ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತ್ರಗಳು

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಅಲಕಾ ಕಟ್ಟೆಮನೆ
ಖೊಕ್... ಖೊಕ್ಕೂಖೊಕ್... ವ್ಯಾಕ್... ಖೊಕ್
ಎಂಬ ಶಬ್ದ ಕೇಳುತ್ತಿದ್ದಂತೆಯೇ ಕಮಲಜ್ಜಿಯ ಕಿವಿ ಚುರುಕಾಗಿತ್ತು. ಕಿವಿಯೊಂದೇ ಏನು... ಅವಳ ಕಣ್ಣೂ ಚುರುಕೇ. ಅದೂ 78 ವರ್ಷಕ್ಕೆ ಅನಗತ್ಯ ಎಂಬಷ್ಟು! ಚುರುಕು ಕಳೆದುಕೊಂಡಿದ್ದು ಸಂಧಿವಾತ ಹಿಡಿದ ಅವಳ ಕಾಲುಗಳು. ಎರಡೂ ಕಾಲುಗಳು ತೀವ್ರತರವಾದ ವಾತಕ್ಕೆ ತುತ್ತಾಗಿ ಡೊಂಕಾಗಿದ್ದವು. ಹಾಗಾಗಿ ಅವಳು ಕೋಲು ಹಿಡಿದು ನಿಧಾನಕ್ಕೆ ನಡೆಯುತ್ತಾ ತನ್ನ ಕೆಲಸವಷ್ಟನ್ನು ಮಾಡಿಕೊಳ್ಳುತ್ತಿದ್ದಳು.

ಹಾಗೆ ಎಕ್ಸ್‌ಟ್ರಾ ಕೆಲಸ ಮಾಡುತ್ತಿದ್ದುದು ಅವಳ ಬಾಯಿ ಮಾತ್ರ! ದಿನಾ ಮನೆಯಂಗಳದ ಸೂರಡಿಗಿನ ಕಟ್ಟೆಯ ಮೇಲೆ ಕುಳಿತರೆ, ಇಡೀ ಸಕ್ರೆಬೈಲಿನ ಆಗುಹೋಗುಗಳನ್ನು ತಾನು ಕುಳಿತಲ್ಲಿಂದಲೇ ಪರಿಶೀಲಿಸುವ ಅವಳ ಪ್ರತಿದಿನದ ಡ್ಯೂಟಿ ಚಾಲೂ. ಹಾದಿಯಲ್ಲಿ ಹೋಗುವವರನ್ನೊಮ್ಮೆ ಕರೆದು, ‘ಈ ಪಟ ಒಣ ಹುಲ್ಲಿನ ಸೂಡಿ ಹ್ಯಾಂಗೆ ನಿಮ್ಮಲ್ಲಿ’ ಎಂತಲೋ, ‘ನಿಮ್ಮನೆ ದೇವಕಾರ್ಯದ ಜಿಲೇಬಿ ಛೋಲೊ ಆಗಿತ್ತು’ ಎಂತಲೋ ಅವರನ್ನು ಮಾತಿಗೆಳೆಯುತ್ತಿದ್ದಳು.

ಮನೆಯೆದುರಿಗಿನ ಬಸ್ಟಾಪಿನಲ್ಲಿ ಹತ್ತಿ–ಇಳಿದವರ ಲೆಕ್ಕ ಇಟ್ಟು, ‘ಅಪ್ಪನ ಮನೆ ತಿಥಿಗನೇ ಸವಾರಿ’ ಎಂದು ವಿಚಾರಿಸಿಕೊಳ್ಳುತ್ತಿದ್ದಳು. ಎದುರಿನ ಮಾಳಿಗೆಯಲ್ಲಿರುವ ದರ್ಜಿಯಂಗಡಿಗೆ ಯಾರೆಲ್ಲಾ ಹೋಗಿಬರುತ್ತಾರೆ ನೋಡಿಕೊಂಡು, ಇನ್ಯಾವತ್ತೊ ಅವರು ಸಿಕ್ಕಿದಾಗ ‘ಎಲ್ಲಿ ತಗಂಡ್ಯೇ ಹೊಸ ಸೀರೆ?’ ಎಂತಲೋ, ‘ಹಬ್ಬಕ್ಕೆ ಹೊಸಂಗ್ಯನೆ ಕೂಸೆ?’ ಎಂದೆಲ್ಲಾ ನೆನಪಿನಲ್ಲಿ ಕೇಳುತ್ತಿದ್ದಳು. ‘ಈ ಕಮಲಜ್ಜಿ ಕಣ್ಣಿಗೆ ಬೀಳದ್ದು ಯಾವುದೂ ಇಲ್ಯಪಾ. ಯಾವ ಟೀವಿ ಚಾನಲ್‌ಗಿಂತ್ಲೂ ಕಡ್ಮೆ ಇಲ್ಲೆ ಅದು’ ಎಂಬ ಊರೊಟ್ಟಿನ ಮಾತೂ ಚಾಲ್ತಿಯಲ್ಲಿತ್ತು. 
 
ಇಂತಿಪ್ಪ ‘ಸಕ್ರೆಬೈಲಿನ ಟಿವಿ ಚಾನೆಲ್’ಗೆ ಒಬ್ಬ ವರದಿಗಾರ್ತಿಯೂ ಇದ್ದಳು ಅನ್ನಿ. ಈಗ ಖೊಕ್ ಖೊಕ್ ಕೆಮ್ಮಿದ್ದು ಅವಳೇ... ಶಣ್ಕೂಸು. ಅಂದ್ರೆ ಚಿಕ್ಕ ಮಗುವಲ್ಲ, ಅದವಳ ಹೆಸರು! ಸಾಲೋಸಾಲಾಗಿ ಮಕ್ಕಳನ್ನು ಹಡೆಯುತ್ತಿದ್ದ ಅವಳ ತಾಯಿಗೆ ಹುಟ್ಟುತ್ತಿದ್ದುದಕ್ಕೆ ಹೆಸರಿಡಲೂ ಶಕ್ತಿಯಿಲ್ಲದೆ ಹೋದಾಗ, ಊರವರಿಟ್ಟ ಹೆಸರು – ಶಣ್ಕೂಸು. ಈಗವಳ ಮೊಮ್ಮಕ್ಕಳ ಹತ್ತಿರ ಅಜ್ಜಿಯ ಕುರಿತಾಗಿ ಕೇಳುವುದೂ ಹಾಗೆಯೇ – ‘ನಿಮ್ಮನೆ ಶಣ್ಕೂಸೆಲ್ಲ? ಇತ್ಲಾ ಬದಿ ಬರ್ಲೇ ಇಲ್ಲ’.
 
ಹೀಗೆ ಶಣ್ಕೂಸಿನ ಸವಾರಿ ಮೂರ್ನಾಕು ದಿನಕ್ಕೊಮ್ಮೆಯಾದರೂ ಕಮಲಜ್ಜಿಯ ಮನೆಗೆ ಬರುತ್ತಿತ್ತು. ಕುಡಿದು ಛಟ್ಟಾಗಿದ್ದ ಈಕೆಯನ್ನು ಈಗ ಯಾರೂ ಮನೆಕೆಲಸಕ್ಕೆ ಕರೆಯುತ್ತಿರಲಿಲ್ಲ. ಕರೆದರೆ ಮಾಡಲು ಆಗುತ್ತಲೂ ಇರಲಿಲ್ಲ ಇವಳಿಗೆ. ಸುಮ್ಮನೆ ಕೂತುಂಡರೆ ಸಾಧುವೇ... ಹಾಗಾಗಿ ಊರಲ್ಲಿ ಅವರಿವರ ಮನೆಗೆ ಭೇಟಿಯಿತ್ತು, ಉಭಯ ಕುಶಲೋಪರಿ ನಡೆಸಿ, ಅವರು ಕೊಟ್ಟಿದ್ದನ್ನು ಸೆರಗಿಗೆ ಕಟ್ಟಿಕೊಂಡು ಬರುತ್ತಿದ್ದಳು. ಹಾಗೆ ಕಟ್ಟಿಕೊಂಡು ಬಂದ ಸುದ್ದಿಯ ಪಟ್ಲವನ್ನು ಆಕೆ ಬಿಚ್ಚುತ್ತಿದ್ದುದು ಕಮಲಜ್ಜಿಯ ಅಂಗಳದಲ್ಲಿ. 
 
‘ಆ ದ್ಯಾವರಜ್ಜನ ಮೊಮ್ಮಗಳನ್ನು ಉತ್ತರದ ಬದಿಗೆ ಕೊಡದಂತಲ್ಲೇ... ಯಾರ್ ಋಣ ಎಲ್ಲೆಲ್ಲಿ ನೋಡು’ ಎಂದು ಕಮಲಜ್ಜಿ ಪೀಠಿಕೆ ಹಾಕುತ್ತಿದ್ದಳು.
‘ಎಂತ ಕೊಡೂದ್ರಾ ಕಮ್ಲಮ್ಮ! ಮದಿ ಮಾಡ್ದೆ ಹೋದ್ರೆ ಈ ಹುಡ್ರೇ ಓಡೋದ್ರು ಹೇಳಾಗೂದಿಲ್ವ? ಈ ಕೂಶಿನ್ ಹಾಂಗೆ ಮಾಣಿದೂ ಕಂಪೀಟ್ರ ಕೆಲ್ಸ. ಅತ್ಲಾಗ್ ಹೋಗ್ಲಿ ಹೇಳಿ ಮದಿ ಮಾಡೂದಂತೆ. ಆ ಮಾಣಿ ನಮ್ಮಾತೂ ಆಡೂದಿಲ್ರ’ ಎಂದು ವಿವರಿಸುತ್ತಿದ್ದಳು.
 
ಅಷ್ಟರಲ್ಲಿ ಶಾಲೆಯಿಂದ ಬಂದ ಕಮಲಜ್ಜಿಯ ಮೊಮ್ಮಕ್ಕಳು ಎದುರಾದರೆ, ‘ಶಾಲೆಲ್ಲಿ ಎಂತ ಆಸ್ರೀಗೆ ಕೊಟ್ರಾ ತಮಾ?’ ಎಂದು ವಿಚಾರಿಸುತ್ತಿದ್ದಳು. ‘ಪಾಪ! ನಿಮ್ ಕೂಡೂ ಆಗೂದಿಲ್ಲ ಕಮ್ಲಮ್ಮ. ಹುಡುಗ್ರಿಗೆ ಮನೆಲ್ಲಿ ಪೂರಾ ಗಂಡಡ್ಗೆ. ಶಾಲೆಲ್ಲಿ ಅಕ್ಕೋರು ಅಡ್ಗೆ ಮಾಡೂದಂತಲ್ರಾ’ ಎಂದು ಸಮಜಾಯಿಶಿ ನೀಡುತ್ತಿದ್ದಳು.
 
‘ಅದೆಂತ ಗದ್ಲವೇ ನಿಂದು ಮೊನ್ನೆ ರಾತ್ರೆಯ? ಮತ್ ಕುಡ್ಕ ಬಂದ್ ನಂಬ್ರ ತೆಕ್ಕಂಡ್ರಾ ಅಬ್ಬೆ–ಮಗ?’ ಎಂದು ಕಮಲಜ್ಜಿ ಕೇಳುತ್ತಲೇ, ‘ನಿಮಗೊಂದ್ ಕಸ್ಬಿಲ್ಲ ಕಮ್ಲಮ್ಮ! ನಾ ಎಂತ ಕುಡಿತೇನ್ರಾ? ಅವ್ನೇಯ ಏರ್ಸ್ಕ ಬರೂದು, ಒಂದೊಂದಲ್ಲಾ ಚಾಳಿ ಅವಂದು...’ ಎಂದು ಮಗನ ಗುಣಗಾನ ಮಾಡುತ್ತಾ ಮನೆ ಹಾದಿ ಹಿಡಿಯುತ್ತಿದ್ದಳು.
***
ಇವರಿಬ್ಬರೂ ಮೊದಲಿಂದೇನೂ ಗೆಳತಿಯರಲ್ಲ. ಪ್ರಾಯವಿದ್ದಾಗ ಕಮಲಜ್ಜಿ ಯಜಮಾನಿತಿಯ ಬಿಗಿಯಲ್ಲೇ ಇದ್ದವಳು. ಆದರೆ ಈಗ ಇಬ್ಬರಿಗೂ ಕೈಕೆಲಸವಿಲ್ಲದೆ, ಬರಿಯ ಬಾಯಿ ಕೆಲಸವೇ ಆಗಿದ್ದರಿಂದ ಒಂಥರಾ ಸಮಾನಮನಸ್ಕರಾಗಿದ್ದರು. ಈಗೆಲ್ಲಾ ಕಮಲಜ್ಜಿಯ ಮನೆಯಲ್ಲಿ ಬರೀ ಗಂಡಡಿಗೆಯೇ ಆಗಿದ್ದಕ್ಕೆ ಶಣ್ಕೂಸಿಗೆ ಅವರ ಬಗ್ಗೆ ಒಂಥರಾ ಅನುಕಂಪವೂ ಇತ್ತು. ಕಮಲಜ್ಜಿಯ ಸೊಸೆ ಚೇತನಾ ತೀರಿಕೊಂಡು ಮೂರ್ನಾಕು ವರ್ಷಗಳೇ ಸಂದಿದ್ದವು.
 
ಆಕೆ ತೀರಿಕೊಂಡಾಗ ಎಲ್ಲರಿಗೂ ಒಂಥರಾ ಬಿಡುಗಡೆಯ ಭಾವ ಉಂಟಾಗಿದ್ದಕ್ಕೂ ಕಾರಣವಿತ್ತು. ಮಗ ಭೀಮೇಶ್ವರನಿಗೆ ಹುಡುಗಿ ನೋಡುವಾಗ ಕಮಲಜ್ಜಿ ಪಟ್ಟ ಪಾಡು... ಹೇಳಿ ಸುಖವಿಲ್ಲ. ಆತ ಹೆಸರಿಗೆ ಭೀಮನಾದರೂ ಸಾಮಾನ್ಯ ಗಾತ್ರದವನೇ. ಮೊದಲಿಬ್ಬರು ಹೆಮ್ಮಕ್ಕಳು ಹುಟ್ಟಿ, ಆನಂತರದ ನಾಲ್ಕು ಮಕ್ಕಳು ಒಂದೆರಡು ವರ್ಷ ಬದುಕಿ ಮಣ್ಣು ಸೇರಿದ ಮೇಲೆ ಹುಟ್ಟಿದ ಈ ಐದನೆಯವನಿಗೆ ‘ಭೀಮೇಶ್ವರ’ ಎಂದು ಹೆಸರಿಟ್ಟಿದ್ದರು. ಯಾರ ಪುಣ್ಯವೊ, ಅಂತೂ ಮಗು ಆರೋಗ್ಯಶಾಲಿಯಾಗಿತ್ತು. ಹಾಗಾಗಿ ಎರಡನೆಯ ಮಗಳಿಗೂ ಈ ಹುಡುಗನಿಗೂ ಹತ್ತು ವರ್ಷಗಳ ಅಂತರವಿತ್ತು. 
 
ಮೊದಲಿಬ್ಬರು ಹೆಣ್ಣುಮಕ್ಕಳ ಮದುವೆ ಮಾಡುವಾಗಲೂ ಕಷ್ಟವೇ, ಆಗ ಹುಡುಗರ ಬರ. ಅದಾದ ಹದಿನೈದು ವರ್ಷಗಳ ಬಳಿಕ ಮಗನ ಮದುವೆ ಮಾಡುವಾಗಲೂ ಕಷ್ಟವೇ, ಈಗ ಹುಡುಗಿಯರ ಬರ! ಭೀಮೇಶ್ವರನಿಗೊಬ್ಬನಿಗೇ ಅಲ್ಲ, ಊರಿನ ಕೆಲವು ಗಂಡು ಮಕ್ಕಳಿಗೆ ಹೆಣ್ಣು ಸಿಕ್ಕಿರಲಿಲ್ಲ. ಹಾಗಾಗಿ, ಚೇತನ ತುಂಬು ಆರೋಗ್ಯದ ಹುಡುಗಿಯಲ್ಲ ಎಂಬ ವಿಷಯ ತಿಳಿದಿದ್ದರೂ, ಮನೆಗೊಂದು ಸೊಸೆ ಬಂದರೆ ಸಾಕೆಂದು ಅವಳನ್ನು ಕಮಲಜ್ಜಿ ತಂದುಕೊಂಡಿದ್ದಳು.
 
ಸೊಸೆ ಬಂದ ಆರಂಭದ ದಿನಗಳಲ್ಲಿ ಆಕೆಯನ್ನು ಕಮಲಜ್ಜಿ ಹೆಚ್ಚು ದಣಿಸುತ್ತಿರಲಿಲ್ಲ. ಆಗಲೇ ತನಗೂ ಕಾಲುನೋವು ಆರಂಭವಾಗಿದ್ದರೂ, ‘ಯಮ್ಮನೆ ಚೇತ್ನಾನತ್ರೆ ಆಗ್ತಿಲ್ಲೆ, ಬಡಿ ಜೀವ. ನಿನ್ಕೈಲಾದಷ್ಟೇ ಮಾಡು, ಸಾಕು ಹೇಳಿದ್ದಿ’ ಎನ್ನುತ್ತಾ ಹೆಚ್ಚಿನ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಳು.  
 
ಆದರೆ ಅಜ್ಜಿಯ ಕಾಲಿನ ಶಕ್ತಿ ಕಡಿಮೆಯಾದಂತೆ ಬಾಯಿಯ ಶಕ್ತಿ ಹೆಚ್ಚಾಯಿತು. ‘ನೆಂಟ್ರ ಲೆಕ್ಕದ್ ಊಟ, ಮಕ್ಕಳ ಲೆಕ್ಕದ್ ನಿದ್ದೆ ಹೇಳಿ ಗಾದೆ. ಮಾಣಿ ಮಗ್ಲಿಗೆ ಮನಗಿದ್ರೆ ಏಳದೇ ಇಲ್ಲೆ. ಇಲ್ಲಿ ಆನೊಂದ್ ಗೆಯ್ತಾ ಇದ್ರಾತು’ ಎಂದು ಸೊಸೆಯ ರೂಮಿನ ಕಿಟಕಿಯ ಬುಡದಲ್ಲೇ ಒಗ್ಗರಣೆ ಹಾಕುತ್ತಿದ್ದಳು. ಹಬ್ಬ–ಹರಿದಿನಗಳಲ್ಲಿ ಮಾಡಿದ ವ್ಯಂಜನಗಳು ಕಡಿಮೆಯಾದರೆ ‘ಕಜ್ಜಾಯವೇ ಇಲ್ಲದ ಚಪ್ಪೆ ಹಬ್ಬ’ ಎಂದು ಸೊಸೆಯನ್ನು ಮೂದಲಿಸುತ್ತಿದ್ದಳು.
 
ಕಡೆಕಡೆಗಂತೂ ಅಜ್ಜಿ ಏನು ಹೇಳಿದರೂ ಚೇತನ ಪ್ರತಿಕ್ರಿಯಿಸುವ ಚೈತನ್ಯವನ್ನೂ ಕಳೆದುಕೊಂಡು ಬಿಟ್ಟಿದ್ದಳು. ಮೊದಲ ಹೆರಿಗೆಯಂತೂ ಹೇಗೋ ಆಯಿತು. ಎರಡನೆಯ ಹೆರಿಗೆಯ ನಂತರ ತೀರಾ ನಿತ್ರಾಣಳಾಗಿ ಹಾಸಿಗೆ ಹಿಡಿದ ಆಕೆ, ಹಾಗೆಯೇ ನಾಲ್ಕು ವರ್ಷ ನರಳಿ ನಡೆದುಬಿಟ್ಟಿದ್ದಳು. ಪ್ರಾಯದ ಹುಡುಗರಿಗೇ ವಧು ಸಿಕ್ಕುವುದು ಕಷ್ಟವಿರುವಾಗ, ಇನ್ನು ಎರಡನೇ ಮದುವೆಗೆ ಎಲ್ಲಿಂದ ಹುಡುಗಿ ತರುವುದು? ಹಾಗಾಗಿ ಮನೆಯಲ್ಲೀಗ ಭೀಮನಿಗೆ ಖಾಯಂ ವಲಲನ ಪಾರ್ಟು!
***
‘ಸುಮಾರು ಜನ್ರ ಹಿತ್ಲಕಡೆಯಲ್ಲಿ ವಣಗಿಸಿದ್ದ ವಳವಸ್ತ್ರವೆಲ್ಲಾ ಕಾಣೆಯಾಗದಂತೆ ಕಮ್ಲಮ್ಮಾ...’ ಎಂಬ ಸುದ್ದಿಯನ್ನು ಈ ಬಾರಿ ಬಂದ ಶಣ್ಕೂಸು ಉಸುರಿದ್ದಳು. ‘ಅಯ್ಯ! ಅದೆಂತಾ ನಮ್ನಿ ಇಲಿಯೇ? ಬರೀ ವಳವಸ್ತ್ರ ಕಚ್‌ಗ್ಯಂಡು ಹೋಪದು’ ಎಂದು ಜೋರಾಗಿ ನಕ್ಕಿದ್ದಳು ಕಮಲಜ್ಜಿ. ಅಜ್ಜಿಯೊಂದೇ ಅಲ್ಲ, ಮೊದಲಿಗೆ ಎಲ್ಲರೂ ನಕ್ಕವರೇ. ಕಡೆಗೆ, ರಾತ್ರಿ ಹೊತ್ತು ಕಿಟಕಿಯಾಚೆ ಯಾರದ್ದೋ ನೆರಳು ಕಾಣುತ್ತದೆ, ಅದೂ ಹೆಂಗಸರೊಂದೇ ಇದ್ದರೆ ಕಿಟಕಿಯ ಹತ್ತಿರದಲ್ಲೇ ನೆರಳು ಓಡಾಡುತ್ತದೆ, ಪ್ರಾಯದ ಹೆಂಗಸರ ಒಳವಸ್ತ್ರಗಳಷ್ಟೇ ಕಾಣೆಯಾಗುತ್ತವೆ ಎಂಬಲ್ಲಿವರೆಗೆ ಸುದ್ದಿ ಬಂತು.
 
ಇಷ್ಟು ಬಂದಿದ್ದೇ ತಡ, ಸುದ್ದಿಗೆ ಕಾಲು–ಬಾಲ, ರೆಕ್ಕೆ–ಪುಕ್ಕಗಳೆಲ್ಲಾ ಮೂಡಿಬಿಟ್ಟವು. ಊರು ತುದಿಯಲ್ಲಿರುವ ಕಾನುಮನೆಯ ದೊಡ್ಡ ಹೆಗಡೆ ಸತ್ತು ಸುಮಾರು ವರ್ಷಗಳಾಗಿದ್ದವು. ಆದರೆ ಹೆಂಗಸ್ರ ಮಳ್ಳಾಗಿದ್ದ ಅಂವ ಈಗ ಇಲ್ಲೆಲ್ಲಾ ಓಡಾಡ್ತ ಎಂದರು ಕೆಲವರು. ಅದು ಹಾಗಲ್ಲ, ಸಾಬ್ರ ಕೇರಿಯಲ್ಲಿ ಯಾರೋ ಒಬ್ಬನ ಹೆಂಡತಿ ಓಡಿಹೋಗಿದ್ದಳು. ಇದರಿಂದ ಆತ ಬಾವಿಗೆ ಹಾರಿದ್ದನಂತೆ.
 
ಈಗ ಇಲ್ಲೆಲ್ಲಾ ಬಂದು ಆಕೆಯನ್ನು ಹುಡುಕುತ್ತಿದ್ದಾನೆ ಎಂದರು ಹಲವರು. ಇದ್ಯಾವ್ದೂ ಅಲ್ಲ, ಕುಮಟೆ ಕಡೆಯಿಂದ ಕಳ್ಳನಾಟ ಕಡಿಯಲು ಒಂದು ಗ್ಯಾಂಗು ಬರುತ್ತದೆ. ರಾತ್ರಿ ಹೊತ್ತು ಯಾರೂ ಓಡಾಡಬಾರದೆಂದು ಆ ಗ್ಯಾಂಗಿನವರು ಹೀಗೆಲ್ಲಾ ಹೆದರಿಸುತ್ತಿದ್ದಾರೆ ಎಂದವರೂ ಉಂಟು. ಒಟ್ಟಿನಲ್ಲಿ ಯಾವುದೂ ಬಗೆಹರಿಯದೆ, ಊರಿನ ಪ್ರಾಯದ ಹೆಂಗಸರ ಬಟ್ಟೆಗಳೆಲ್ಲಾ ಬಿಸಿಲು ಕಾಣದೆ ಮನೆಯ ಪಡಿಮಾಡಿನ ತಂತಿಯಲ್ಲಿ ಒಣಗುವಂತಾಯಿತು. 
 
ಇದೇ ವಿಷಯವಾಗಿ ಆವತ್ತು ಅಜ್ಜಿ ಮತ್ತು ಶಣ್ಕೂಸಿನ ನಡುವೆ ಘನಘೋರ ಚರ್ಚೆ ನಡೆಯುತ್ತಿತ್ತು. ಹಾಗೆ ನೋಡಿದರೆ ಅಜ್ಜಿಯಷ್ಟು ಬಿಡುವು ಶಣ್ಕೂಸಿಗೆ ಇರುವುದಿಲ್ಲ. ಅವಳ ದೊಡ್ಡ ಮಗ, ಅಲ್ಲೇ ಸನಿಹದಲ್ಲಿ ಮಡದಿ–ಮಕ್ಕಳೊಂದಿಗೆ ಬೇರೆ ಸಂಸಾರ ಹೂಡಿದ್ದ. ಮಗಳನ್ನು ಘಟ್ಟದ ಕೆಳಗಿನ ಅಣ್ಣನ ಮಗನಿಗೆ ಮದುವೆ ಮಾಡಿಕೊಟ್ಟಿದ್ದಳು. ಈಗ ಅವಳೊಂದಿಗಿರುವ ಕಡೆಯ ಮಗ ಸಂಕನಿಗೆ ತಲೆಗೂದಲು ಬಿಳಿಯಾಗಲು ಆರಂಭಿಸಿದ್ದರೂ ಇನ್ನೂ ಲಗ್ನವಾಗಿರಲಿಲ್ಲ.
 
ಅವರಲ್ಲೂ ಹೆಣ್ಣುಗಳ ಬರ! ಹಾಗಾಗಿ ಹೊರ ಕೆಲಸಕ್ಕೆ ಹೋಗದಿದ್ದರೂ ಗಂಜಿ ಬೇಯಿಸುವ ಕಾಯಕ ಅವಳಿಗೆ ಇದ್ದೇಇತ್ತು. ಕೆಲವೊಮ್ಮೆ ತಾಯಿ–ಮಗನಿಗೆ ಘನಘೋರ ವಾಗ್ಯುದ್ಧ ನಡೆಯುತ್ತಿತ್ತು. ಅಬ್ಬೆ ಕುಡಿದು ಜಗಳಾಡುತ್ತಾಳೆ ಎಂದು ಸಂಕ ಹೇಳಿದರೆ, ‘ಅವನೇಯ ಏರ್ಸ್ಕ ಬರೂದು, ಒಂದ್ ಮದಿ–ಮಕ್ಳ್ ಕಂಡೀರೆ ತಲಿ ಸಮಾ ಇರ್ತಿತ್ತು’ ಎಂದು ಅವನಬ್ಬೆ ಬೈಯುತ್ತಿದ್ದಳು. ಒಟ್ಟಿನಲ್ಲಿ ಇಬ್ಬರೂ ಪಾಲುದಾರರೆ!
 
‘ಅಷ್ಟೆಲ್ಲಾ ಜನ್ರ ವಳೊಸ್ತ್ರ ತಕಹೋಗಿ ಆ ಚೋದಿ ಮಗ ಎಂತ ಮಾಡ್ತ ಹೇಳಿ ತೆಳೂದಿಲ್ಲ’.
‘ಎಂತಾದ್ರಾ ಮಾಡ್ಲಿ, ಕುತ್ಗೀಗೆ ಉರ್ಲು ಹಾಕ್ಯಳ್ಳಿ ಬಿಡೆ ಮಾರಾಯ್ತಿ’ ಎಂದು ಕಮಲಜ್ಜಿ ಹೇಸಿಗೆಯಿಂದ ಮೈ ಕುಡುಗಿದಳು.
‘ನಮ್ ಟೇಲರ್ರ ಹೇಳ್ತಿದ್ನಪಾ, ಯಾವ್ದೊ ಒಂದೆಲ್ಡು ಹೆಂಗಸ್ರ ರವ್ಕೆ ಹೊಲದಿಟ್ಟಿದ್ದು ಕಳೆದೋಗದೆ. ರಾತ್ರಿ ಹೊತ್ತು ಕಿಡ್ಕೆಲ್ಲಿ ಕೈ ಹಾಕೂಕು ಸಾಕು ಅಂತ’. 
‘ಕಳ್ಳ! ಹೊಲದಿಟ್ಟಿದ್ದು ಹೌದಂತೊ ಅಥ್ವಾ ಸುಳ್ಳೇ ಕಥೆ ಕಟ್ತಿದ್ನ’ – ಕಮಲಜ್ಜಿಗೆ ದರ್ಜಿಯ ಮೇಲೆಯೇ ಸಂಶಯ.
 
‘ನನ್ ಕೂಡೆ ಹೇಳಿದ್ದಲ್ಲ. ನಮ್ ಸಂಕನ್ ಕೂಡೆ ಹೇಳಿದ್ನಂತೆ. ಅವ್ನ ಅಂಗಡಿ ಪಕ್ಕದಲ್ಲಿ ಸೊಸೈಟಿದು ಹೊಸ ಗೋದಾಮು ಕಟ್ತಾ ಇದ್ರ್ರಲ್ಲ, ಅದ್ರ ಕೆಲ್ಸಕ್ಕೆ ಹೋಗ್ತ ಸಂಕ’.
‘ಸಾಯ್ಲಿ ಬಿಡೆ ಆ ಸುದ್ದಿ. ಕನ್ನಡಶಾಲಿಗೆ ಈಗೊಂದು ಹೊಸಾ ಅಕ್ಕೋರು ಬಂದ್ರಂತಲ್ಲೇ?’ ಬೇರೆ ಸುದ್ದಿಯನ್ನೇ ತೆಗೆದಳು ಅಜ್ಜಿ.
‘ಹೌದ್ರೊ. ಸರೋಜಕ್ಕೋರು ಬಂದಾರಂತೆ. ಓ... ಆ ರಸ್ತೆ ಆಚಿಬದಿ ಮನೆ ಐತಲ್ರಾ, ಅಲ್ಲೇ ಉಳ್ದಾರೆ’.
 
‘ಯಾವ್ದೇ... ಹಿತ್ಲಕೈ ಡಾಕ್ಟ್ರ ಹಳೆ ಮನೆಲ್ಲಾ? ಮೊನ್ನಿತ್ಲಾಗೆ ಡಾಕ್ಟ್ರ ಮಗ ಬಂದು ಸುಣ್ಣ–ಬಣ್ಣ ಎಲ್ಲಾ ಮಾಡ್ಸಿದ್ದ. ಆವಾಗ ಗೊತ್ತಾತು ಸುದ್ದಿ. ನಮ್ಮನೆ ಕಟ್ಟೆಮೇಲೆ ಕುಂತ್ರೆ ಸಮಾ ಕಾಣ್ತೆ ಅವರ ಮನೆ ಹೊರಜಗಲಿ. ಜಗಲಿಗೊಂದು ಬಾಗಿಲು ಇದ್ರೆ ಸುಸೂತ್ರ. ಹಾದಿಯಂಚಿನ ಮನೆ. ಪಾಪ! ಅಕ್ಕೋರು ಅವ್ರ ಮಗಳು ಇಬ್ರೇ ಇಪ್ಪದು’ ಎಂಬುದು ಅಜ್ಜಿಯ ಕಳಕಳಿ.
 
‘ಹೌದ್ರೋ. ಅಕ್ಕೋರ ಗಂಡ ಬ್ಯಾರೆ ಯಾವ್ದೊ ಬೈಲಶೀಮೆ ಊರಲ್ಲಿ ಹಾಯಸ್ಕೂಲು ಮಾಸ್ತರಂತೆ’ ತಮಗೆ ತಿಳಿದ ಮಾಹಿತಿಗಳನ್ನು ಇಬ್ಬರೂ ವಿನಿಮಯ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಶಾಲೆಯಿಂದ ಕಮಲಜ್ಜಿಯ ಮೊಮ್ಮಕ್ಕಳು ಹಿಂದಿರುಗಿ ಬರುತ್ತಿದ್ದಂತೆ ವಿಷಯ ಬೇರೆಲ್ಲೊ ಹೊರಳಿತು.
***
ಈ ವರ್ಷದ ಸುಂಕೋಳಿ ನಾಟಕ ಸಪ್ತಾಹ ಪ್ರಾರಂಭವಾಗಿತ್ತು. ಸಕ್ರೆಬೈಲಿಂದ ನಾಕಾರು ಕಿಲೋಮೀಟರು ದೂರದಲ್ಲಿರುವ ಊರದು. ಅವರ ನಾಟಕವೆಂದರೆ ಅಂಥಿಂಥದ್ದೆ ಅಲ್ಲ. ಇತ್ಲಾಗೆ ಸಿದ್ದಾಪುರ, ಸಾಗರದಿಂದಲೂ ಜನ ಬಂದ್ರೆ, ಅತ್ಲಾಗೆ ಘಟ್ಟದ ಕೆಳಗಿನ ಕುಮಟೆ, ಹೊನ್ನಾವರದಿಂದಲೂ ಜನ ಬರಲಿಕ್ಕೆ ಸಾಕು. ಅಂಥಾ ಗಡದ್ದು ನಾಟಕ ಅವರದ್ದು. ವರ್ಷಕ್ಕೊಂದೇ ನಾಟಕ ಅವರು ಮಾಡುತ್ತಿದ್ದುದು, ಆದರೆ ನಾಟಕದ ವಸ್ತ್ರಾಭರಣಗಳು, ಅದ್ಭುತ ಸೆಟ್ಟಿಂಗುಗಳು, ಹಿನ್ನೆಲೆ ಸಂಗೀತ ಎಲ್ಲವೂ ಮತ್ತೆಮತ್ತೆ ನೆನಪಿಸಿಕೊಳ್ಳುವಂತೆ ಇರುತ್ತಿತ್ತು.
 
ಇದೆಲ್ಲದಕ್ಕೆ ಕಲಶಪ್ರಾಯವಾದದ್ದು ಊರಿನವರ ಒಗ್ಗಟ್ಟು. ಸನಿಹದ ಊರಾದ್ದರಿಂದ ಸಕ್ರೆಬೈಲಿನಲ್ಲಿಯೂ ಈ ನಾಟಕ ನೋಡಲು ಬಹಳ ಜನ ಹೋಗುತ್ತಿದ್ದರು. ಅಪರೂಪಕ್ಕೆ ನಾಟಕದಲ್ಲಿ ಪಾರ್ಟು ಮಾಡುವವರೂ ಒಂದಿಬ್ಬರಿದ್ದರು ಸಕ್ರೆಬೈಲಲ್ಲಿ. ಈ ಪೈಕಿ ಒಬ್ಬ ಭೀಮೇಶ್ವರ. ಈ ಸಾರಿಯೂ ಅವನದೊಂದು ಕಾವಲುಗಾರನ ಪಾರ್ಟಿತ್ತು. 
ರಾತ್ರಿ 10 ಗಂಟೆಗೆ ಸರಿಯಾಗಿ ಆರಂಭವಾಗುತ್ತಿದ್ದ ನಾಟಕ ಮುಗಿಯುವಾಗ ಬೆಳಗಿನ ಜಾವದ ಎರಡೋ ಮೂರೊ ಆಗಿರುತ್ತಿತ್ತು.
 
ರಾತ್ರಿ ಊಟ, ಮನೆಗೆಲಸವೆಲ್ಲಾ ಮುಗಿಸಿ, ಗಡಗಡ ಜೀಪನ್ನೋ ಮಾರುತಿ ಓಮಿನಿಯನ್ನೋ ಮಾಡಿಕೊಂಡು ಒಂದಿಷ್ಟು ಹೆಂಗಸರು–ಗಂಡಸರು ಎಲ್ಲ ಹೋಗುವುದು ಮಾಮೂಲು. ಅದರಲ್ಲೂ ತಮ್ಮೂರಿನ ಭೀಮೇಶ್ವರನದ್ದು ಪಾರ್ಟಿದೆ ಎಂದ ಮೇಲೆ ಹೋಗದಿರಲಾದೀತೆ? ಶಣ್ಕೂಸಿನವರೆಗೆ ಎಲ್ಲರೂ ನಾಟಕ ನೋಡಲು ಹೋದವರೆ. ಹಾಗೆ ಹೋಗದೆ ಉಳಿದವರೆಂದರೆ ಇತ್ತೀಚೆಗಷ್ಟೇ ಊರಿಗೆ ಬಂದ ಸರೋಜಕ್ಕೋರು ಮತ್ತವರ 14 ವರ್ಷದ ಮಗಳು ಸ್ನೇಹ. ಅಂದು ಸಪ್ತಾಹದ ಕಡೆಯ ದಿನವಾದ್ದರಿಂದ ಸುತ್ತಿನ ನಾಲ್ಕೈದು ಮನೆಗಳ ಜನರೆಲ್ಲಾ ನಾಟಕಕ್ಕೆ ಹೋಗಿದ್ದರು.
 
ಅಕ್ಕೋರಿದ್ದ ಹಳೆಯ ಮನೆಯ ಹೊರಜಗುಲಿಗೆ ಇತ್ತೀಚೆಗೆ ಬಾಗಿಲು ಹಾಕಿಸಿದ್ದರೂ, ಗೋಡೆಯು ಹಂಚಿನವರೆಗೆ ಇರದೆ ಅರ್ಧಕ್ಕಷ್ಟೇ ಇತ್ತು. ಮನೆಯ ಒಳಸುತ್ತಿಗೆಲ್ಲಾ ಗೋಡೆ, ಬಾಗಿಲು, ಚಿಲಕ ಭದ್ರವಾಗಿದ್ದವು. ಹಾಗಾಗಿ ಹೊರ ಜಗುಲಿಯಲ್ಲಿ ಯಾವ ವಸ್ತುಗಳನ್ನೂ ಅವರು ಇಡುತ್ತಿರಲಿಲ್ಲ, ಬಟ್ಟೆ ಒಣಗಿಸಲು ಒಂದಿಷ್ಟು ತಂತಿಗಳನ್ನು ಬಿಗಿದುಕೊಂಡಿದ್ದರಷ್ಟೇ. ಅಂದು ರಾತ್ರಿ ಎಂದಿನಂತೆ ತಾಯಿ ಮಗಳಿಬ್ಬರದ್ದೂ ಊಟ ಆಗಿತ್ತು. ಅಕ್ಕೋರು ಮಲಗಿದ್ದರೆ, ಮಗಳು ಓದುತ್ತಾ ಕುಳಿತಿದ್ದಳು. ಹೊರಗೆ ಯಾರದ್ದೋ ಮಣಮಣ ಧ್ವನಿ ಕೇಳಿದಂತಾಯಿತು.
 
ಕ್ರಮೇಣ ಆ ಧ್ವನಿ ದೊಡ್ಡದಾಗುತ್ತಲೂ ಹತ್ತಿರವಾಗುತ್ತಲೂ ಬಂತು. ಆದರೆ ಸ್ವರ ಅಸ್ಪಷ್ಟವಾಗಿತ್ತು. ಹೆದರಿದ ಸ್ನೇಹ ತಾಯಿಯನ್ನೆಬ್ಬಿಸಿದಳು. ಆಗಷ್ಟೇ ಕಣ್ಣಿಗೆ ನಿದ್ರೆ ಹತ್ತಿದ್ದ ಅಕ್ಕೋರಿಗೆ ಧಡಕ್ಕನೆ ಮಗಳು ಎಬ್ಬಿಸಿದಾಗ, ಹೊರಗಿನ ಅರಿವಾಗಲು ಒಂದು ಕ್ಷಣ ಬೇಕಾಯಿತು. ಹೊರಜಗುಲಿಯಲ್ಲೇ ಆ ಸ್ವರ ಕೇಳತೊಡಗಿದಾಗ ಅವರಿಗೆ ಅರಿವಾದದ್ದು ಯಾರೋ ಕುಡುಕ! ‘ಸಾಯ್ಲಿ ಆ ಕುಡುಕ! ಇವತ್ತಿಗೆ ಸಾಕು ಮಲಗು’ ಎಂದು ಮಗಳಿಗೆ ಹೇಳಿ ಬಾಗಿಲು ಭದ್ರವಿರುವುದನ್ನು ಖಾತ್ರಿಪಡಿಸಿಕೊಂಡು ದೀಪವಾರಿಸಿದರು. ಆದರೆ ಬೆಳಗ್ಗೆ ಎದ್ದಾಗ ಹೊರಜಗುಲಿಯಲ್ಲಿದ್ದ ತಾಯಿ–ಮಗಳ ವಸ್ತ್ರಗಳೆಲ್ಲವೂ ಮಾಯವಾಗಿ, ಬದಲಿಗೆ ಯಾರುಯಾರದ್ದೋ ವಸ್ತ್ರಗಳಿದ್ದವು!
***
ಅಂತೂ ನಾಟಕಕ್ಕಿಂತ ಹೆಚ್ಚಿನ ಸುದ್ದಿ ಮಾಡಿದ್ದವು, ಅಕ್ಕೋರ ಹೊರಜಗುಲಿಯ ಬದಲಾದ ವಸ್ತ್ರಗಳು. ಮನೆಯ ಅಂಗಳದಲ್ಲಷ್ಟೇ ಇದ್ದ ಉಪದ್ರ ಈಗ ಜಗುಲಿಯನ್ನೂ ಪ್ರವೇಶಿಸಿದ್ದು ಕೇಳಿ ಹರೆಯದ ಹೆಣ್ಣುಗಳಿದ್ದ ಎಲ್ಲರ ಮನೆಗಳಲ್ಲೂ ತಲ್ಲಣ ಉಂಟಾಯಿತು. ಪೊಲೀಸು–ಗೀಲೀಸು ಎಂದೆಲ್ಲಾ ಓಡಾಡಿಯಾಯಿತು.
 
ಇನ್ನು ಕೆಲವರಿಗೆ ಕೆಟ್ಟ ಕುತೂಹಲ – ಬೇರೆಯವರ ವಸ್ತ್ರಗಳಿದ್ದವು ಎಂದಾದರೆ, ಅವೆಲ್ಲ ಯಾರದ್ದಾದರೂ ಮನೆಯಿಂದ ಕದ್ದಿದ್ದೇ ಆಗಿರಬೇಕಲ್ಲ... ಹಾಗಾದರೆ ಯಾರದ್ದು?
‘ಯಾರದ್ದಾದ್ರೂ ವಸ್ತ್ರ ತೊಡೂಕೆ ಬತ್ತದಿಯ? ಅಕ್ಕೋರು ಅದ್ನೆಲ್ಲ ಒಲೀಗೆ ತುಂಬಿ ಸುಟ್ಹಾಕೀರಂತೆ. ಸಮಾ ಒಂದ್ ಹಂಡ್ಯ ನೀರ್ ಕಾದದಂತೆ’. ತಾನೇ ಕಂಡಿದ್ದೇನೆ ಎಂಬಂತೆ ಬಣ್ಣಿಸಿದಳು ಕಮಲಜ್ಜಿಯ ವರದಿಗಾರ್ತಿ!
 
‘ಅಲ್ದ ಮತ್ತೆ! ಯಾರದ್ದೇನ ಕೊಳಕು ವಸ್ತ್ರ. ಎರಡು ಕಟ್ಟಿಗೆಯಾದ್ರೂ ಉಳತ್ತು ಬಿಡು’ ನಿಟ್ಟುಸಿರಿಟ್ಟಳು ಅಜ್ಜಮ್ಮ. ಆದರೂ ಮಗನ ಕಪಾಟಿನಲ್ಲಿ ಕೆಲವು ಹೆಂಗಸರ ವಸ್ತ್ರಗಳು ಕಂಡಾಗಿನಿಂದ ಆಕೆಯ ತಲೆ ಕೆಸರು ರಾಡಿಯಂತಾಗಿತ್ತು. ಅವನನ್ನ ಕೇಳಿದ್ದಕ್ಕೆ, ‘ಅದೆಲ್ಲಾ ನಾಟ್ಕದ್ದು’ ಎಂದು ತೇಲಿಸಿದ್ದ. ಇರಲೂಬಹುದು, ಇಲ್ಲದಿರಲೂಬಹುದು. ಹಿಂದೆಂದೂ ಆತ ಸ್ತ್ರೀವೇಷ ಮಾಡಿದ್ದಿಲ್ಲ. ಆದರೆ ಆ ದಿನವಂತೂ ಭೀಮು ನಾಟಕದಲ್ಲೇ ಇದ್ದನಲ್ಲ, ಜೊತೆಗೆ ಬಂದಿದ್ದವ ಯಾರೋ ಕುಡುಕನಂತೆ ಎಂದು ಸಮಾಧಾನ ಹೇಳಿಕೊಂಡಿದ್ದಳು. ಥೋ! ಈ ಮಾಣಿಗೊಂದು ಸಮಾ ಸಂಸಾರ ಇರಬೇಕಿತ್ತು ಎಂದು ಪೇಚಾಡಿಕೊಂಡಿದ್ದಳು. 
 
ಆ ದಿನ ಬೆಳಗ್ಗೆ ಎಂದಿನಂತೆ ದಿನಪತ್ರಿಕೆ ಓದುತ್ತ ಕಮಲಜ್ಜಿ ಕುಳಿತಿದ್ದಾಗಲೇ, ‘ಎಂತದ್ರೋ ಇವತ್ತಿನ್ ಸುದ್ದಿ’ ಎನ್ನುತ್ತ ಹಾಜರಾದಳು ಶಣ್ಕೂಸು. 
‘ಕೇಳಿಲ್ಲಿ. ರಾಜಸ್ತಾನದ ಯಾವುದೋ ಊರಲ್ಲಿ, ಹೆಣ್ ಶಿಶು ಹುಟ್ದಾಗೆಲ್ಲಾ ಒಂದಿಷ್ಟು ಗಿಡ ನೆಡತ್ವಡ. ಹಾಂಗೆ ನೆಟ್ಟಿದ್ದು ಈಗ ಸಾವಿವಾರು ಗಿಡಗಳು ದೊಡ್ಡಾಗ್ತಾ ಇದ್ವಡ’. 
‘ಅದ್ ಯಂತಕ್ಕೇನ?’ ಕೇಳಿದಳು ಶಣ್ಕೂಸು. 
 
ಅವಳೆಡೆಗೆ ಗಮನ ಕೊಡದೆ ಮುಂದುವರಿಸಿದ ಅಜ್ಜಿ, ‘ಒಂದು ಸಾವಿರ ಗಂಡು ಮಕ್ಕಳಿಗೆ ಕೇವಲ 850 ಹೆಣ್ಣುಮಕ್ಕಳಿವೆ ಹೇಳಿ ಕೊಟ್ಟಿದ್ದ ಇಲ್ಲಿ. ಅಲ್ಲೂ ಗಂಡು ಹುಡುಗ್ರಿಗೆ ಲಗ್ನಾಪ್ಪದು ಕಷ್ಟಾಂತಾತು’ ಎಂದು ವಿಶ್ಲೇಷಿಸಿದಳು. ಅಷ್ಟರಲ್ಲೇ ಅಜ್ಜಿಯ ಮನೆಯ ಸರಗೋಲು ದಾಟಿ ಒಳಬಂದರು ಸರೋಜಕ್ಕೋರು. ‘ಬನ್ನಿ, ಕುಳಿತುಕೊಳ್ಳಿ’ ಎಂಬ ಎಲ್ಲಾ ಉಪಚಾರಗಳನ್ನು ನಯವಾಗಿ ನಿರಾಕರಿಸಿ, ತಮ್ಮದೊಂದು ಕೋರಿಕೆಯನ್ನು ಅಜ್ಜಿಯ ಮುಂದಿಟ್ಟರು.
 
ಯಾವುದೋ ತರಬೇತಿಗಾಗಿ ಮೂರು ದಿನ ತಾನು ಕುಮಟೆಗೆ ಹೋಗಬೇಕಿದೆ. ಪ್ರತಿದಿನ ಬೆಳಗ್ಗೆ ಹೋಗಿ, ಸಂಜೆ ಬಂದುಬಿಡುತ್ತೇನೆ. ಆದರೆ ಮಧ್ಯಾಹ್ನ ಊಟಕ್ಕಾಗಿ ಸ್ನೇಹಾ ಮನೆಗೆ ಬರುತ್ತಾಳೆ. ಸ್ವಲ್ಪ ಆ ಕಡೆ ಗಮನಕೊಡಿ ಎಂದು ಕೋರಿದರು.  ತಾವು ಕಣ್ಣಿಡುವುದಾಗಿಯೂ, ಖಂಡಿತ ಆ ಬಗ್ಗೆ ಚಿಂತೆ ಬೇಡವೆಂದು ಇಬ್ಬರೂ ದೊಡ್ಡ ಗಂಟಲಿನಲ್ಲೇ ಆಶ್ವಾಸನೆ ನೀಡಿದರು.
***
ಸರೋಜಕ್ಕೋರ ಕುಮಟೆ ತಿರುಗಾಟ ಇವತ್ತಿಗೆ ಮುಗಿಯುತ್ತದೆ ಎಂದು ಬೆಳಗ್ಗೆಯೇ ಕಮಲಜ್ಜಿ ಲೆಕ್ಕ ಹಾಕಿದ್ದಳು. ಪ್ರತಿದಿನ ತಪ್ಪದೆ ಸ್ನೇಹಾಳನ್ನು ಕರೆದು ಮಾತನಾಡಿಸಿ, ‘ಪಾಪ! ಗನಾ ಕೂಸು’ ಎಂದು ಶಿಫಾರಸು ಕೊಡುತ್ತಿದ್ದಳು. ಆ ದಿನವೂ ಮಧ್ಯಾಹ್ನ ಊಟದ ಹೊತ್ತಿಗೆ ಅವಳಿಗೊಂದಿಷ್ಟು ಮಾವಿನಕಾಯಿ ಗೊಜ್ಜು ಕೊಡಲೆಂದು ಅಂಗಳಕ್ಕೆ ಬಂದು ಅಕ್ಕೋರ ಮನೆಯತ್ತ ಕಣ್ಣಾಡಿಸಿದಳು ಅಜ್ಜಿ.
 
ಹೊರಜಗುಲಿಯಲ್ಲಿ ಯಾರನ್ನೋ ಕಂಡಂತಾಗಿ ಕಣ್ಣಗಲಿಸಿ ನೋಡಿದಳು, ಹಿಂದಿನಿಂದ ಕಂಡದ್ದು ಯಾವುದೋ ಪರಿಚಿತ ಗಂಡಸಿನ ಚಹರೆ ಎನಿಸಿತು. ಅಲ್ಲೇ ಆಚೆಯ ಬಿಡಾರದಲ್ಲಿದ್ದ ಶಣ್ಕೂಸನ್ನೂ ಕೂಗಿ ಕರೆಯುತ್ತಾ, ಕೋಲೂರಿಕೊಂಡು ಲಘುಬಗೆಯಿಂದ ಹೆಜ್ಜೆ ಹಾಕಿದಳು. ಮುದುಕಿಯರಿಬ್ಬರೂ ಅಕ್ಕೋರ ಮನೆಯ ಅಂಗಳ ಸಮೀಪಿಸುತ್ತಿದ್ದಂತೆ ಥಟ್ಟನೆ ಹೊರಜಗುಲಿಯ ಗೋಡೆ ಹಾರಿದ ಪುರುಷಾಕೃತಿ ಪರಾರಿಯಾಯಿತು. ಆ ಆಕೃತಿ ಒಬ್ಬಳಿಗೆ ಭೀಮೇಶ್ವರನಂತೆ ಕಂಡರೆ, ಇನ್ನೊಬ್ಬಳಿಗೆ ಸಂಕನಂತೆ ಕಂಡು ಇಬ್ಬರೂ ಗರಬಡಿದಂತೆ ನಿಂತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT