ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ನರಿಗೆ ಮರಳಿ ಕೆಲಸ: ಡೊನಾಲ್ಡ್‌ ಟ್ರಂಪ್‌

ನೂರು ದಿನಗಳ ಆಡಳಿತ
Last Updated 30 ಏಪ್ರಿಲ್ 2017, 5:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ನೂರು ದಿನ ಪೂರೈಸಿರುವ ಡೊನಾಲ್ಡ್‌ ಟ್ರಂಪ್‌, ತಮ್ಮ ಮೊದಲ ನೂರು ದಿನಗಳ ಆಡಳಿತ ಅಮೆರಿಕದ ಇತಿಹಾಸದಲ್ಲಿಯೇ ಹೊಸ ದಾಖಲೆ ನಿರ್ಮಿಸಿದೆ ಎಂದು ಹೇಳಿಕೊಂಡಿದ್ದಾರೆ.

ನೂರು ದಿನ ತುಂಬಿದ್ದ ಹಿನ್ನೆಲೆಯಲ್ಲಿ ಮಾಡಿದ ಬಾನುಲಿ ಭಾಷಣದಲ್ಲಿ, ‘ಈ ನೂರು ದಿನಗಳ ನನ್ನ ಆಡಳಿತ ಅಮೆರಿಕದಲ್ಲಿ ಹೊಸ ಇತಿಹಾಸ ಬರೆದಿದೆ. ಇಷ್ಟು ಸಣ್ಣ ಅವಧಿಯಲ್ಲಿ ಅಮೆರಿಕನ್ನರು ಕಳೆದುಕೊಂಡಿದ್ದ ಕೆಲಸ ಮರಳಿ ಕೊಡುವುದು ಸಾಧ್ಯವಾಗಿದೆ.

ಅನೇಕ ಕಾರು ಉತ್ಪಾದನಾ ಕಂಪೆನಿಗಳು ಮರಳಿ ಬಂದಿವೆ. ಅವರು ಇಲ್ಲಿಯೇ ಇರಲು ಬಯಸುತ್ತಿದ್ದಾರೆ. ಅಮೆರಿಕದ ಕಂಪೆನಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚು ಲಾಭದಲ್ಲಿ ನಡೆಯುತ್ತಿವೆ’ ಎಂದು ತಮ್ಮನ್ನು ತಾವು ಶ್ಲಾಘಿಸಿಕೊಂಡಿದ್ದಾರೆ.

‘ಇದು ಆರಂಭವಷ್ಟೇ. ಮುಂದಿನ ದಿನಗಳಲ್ಲಿ ಮಧ್ಯಮ ವರ್ಗದವರಿಗೆ ಮತ್ತು ವ್ಯಾಪಾರಗಳಿಗೆ ಬಹಳಷ್ಟು ತೆರಿಗೆ ಕಡಿತಗೊಳಿಸಲಿದ್ದೇವೆ. ಇದು ಮಹತ್ವದ ಬದಲಾವಣೆ ತರಲಿದೆ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ದೇಶದ ಕಾನೂನನ್ನು ಸಮರ್ಥಿಸಿಕೊಂಡ ಅವರು ಅಮೆರಿಕದ ಕಾರ್ಮಿಕರಿಗಾಗಿ ಹೋರಾಡುವುದು ನಮ್ಮ ಸರ್ಕಾರದ ಕೆಲಸವಾಗಿದೆ. ಅಮೆರಿಕನ್ನರಿಗೆ ಮತ್ತೆ ಅಧಿಕಾರ ತಂದುಕೊಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.

ಬಹಳ ವರ್ಷಗಳಿಂದ ಇಲ್ಲಿನ ರಾಜಕಾರಣಿಗಳು ಎಲ್ಲ ಅಮೆರಿಕನ್ನರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವುದನ್ನು ಮರೆತಿದ್ದರು. ಇಲ್ಲಿನ ಪ್ರಜೆಗಳಿಂದ ತೆರಿಗೆ ವಸೂಲಿ ಮಾಡಿ, ಅವರ ಕೆಲಸ ಮತ್ತು ಸಂಪತ್ತನ್ನು ಬೇರೆ ದೇಶದ ಜನರಿಗೆ ಹಂಚಿದ್ದರು ಎಂದು  ಆರೋಪಿಸಿದ್ದಾರೆ.

ದೇಶದ ಅಭಿವೃದ್ಧಿ ಕುಂಠಿತ
ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ನೂರು ದಿನಗಳ ಆಡಳಿತದಲ್ಲಿ ದೇಶದ ಅಭಿವೃದ್ಧಿ ಕುಂಠಿತವಾಗಿದೆ.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿಯಲ್ಲಿ ಕೇವಲ ಶೇ 0.7 ಹೆಚ್ಚಳವಾಗಿದೆ.  ಕಳೆದ ವರ್ಷ ಶೇ 0.8ರಷ್ಟು  ಹೆಚ್ಚಳವಾಗಿತ್ತು. ಈ ವರ್ಷ ಶೇ 1.1ರಷ್ಟು ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿತ್ತು ಎಂದು ವಾಣಿಜ್ಯ ಇಲಾಖೆಯ ವರದಿ ತಿಳಿಸಿದೆ. 

2016ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಪ್ರಮಾಣ ಶೇ 2.1 ರಷ್ಟು ಇಳಿದಿದೆ. ಜನರ ಖರ್ಚು ಮತ್ತು ಸರ್ಕಾರದ ವೆಚ್ಚದಲ್ಲಿ ಆದ ವ್ಯತ್ಯಯವೇ ಇದಕ್ಕೆ ಕಾರಣ ಎಂದು ಆರ್ಥಿಕ ತಜ್ಞರು ವ್ಯಾಖ್ಯಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT