ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಂಘಟಿತ ಕಾರ್ಮಿಕರ ಮಕ್ಕಳ ಸಾರ್ಥಕ ಶಿಬಿರ

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ತರಗತಿ, ಪಠ್ಯ–ಪುಸ್ತಕ, ಓದು, ಪರೀಕ್ಷೆ, ಫಲಿತಾಂಶ ಹೀಗೆ ನಾನಾ ಪ್ರಕ್ರಿಯೆಗಳಲ್ಲಿ ಮುಳುಗಿಹೋಗಿರುವ ಶಾಲಾ ವಿದ್ಯಾರ್ಥಿಗಳಿಗೆ ಜೀವನಾವಶ್ಯಕ ಕೌಶಲ ಮತ್ತು ಸೃಜನಶೀಲತೆ ಬೆಳೆಸಲು ಬೇಸಿಗೆ ಶಿಬಿರಗಳು ಅಗತ್ಯ. ಅವಕಾಶ ವಂಚಿತ ಮಕ್ಕಳಿಗೂ ಇಂತಹ ಶಿಬಿರಗಳ ಲಾಭ ದೊರಕಿಸಬೇಕು ಎಂಬುದು ‘ಸಮುದಾಯ’ ಸಂಘಟನೆಯ ಆಶಯ.

ಮನೆಗೆಲಸ, ಬೀದಿವ್ಯಾಪಾರಿಗಳು, ಆಟೊ ಚಾಲಕರು, ಕಟ್ಟಡ ಕಾರ್ಮಿಕರು ಹೀಗೆ ಅಸಂಘಟಿತ ವಲಯಗಳಲ್ಲಿನ ಕಾರ್ಮಿಕರ ಮಕ್ಕಳಿಗಾಗಿ ಮೂರು ವರ್ಷಗಳಿಂದ ಉಚಿತ ಬೇಸಿಗೆ ಶಿಬಿರ ಆಯೋಜಿಸುತ್ತಾ ಬಂದಿದೆ ‘ಸಮುದಾಯ’.

ಪ್ರಸಕ್ತ ವರ್ಷದ ಬೇಸಿಗೆ ಶಿಬಿರ ಏಪ್ರಿಲ್‌ 15ರಿಂದ ಆರಂಭವಾಗಿದ್ದು, ಮೂವತ್ತಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ. ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಲು ಮತ್ತು ಮನೋವಿಕಾಸಕ್ಕೆ ರಂಗಭೂಮಿ ಉತ್ತಮ ವೇದಿಕೆ. ಆದಕಾರಣ ಈ ಬಾರಿ ‘ರಂಗ ವಿಜ್ಞಾನ ಶಿಬಿರ’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎನ್ನುತ್ತಾರೆ ಶಿಬಿರದ ಸಂಯೋಜಕರಾದ ಕೆ.ಎಸ್‌. ವಿಮಲಾ ಮತ್ತು ಬಸಮ್ಮ.

‘ನೀರು ನೈಸರ್ಗಿಕವಾದ ಅನರ್ಘ್ಯ ಸಂಪತ್ತು. ಅದನ್ನು ಸಂರಕ್ಷಿಸುವುದು ಎಲ್ಲರ ಜವಾಬ್ದಾರಿ. ಈ ಕುರಿತು ಜಾಗೃತಿ ಮೂಡಿಸುವ ಮೂಕಾಭಿನಯ ನಾಟಕವನ್ನು ಸಿದ್ಧಪಡಿಸಲಾಗಿದೆ. ಮಕ್ಕಳು ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ತಾವು ತಿಳಿದುಕೊಂಡಿದ್ದನ್ನು ತಮ್ಮ ಮನೆಯಲ್ಲಿ ಜಾರಿ ಮಾಡುತ್ತಾರೆ ಎನ್ನುವ  ವಿಶ್ವಾಸವಿದೆ. ಏಪ್ರಿಲ್‌ 30ಕ್ಕೆ ಶಿಬಿರದ ಸಮಾರೋಪ ಸಮಾರಂಭ ನಡೆಯಲಿದ್ದು, ನಂತರದಲ್ಲಿ ನಗರದ ಕೆಲ ಪ್ರಮುಖ ಪ್ರದೇಶಗಳಲ್ಲಿ ಈ ನಾಟಕವನ್ನು ಪ್ರದರ್ಶಿಸುವ ಯೋಜನೆ ಇದೆ’ ಎನ್ನುತ್ತಾರೆ ಅವರು.

‘ಮಕ್ಕಳ ಹಲವು ಶಿಬಿರಗಳಲ್ಲಿ ನಾನು ಪಾಲ್ಗೊಂಡಿದ್ದೇನೆ. ತುಂಟಾಟಗಳ ನಡುವೆಯೇ ಅವರನ್ನು ತಿದ್ದಿತೀಡಿ ಅಭ್ಯಾಸ ಮಾಡಿಸುವುದು ಬಹಳ ಕಷ್ಟದ ಕೆಲಸ. ಆದರೂ ಕಲಿತು ಮಾಡುವ ಉತ್ಸಾಹ ಅವರಲ್ಲಿದೆ. ಈ ಶಿಬಿರದಲ್ಲಿ ನನಗೆ ನೀಡಿದ್ದ ಹದಿನೈದು ದಿನಗಳ ಕಾಲಾವಕಾಶದಲ್ಲಿ ಹೇಗೆ ಮಕ್ಕಳನ್ನು ತರಬೇತುಗೊಳಿಸುವುದು ಎಂದು ತಲೆಕೆಡಿಸಿಕೊಂಡಿದ್ದೆ. ಆದರೆ, ಮಕ್ಕಳು ಬಹಳ ಚುರುಕು. ಎಲ್ಲವನ್ನೂ ಬೇಗನೆ ಗ್ರಹಿಸಿ ಕಲಿತಿದ್ದಾರೆ’ ಎನ್ನುತ್ತಾರೆ ಶಿಬಿರದ ನಿರ್ದೇಶಕ, ಕಿರುತೆರೆ ನಟ ಶ್ರೀದತ್ತ.

‘ಮಾಲತಿ ಸಾಗರ ರಚಿತ ‘ತಿರುಕನ ಕನಸು’ ಮತ್ತು ಡಾ.ಆರ್‌.ವಿ. ಭಂಡಾರಿ ರಚಿತ ‘ಪ್ರೀತಿಯ ಕಾಳು’ ನಾಟಕಗಳ ಅಭ್ಯಾಸ ಮಾಡಿಸಲಾಗಿದೆ. ಕೋಲಾಟ, ರಂಗಗೀತೆಗಳನ್ನೂ ಮಕ್ಕಳು ಕಲಿತಿದ್ದಾರೆ. ಮುಖವಾಡ ತಯಾರಿಕೆ, ಚಿತ್ರಕಲೆ, ಕಾಗದದಲ್ಲಿ ಕರಕುಶಲ ವಸ್ತುಗಳ ತಯಾರಿಕೆಯನ್ನೂ ಹೇಳಿಕೊಡಲಾಗಿದೆ. ಶಿಬಿರದಲ್ಲಿ ಕಲಿತದ್ದನ್ನು ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರದರ್ಶಿಸುವರು’ ಎನ್ನುತ್ತಾರೆ ಅವರು.
ಸಂಪರ್ಕ ಸಂಖ್ಯೆ: ಬಸಮ್ಮ–90353 14035

ಸಮುದಾಯ ಮಕ್ಕಳ ಬೇಸಿಗೆ ರಂಗ ಶಿಬಿರದ ಸಮಾರೋಪ: ಅತಿಥಿ-‘ಸಮುದಾಯದ ಅಧ್ಯಕ್ಷ ಅಚ್ಯುತ, ಎಸ್‌.ಎನ್‌.ನಾಗರಾಜ ರೆಡ್ಡಿ, ಉದಯ ಗರುಡಾಚಾರ್‌, ಸ್ಥಳ: ನ್ಯಾಷನಲ್‌ ಕಾಲೇಜು ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣ, ಬಸವನಗುಡಿ, ಏ. 30, ಭಾನುವಾರ ಸಂಜೆ 6ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT