ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗತಿಕ ಸ್ಪರ್ಧೆಗೆ ವಿಶ್ವವಿದ್ಯಾಲಯ ಸಜ್ಜಾಗಲಿ’

Last Updated 29 ಏಪ್ರಿಲ್ 2017, 9:02 IST
ಅಕ್ಷರ ಗಾತ್ರ

ಬಳ್ಳಾರಿ: ‘ಕೌಶಲಭರಿತ ಸಮಾಜ ಇಂದಿನ ಅಗತ್ಯ. ಅದಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕಾಗಿರುವ ವಿಶ್ವವಿದ್ಯಾಲಯಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಗೂ ಸಜ್ಜಾಗಬೇಕು’ ಎಂದು ವಿಶ್ವವಿದ್ಯಾಲಯ ಧನ ಸಹಾಯ ಆಯೋಗದ ನಿಕಟಪೂರ್ವ ಅಧ್ಯಕ್ಷ ಪ್ರೊ.ವೇದಪ್ರಕಾಶ್‌ ಪ್ರತಿಪಾದಿಸಿದರು.ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶುಕ್ರವಾರ ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಜಾಗತಿಕ ಮಟ್ಟದಲ್ಲಿ ಪ್ರಖ್ಯಾತವಾಗಿರುವ ವಿಶ್ವವಿದ್ಯಾಲಯಗಳ ಜೊತೆ ದೇಶದ ವಿಶ್ವವಿದ್ಯಾಲಯಗಳು ಗುಣಮಟ್ಟದ ವಿಷಯದಲ್ಲಿ ಪೈಪೋಟಿ ನೀಡುವಷ್ಟು ಗಟ್ಟಿಯಾಗಿಲ್ಲ.

ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಕ್ಷೇತ್ರಗಳು ಪರಸ್ಪರ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವುದೂ ಸದ್ಯದ ಪರಿಸ್ಥಿತಿಗೆ ಕಾರಣ’ ಎಂದು ವಿಶ್ಲೇಷಿಸಿದರು.‘ಮೂರು ಹಂತದ ಶಿಕ್ಷಣಸಂಸ್ಥೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿ ಕುರಿತು ಆಸಕ್ತಿ ಇಲ್ಲ. ಪ್ರತಿ ವಿದ್ಯಾರ್ಥಿಯೂ ಪ್ರತಿಭಾವಂತ ಎಂಬ ಗ್ರಹಿಕೆಯೂ ಇಲ್ಲ. ಪರಿಣಾಮವಾಗಿ ಪ್ರತಿಭಾವಂತರು ಪ್ರೋತ್ಸಾಹವಿಲ್ಲದೆ ಪರದಾಡುತ್ತಾರೆ’ಎಂದು ವಿಷಾದಿಸಿದರು.

‘ವಿಶ್ವವಿದ್ಯಾಲಯಗಳಲ್ಲಿ ಇರುವವರಿಗೆ ಅಲ್ಲಿನ ಕಟ್ಟಡದಾಚೆಯ ಹೊರಗಿನ ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಅರಿವು ಇಲ್ಲ. ಸಮಾಜದೊಂದಿಗೆ, ತಳಮಟ್ಟದ ಶಿಕ್ಷಣ ಕ್ಷೇತ್ರದ ಜೊತೆಗೆ ವಿಶ್ವವಿದ್ಯಾಲಯಗಳು ಸಂಪರ್ಕ ಏರ್ಪಡಿಸಿಕೊಂಡಿಲ್ಲ’ ಎಂದರು.‘ಜಾಗತಿಕ ಮಟ್ಟದಲ್ಲಿ ಸಾಮಾಜಿಕವಾದ ಹಲವು ಸಮಸ್ಯೆಗಳಿಗೆ ವಿಶ್ವವಿದ್ಯಾಲಯಗಳ ಕ್ಯಾಂಪಸ್‌ಗಳೇ ಪರಿಹಾರಗಳನ್ನು ಸೂಚಿಸುತ್ತವೆ. ಆದರೆ ಭಾರತದ ಸಂದರ್ಭದಲ್ಲಿ ಈ ಸನ್ನಿವೇಶ ಇಲ್ಲ’ ಎಂದರು.

ಪ್ರವೇಶ ಕಡಿಮೆ: ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುವವರ ಪ್ರಮಾಣವನ್ನು ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದಾಖಲಾತಿ ಪ್ರಮಾಣವನ್ನು ಮುಂದಿನ ದಶಕದಲ್ಲಿ ಶೇ 40ರಷ್ಟು ಹೆಚ್ಚಿಸುವ ಗುರಿ ಇದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ಈ ಪ್ರಮಾಣ ಅತಿ ಕಡಿಮೆ ಇದೆ. ಯಾದಗಿರಿಯಲ್ಲಿ ಶೇ 4, ಕೊಪ್ಪಳದಲ್ಲಿ ಶೇ 7, ಕಲಬುರ್ಗಿಯಲ್ಲಿ ನಗರ ಹೊರತುಪಡಿಸಿ ಶೇ 15ರಷ್ಟಿದೆ. ಬಳ್ಳಾರಿಯಲ್ಲಿ ಅದಕ್ಕಿಂತ ಕಡಿಮೆ ಇದೆ ಎಂದರು.

ಗೌರವ ಡಾಕ್ಟರೇಟ್:  ಪದವಿ ಸ್ವೀಕರಿಸಬೇಕಿದ್ದ ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ಘಟಿಕೋತ್ಸವದಲ್ಲಿ ಪಾಲ್ಗೊಳ್ಳದ ಕಾರಣ, ಪ್ರಮಾಣಪತ್ರವನ್ನು ಸಚಿವರು ಕುಲಸಚಿವ ಪ್ರೊ.ಟಿ.ಎಂ. ಭಾಸ್ಕರ್‌ ಅವರಿಗೆ ಹಸ್ತಾಂತರಿಸಿದರು.ಖನಿಜ ಸಂಸ್ಕರಣೆ ವಿಷಯದಲ್ಲಿ ನರೇಂದ್ರಕುಮಾರ್‌ ನಂದ, ಜಿ.ಇ. ಶ್ರೀಧರ್, ಕೆ.ಹರಿಕೃಷ್ಣಭಟ್, ಬಿ. ವೆಂಕೋಬಾ ರಾವ್ಮತ್ತು ಟಿ.ವಿ. ವಿಜಯಕುಮಾರ್‌ ಡಾಕ್ಟರೇಟ್‌ ಪದವಿ ಪಡೆದರು.ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್‌.ಎ. ಪಾಟೀಲ. ಸಿಂಡಿಕೇಟ್‌ ಮತ್ತು ವಿದ್ಯಾ ವಿಧಾಯಕ ಪರಿಷತ್ತಿನ ಸದಸ್ಯರು ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT