ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯೋಚನಾ ವಿಧಾನ ಬದಲಾಗಲಿ’

Last Updated 30 ಏಪ್ರಿಲ್ 2017, 3:09 IST
ಅಕ್ಷರ ಗಾತ್ರ

ಅಮೆರಿಕದ ಬರ್ಕಲಿ ವಿಶ್ವವಿದ್ಯಾಲಯ  ಪ್ರಕಟಿಸಿರುವ ಭೌತವಿಜ್ಞಾನ ಕುರಿತ ‘ಬರ್ಕಲಿ ಸರಣಿ’ಯ ಐದು ಗ್ರಂಥಗಳು  ಉತ್ಕೃಷ್ಟ ಗುಣಮಟ್ಟದಿಂದ ಕೂಡಿವೆ ಎಂದೇ ವಿಜ್ಞಾನ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪೂರಕವಾಗಿರುವ ಈ ಕೃತಿಗಳ ಕನ್ನಡ ಭಾಷಾಂತರ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಯೋಜಕತ್ವದಲ್ಲಿ ನಡೆಯುತ್ತಿದೆ. 

ಬೆಂಗಳೂರಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳ ಭೌತ ವಿಜ್ಞಾನಿಗಳು ಮತ್ತು ಪ್ರಾಧ್ಯಾಪಕರನ್ನು ಒಳಗೊಂಡ 20 ಮಂದಿ ತಜ್ಞರ ತಂಡ ಸ್ವಯಂ ಪ್ರೇರಣೆಯಿಂದ ಭಾಷಾಂತರದಲ್ಲಿ ತೊಡಗಿದೆ. ಈ ತಂಡದ ನೇತೃತ್ವ ವಹಿಸಿರುವ ಜವಾಹರಲಾಲ್‌ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಭೌತವಿಜ್ಞಾನಿ ಪ್ರೊ. ಶ್ರೀಕಾಂತ್‌ ಶಾಸ್ತ್ರಿ ಯೋಜನೆ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಬರ್ಕಲಿ ಸರಣಿ ಭೌತ ವಿಜ್ಞಾನ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸುವ  ಯೋಜನೆ ಹುಟ್ಟಿದ್ದು  ಹೇಗೆ?
ಮೂಲತಃ ಇದು ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಕಲ್ಪನೆಯ ಕೂಸು. ಬರ್ಕಲಿ ಸರಣಿಯ ಭೌತ ವಿಜ್ಞಾನದ ಕೃತಿಗಳು  ಅತ್ಯಂತ ಉತ್ಕೃಷ್ಟ ಮಟ್ಟದ್ದು. ಇಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಗ್ರಾಮಾಂತರ ಪ್ರದೇಶದ ಶಾಲೆಗಳಲ್ಲಿ ವಿಜ್ಞಾನದ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸಲೆಂದೇ ವಿಶ್ವವಿದ್ಯಾಲಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಮಾತೃಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ಶಿಕ್ಷಣ ಪಡೆಯುವವರಿಗೆ ಇಂಗ್ಲಿಷ್‌ನಿಂದಾಗಿ ವಿಜ್ಞಾನದ ಕಲಿಕೆಗೆ ತೊಡಕಾಗಬಾರದು ಎಂಬ ಉದ್ದೇಶದಿಂದ ಅವರದೇ ಭಾಷೆಯಲ್ಲಿ   ಕಲಿಕಾ ಸಾಮಗ್ರಿ ಒದಗಿಸುವ ವಿಶಿಷ್ಟ ಯೋಜನೆ ಇದಾಗಿದೆ.

ವಿಜ್ಞಾನದ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆಚ್ಚಿನ ಜ್ಞಾನಾರ್ಜನೆಗೆ ಈ ಕೃತಿಗಳು ಉಪಯುಕ್ತ ಸಂಪನ್ಮೂಲ ಸಾಮಗ್ರಿ. ಅಜೀಂ ಪ್ರೇಮ್‌ಜೀ ವಿಶ್ವ ವಿದ್ಯಾಲಯ ಮೊದಲಿಗೆ ಹಿಂದಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಒಟ್ಟು ಯೋಜನೆಯ ಉಸ್ತುವಾರಿ ವಹಿಸಿರುವ ಹೃದಯಕಾಂತ್‌ ದಿವಾನ್‌ ಕಳೆದ ಜೂನ್‌ನಲ್ಲಿ ಮೊಹಾಲಿಯಲ್ಲಿ ಸಿಕ್ಕಾಗ ಯೋಜನೆ ಬಗ್ಗೆ ವಿವರಿಸಿದರು. ಕನ್ನಡದಲ್ಲಿಯೂ ಮಾಡುವ ಆಲೋಚನೆ  ಇದೆಯೇ ಎಂದು ಅವರಿಗೆ ಕೇಳಿದೆ. ನೀವೇ ಏಕೆ ಮಾಡಬಾರದು ಎಂದರು.

* ಬರ್ಕಲಿ ಸರಣಿ ಭಾಷಾಂತರ ಕಾರ್ಯಕ್ಕೆ ಕೈ ಹಾಕಲು ಪ್ರೇರಣೆ ಸಿಕ್ಕಿದ್ದು ಮತ್ತು ಆ ನಿಟ್ಟಿನಲ್ಲಿ ಮುಂದುವರಿದಿದ್ದು ಹೇಗೆ?
ವಿಜ್ಞಾನದ ಬೋಧನೆ ಮತ್ತು ಸಂಶೋಧನೆಗಳ ಜತೆಗೆ ಈ ಕಾರ್ಯಕ್ಕೆ ಸಮಯ ಸಿಗುವುದಿಲ್ಲ. ಕನ್ನಡದಲ್ಲಿ ಭಾಷಾಂತರ ಮಾಡಬೇಕಾದರೆ ತಕ್ಕ ಮಟ್ಟಿಗೆ ಸಾಹಿತ್ಯವೂ ಗೊತ್ತಿರಬೇಕು. ಇದು ಒಬ್ಬರು ಅಥವಾ ಇಬ್ಬರು ಮಾಡುವ ಕೆಲಸವೂ ಅಲ್ಲ. ಒಂದಷ್ಟು ಜನ ಸೇರಿ ತಂಡವಾಗಿ ಮಾಡಬಹುದಾದ ಕೆಲಸ.

ಕನ್ನಡ ಚೆನ್ನಾಗಿ ತಿಳಿದಿರುವ ಭೌತ ವಿಜ್ಞಾನ ಕ್ಷೇತ್ರದಲ್ಲಿರುವವರನ್ನು ಒಟ್ಟಿಗೆ ಸೇರಿಸಬೇಕಿತ್ತು.  ಭಾಷಾಂತರ ಮಾಡಲು ತಂಡ ಕಟ್ಟುವ ಹೊಣೆಗಾರಿಕೆ ನನ್ನ ಮೇಲೆ ಬಿತ್ತು. ಈ ಬಗ್ಗೆ  ಶರತ್‌ ಅನಂತಮೂರ್ತಿ ಮತ್ತು  ವೈ.ಸಿ.ಕಮಲಾ ಜತೆ ಚರ್ಚೆ ನಡೆಸಿದೆ. ಆ ವೇಳೆಗಾಗಲೇ ನಿರ್ಮಲಾ, ಗಾಯತ್ರಿಮೂರ್ತಿ ಮತ್ತು ಶಾರದಾ ಅವರು ಮೊದಲ ಸಂಪುಟಕ್ಕೆ ಚಾಲನೆ ಕೊಟ್ಟಿದ್ದರು.

ಎಲ್ಲರನ್ನು ಒಟ್ಟು ಸೇರಿಸಿ , ಬರ್ಕಲಿ ಸರಣಿಯನ್ನು ಕನ್ನಡಕ್ಕೆ ತರುವಾಗ ಏನೆಲ್ಲ ಅಂಶಗಳು ಇದ್ದರೆ ಒಳ್ಳೆಯದು ಎಂಬ ಬಗ್ಗೆ ಚರ್ಚೆ ಮಾಡಿದೆವು.  ಇಂಗ್ಲಿಷ್‌ನಿಂದ ಕನ್ನಡಕ್ಕೆ ತರ್ಜುಮೆ ಮಾಡುವುದು ಸುಲಭದ ಕೆಲಸವಾಗಿದ್ದರೂ ವಿಜ್ಞಾನದ ಈ ಕೃತಿಗಳನ್ನು ಕನ್ನಡದ ಮಕ್ಕಳಿಗೆ ತೀರಾ ಸರಳವಾಗಿ ಪರಿಚಯಿಸುವುದು ಹೇಗೆ ಎಂಬ ದೊಡ್ಡ ಸವಾಲು ನಮ್ಮ ಮುಂದಿತ್ತು. ಯಾವ ರೀತಿ ಭಾಷಾಂತರಿಸಿದರೆ ಹೆಚ್ಚು  ಪ್ರಯೋಜನ ಆಗುತ್ತದೆ ಎಂಬುದು ನಮ್ಮೆಲ್ಲರ ಯೋಚನೆ ಆಗಿತ್ತು.

* ಭಾಷಾಂತರಕ್ಕೆ ಎದುರಾದ ಪ್ರಮುಖ ಸವಾಲುಗಳು ಯಾವುವು ?
ಯಾವುದೇ ಸಾಹಿತ್ಯ ಕೃತಿಯನ್ನು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರ ಮಾಡುವುದು ಸುಲಭವಲ್ಲ. ಸಾಹಿತ್ಯದಲ್ಲಿ ಒಟ್ಟಾರೆ ಭಾವವನ್ನು ಹಿಡಿದಿಡುವ ಕೆಲಸ ಆಗಬೇಕು. ವಿಜ್ಞಾನ ಅದರಲ್ಲೂ ಭೌತ ವಿಜ್ಞಾನ ಹಾಗಲ್ಲ. ಇಲ್ಲಿ ಭಾವನೆ ಮತ್ತು ಕಲ್ಪನೆಗಳಿಗೆ ಆಸ್ಪದವಿರುವುದಿಲ್ಲ. ಪುಸ್ತಕವನ್ನು ಓದಬೇಕು ಎಂದು ಕೈಗೆತ್ತಿಕೊಂಡರೆ ಕುತೂಹಲದಿಂದ ಮುಂದುವರಿಸಿಕೊಂಡು ಹೋಗುವಂತಿರಬೇಕು. ಇದನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ಸಂಪುಟಕ್ಕೂ ಪ್ರತ್ಯೇಕ ಯೋಜನೆ ರೂಪಿಸಿದೆವು. ಪರಸ್ಪರ ಸಹಕಾರದ  ಮೇಲೆ ಭಾಷಾಂತರ  ಕಾರ್ಯಕ್ಕೆ ಮುಂದಾದೆವು. 

* ಎಷ್ಟು ಸಂಪುಟಗಳ ಕಾರ್ಯ ಆರಂಭಗೊಂಡಿದೆ?
ಈಗ ಮೆಕ್ಯಾನಿಕ್‌, ಎಲೆಕ್ಟ್ರಿಸಿಟಿ ಮತ್ತು ಮ್ಯಾಗ್ನೆಟಿಸಿಂ ಸಂಪುಟಗಳನ್ನು ಭಾಷಾಂತರ ಮಾಡಲು ಉದ್ದೇಶಿಸಿದ್ದೇವೆ. ಕ್ವಾಂಟಂ ಮೆಕ್ಯಾನಿಕ್ಸ್‌ ಮತ್ತು ಸ್ಟ್ಯಾಟಸ್ಟಿಕಲ್‌ ಫಿಸಿಕ್ಸ್‌ ಕೈಗೆತ್ತಿಕೊಂಡಿಲ್ಲ. ಇವೆರಡೂ ವಿಷಯಗಳ ಭಾಷಾಂತರ ಕಾರ್ಯದಲ್ಲಿ ಬೇರೆ– ಬೇರೆ ಹಿನ್ನೆಲೆಯುಳ್ಳ ತಜ್ಞರು ಇದ್ದಾರೆ. ಕನ್ನಡದಲ್ಲಿ ಭಾಷೆಯ ಬಳಕೆ, ವಿನ್ಯಾಸ ಹೇಗಿದ್ದರೆ ಒಳ್ಳೆಯದು ಎಂಬ ಬಗ್ಗೆ  ಆರಂಭದಲ್ಲಿ ಎಲ್ಲರೂ ವಿಸ್ತೃತವಾಗಿ ಚರ್ಚಿಸಿದೆವು. ಆನಂತರವೇ  ಭಾಷಾಂತರಕ್ಕೆ ಕೈ ಹಾಕಿದೆವು. ಇಲ್ಲಿಯವರೆಗೆ ಇಂತಹ ಮೂರು ಸಭೆಗಳನ್ನು ಮಾಡಿದ್ದೇವೆ. ನಮ್ಮ  ತಂಡದ ವಿಶೇಷವೆಂದರೆ, ಈವರೆಗೂ ಭಾಷಾಂತರದ ಕಾರ್ಯದಲ್ಲಿ ತೊಡಗಿಕೊಳ್ಳದವರೂ ಸೇರಿದ್ದಾರೆ.

* ತಂಡ ಕಟ್ಟಿಕೊಂಡು ಕೆಲಸ ಮಾಡೋದರಿಂದ ಸಮನ್ವಯ ಹೇಗೆ ಸಾಧ್ಯ? 
ಮೂರು ಸಂಪುಟಗಳಿಗೂ ತಲಾ ಇಬ್ಬರು ಪರೀಕ್ಷಕರ (vetters) ತಂಡವಿದೆ. ಹಾಗೆಯೆ, ಪ್ರತಿ ತಂಡದಲ್ಲೂ ಮೂರರಿಂದ ನಾಲ್ಕು ಜನ ಭಾಷಾಂತರಕಾರರು ಇದ್ದಾರೆ. ಪರೀಕ್ಷಕರ ಮಾರ್ಗ ದರ್ಶನದಲ್ಲಿ ಭಾಷಾಂತರ ನಡೆಯುತ್ತದೆ. ಭಾಷಾಂತರವನ್ನು ಬಳಿಕ ಇಬ್ಬರು ಅಥವಾ ಮೂವರು ತಜ್ಞರು ಪರಿಶೀಲಿಸುವ ವ್ಯವಸ್ಥೆ ಇದೆ. ಹೀಗೆ ಒಂದು ತಂಡವಾಗಿ ವಿಷಯದ ಜ್ಞಾನ ಮತ್ತು ಭಾಷೆಯ ದೃಷ್ಟಿಯಿಂದ ಗುಣಮಟ್ಟ ಮತ್ತು ಮೌಲ್ಯ ವೃದ್ಧಿಸುವಂತೆ ಮಾಡುವುದು ನಮ್ಮ ಉದ್ದೇಶ. ಹಲವು ವಿಚಾರಗಳ ಅಪ್‌ಡೇಟ್‌ ಕೂಡ ಆಗಿದೆ.

* ಪುಸ್ತಕದ ವಿನ್ಯಾಸ, ಒಪ್ಪ– ಓರಣದ ಬಗ್ಗೆ ಹೇಳಿ...
ಲಟೆಕ್ಸ್(LaTeX) ಬುಕ್‌ ಟೆಂಪ್ಲೇಟ್‌ ಮೂಲಕ ಪುಸ್ತಕದ ವಿನ್ಯಾಸ ಮಾಡುತ್ತಿದ್ದೇವೆ. ಈ ಟೆಂಪ್ಲೇಟ್‌ಗೆ ಪಠ್ಯವನ್ನು(text) ಹಾಕಿದಾಗ, ಸ್ವಯಂ ಆಗಿ ಪುಸ್ತಕದ ವಿನ್ಯಾಸಕ್ಕೆ ರೂಪಾಂತರಗೊಳ್ಳುತ್ತದೆ. ಈ ಮಾದರಿಯನ್ನು ಮುಂದೆ ಕನ್ನಡದಲ್ಲಿ ಯಾರು ಬೇಕಾದರೂ ಸುಲಭವಾಗಿ ಬಳಸಿ ಪುಸ್ತಕ ಪ್ರಕಟಿಸಬಹುದು. ಎಲ್ಲರಿಗೂ ಲಭ್ಯವಾಗುವಂತೆ ಕನ್ನಡ ಭಾಷೆಗಾಗಿ ಇದನ್ನು ಅಭಿವೃದ್ಧಿ ಪಡಿಸಿದ್ದೇವೆ.

* ಕಠಿಣ ಭೌತ ವಿಜ್ಞಾನದ ಕೃತಿಯನ್ನು ಕನ್ನಡದಲ್ಲಿ ಸರಳ ಮತ್ತು ಆಸಕ್ತಿದಾಯಕ ಆಗಿಸುವುದು ಹೇಗೆ ಸಾಧ್ಯ?
ಭೌತ ವಿಜ್ಞಾನ ಕಠಿಣವೇನೊ ನಿಜ. ಅದನ್ನು ವಿದ್ಯಾರ್ಥಿಗಳು ಮತ್ತು ಆಸಕ್ತರು ಓದುವಾಗ ಸುಲಭವಾಗಿ ಅರ್ಥೈಸಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಭಾಷೆಯನ್ನು ಸರಳಗೊಳಿಸಿದ್ದೇವೆ. ಆಡಂಬರಕ್ಕಾಗಿ ಕಠಿಣ ಮತ್ತು ಕೃತಕ ಪದಗಳನ್ನು ಬಳಸಿಲ್ಲ. ಬದಲಿಗೆ ಪ್ರೌಢ ಶಾಲಾ ಪಠ್ಯ ಪುಸ್ತಕಗಳಲ್ಲಿರುವ ಮತ್ತು ಜನ ಬಳಕೆಯಲ್ಲಿರುವ ಪದಗಳನ್ನೇ ಬಳಸಿದ್ದೇವೆ. ಒಂದು ವೇಳೆ ಪ್ರೌಢ ಶಾಲೆ ಪಠ್ಯದಲ್ಲಿರುವ ಪದಗಳು ಅಸಮಂಜಸ ಎನಿಸಿದರೆ ಪರ್ಯಾಯ ಪದಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.

ಒಂದು ಹೊಸ ಪದ ಬಳಸುವ ಸಂದರ್ಭದಲ್ಲಿ ನಮ್ಮ  ಇಡೀ ತಂಡ ಚರ್ಚಿಸಿ, ತೀರ್ಮಾನಕ್ಕೆ ಬರುತ್ತದೆ. ಸಾಕಷ್ಟು ತಾಂತ್ರಿಕ ಪದಗಳಿಗೆ ಇಂಗ್ಲಿಷಿನಲ್ಲಿ ಸಮಾನಾಂತರ ಪದಗಳನ್ನು ಸೇರಿಸಿದ್ದೇವೆ. ಇದರಿಂದ ವಿದ್ಯಾರ್ಥಿ ಮುಂದೆ ಇಂಗ್ಲಿಷಿನಲ್ಲಿ ಓದುವಾಗ  ಕಷ್ಟ ಪಡಬಾರದು ಎಂಬುದೇ ನಮ್ಮ ಉದ್ದೇಶ. ಜನ ಬಳಕೆಯಲ್ಲಿರುವ ತಾಂತ್ರಿಕ ಪದಗಳನ್ನು ಹಾಗೆಯೇ ಉಳಿಸಿಕೊಂಡಿದ್ದೇವೆ.

ಉದಾಹರಣೆಗೆ, ‘ಸ್ಪ್ರಿಂಗ್‌’. ಅದನ್ನು ‘ತಂತಿಯ ಸುರುಳಿ ಕಟ್ಟು’ ಎಂದು ಬಳಸುವ ಅಗತ್ಯವಿಲ್ಲ. ಲ್ಯಾಟಿನ್‌ಗೆ ಹತ್ತಿರವಿರುವ ಸಂಸ್ಕೃತದಲ್ಲಿ ತಾಂತ್ರಿಕ ಪದಗಳು ಹೇರಳವಾಗಿ ಸಿಗುತ್ತವೆ. ಆದರೆ,  ನಾವು ಕನ್ನಡದ ಪದಗಳಿಗೇ  ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಿರ್ದಿಷ್ಟ ಪದಗಳಿಗೆ ನಮ್ಮಲ್ಲೇ ಚರ್ಚೆ ಮಾಡುವಾಗ ಎಷ್ಟೋ ಉತ್ತಮ ಪದಗಳು ಸಿಕ್ಕಿವೆ.

ಹೀಗೆ ಕೃತಿಯನ್ನು ಸರಳ ಮತ್ತು ಆಸಕ್ತಿದಾಯಕವಾಗಿಸುವ ಪ್ರಯತ್ನ ಮಾಡಿದ್ದೇವೆ. ಹಿಂದಿಯಲ್ಲಿ ಈ ಕೃತಿಗಳನ್ನು ಸರಳವಾಗಿ ಪ್ರಕಟಿಸಲಾಗಿದೆ ಎಂಬ ಮಾಹಿತಿಯನ್ನು ಹೃದಯಕಾಂತ್‌ ದಿವಾನ್‌ ನೀಡಿದರು. ಹಿಂದಿ ಪುಸ್ತಕಗಳನ್ನು ತರಿಸಿ, ಹಿಂದಿ ಮತ್ತು ಕನ್ನಡ ಬಲ್ಲವರಿಂದ ಸರಳ ಭಾಷಾಂತರದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಿದ್ದೇವೆ.

* ಕೃತಿ ರಚನೆಗೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಕಾರದ ಕುರಿತು ಹೇಳಿ?
ಭಾಷಾಂತರಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಿಂದ ಉತ್ತಮ ಸಹಕಾರ ಸಿಕ್ಕಿದೆ. ಅಜೀಂ ಅವರ ಜತೆ ಆರಂಭದಲ್ಲಿ ಚರ್ಚಿಸುವಾಗ ಪುಸ್ತಕ ಪಿಡಿಎಫ್‌ ರೂಪದಲ್ಲಿದ್ದರೆ ಸಾಕು ಎಂದಿದ್ದರು. ಆದರೆ, ನಾವು ಇಷ್ಟೆಲ್ಲಾ ವಿಜ್ಞಾನಿಗಳು ಸೇರಿ ಶ್ರಮ ಹಾಕುತ್ತಿರುವಾಗ, ಅದು ಪುಸ್ತಕ ರೂಪದಲ್ಲಿ ಬರದಿದ್ದರೆ ಶ್ರಮ ಸಾರ್ಥಕವಾಗುವುದಿಲ್ಲ. ಹೆಚ್ಚು ಜನಕ್ಕೂ ತಲುಪುವುದಿಲ್ಲ ಎಂಬುದನ್ನು  ಅವರಿಗೆ ಮನವರಿಕೆ ಮಾಡಿದೆ.

ಬಳಿಕ ಅವರು ಒಪ್ಪಿಕೊಂಡರು. ಪ್ರಕಾಶಕರನ್ನು ಸಂಪರ್ಕಿಸಿದಾಗ ಆರಂಭದಲ್ಲಿ ಅಷ್ಟೇನೂ ಆಸಕ್ತಿ ತೋರಲಿಲ್ಲ. ಭಾಷಾಂತರ ಮಾಡಿಕೊಡಿ ನೋಡೋಣ ಎಂದರು. ಆಗ ನಿಜಕ್ಕೂ ಬೇಸರ ಎನಿಸಿತು. ಅದಾದ ಹಲವು ದಿನಗಳ ಬಳಿಕ ಪುಸ್ತಕ ಪ್ರಕಟಿಸಲು ಒಪ್ಪಿಕೊಂಡರು. ನಮ್ಮಲ್ಲಿ ಎಷ್ಟೋ ಜನ ವಿಜ್ಞಾನಿಗಳು ರಾತ್ರಿಯವರೆಗೆ ವಿಜ್ಞಾನದ ಬೋಧನೆ ಅಥವಾ ಸಂಶೋಧನೆ ಕಾರ್ಯದಲ್ಲಿ ತೊಡಗಿರುತ್ತಾರೆ. ಕೆಲಸದ ಒತ್ತಡದ ನಡುವೆಯೂ ಕನ್ನಡದ ಕೆಲಸಕ್ಕೆ ಸಮಯ ನೀಡುತ್ತಿದ್ದಾರೆ.

* ಕನ್ನಡದಲ್ಲಿ ವಿಜ್ಞಾನ ಕಲಿಕೆ ಮತ್ತು ಸಿಇಟಿ, ಎನ್‌ಇಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ತಯಾರಿ ನಡೆಸಲು ಎಷ್ಟರ ಮಟ್ಟಿಗೆ ಉಪಯೋಗ ಆಗುತ್ತದೆ?
ವಿಜ್ಞಾನವನ್ನು ಕನ್ನಡ ಭಾಷೆಯಲ್ಲಿ ಕಲಿಯುವುದು ಕಷ್ಟವೇನು ಅಲ್ಲ. ಆರಂಭದಲ್ಲಿ ತೊಡಕು ಆಗಬಹುದು. ಕ್ರಮೇಣ ಸರಿ ಹೋಗುತ್ತದೆ. ಇಂಗ್ಲಿಷ್‌ ಮಾಧ್ಯಮಕ್ಕೆ ಸೇರುವ ವಿದ್ಯಾರ್ಥಿಗೆ  ಪ್ರಾರಂಭದಲ್ಲಿ ಎಲ್ಲ ಇಂಗ್ಲಿಷ್‌ ಪದಗಳು, ತಾಂತ್ರಿಕ ಪದಗಳು ಗೊತ್ತಿರುತ್ತವೆಯೇ. ಈ ಪದಗಳೆಲ್ಲ ಹೊಸತೇ ಆಗಿರುತ್ತವೆ ಅಲ್ಲವೇ?  ಸತತ ಕಲಿಕೆಯಿಂದ ಪರಿಪೂರ್ಣತೆ ಪಡೆಯಬಹುದು. ವಿಜ್ಞಾನ ವಿಷಯವನ್ನು ಇಂಗ್ಲಿಷ್‌ನಲ್ಲಿ ಯೋಚಿಸುವುದಕ್ಕಿಂತ ಕನ್ನಡದಲ್ಲಿ ಯೋಚಿಸಬೇಕು. ನಮ್ಮ ಯೋಚನಾ ವಿಧಾನವೇ ಬದಲಾಗಬೇಕು. ಒಮ್ಮೆ  ಇದು ಸಾಧ್ಯವಾದರೆ, ಕನ್ನಡದಲ್ಲಿ  ವಿಜ್ಞಾನ ಕಲಿಕೆ ಮತ್ತು ಅದಕ್ಕೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವುದು ಕಷ್ಟವಲ್ಲ.

* ಮುಂದೆ ಇಂತಹ ಇನ್ನಷ್ಟು ಯೋಜನೆಗಳನ್ನು ಕೈಗೆತ್ತಿಕೊಳ್ಳುವಿರೇ?
ಖಂಡಿತ, ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬಹುದು. ಅದಕ್ಕಿಂತ ಮುಖ್ಯ ವಿಚಾರವೆಂದರೆ, ವಿಜ್ಞಾನದಲ್ಲಿ ಬರೆಯುವವರ ತಂಡ ಕಟ್ಟುವುದು. ಒಳ್ಳೆಯ ಬರಹಗಾರರ ತಂಡ ಇದ್ದರೆ, ವಿಜ್ಞಾನದ ಹಲವು ಕೃತಿಗಳನ್ನು ಕನ್ನಡಕ್ಕೆ ತರಬಹುದು. ಜನಪ್ರಿಯ ವಿಜ್ಞಾನದ ಬಗ್ಗೆ ಕನ್ನಡದಲ್ಲಿ ಬರೆಯುವವರ ಸಂಖ್ಯೆ ಕಡಿಮೆ. ಆದರೆ, ಇಂಗ್ಲಿಷಿನಲ್ಲಿ ವಿಪುಲ ಜನಪ್ರಿಯ ಸಾಹಿತ್ಯ ಸಿಗುತ್ತದೆ. ಲೆಕ್ಕವಿಲ್ಲದಷ್ಟು ಜನ ಬರೆಯುತ್ತಾರೆ. ಕನ್ನಡದಲ್ಲಿ ವಿಜ್ಞಾನದ ವಿಷಯ ಬರೆಯಲು ಆಸಕ್ತಿ ಇದ್ದವರನ್ನು ನಮ್ಮ ತಂಡದಲ್ಲಿ ಸೇರಿಸಿಕೊಳ್ಳಬಹುದು. ಅಂತಹ ಆಸಕ್ತಿ ಇರುವವರು ನಮ್ಮನ್ನು ಸಂಪರ್ಕಿಸಬಹುದು. ಒಟ್ಟಾರೆ ಕನ್ನಡದಲ್ಲಿ ವಿಜ್ಞಾನದ ಬರವಣಿಗೆಗೆ ಗಟ್ಟಿಯಾದ ತಳಹದಿ ರೂಪಿಸಬೇಕು.
ಪ್ರೊ. ಶ್ರೀಕಾಂತ ಶಾಸ್ತ್ರಿ ದೂರವಾಣಿ: 9448386838

ಬರ್ಕಲಿ ಸರಣಿ ಕೃತಿಗಳು
* ಚಾರ್ಲ್ಸ್ ಕಿಟ್ಟೆಲ್‌–  ಮೆಕ್ಯಾನಿಕ್ಸ್‌
* ಎಡ್ವರ್ಡ್‌ ಎಂ. ಪುರ್ಸೆಲ್‌– ಎಲೆಕ್ಟ್ರಿಸಿಟಿ ಅಂಡ್‌ ಮ್ಯಾಗ್ನೆಟಿಸಂ
* ಫ್ರಾಂಕ್‌ ಎಸ್‌. ಕ್ರಾಫರ್ಡ್‌ ಜೂನಿಯರ್‌ –ವೇವ್ಸ್‌
* ಐವಿಂಡ್‌ ಎಚ್‌. ವಿಚ್‌ಮನ್‌– ಕ್ವಾಂಟಂ ಫಿಸಿಕ್ಸ್‌
* ಫ್ರೆಡೆರಿಕ್‌ ರೀಫ್‌– ಸ್ಟಾಟಿಸ್ಟಿಕಲ್‌ ಫಿಸಿಕ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT