ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನ ಗಾಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ತೆರಿಗೆ ಇಲ್ಲ

Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು:  ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎತ್ತಿನ ಗಾಡಿಗೆ ತೆರಿಗೆ ವಿಧಿಸುವುದಿಲ್ಲ’ ಎಂದು ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಖಚಿತಪಡಿಸಿದೆ.

ಕಟ್ಟಡಗಳ ಮೇಲೆ ವಾರ್ಷಿಕ ಬಾಡಿಗೆ ಮೌಲ್ಯದ ಶೇ 10ರಷ್ಟು ತೆರಿಗೆ ವಿಧಿಸುವ ಪ್ರಸ್ತಾವವೂ ಇಲ್ಲ. ಬದಲಿಗೆ, ಭೂಮಿ ಮತ್ತು ಕಟ್ಟಡದ ಮೂಲ ಮೌಲ್ಯದ ಆಧಾರದಲ್ಲಿ ಕರ ವಸೂಲು ಮಾಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೆರಿಗೆ ವಿಧಿಸಲು ಅಧಿಕಾರ ನೀಡುವ ‘ಕರ್ನಾಟಕ ಪಂಚಾಯತ್‌ರಾಜ್ (ತಿದ್ದುಪಡಿ) ಕಾಯ್ದೆ –2015’ಕ್ಕೆ  ಅದೇ ವರ್ಷ ಡಿ. 31ರಂದು ತಿದ್ದುಪಡಿ ತರಲಾಗಿದೆ.

ಆನಂತರ ಎರಡು ತಿಂಗಳು ರಾಜ್ಯದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ನೀತಿಸಂಹಿತೆ ಜಾರಿಯಲ್ಲಿ ಇದ್ದುದ್ದರಿಂದ ಈ ಸಂಬಂಧದ ಅಧಿಸೂಚನೆಯನ್ನು 2016ರ ಫೆ. 23ರಂದು ಹೊರಡಿಸಲಾಯಿತು. ಫೆ. 25ರಿಂದ ಹೊಸ ತೆರಿಗೆ ಜಾರಿಗೆ ಬಂದಿದೆ.

ಈ ತಿದ್ದುಪಡಿ ಕಾಯ್ದೆ ಅನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಮಿ ಮತ್ತು ಕಟ್ಟಡಗಳ ಮೇಲಿನ ತೆರಿಗೆ ಪ್ರತಿ ಎರಡು ವರ್ಷಕ್ಕೊಮ್ಮೆ ಮತ್ತು ಇತರ ಶುಲ್ಕಗಳು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗಲಿವೆ.

‘ಕಾಯ್ದೆ ಅನ್ವಯವೇ ತೆರಿಗೆ ಪರಿಷ್ಕರಿಸುವಂತೆ 2016ರ ಏ. 16ರಂದು ಮತ್ತೊಮ್ಮೆ ಸ್ಪಷ್ಟ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ನ. 19ರಂದು ವಿವರವಾದ ಮಾರ್ಗಸೂಚಿಯನ್ನೂ ಪ್ರಕಟಿಸಲಾಗಿದೆ.

ಈ ಕಾಯ್ದೆಯಡಿ ತೆರಿಗೆ ಪರಿಷ್ಕರಣೆಗೆ ಆಯಾ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ತಾಲ್ಲೂಕಿನ ಉಪ ನೋಂದಣಾಧಿಕಾರಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಸಮಿತಿಯಲ್ಲಿ ಇರುತ್ತಾರೆ.

ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ಸಮಿತಿ ಪರಿಷ್ಕರಿಸಲಿದೆ. ಸಮಿತಿಯ  ನಿರ್ಣಯಗಳಿಗೆ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕಾಲಕಾಲಕ್ಕೆ ತೆರಿಗೆ ಅಥವಾ ಶುಲ್ಕ  ಪಾವತಿಸದವರಿಗೆ ನೋಟಿಸ್‌ ನೀಡುವ ಮತ್ತು ವಿಳಂಬ ಮಾಡಿದವರಿಗೆ ದಂಡ ವಿಧಿಸುವ ಅಧಿಕಾರವನ್ನು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ನೀಡಲಾಗಿದೆ.

ವಿಷಾದ
ಇದೇ 27ರ ‘ಪ್ರಜಾವಾಣಿ’ ಸಂಚಿಕೆಯ ಮುಖಪುಟದಲ್ಲಿ ‘ಎತ್ತಿನ ಗಾಡಿ, ಸರಕು ತುಂಬಿದ ಚೀಲಕ್ಕೂ ಪಂಚಾಯಿತಿ ತೆರಿಗೆ!’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಸುದ್ದಿಯಲ್ಲಿ ಕೆಲವು ತಪ್ಪು ಮಾಹಿತಿಗಳಿದ್ದವು. ಇದಕ್ಕಾಗಿ ವಿಷಾದಿಸುತ್ತೇವೆ.

–ಸಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT