ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣೆಯಾಗುವವರ ‘ಕಾಣದ ಮುಖ’

Last Updated 28 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮಾಲತಿ ದಿವಾಕರ
ಇಪ್ಪತ್ತೆರಡು ವರುಷದ ಆ ಹುಡುಗಿ ತುಮಕೂರಿನ ಸಮೀಪದ ಹಳ್ಳಿಯವಳು. ಅವಳ ಹೆಸರು ಆಶಾ ಎಂದುಕೊಳ್ಳಿ. 
ಇಬ್ಬರು ತಮ್ಮಂದಿರ ನೆಚ್ಚಿನ ಅಕ್ಕ. ತಂದೆ–ತಾಯಿಯರಿಗೆ ರೂಪವತಿಯೂ ಜಾಣೆಯೂ ಆದ ಮಗಳ ಬಗ್ಗೆ ಎಲ್ಲಿಲ್ಲದ ಹೆಮ್ಮೆ. ಅದಕ್ಕೆಂದೇ ಅವಳ ಆಯ್ಕೆಯ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಓದಿಸುತ್ತಿದ್ದರು.

ಹಾಸ್ಟೆಲ್‌ನಲ್ಲಿದ್ದು ಕೊನೆಯ ಸೆಮಿಸ್ಟರ್ ಓದುವ ಹುಡುಗಿಗೆ ಫೋನ್ ಮಾಡಿದ ಅಮ್ಮ ‘ಹಬ್ಬಕ್ಕೆ ಮನೆಗೆ ಬಾ’ ಎಂದು ಎಂದಳು. ಫೋನಿನಲ್ಲಿ ‘ಮೈಸೂರಿನಿಂದ ಬೆಂಗಳೂರಿಗೆ ಹೊರಟಿದ್ದೇನೆ. ಸಂಜೆಯೊಳಗೆ ಮನೆಗೆ ಬರುತ್ತೇನೆ’ ಎಂದ ಹುಡುಗಿ ನಂತರ ನಾಪತ್ತೆ.

ಹರೆಯದ ಹುಡುಗಿ ನಾಪತ್ತೆಯಾದರೆ ತಂದೆ ತಾಯಂದಿರೂ ಸೇರಿ ಎಲ್ಲರ ಮನಸ್ಸಿನಲ್ಲಿಯೂ ಮೊದಲು ಮೂಡುವ ಆಲೋಚನೆ – ‘ಯಾವುದೋ ಹುಡುಗನೊಂದಿಗೆ ಓಡಿಹೋಗಿದ್ದಾಳೆ’ ಎಂದೇ. ಆಶಾಳ ತಂದೆ ತಾಯಂದಿರೂ ಹಾಗೇ ಅಂದುಕೊಂಡರು. ಒಂದಿಷ್ಟು ಕಣ್ಣೀರು ಸುರಿಸಿ, ‘ಮನೆ ಮರ್ಯಾದೆ ತೆಗೆದಳು’ ಎಂದು ಹಿಡಿ ಶಾಪ ಹಾಕಿದರು. ‘ನಮ್ಮ ಪಾಲಿಗೆ ಅವಳು ಸತ್ತೇ ಹೋಗಿದ್ದಾಳೆ’ ಎಂದುಕೊಂಡು ಕಹಿ ಮರೆಯುವ ಯತ್ನ ನಡೆಸಿದರು.

ನಿಜ ಸಂಗತಿ ಬೇರೆಯೇ ಆಗಿತ್ತು. ಅವತ್ತು ಊರಿಗೆ ಬರಲು ಬೆಂಗಳೂರಿನ ಬಸ್‌ಸ್ಟಾಂಡ್‌ನಲ್ಲಿ ಬಸ್ಸಿಗಾಗಿ ಕಾಯುತ್ತಿರುವಾಗ ಆಶಾಳಿಗೆ ಮಧ್ಯವಯಸ್ಕ ಹೆಂಗಸಿನ ಪರಿಚಯವಾಯಿತು. ಹಸಿವೆಯಿಂದ ಚಡಪಡಿಸುತ್ತ ಹೋಟೆಲಿನ ಕಡೆ ಕಣ್ಣು ಹಾಯಿಸುತ್ತಿದ್ದ ಆಶಾಳೆದುರು – ‘ಇದು ನಾನೇ ತಯಾರಿಸಿದ ಹೋಳಿಗೆ, ತಿನ್ನಮ್ಮಾ’ ಎಂದು ಬಲು ಪ್ರೀತಿಯಿಂದ ಒತ್ತಾಯಿಸಿ ಕೊಟ್ಟಳು ಆ ಹೆಂಗಸು. ‘ನಿನ್ನನ್ನು ನೋಡಿದರೆ ನನ್ನ ತೀರಿಹೋದ ಮಗಳ ನೆನಪಾಗುತ್ತದೆ’ ಎಂದು ಕಣ್ಣು ತುಂಬಿಕೊಂಡು ನೆತ್ತಿ ನೇವರಿಸಿದಳು.

ಅರ್ಧ ಹೋಳಿಗೆ ತಿಂದಿದ್ದೊಂದೇ ನೆನಪು ಆಶಾಳಿಗೆ. ಎಚ್ಚರವಾದಾಗ ಮುಂಬಯಿಯ ಕಾಮಾಟಿಪುರದಲ್ಲಿದ್ದಳು. ಹೋಳಿಗೆ ತಿನ್ನಿಸಿದ ಹೆಂಗಸು, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಶಾಳನ್ನು ಊರಿಂದೂರಿಗೆ ಸಾಗಿಸಿ ಮಾರಿದ್ದಳು.

ಮುಂದೆ ಎರಡು ವರ್ಷ ಅಲ್ಲಿಂದ ತಪ್ಪಿಸಿಕೊಳ್ಳಲಾರದೇ ಆಶಾ ನರಕಯಾತನೆ ಅನುಭವಿಸಿದಳು. ಒಮ್ಮೆ ಹೋಟೆಲ್ ಒಂದರಲ್ಲಿ ಪೊಲೀಸ್ ರೈಡಿನಲ್ಲಿ ಸಿಕ್ಕಿಬಿದ್ದ ಅವಳು, ತನ್ನ ಕಥೆಯನ್ನೆಲ್ಲ ಮಹಿಳಾ ಪೊಲೀಸ್ ಅಧಿಕಾರಿಯಲ್ಲಿ ಹೇಳಿಕೊಂಡಳು. ತನ್ನನ್ನು ಇಲ್ಲಿಂದ ಪಾರು ಮಾಡುವಂತೆ ಬೇಡಿಕೊಂಡಳು. ಆಗ ಆ ಅಧಿಕಾರಿ, ಆಶಾಳ ಹೆತ್ತವರನ್ನು ಸಂಪರ್ಕಿಸಿ, ಹೆತ್ತವರಿಗೆ ಅವಳನ್ನು ಒಪ್ಪಿಸಿದರು. ಹೆತ್ತವರು ಅವಳಿಗೆ ಸೂಕ್ತ ಚಿಕಿತ್ಸೆ, ಕೌನ್ಸೆಲಿಂಗ್ ಕೊಡಿಸಿದರು. ಈಗ ಆಶಾ ಎಂಜಿನಿಯರಿಂಗ್ ಶಿಕ್ಷಣ ಮುಂದುವರಿಸುತ್ತಿದ್ದಾಳೆ.
***

ಕುಡುಕ ಗಂಡನೊಂದಿಗೆ ಬಾಳ್ವೆ ನಡೆಸಲು ಹೆಣಗಾಡುತ್ತಿದ್ದ ಕೊಲ್ಲಾಪುರದ ಕಮಲಾಳ (ಹೆಸರು ಬದಲಾಯಿಸಿದೆ) ಕಥೆಯೂ ಇದಕ್ಕಿಂತ ತುಂಬ ಭಿನ್ನವಾದದ್ದೇನಲ್ಲ.

ಅವಳ ನೆರೆಯವಳೇ ಅವಳನ್ನು ಕೆಲಸ ಕೊಡಿಸುತ್ತೇನೆಂದು ನಂಬಿಸಿ ಹುಬ್ಬಳ್ಳಿಗೆ ಕರೆತಂದು ಒಬ್ಬಾತನಿಗೆ ಮಾರಿಬಿಟ್ಟರು. ಮುಂದೆ ಮೂರು ತಿಂಗಳು ಲಾಡ್ಜ್‌ ಒಂದರಲ್ಲಿ ಬಂಧನದಲ್ಲಿದ್ದು ಕಷ್ಟಪಡುತ್ತಿದ್ದವಳನ್ನು ನೋಡಿ ಮರುಗಿದ ಲಾಡ್ಜ್‌ ಬಾಯ್, ಅವಳನ್ನು ಅಲ್ಲಿಂದ ಪಾರುಮಾಡಿದ, ಮದುವೆಯನ್ನೂ ಮಾಡಿಕೊಂಡ. ಅವರಿಗೊಬ್ಬಳು ಮಗಳು ಹುಟ್ಟಿದಳು. ಆದರೆ ದುರ್ದೈವದಿಂದ ಗಂಡ ತೀರಿಕೊಂಡ.

ಅನಕ್ಷರಸ್ಥೆ ಕಮಲಾ ತನ್ನ ಮತ್ತು ಮಗಳ ಜೀವನ ನಿರ್ವಹಣೆಗೆ ಅನಿವಾರ್ಯವಾಗಿ ಮತ್ತದೇ ಕತ್ತಲಕೂಪಕ್ಕೆ ಬಿದ್ದಿದ್ದಾಳೆ. ಐದು ವರ್ಷಗಳ ಹಿಂದೆ ಎಚ್.ಐ.ವಿಯೆಂಬ ಮಹಾಮಾರಿಯೂ ಅವಳ ಬೆನ್ನೇರಿದೆ.

ತನ್ನ ಈ ಕಡುಕಷ್ಟದಲ್ಲಿಯೂ ಮಗಳನ್ನು ಓದಿಸಿ ಉದ್ಯೋಗಕ್ಕೆ ಸೇರಿಸಿದ್ದಾಳೆ. ಈಗ ಆ ವೃತ್ತಿಯನ್ನು ತ್ಯಜಿಸಿ ಎಚ್.ಐ.ವಿ ಪೀಡಿತರಿಗೆ ನೆರವಾಗುವ ‘ಬೆಳಕು’ ಸಂಸ್ಥೆಯ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾಳೆ. ಸಂಸ್ಥೆಯ ಸದಸ್ಯರಲ್ಲಿ ಯಾರಾದರೂ ಆಸ್ಪತ್ರೆಗೆ ದಾಖಲಾದರೆ ನೆರವಾಗುತ್ತಿದ್ದಾಳೆ.

‘ನಾನು ನಾಪತ್ತೆಯಾದಾಗ ನಮ್ಮ ಮನೆಯವರು ನನ್ನನ್ನು ಹುಡುಕಿಸಿದ್ದರೆ ನನಗೆ ಈ ಗತಿ ಬರುತ್ತಿರಲಿಲ್ಲವೇನೋ. ಕೆಟ್ಟ ಮೇಲೆ ಮತ್ತೆ ಹೆತ್ತವರಿಗೆ–ಊರಿನವರಿಗೆ ಮುಖ ತೋರಿಸುವ ಧೈರ್ಯವೇ ನನಗೆ ಬರಲಿಲ್ಲ. ಕಳೆದ ಇಪ್ಪತೈದು ವರ್ಷಗಳಿಂದ ನಾನು ಹುಬ್ಬಳ್ಳಿಯಲ್ಲಿಯೇ ಬದುಕುತ್ತಿದ್ದೇನೆ’ ಎಂದು ಕಮಲಾ ಬಿಕ್ಕುತ್ತಾ ಹೇಳುವಾಗ, ಅವಳಂಥ ಅಸಂಖ್ಯ ಹೆಣ್ಣುಮಕ್ಕಳ ದುಃಖವೆಲ್ಲ ಆ ಧ್ವನಿಯಲ್ಲಿ ಪ್ರತಿಧ್ವನಿಸುತ್ತಿದೆ ಎನ್ನಿಸಿ ಮನಸ್ಸು ಭಾರವಾಗುತ್ತದೆ.

ರಾಜ್ಯದಲ್ಲಿ ಯುವತಿಯರನ್ನು ನಂಬಿಸಿ ಮೋಸ ಮಾಡುವ, ಮಾನವ ಕಳ್ಳ ಸಾಗಾಣಿಕೆಯ ಜಾಲ ಸಕ್ರಿಯವಾಗಿವೆ ಎನ್ನುವುದಕ್ಕೆ ಇವೆರಡು ಸತ್ಯ ಘಟನೆಗಳೇ ನಿದರ್ಶನ. ಈ ಎರಡೂ ಘಟನೆಗಳಲ್ಲಿ ಆ ಹೆಣ್ಣುಮಕ್ಕಳದು ಎಳ್ಳಷ್ಟೂ ತಪ್ಪಿಲ್ಲ. ಯಾರದೋ ಹಣದ ಆಮಿಷಕ್ಕೆ, ಇನ್ನಾರದೋ ಕಾಮದ ತೆವಲಿಗೆ ಅವರ ಬದುಕು ಬಲಿಯಾಗಿದೆ. ಇಂಥ ಕೂಪದಿಂದ ಪ್ರಯಾಸಪಟ್ಟು ಹೊರಬಂದ ಹೆಣ್ಣುಮಕ್ಕಳಿಗೆ ಗೌರವಯುತ ಬದುಕು ನೀಡುವಷ್ಟು ಉದಾರಿಯಲ್ಲ ನಮ್ಮ ಸಮಾಜ.

ಹೆಣ್ಣುಮಕ್ಕಳು ಕಾಣೆಯಾಗಿದ್ದಾರೆ ಅಂದಾಕ್ಷಣವೇ ಯಾರ ಜೊತೆಗೋ ಪ್ರೇಮಿಸಿ ಓಡಿಹೋಗಿದ್ದಾಳೆ ಎಂದೇ ಪ್ರಚಾರವಾಗುತ್ತದೆ. ಅದನ್ನು ಹೊರತುಪಡಿಸಿಯೂ ಯಾವುದಾದರೂ ವಿಷಜಾಲಕ್ಕೆ ಸಿಲುಕಿರಬಹುದು ಎಂಬುದನ್ನು ವಿವೇಚಿಸುವಷ್ಟು ತಾಳ್ಮೆ ನಮ್ಮಲ್ಲಿ ಬಹುತೇಕರಲ್ಲಿ ಉಳಿದಿರುವುದಿಲ್ಲ. ಕಮಲಾಳ ಮನೆಯವರು ಒಂದಿಷ್ಟು ಕಾಳಜಿ ವಹಿಸಿ ವಿಚಾರಿಸಿದ್ದರೆ, ಅವಳು ಪಾಲಕರಿಗೆ ಸಿಗುತ್ತಿದ್ದಳೇನೋ?

ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ತಮ್ಮ ಜಾಲದಲ್ಲಿ ಸಿಲುಕಿಸಿ, ವೇಶ್ಯಾವಾಟಿಕೆಗೆ ಅವರನ್ನು ಮಾರಿ ಹಣ ಮಾಡುವ ದೊಡ್ಡ ಮಾಫಿಯಾವೇ ನಮ್ಮಲ್ಲಿ ಇದೆ.
‘ಮದುವೆ ಮಾಡಿಸುತ್ತೇವೆ’ ಎಂದು ಬೇರೆ ರಾಜ್ಯದಿಂದ ಬರುವ ಖೊಟ್ಟಿ ಮಧ್ಯವರ್ತಿಗಳು, ಪ್ರೀತಿಸುವ ನಾಟಕವಾಡಿ ಮನೆಯಿಂದ ಓಡಿಸಿಕೊಂಡು ಹೋಗಿ ನಂತರ ಪ್ರೇಯಸಿಯನ್ನೇ ಮಾರುವವರು, ಚಿಕ್ಕ ಮಕ್ಕಳು ಪರೀಕ್ಷಾ ಭಯದಿಂದಲೋ ಹೆತ್ತವರ ಕಲಹದಿಂದಲೋ ಬೇಸತ್ತು ಮನೆಯಿಂದ ಓಡಿಹೋಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಬರಿಗೈಯಲ್ಲಿ ನಿಂತಿದ್ದರೆ ಆಪದ್ಬಾಂಧವರ ಸೋಗಿನಲ್ಲಿ ಅವರನ್ನು ಮರುಳು ಮಾಡಿ ಅಂಗಾಂಗ ಊನ ಮಾಡಿ ಭಿಕ್ಷಾಟನೆಗೆ ಹಚ್ಚುವವರು, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಊರು ಬಿಟ್ಟುಬಂದ ಹಿರಿಯರಿಗೆ ಹುಸಿ ಪ್ರೀತಿ ತೋರಿಸಿ ಕೊಂಡೊಯ್ದು ಅಂಗಾಂಗ ಮಾರಾಟ ಮಾಡುವವರು...  ಹೀಗೆ ಮಾನವ ಕಳ್ಳಸಾಗಾಣಿಕೆಯ ತಂತ್ರಗಳು ಹಲವು.

‘‘ಓಡಿಹೋದವರು ಎಂದು ಜನ ನಿರ್ಣಯಿಸಿಬಿಡುವ ಎಷ್ಟೋ ಹೆಣ್ಣುಮಕ್ಕಳ ನೈಜ ಪರಿಸ್ಥಿತಿ ತುಂಬ ಬೇರೆಯೇ ಇರುತ್ತದೆ. ಹಲವರು ದುಡುಕುತ್ತಾರೆ. ಕೆಲವರು ಮುಗ್ಗರಿಸಿರುತ್ತಾರೆ. ಕೆಲವರು ಮೋಸದ ಜಾಲದಲ್ಲಿ ಸಿಲುಕಿರುತ್ತಾರೆ. ಹೀಗೆ ಮಾಯವಾದವರ ಕಥೆಗಳಿಗೆ ತುಂಬಾ ಆಯಾಮಗಳಿವೆ. ನಾವು ಇಂತಹ ಎಷ್ಟೋ ಜನರಿಗೆ ಆಶ್ರಯ ನೀಡಿ, ತಿಳಿವಳಿಕೆ ಕೊಟ್ಟು ಕುಟುಂಬದೊಂದಿಗೆ ಸೇರಿಸಿದ್ದೇವೆ’’ ಎಂದು ಧಾರವಾಡದ ನವನಗರದ ನಿರಾಶ್ರಿತ ಶಿಬಿರದ ವಾರ್ಡನ್ ಹೇಳುತ್ತಾರೆ.

ಓಡಿಹೋಗುವವರ ಬಗ್ಗೆ ಸಮಾಜಕ್ಕೆ ಒಂದು ಬಗೆಯ ಅನಾದರವೂ ಕುತೂಹಲವೂ ಇರುತ್ತದೆ. ಇರಬೇಕಾದುದು, ಮಾನವೀಯತೆ ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ವಿವೇಕ.

ಹೀಗೆ ಮಾಡಿ
*ಕುಟುಂಬದಲ್ಲಿ ಅಥವಾ ಪರಿಚಿತರಲ್ಲಿ ಯಾವುದೇ ವಯಸ್ಸಿನವರು ನಾಪತ್ತೆಯಾದಾಗ ‘ಓಡಿಹೋದವರು’ ಎಂದು ಪಟ್ಟಕಟ್ಟುವ ಮುನ್ನ ಒಂದು ಕ್ಷಣ ಅವರು ನಿರಪರಾಧಿಗಳಿರಬಹುದೇ  ಎಂದು ವಿಚಾರ ಮಾಡಿ.  ಯಾವುದೇ ಪೂರ್ವಗ್ರಹವಿಲ್ಲದೇ ಮೊದಲು ಪೊಲೀಸರಿಗೆ ದೂರು ದಾಖಲಿಸಿ
* ಅವರನ್ನು ಹುಡುಕುವ ಪ್ರಯತ್ನ ಮಾಡಿ. ಯಾಕೆಂದರೆ ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಅವರು ನಿಮ್ಮ ಬರವನ್ನೇ ಕಾಯುತ್ತಿರಬಹುದು.
* ‘ನೋಡಿದ್ದು ಸುಳ್ಳಾಗಬಹುದು/ ಕೇಳಿದ್ದು ಸುಳ್ಳಾಗಬಹುದು/ ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು’ ಎಂಬುದು ಸಿನಿಮಾ ಹಾಡಷ್ಟೇ ಅಲ್ಲ, ಅದು ಬದುಕಿನ ಸತ್ಯವೂ ಹೌದು.

ಆಶಾ  ಮತ್ತು ಕಮಲಾರಂತಹ ಅಮಾಯಕ ಕಥೆ ಮರುಕಳಿಸುವುದು ಬೇಡ ಅಲ್ಲವೇ?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT