ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟ ಅನುಭವ ಪಾಠವಾದಾಗ...

Last Updated 26 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಹರ್ಷವರ್ಧನ್ ಜಾಲಾ
ಜಗತ್ತಿನಲ್ಲಿ ಪ್ರತಿಭೆ ಮತ್ತು ಕ್ರಿಯಾಶೀಲತೆಗೆ ಎಂದಿಗೂ ಗೆಲುವು ಸಿಕ್ಕೇ ಸಿಗುತ್ತದೆ. ಅದು ಕಿರಿಯ ವಯಸ್ಸಿನಲ್ಲಾಗಿರಬಹುದು ಅಥವಾ ಹಿರಿಯ ವಯಸ್ಸಿನಲ್ಲಾಗಿರಬಹುದು! ಈ ಜಗತ್ತು, ಈ ಸಮಾಜ ಅವರನ್ನು ಗುರುತಿಸುವುದು ಶತಸಿದ್ಧ! ಇದಕ್ಕೆ, ಗುಜರಾತ್‌ನ 14 ವರ್ಷದ ಬಾಲಕ ಹರ್ಷವರ್ಧನ್ ಜಾಲಾ ಅವರ ಸಾಧನೆಯೇ ಸಾಕ್ಷಿ.
 
ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಹರ್ಷವರ್ಧನ್, ಮನೆಯವರ ನೆರವು ಪಡೆದು 5 ಲಕ್ಷ ರೂಪಾಯಿ ವೆಚ್ಚದಲ್ಲಿ ಎರಡು ಸಣ್ಣ ಡ್ರೋಣ್ ಮಾದರಿಗಳನ್ನು ತಯಾರಿಸುವ ಮೂಲಕ ದೇಶದ ಗಮನ ಸೆಳೆದಿದ್ದಾನೆ.
 
ಇದೀಗ ಗುಜರಾತ್ ಸರ್ಕಾರದ ಸಹಯೋಗದಲ್ಲಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಡ್ರೋಣ್ ಅಭಿವೃದ್ಧಿಪಡಿಸುವ ಯೋಜನೆಯನ್ನು ಹರ್ಷವರ್ಧನ್ ಕೈಗೆತ್ತಿಕೊಂಡಿದ್ದಾನೆ. ಈಗಾಗಲೇ ಹೊಸ ಡ್ರೋಣ್ ಬಗ್ಗೆ ಪೇಟೆಂಟ್ ಪಡೆದಿರುವ ಈತ ಸ್ಥಳೀಯ ವಿಜ್ಞಾನಿಗಳ ಸಹಕಾರದೊಂದಿಗೆ ಕಾರ್ಯಮಗ್ನರಾಗಿದ್ದಾರೆ.
 
ನಾಗರಿಕರು ಮತ್ತು ಸೇನಾ ಯೋಧರ ಅಮೂಲ್ಯ ಪ್ರಾಣವನ್ನು ರಕ್ಷಿಸುವ ಸಲುವಾಗಿ ಈ ಡ್ರೋಣ್ ನಿರ್ಮಾಣ ಮಾಡಲಾಗುತ್ತಿದೆ. ಭೂಕುಸಿತ, ಹಿಮಪಾತ ಹಾಗೂ ಯುದ್ಧದ ಸಂದರ್ಭಗಳಲ್ಲಿ ಅಪಾಯದಲ್ಲಿರುವ ನಾಗರಿಕರು ಅಥವಾ ಯೋಧರನ್ನು ಸುಲಭವಾಗಿ ಪತ್ತೆ ಹಚ್ಚುವುದು ಇದರ ವಿಶೇಷ.
 
ಹಾಗೇ ಸಣ್ಣ ಬಾಂಬ್ ಅನ್ನು ಕೂಡ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಇದು ಹೊಂದಿದೆ. ಚಾಲಕರಹಿತವಾಗಿ ಹಾರಾಟ ನಡೆಸುವ ಈ ಡ್ರೋಣ್ ಹವಾಮಾನ ವೈಪರೀತ್ಯದ ಸಂದರ್ಭಗಳಲ್ಲೂ ಕೆಲಸ ಮಾಡಬಲ್ಲದು! ಹಾಗೇ ಅಡೆತಡೆಗಳ ನಡುವೆಯೂ ನಿಖರವಾಗಿ ಚಿತ್ರಗಳನ್ನು ಸೆರೆಹಿಡಿಯಬಲ್ಲದು.  
 
ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿದ್ದ ಯೋಧರ ನಾಪತ್ತೆ ಪ್ರಕರಣಗಳೇ ಈ ಡ್ರೋಣ್ ಆವಿಷ್ಕಾರಕ್ಕೆ ಸ್ಫೂರ್ತಿಯಾಗಿದೆ ಎಂದು ಹರ್ಷವರ್ಧನ್ ಹೇಳುತ್ತಾನೆ. ನಿಜಕ್ಕೂ ಹರ್ಷವರ್ಧನ್ ಸಾಧನೆ ಅನನ್ಯ ಮತ್ತು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.
www.facebook/harshwardhanzal/drone
****
ಮೀನು ಸಿಂಘಾಲ್ಜಾ
ಗತಿಕವಾಗಿ ಮಹಿಳೆಯರು ಎರಡು ಬಹು ಮುಖ್ಯ ಸವಾಲುಗಳನ್ನು ಎದುರಿಸುತ್ತಿದ್ದಾರೆ! ಒಂದು ವೃತ್ತಿ ಜೀವನ, ಮತ್ತೊಂದು ಸಂಸಾರ! ಕೆಲಸ ಮಾಡುತ್ತಲೇ ಸಂಸಾರ ತೂಗಿಸುವುದು ಬಹಳ ಕಷ್ಟದ ಕೆಲಸ ಎನ್ನುತ್ತಾರೆ ಯುವ ಸಾಧಕಿ ಮೀನು ಸಿಂಘಾಲ್.

ವೃತ್ತಿಜೀವನಕ್ಕೆ ಹೆಚ್ಚು ಒತ್ತು ಕೊಟ್ಟರೆ, ಮನೆ ಮತ್ತು ಮಕ್ಕಳನ್ನು ಸಹಜವಾಗಿಯೇ ನಿರ್ಲಕ್ಷಿಸಿದಂತಾಗುತ್ತದೆ. ಸಂಸಾರಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿದರೆ ಕೆಲಸ ಕಳೆದುಕೊಳ್ಳುವ ಅಪಾಯ ಎದುರಾಗುತ್ತದೆ. ಈ ಎರಡನ್ನೂ ಸರಿದೂಗಿಸುವುದು ಕಷ್ಟ ಎನ್ನುತ್ತಾರೆ ಅವರು.

ಮೀನು, ರಾಜಸ್ತಾನದ ಜೈಪುರದವರು. ವಿವಾಹಿತರಾಗಿರುವ ಅವರು ಮೂರು ವರ್ಷಗಳ ಹಿಂದೆ ಕಾರ್ಪೊರೇಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸದ ಒತ್ತಡದಿಂದಾಗಿ ಮಗಳ ಜತೆ ಕಾಲ ಕಳೆಯಲೂ ಸಾಧ್ಯವಾಗುತ್ತಿರಲಿಲ್ಲ. ಹಾಗೆಂದು ಕೆಲಸವನ್ನು ನಿರ್ಲಕ್ಷ್ಯ ಮಾಡದಿರುವ ಅನಿವಾರ್ಯ ಸ್ಥಿತಿ ಅವರದ್ದು. ಕೊನೆಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಗಳ ಜತೆ ಕಾಲ ಕಳೆಯ ತೊಡಗಿದರು.
 


ಈ ವೇಳೆ ಮನೆಯಲ್ಲೇ ಕುಳಿತು ಸಂಪಾದಿಸುವ ಅಥವಾ ಕೆಫೆ ಮಾದರಿಯಲ್ಲಿ ವ್ಯಾಪಾರ ನಡೆಸುವ ಬಗ್ಗೆ ಮೀನು ಆಲೋಚನೆ ಮಾಡುತ್ತಾರೆ. ಪುಸ್ತಕ ಅಂಗಡಿ, ಟಿಫನ್ ಸೆಂಟರ್, ಬ್ಯೂಟಿಪಾರ್ಲರ್ ನಡೆಸುವ ಆಲೋಚನೆಗಳು ಹೊಳೆಯುತ್ತವೆ. ಇದೇ ವೇಳೆ ಮಗಳ ಹುಟ್ಟುಹಬ್ಬ ಕೂಡ ಬಂದು ಹೋಗುತ್ತದೆ.

ಸಂಬಂಧಿಕರು ಮತ್ತು ಗೆಳೆಯರು ಕೊಟ್ಟ ಉಡುಗೊರೆಗಳ ಕವರ್‌ಗಳನ್ನು ಹರಿದು ಹಾಕುತ್ತ ಮಗಳು ಆಟವಾಡುತ್ತಿರುತ್ತಾಳೆ. ಇದನ್ನು ಗಮನಿಸಿದ ಅವರಿಗೆ ಉಡುಗೊರೆಗಳ ಉದ್ಯಮ ಆರಂಭಿಸುವ ಯೋಚನೆ ಮೊಳೆಯುತ್ತದೆ. ಕೂಡಲೇ ಅದರ ಬಗ್ಗೆ ಅಧ್ಯಯನ ನಡೆಸುತ್ತಾರೆ. ಉಡುಗೊರೆ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇರುವುದು ಅವರಿಗೆ ಗೊತ್ತಾಗುತ್ತದೆ.

2015ರಲ್ಲಿ ‘ಇಂಡಿಯಾ ಸಂತಾ’ ಎಂಬ ಗಿಫ್ಟ್ ಉದ್ಯಮ ಆರಂಭಿಸುತ್ತಾರೆ. ಮೊದಲು ಅಂಗಡಿ ರೂಪದಲ್ಲಿ ಜನ್ಮತಳೆದ ಈ ಕಂಪೆನಿ ಇಂದುಇ-ಕಾಮರ್ಸ್ ಕಂಪೆನಿ ಆಗಿ ಪರಿವರ್ತನೆಗೊಂಡಿದೆ.

ಲಕ್ಷಾಂತರ ರೂಪಾಯಿ ವಹಿವಾಟು ನಡೆಸುತ್ತಿರುವ  ಇಂಡಿಯಾ ಸಂತಾ ಕಂಪೆನಿ ವಿದೇಶಗಳಿಗೂ  ಸರಕುಗಳನ್ನು ರಫ್ತು ಮಾಡುತ್ತಿದೆ. ನನ್ನ ಮಗಳ ಹುಟ್ಟುಹಬ್ಬ ನಮ್ಮ ಬದುಕನ್ನೇ ಬದಲಿಸಿತು ಎನ್ನುತ್ತಾರೆ ಮೀನು.  www.indiasanta.com
****
ಫರ್ ಬಾಲ್ ತಂಡ
ಮೆಟ್ರೊ ನಗರಗಳ ಬದುಕು ಸಾಮಾನ್ಯವಾಗಿ ಜಂಜಡ ಮತ್ತು ಒತ್ತಡಗಳಿಂದ ತುಂಬಿರುತ್ತದೆ. ಅದರಲ್ಲೂ ವಿಮಾ, ಬ್ಯಾಂಕಿಂಗ್, ಮಾಧ್ಯಮ, ಐಟಿ ಬಿಟಿ ಸೇರಿದಂತೆ ಕಾರ್ಪೊರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುವವರಂತೂ ಒತ್ತಡದ ಪರಿಣಾಮ ಖಿನ್ನತೆಗೆ ಒಳಗಾಗಿರುತ್ತಾರೆ.

ವಾರಾಂತ್ಯದಲ್ಲಿ ಎರಡು ದಿನ ರಜೆ ಕೊಟ್ಟರೂ ಒತ್ತಡ ಕಡಿಮೆಯಾಗಿರುವುದಿಲ್ಲ! ಒತ್ತಡ ಕಡಿಮೆ ಮಾಡಿ ಮನಸ್ಸನ್ನು ಹಗುರ ಮಾಡುವ ಸಲುವಾಗಿ ಯುವಕರ ತಂಡವೊಂದು ‘ಸಾಕು ಪ್ರಾಣಿ ಚಿಕಿತ್ಸೆ’ ಅಥವಾ ಪೆಟ್ ಥೆರಪಿ ಎಂಬ ವಿಭಿನ್ನ ದಾರಿಯನ್ನು ಕಂಡುಕೊಂಡಿದೆ.
 


ಗುರುಗ್ರಾಮದವರಾದ ಶ್ರುತಿ ಶರ್ಮಾ, ಅನಿಮೇಶ್ ಕಟಿಯಾರ್, ಕುನಾಲ್ ದರಾಲ್, ಅರುಶಿ ದೀಕ್ಷಿತ್ ‘ಫರ್‌ ಬಾಲ್ ಸ್ಟೋರಿ’ ಎಂಬ ಪೆಟ್ ಥೆರಪಿ ಸ್ಟಾರ್ಟ್ಅಪ್ ಆರಂಭಿಸಿದ್ದಾರೆ. ಕೆಲಸದ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿರುವವರಿಗೆ ಸಾಕು ಪ್ರಾಣಿಗಳ ಜತೆಯಲ್ಲಿ ಆಟವಾಡಿಸುವುದೇ ಸಾಕುಪ್ರಾಣಿ ಚಿಕಿತ್ಸೆಯ ವಿಧಾನ. ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ಈ ವಿಧಾನ ಚಾಲ್ತಿಯಲ್ಲಿದೆ.

ದೊಡ್ಡ ದೊಡ್ಡ ಕಂಪೆನಿಗಳು ತಿಂಗಳಿಗೆ ಒಂದು ಬಾರಿ ತಮ್ಮ ನೌಕರರಿಗೆ ಪ್ರಾಣಿಗಳ ಜತೆಯಲ್ಲಿ ಆಟವಾಡಿಸುತ್ತಾರೆ ಎಂದು ಅನಿಮೇಶ್ ಹೇಳುತ್ತಾರೆ, ಪ್ರಸ್ತುತ ನಾಯಿ, ಬೆಕ್ಕು, ಮೊಲ, ಪಾರಿವಾಳ, ಗಿಳಿಗಳ ಮೂಲಕ ಪೆಟ್ ಥೆರಪಿ ನೀಡಲಾಗುತ್ತಿದೆ. ಕಂಪೆನಿಗಳು, ಮಾಲ್ ಗಳು ಹಾಗೂ ಗ್ರಾಹಕರ ಮನೆಗಳಿಗೂ ತೆರಳಿ ಈ ಥೆರಪಿ ನೀಡುತ್ತಿರುವುದಾಗಿ ಅನಿಮೇಶ್ ಹೇಳುತ್ತಾರೆ. ಸಾಕು ಪ್ರಾಣಿಗಳಿಗೆ ತರಬೇತಿ ನೀಡಲಾಗಿದ್ದು ಅವು ಗ್ರಾಹಕರ ಜತೆ ಅನ್ಯೋನ್ಯವಾಗಿ ಇರುತ್ತವೆ.

ಗ್ರಾಹಕರು ಹೇಳಿದ ಕೆಲಸವನ್ನು ಮಾಡುತ್ತವೆ. ಇದರಿಂದ ಅವರ ಮನಸ್ಸು ಉಲ್ಲಾಸಗೊಂಡು ಮನಸ್ಸಿನಲ್ಲಿರುವ ಒತ್ತಡ ತಿಳಿಯಾಗುತ್ತದೆ. ಒತ್ತಡ ನಿವಾರಣೆಗಾಗಿ ಪ್ರವಾಸ, ಚಾರಣಕ್ಕಿಂತಲೂ ಇದು ಉತ್ತಮ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ ಎಂದು ತಂಡದ ಮತ್ತೊಬ್ಬ ಸದಸ್ಯರಾದ ಅರುಶಿ ದೀಕ್ಷಿತ್ ಹೇಳುತ್ತಾರೆ.
www.furballstory.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT