ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಕ್ಮಾ ದಾಳಿಯ ಹುತಾತ್ಮ ಯೋಧರ ಮಕ್ಕಳ ಶಿಕ್ಷಣ ವೆಚ್ಚ ಭರಿಸಲಿದ್ದಾರೆ ಗೌತಮ್ ಗಂಭೀರ್

Last Updated 28 ಏಪ್ರಿಲ್ 2017, 8:47 IST
ಅಕ್ಷರ ಗಾತ್ರ

ನವದೆಹಲಿ: ಛತ್ತೀಸ್‌ಗಢದ ಸುಕ್ಮಾದಲ್ಲಿ ಸೋಮವಾರ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಎಲ್ಲ ಯೋಧರ ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕ್ರಿಕೆಟಿಗ ಗೌತಮ್ ಗಂಭೀರ್ ಘೋಷಿಸಿದ್ದಾರೆ.

‘ಗೌತಮ್ ಗಂಭೀರ್ ಫೌಂಡೇಷನ್ ಮೂಲಕ ಶಿಕ್ಷಣ ವೆಚ್ಚ ಭರಿಸಲಾಗುವುದು. ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆ ಪ್ರಗತಿಯಲ್ಲಿದೆ. ನನ್ನ ತಂಡ ಈಗಾಗಲೇ ಕಾರ್ಯಾರಂಭ ಮಾಡಿದೆ. ಸದ್ಯದಲ್ಲೇ ಈ ಕೆಲಸದಲ್ಲಾದ ಪ್ರಗತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಗಂಭೀರ್ ನೇತೃತ್ವದ ಕೋಲ್ಕತ್ತ ನೈಟ್‌ರೈಡರ್ಸ್ ತಂಡದ ಎಲ್ಲ ಸದಸ್ಯರು, ಬುಧವಾರ ನಡೆದ ಐಪಿಎಲ್ ಪಂದ್ಯದ ಸಂದರ್ಭ ಕೈಗೆ ಕಪ್ಪು ಪಟ್ಟಿ ಧರಿಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ್ದರು.

ಯೋಧರ ಹತ್ಯೆಗೆ ಬೇಸರ: ‘ಬುಧವಾರ ಬೆಳಿಗ್ಗೆ ಎದ್ದ ತಕ್ಷಣ, ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ನ ಇಬ್ಬರು ಯೋಧರ ಮಕ್ಕಳು ರೋಧಿಸುತ್ತಿರುವ ಚಿತ್ರವನ್ನು ದಿನಪತ್ರಿಕೆಯಲ್ಲಿ ನೋಡಿದೆ. ಒಬ್ಬಾಕೆ ಹುತಾತ್ಮ ತಂದೆಗೆ ಸಲ್ಯೂಟ್ ಮಾಡುತ್ತಿದ್ದರೆ, ದುಃಖದಿಂದ ಅಳುತ್ತಿದ್ದ ಮತ್ತೊಬ್ಬಾಕೆಯನ್ನು ಸಂಬಂಧಿಕರೊಬ್ಬರು ಸಂತೈಸುತ್ತಿರುವ ಚಿತ್ರಗಳು ಅವುಗಳಾಗಿದ್ದವು’ ಎಂದು ಗಂಭೀರ್ ಬೇಸರ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಹಿಂದೂಸ್ತಾನ್ ಟೈಮ್ಸ್ ಉಲ್ಲೇಖಿಸಿದೆ.

ಅಲ್ಲದೆ, ನಕ್ಸಲ್ ದಾಳಿ ಘಟನೆಯಿಂದಾಗಿ ಪಂದ್ಯದ ಮೇಲೆ ಗಮನ ಕೇಂದ್ರೀಕರಿಸಲಾಗುತ್ತಿಲ್ಲ ಎಂದೂ ಅವರು ಹೇಳಿದ್ದಾರೆ.

‘ಸಶಸ್ತ್ರ ಪಡೆಗಳನ್ನೂ ನಾನು ಪ್ರೀತಿಸುತ್ತೇನೆ. ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ ಆತ್ಮೀಯನನ್ನೊಬ್ಬನನ್ನು ನಾವು ಕಳೆದುಕೊಳ್ಳುವುದನ್ನು ಕ್ರಿಕೆಟ್ ಪಂದ್ಯವೊಂದನ್ನು ಸೋತದ್ದರ ಜತೆ ಎಂದಿಗೂ ಹೋಲಿಸಲಾಗದು’ ಎಂದು ಅವರು ಹೇಳಿದ್ದಾರೆ.

‘ಸಿಆರ್‌ಪಿಎಫ್‌ನ 25 ಸಿಬ್ಬಂದಿ ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡಿದರು. ಕೆಲ ಬಾರಿ, ಆ ತ್ಯಾಗಕ್ಕೆ ನಾವು ಅರ್ಹರೇ ಎಂಬ ಅನುಮಾನ ಮೂಡುತ್ತದೆ’ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT