿತವಾಗಿರುವ ತೈಲವು ಕಲ್ಲುಗಳಲ್ಲಿ ಹಾಗೂ ಮಣ್ಣಿನೊಂದಿಗೆ ಬೆರೆತು ಮಳೆ ಬಂದಾಕ್ಷಣ ಗಾಳಿಯೊಂದಿಗೆ ಸೇರಿ ಸುವಾಸನೆಯನ್ನು ಹೊಮ್ಮಿಸುತ್ತವೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT