ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನಲ್ಲ’ದ ಪಾತ್ರಗಳಲ್ಲಿ ನಟಿಸಬೇಕು...

Last Updated 27 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
lಓದಿದ್ದು ಎಂಜಿನಿಯರಿಂಗ್‌, ಸಿನಿಮಾ ಬಗ್ಗೆ ಆಸಕ್ತಿ ಹುಟ್ಟಿಕೊಂಡಿದ್ದು ಹೇಗೆ?
ನಾನು ಕಥಕ್‌ ಡಾನ್ಸರ್‌ ಕೂಡ. ಹಾಗೆಯೇ ‘ವೀಮೂವ್‌’ ರಂಗತಂಡದಲ್ಲಿ ಇಂಗ್ಲಿಷ್‌ ಮತ್ತು ಕನ್ನಡ ನಾಟಕಗಳನ್ನು ಮಾಡ್ತಿದ್ದೆ. ಹಾಗೆಯೇ ಒಂದು ಕಿರುಚಿತ್ರವನ್ನು ಮಾಡಿದೆ. ಅದನ್ನು ನೋಡಿಯೇ ಅನೂಪ್‌ ಭಂಡಾರಿ ‘ರಂಗಿತರಂಗ’ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡರು. ಚಿತ್ರರಂಗಕ್ಕೆ ಬಂದಿದ್ದ ಹೀಗೆ.
 
lಚಿತ್ರರಂಗಕ್ಕೆ ಬಂದ ಮೇಲೆ ನಿಮ್ಮ ಬದುಕಿನಲ್ಲಿ ಯಾವ ರೀತಿಯ ಬದಲಾವಣೆ ಆಗಿದೆ?
ಈಗ ಬೇರೆ ಬೇರೆ ರೀತಿಯ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಪ್ರತಿಯೊಂದು ಸಿನಿಮಾದಲ್ಲಿ, ಪ್ರತಿಯೊಂದು ಸೆಟ್‌ನಲ್ಲಿಯೂ ಕಲಿಯುವುದು ಇದ್ದೇ ಇರುತ್ತದೆ. ಜನ ಗುರ್ತಿಸುತ್ತಾರೆ. ಆ ಪ್ರೀತಿ–ಅಭಿಮಾನ ನನ್ನ ಮೊದಲ ಸಿನಿಮಾ ‘ರಂಗಿತರಂಗ’ದಿಂದಲೇ ದೊರಕಿದೆ. ಈಗಲೂ ನನ್ನನ್ನು ‘ರಂಗಿತರಂಗ’ದ ಪಾತ್ರದ ಮೂಲಕವೇ ಗುರ್ತಿಸುತ್ತಾರೆ. 
 
lಮೊದಲ ಸಿನಿಮಾ ಸೂಪರ್‌ ಹಿಟ್‌ ಆದಮೇಲೂ ಸರಣಿಯಾಗಿ ಚಿತ್ರಗಳಲ್ಲಿಯೇನೂ ನಟಿಸಿಲ್ಲ. ಇದು ಪ್ರಜ್ಞಾಪೂರ್ವಕ ಆಯ್ಕೆಯೇ?
ರಂಗಿತರಂಗದ ನಂತರ ‘ಯು ಟರ್ನ್’ನಲ್ಲಿ ನಟಿಸಿದೆ. ಪವನ್‌ ಕುಮಾರ್‌ ಜತೆ ಕೆಲಸ ಮಾಡಬೇಕು ಅಂತ ತುಂಬಾನೇ ಆಸೆ ಇತ್ತು. ಅದು ‘ಯು ಟರ್ನ್‌’ನಲ್ಲಿ ನೆರವೇರಿತು. ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದೆ. ಈಗ ತುಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಚಿತ್ರರಂಗದಿಂದ ದೂರ ಇರಬೇಕು ಎಂಬ ಯಾವ ಉದ್ದೇಶವೂ ಇಲ್ಲ. ನನ್ನ ಜೀವನದ ಕೊನೆಯವರೆಗೂ ನಟಿಸುತ್ತಲೇ ಇರಬೇಕು ಎಂಬುದು ನನ್ನ ಆಸೆ. 
 
lಒಂದು ಪಾತ್ರವನ್ನು ಆಯ್ದುಕೊಳ್ಳುವಾಗ ನೀವು ಯಾವ ಮಾನದಂಡಗಳನ್ನು ಅನುಸರಿಸುತ್ತೀರಿ?
ಸ್ಕ್ರಿಪ್ಟ್‌ ಚೆನ್ನಾಗಿರಬೇಕು ಮತ್ತು ನನ್ನ ಪಾತ್ರ ಚೆನ್ನಾಗಿರಬೇಕು. ಈಗ ಕನ್ನಡದಲ್ಲಿ ತುಂಬ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಮಹಿಳೆಯರಿಗೂ ಪ್ರಾತಿನಿಧ್ಯ ಇರುವ ಸಿನಿಮಾಗಳು ಬರುತ್ತಿವೆ. ಎಲ್ಲ ರೀತಿಯ ಸಿನಿಮಾಗಳನ್ನೂ ಜನರು ನೋಡುತ್ತಿದ್ದಾರೆ. ಇಂಥ ಕಾಲದಲ್ಲಿ ನಾನೂ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದು ನನಗೆ ತುಂಬ ಖುಷಿಕೊಡುತ್ತಿದೆ.
 
lನೀವು ರಂಗಭೂಮಿ ಹಿನ್ನೆಲೆಯಿದ್ದವರು. ರಂಗಭೂಮಿ ಮತ್ತು ಸಿನಿಮಾಕ್ಷೇತ್ರದ ನಡುವೆ ಏನು ವ್ಯತ್ಯಾಸ ಕಂಡಿರಿ?
ಎರಡೂ ಕ್ಷೇತ್ರಗಳ ನಡುವೆ ವ್ಯತ್ಯಾಸ ಖಂಡಿತ ಇದೆ. ಕಲಾವಿದನಿಗೆ ರಂಗಭೂಮಿ ಹಿನ್ನೆಲೆ ಇದ್ದರೆ ಸಿನಿಮಾ ಕ್ಷೇತ್ರದಲ್ಲಿ ನಟಿಸುವುದು ಸ್ವಲ್ಪ ಸುಲಭ ಆಗಬಹುದೇನೋ ಅನಿಸುತ್ತದೆ. ನನಗಂತೂ ರಂಗಭೂಮಿ ಮತ್ತು ಕಥನ್‌ ನೃತ್ಯ ಕಲಿತಿದ್ದು ನಟನೆಗೆ ತುಂಬ ಸಹಾಯಕವಾಗಿದೆ. 
 
l‘ಕಾಫೀ ತೋಟ’ದ ಬಗ್ಗೆ ಹೇಳಿ.
‘ಕಾಫೀ ತೋಟ’ ಸಿನಿಮಾದಲ್ಲಿ ಟಿ.ಎನ್‌.  ಸೀತಾರಾಮ್‌ ಅವರಿಂದ ತುಂಬ ಕಲಿತುಕೊಂಡಿದ್ದೀನಿ. ಅವರು ನಿರ್ದೇಶಕರಷ್ಟೇ ಅಲ್ಲ, ಬರಹಗಾರರೂ ಹೌದು. ಭಾಷಾಶುದ್ಧಿಯ ಬಗ್ಗೆ ಅವರು ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಅವರದೇ ಒಂದು ಶೈಲಿಯಿದೆ. ಜತೆಗೆ ಆ ಚಿತ್ರದ ಛಾಯಾಗ್ರಾಹಕ ಅಶೋಕ್  ಕಶ್ಯಪ್‌ ಜತೆ ಕೆಲಸ ಮಾಡಲು ಸಿಕ್ಕಿದ್ದೂ ಒಂದು ಒಳ್ಳೆಯ ಅನುಭವ. 
 
l‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’ ಸಿನಿಮಾದಲ್ಲಿ ಅನಂತ್‌ನಾಗ್‌ ಜತೆ ತೆರೆ ಹಂಚಿಕೊಂಡ ಅನುಭವ ಹೇಗಿತ್ತು?
ನನಗೆ ತುಂಬ ತೃಪ್ತಿ ನೀಡಿದ ಸಿನಿಮಾ ಅದು. ಅನಂತ್‌ನಾಗ್‌ ಅವರಂಥ ನಟರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದೇ ಭಾಗ್ಯ. ಅವರು ಎಷ್ಟು ವಿನಯವಂತರು, ಸಹಕಲಾವಿದರಿಗೆ ಪೂರ್ತಿ ಬೆಂಬಲ ನೀಡುತ್ತಾರೆ. ಈ ಸಿನಿಮಾದಲ್ಲಿ ಅವರು ತುಂಬಾನೇ ತೊಡಗಿಸಿಕೊಂಡಿದ್ದಾರೆ.

ಸೆಟ್‌ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಬಹಳ ವಿಷಯಗಳ ಬಗ್ಗೆ ಆಳವಾದ ಜ್ಞಾನವಿದೆ ಅವರಿಗೆ. ನಾನು ಅವರ ಮಗಳೇನೋ ಅನ್ನಿಸುವಷ್ಟರ ಮಟ್ಟಿಗೆ ಪ್ರೀತಿ ತೋರುತ್ತಿದ್ದರು. ಅಷ್ಟೊಂದು ಪ್ರತಿಭಾವಂತರಾಗಿದ್ದರೂ ಒಂದಿಷ್ಟೂ ಅಹಂಕಾರವಿಲ್ಲ.

ಈ ಚಿತ್ರದ ಕಥೆಯೂ ಆಸಕ್ತಿಕರವಾಗಿದೆ. ಕಾರ್ಪೊರೇಟ್‌ ಜಗತ್ತಿನಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ. ಜನರೇಶನ್‌ ಗ್ಯಾಪ್‌ ಬಗ್ಗೆ ಮಾತನಾಡುವ ಸಿನಿಮಾ ಇದು. ನಾನು ಇಂಥ ಪಾತ್ರಗಳಲ್ಲಿ ನಟಿಸಿಲ್ಲ. ನನ್ನ ಪಾಲಿಗೆ ಇದೊಂದು ಡ್ರೀಂ ಕ್ಯಾರೆಕ್ಟರ್‌.

lಒಂದು ಪಾತ್ರಕ್ಕೆ ನೀವು ಹೇಗೆ ಸಿದ್ಧರಾಗುತ್ತೀರಿ?
ನಾನು ಮೊದಲೇ ಸ್ಕ್ರಿಪ್ಟ್‌ ಓದಿಕೊಳ್ಳುತ್ತೇನೆ. ಈ ಪಾತ್ರಕ್ಕೆ ಭಾವನಾತ್ಮಕವಾಗಿ ಏನೇನೂ ಬೇಕಾಗುತ್ತದೆ ಎಂಬುದನ್ನು ಗುರ್ತಿಸಿಕೊಳ್ಳುತ್ತೇನೆ. ಕೆಲವು ಸಲ ಬೇರೆ ಬೇರೆ ಸಿನಿಮಾಗಳು, ವಿಡಿಯೊ ಕ್ಲಿಪ್‌ಗಳನ್ನೂ ನೋಡಿ ತಿಳಿದುಕೊಳ್ಳುತ್ತೇನೆ. ಇದರ ಜತೆಗೆ ನಿರ್ದೇಶಕರು, ಸಹಕಲಾವಿದರ ಬೆಂಬಲವೂ ಇರಲೇಬೇಕಾಗುತ್ತದೆ. ಇದುವರೆಗೆ ನಾನು ಮಾಡಿದ ಎಲ್ಲ ಸಿನಿಮಾಗಳಲ್ಲಿಯೂ ತುಂಬ ಭಿನ್ನ ಭಿನ್ನಪಾತ್ರಗಳಲ್ಲಿ ನಟಿಸಿದ್ದೇನೆ. ಆ ತೃಪ್ತಿ ನನಗಿದೆ.

lಎಂಥ ಪಾತ್ರಗಳಲ್ಲಿ ನಟಿಸಲು ನಿಮಗಿಷ್ಟ?
ಪ್ರತಿಯೊಂದು ಸಿನಿಮಾ ನೋಡಿದಾಗಲೂ ಇಂಥ ಪಾತ್ರದಲ್ಲಿ ನಟಿಸಬೇಕು ಅನಿಸುತ್ತಿರುತ್ತದೆ. ನನಗೆ ಈಗ ಬರುತ್ತಿರುವ ಪಾತ್ರಗಳೂ ಅಷ್ಟೇ ಚೆನ್ನಾಗಿವೆ. ನನ್ನ ವರ್ತನೆಗೆ – ಗುಣಧರ್ಮಕ್ಕೆ ಹೊಂದಿಕೆ ಆಗದ, ನಾನಲ್ಲದೇ ಇರುವಂಥ ಪಾತ್ರಗಳನ್ನು ಮಾಡುವುದು ನನಗೆ ಸವಾಲು ಅನಿಸುತ್ತದೆ. ಅಂಥ ಸವಾಲಿನ ಪಾತ್ರಗಳನ್ನು ಮಾಡಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT