ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಆರ್‌ಸಿಬಿ ‘ಪ್ಲೇ ಆಫ್‌’ ಕನಸು

ಮುಂದುವರಿದ ವಿರಾಟ್‌ ಪಡೆಯ ಬ್ಯಾಟ್ಸ್‌ಮನ್‌ಗಳ ವೈಫಲ್ಯ
Last Updated 29 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪುಣೆ: 2, 3, 7, 2, 1, 3, 5, 2, 8, 4... ರೈಸಿಂಗ್‌ ಪುಣೆ ಸೂಪರ್‌ಜೈಂಟ್‌ ವಿರುದ್ಧ  ಶನಿವಾರ ನಡೆದ ಐಪಿಎಲ್‌ ಹತ್ತನೇ ಆವೃತ್ತಿಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಆಟಗಾರರ ವೈಯಕ್ತಿಕ ರನ್‌ಗಳಿವು.

ಮಹಾರಾಷ್ಟ್ರ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಪ್ರಮುಖ ಬ್ಯಾಟ್ಸ್‌ಮನ್‌ಗಳು ಜಿದ್ದಿಗೆ ಬಿದ್ದವರ ಹಾಗೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದಾಗ ಬೆಂಗಳೂರಿನ ತಂಡ ಮತ್ತೆ 50ರ ಗಡಿಯೊಳಗೆ ಮುಗ್ಗರಿಸಲಿದೆ ಎಂದೇ ಭಾವಿಸಲಾಗಿತ್ತು.

ಆದರೆ ನಾಯಕ ವಿರಾಟ್‌ ಕೊಹ್ಲಿ (55; 48ಎ, 4ಬೌಂ, 1ಸಿ) ಛಲ ಬಿಡದೆ ಏಕಾಂಗಿಯಾಗಿ ಹೋರಾಡಿದರು. ಇಷ್ಟಾ ದರೂ ಪ್ರವಾಸಿ ಪಡೆಗೆ ಸೋಲು ತಪ್ಪಲಿಲ್ಲ.

ಬೌಲರ್‌ಗಳಿಂದ ಮೂಡಿಬಂದ ಶ್ರೇಷ್ಠ ಸಾಮರ್ಥ್ಯದ ಬಲದಿಂದ ಸ್ಟೀವನ್‌ ಸ್ಮಿತ್‌ ಸಾರಥ್ಯದ ಪುಣೆ ತಂಡ 61ರನ್‌ ಗಳಿಂದ  ಜಯಭೇರಿ ಮೊಳಗಿಸಿತು. ಹೀಗಾಗಿ ವಿರಾಟ್‌ ಬಳಗದ ‘ಪ್ಲೇ ಆಫ್‌’ ಹಾದಿಯ ಬಾಗಿಲು ಮುಚ್ಚಿತು.

ಟಾಸ್‌ ಗೆದ್ದ ಕೊಹ್ಲಿ, ಫೀಲ್ಡಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಆತಿ ಥೇಯ ಸೂಪರ್‌ಜೈಂಟ್‌ 20 ಓವರ್‌ ಗಳಲ್ಲಿ 3 ವಿಕೆಟ್‌ಗೆ 157ರನ್‌ ಗಳಿಸಿತು. ಈ ಮೊತ್ತ ಆರ್‌ಸಿಬಿಗೆ ಬೆಟ್ಟದಂತೆ ಕಂಡಿತು. ಬೆಂಗಳೂರಿನ ತಂಡ 9 ವಿಕೆಟ್‌ಗೆ 96ರನ್‌ ಗಳಿಸಿ ಹೋರಾಟ ಮುಗಿಸಿತು.

ಪೆವಿಲಿಯನ್‌ ಪರೇಡ್‌: ವಾರದ ಹಿಂದೆ (ಏಪ್ರಿಲ್‌ 23) ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ನಡೆದಿದ್ದ ಆತಿಥೇಯ ಕೋಲ್ಕತ್ತ ನೈಟ್‌ರೈಡರ್ಸ್‌ ವಿರುದ್ಧದ ಹೋರಾಟದಲ್ಲಿ 49ರನ್‌ಗಳಿಗೆ ಮುಗ್ಗರಿಸಿ ಐಪಿಎಲ್‌ ಇತಿಹಾಸದಲ್ಲೇ ಅತಿ ಕಡಿಮೆ ಮೊತ್ತ ಗಳಿಸಿದ ತಂಡ ಎಂಬ ಅಪಖ್ಯಾತಿಗೆ ಗುರಿಯಾಗಿದ್ದ ಆರ್‌ ಸಿಬಿಗೆ ಹಿಂದಿನ ಸೋಲು ಪಾಠವಾಗಲಿಲ್ಲ.

ಗುರಿ ಬೆನ್ನಟ್ಟಿದ ಬೆಂಗಳೂರಿನ ತಂಡಕ್ಕೆ ಎರಡನೇ ಓವರ್‌ನಲ್ಲಿ ಜಯ ದೇವ್ ಉನದ್ಕತ್‌ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ಅವರು ಟ್ರಾವಿಸ್‌ ಹೆಡ್‌ ಅವರನ್ನು ಔಟ್ ಮಾಡಿ ವಿಕೆಟ್‌ ಬೇಟೆಗೆ ಮುನ್ನುಡಿ ಬರೆದರು. ಕ್ರಿಸ್‌ ಗೇಲ್‌ ಬದಲು ನಾಯಕ ವಿರಾಟ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ಹೆಡ್‌ 2 ರನ್‌ ಗಳಿಸಿ ಬೌಲ್ಡ್‌ ಆದರು.

ದಕ್ಷಿಣ ಆಫ್ರಿಕಾದ ‘ಸೂಪರ್‌ ಮ್ಯಾನ್‌’ ಡಿವಿಲಿಯರ್ಸ್‌ (3) ಕೂಡ ತಮ್ಮ ಮೇಲಿನ ನಿರೀಕ್ಷೆ ಹುಸಿ ಗೊಳಿಸಿದರು. ಆಟಕ್ಕೆ ಕುದುರಿಕೊಳ್ಳುವ ಹಂತದಲ್ಲಿದ್ದ  ಎಬಿಡಿ , ಲೂಕಿ ಫರ್ಗ್ಯೂಸನ್‌ ಬೌಲ್‌ ಮಾಡಿದ ಐದನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮನೋಜ್‌ ತಿವಾರಿಗೆ ಸುಲಭ ಕ್ಯಾಚ್‌ ನೀಡಿ ಹೊರನಡೆದರು. ಆಗ ತಂಡದ ಖಾತೆಯಲ್ಲಿ ಇದ್ದದ್ದು 32ರನ್‌.

ಇದರಲ್ಲಿ ಕೊಹ್ಲಿ ಪಾಲು 26ರನ್‌ಗಳು. ತಾವೆಸೆದ ನಾಲ್ಕನೇ ಎಸೆತವನ್ನು ಬೌಂಡರಿ ಗಟ್ಟಿದ ಕೊಹ್ಲಿ, ದೀಪಕ್‌ ಚಾಹರ್‌ ಬೌಲ್ ಮಾಡಿದ ಮೂರನೇ ಓವರ್‌ನಲ್ಲಿ ಮೂರು ಬೌಂಡರಿ ಸಿಡಿಸಿದಾಗ ಪುಣೆ ಬೌಲರ್‌ ಗಳಿಗೆ ‘ವಿರಾಟ’ ರೂಪದ ದರ್ಶನ ಆಗಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್‌ ಸೇರುತ್ತಿದ್ದುದರಿಂದ ರನ್‌ ಗಳಿಸು ವುದಕ್ಕಿಂತಲೂ ಹೆಚ್ಚಾಗಿ ವಿಕೆಟ್‌ ಕಾಪಾಡಲು ಅವರು ಒತ್ತು ನೀಡಿದರು. ಹೀಗಾಗಿ ಅವರ ಅಬ್ಬರವೂ ತಗ್ಗಿತು.

15 ಎಸೆತಗಳಲ್ಲಿ 26ರನ್‌ ಗಳಿಸಿದ್ದ ದೆಹಲಿಯ ಬ್ಯಾಟ್ಸ್‌ಮನ್‌ ಕೊಹ್ಲಿ, ಇಮ್ರಾನ್‌ ತಾಹಿರ್‌ ಹಾಕಿದ 17ನೇ ಓವರ್‌ನ ಮೂರನೇ ಎಸೆತವನ್ನು ಡೀಪ್‌ ಮಿಡ್‌ವಿಕೆಟ್‌ನತ್ತ ಸಿಕ್ಸರ್‌ಗೆ ಅಟ್ಟಿ ಅರ್ಧಶತಕ ಪೂರೈಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 42 ಎಸೆತ.

ಆದರೆ ಅವರಿಗೆ ಇತರ ಬ್ಯಾಟ್ಸ್‌ಮನ್‌ಗಳಿಂದ ಸೂಕ್ತ ಬೆಂಬಲ ಸಿಗಲಿಲ್ಲ. ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಕೇದಾರ್‌ ಜಾಧವ್‌ (7), ಸಚಿನ್‌ ಬೇಬಿ (2), ಸ್ಟುವರ್ಟ್‌ ಬಿನ್ನಿ (1), ಪವನ್‌ ನೇಗಿ (3), ಆ್ಯಡಮ್‌ ಮಿಲ್ನೆ (5) ಮತ್ತು ಸ್ಯಾಮುಯೆಲ್‌ ಬದ್ರಿ (5) ಔಟಾಗಲು ಅವಸರಿಸಿದರು!.  18ನೇ ಓವರ್‌ನಲ್ಲಿ ಕೊಹ್ಲಿ, ಡೇನಿಯಲ್‌ ಕ್ರಿಸ್ಟಿಯನ್‌ಗೆ ವಿಕೆಟ್‌ ನೀಡುತ್ತಿದ್ದಂತೆ ಪ್ರವಾಸಿ ತಂಡದ ಹೋರಾಟ ಅಂತ್ಯಗೊಂಡಿತು.

ನಡೆಯದ ರಹಾನೆ ಆಟ: ಬ್ಯಾಟಿಂಗ್ ಆರಂಭಿಸಿದ ಸೂಪರ್‌ ಜೈಂಟ್‌ ತಂಡ ಅಜಿಂಕ್ಯ ರಹಾನೆ (6) ವಿಕೆಟ್‌ ಬೇಗನೆ ಕಳೆದುಕೊಂಡಿತು. ನಾಲ್ಕನೇ ಓವರ್‌ನಲ್ಲಿ ಸ್ಯಾಮುಯೆಲ್‌ ಬದ್ರಿ, ಅಜಿಂಕ್ಯ ವಿಕೆಟ್‌ ಉರುಳಿಸಿದರು.

ರಾಹುಲ್‌ ತ್ರಿಪಾಠಿ (37; 28ಎ, 4ಬೌಂ, 1ಸಿ) ಮತ್ತು ನಾಯಕ ಸ್ಟೀವನ್‌ ಸ್ಮಿತ್‌ (45; 32ಎ, 5ಬೌಂ, 1ಸಿ) ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 31 ಎಸೆತಗಳಲ್ಲಿ 40 ರನ್‌ ಗಳಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು.

ತ್ರಿಪಾಠಿ ಔಟಾದ ನಂತರ ಸ್ಮಿತ್‌ ಮತ್ತು ಮನೋಜ್‌ ತಿವಾರಿ (ಔಟಾಗದೆ 44; 35ಎ, 4ಬೌಂ, 1ಸಿ) ಅರ್‌ಸಿಬಿ ಬೌಲರ್‌ಗಳನ್ನು ಕಾಡಿದರು. ಇವರು ಮೂರನೇ ವಿಕೆಟ್‌ ಜೊತೆಯಾಟದಲ್ಲಿ  50ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.

ಆ ನಂತರ ಅನುಭವಿ ಆಟಗಅರ ಮಹೇಂದ್ರ ಸಿಂಗ್‌ ದೋನಿ (ಔಟಾಗದೆ 21; 17ಎ, 1ಬೌಂ, 1ಸಿ) ಜೊತೆ ಗೂಡಿದ ತಿವಾರಿ, ಮುರಿಯದ ನಾಲ್ಕನೇ ವಿಕೆಟ್‌ಗೆ 49ರನ್‌ ಗಳಿಸಿ ಆತಿಥೇಯರ ಸವಾಲಿನ ಮೊತ್ತಕ್ಕೆ ಕಾರಣರಾದರು.

*
ಎದುರಾಳಿಗಳು ಗೆಲ್ಲಲಿಲ್ಲ. ನಾವು ಸೋತೆವು. ತಂಡ ಹೀನಾಯವಾಗಿ ಸೋತ ಬಳಿಕ ನಾಯಕನಾಗಿ ವೇದಿಕೆಯಲ್ಲಿ ನಿಂತು ಮಾತನಾಡುವುದು  ತುಂಬಾ ಕಷ್ಟ.
-ವಿರಾಟ್‌ ಕೊಹ್ಲಿ,
ಆರ್‌ಸಿಬಿ ನಾಯಕ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT