ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ಸ್‌ ಟ್ರೋಫಿ: ಹೊಸ ಆಶಯ

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ  ಆಯೋಜನೆಯಾಗಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನಮ್ಮ ತಂಡವೇ ಪ್ರಶಸ್ತಿ ಗೆಲ್ಲಲಿ ಎಂದು ಎಲ್ಲಾ ರಾಷ್ಟ್ರಗಳು ತಮ್ಮ ತಂಡಗಳಿಗೆ ಹಾರೈಸುತ್ತಿವೆ. ಆದರೆ ಭಾರತದಲ್ಲಿ ಅಭಿಮಾನಿಗಳು ಸಂದಿಗ್ಧದಲ್ಲಿದ್ದಾರೆ.

ಕ್ರಿಕೆಟ್‌ ಜನಕರ ನಾಡು ಇಂಗ್ಲೆಂಡ್‌ನಲ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ  ಆಯೋಜನೆಯಾಗಿದೆ. ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಎಂಟು ಸ್ಥಾನಗಳನ್ನು ಹೊಂದಿರುವ ತಂಡಗಳು ಟೂರ್ನಿಯಲ್ಲಿ ಆಡಲು ಅರ್ಹತೆ ಪಡೆದುಕೊಂಡಿವೆ. ಇಂಗ್ಲೆಂಡ್‌, ಪಾಕಿಸ್ತಾನ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್‌, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಕಣಕ್ಕಿಳಿಯಲಿವೆ. ಈ ದೇಶಗಳು ಈಗಾಗಲೇ 15 ಸದಸ್ಯರನ್ನು ಒಳಗೊಂಡ ತಂಡಗಳನ್ನೂ ಪ್ರಕಟಿಸಿವೆ.

ಭಾರತದ ಕ್ರಿಕೆಟಿಗರು ಬೇರೆ ದೇಶಗಳಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್‌, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಗಳಲ್ಲಿಯೂ ಅಭಿಮಾನಿಗಳು ಇದ್ದಾರೆ. ಆದರೆ ಭಾರತ ತಂಡ ಇಲ್ಲದ ಟೂರ್ನಿ ಕ್ರಿಕೆಟ್ ಅಲ್ಲವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಭಾರತದ ಕ್ರಿಕೆಟಿಗರನ್ನು ಪ್ರೀತಿಸುತ್ತಾರೆ.

(ವಿರಾಟ್‌ ಕೊಹ್ಲಿ)

ಉದಾಹರಣೆಗೆ ಈಗ ಭಾರತದಲ್ಲಿ ಐಪಿಎಲ್‌ ನಡೆಯುತ್ತಿದೆ. ಕ್ರಿಕೆಟ್‌ ಆಡುವ ಬಹುತೇಕ ರಾಷ್ಟ್ರಗಳ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿದ್ದಾರೆ. ತಮ್ಮ ದೇಶದ ತಂಡಕ್ಕೆ ಬೇಡವಾದ ಕ್ರಿಸ್‌ ಗೇಲ್‌ ಚುಟುಕು ಕ್ರಿಕೆಟ್‌ನಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನ ಆಟಗಾರ. ‘ಮಿಲಿಯನ್‌ ಡಾಲರ್‌ ಬೇಬಿ’ ಎನಿಸಿಕೊಳ್ಳುವ ಐಪಿಎಲ್‌ಗೆ ಇರುವ ಜನಪ್ರಿಯತೆ ಬೇರೆ ದೇಶಗಳ ಲೀಗ್‌ಗಳಿಗೆ ಇಲ್ಲ.

ಕೆಲ ತಿಂಗಳ ಹಿಂದೆ ಬಾಂಗ್ಲಾದೇಶ,  ಕೆರಿಬಿಯನ್, ಶ್ರೀಲಂಕಾ  ಮತ್ತು ಪಾಕಿಸ್ತಾನ ಸೂಪರ್‌ ಲೀಗ್ ಹೀಗೆ ಅನೇಕ ಚುಟುಕು ಮಾದರಿಯ ಟೂರ್ನಿಗಳು ನಡೆದವು. ಆದರೆ ಈ ರೀತಿಯ ಟೂರ್ನಿಗಳು ನಡೆದ ವಿಷಯ ಬಹಳಷ್ಟು ಜನರಿಗೆ ಗೊತ್ತಾಗಲೇ ಇಲ್ಲ.  ಐಪಿಎಲ್‌ನಿಂದ ಸಿಗುವ ಹಣ, ಕೀರ್ತಿ, ಯಶಸ್ಸು ಇವು ಬೇರೆ ಲೀಗ್‌ಗಳಿಂದ ಲಭಿಸುವುದಿಲ್ಲ. ಇದೇ ಕಾರಣಕ್ಕಾಗಿ ಬಿಸಿಸಿಐ ಭಾರತದ ಯಾವುದೇ ಆಟಗಾರನನ್ನೂ ವಿದೇಶದ ಲೀಗ್‌ಗಳಿಗೂ ಕಳುಹಿಸುವುದಿಲ್ಲ.

ಒಂದು ವೇಳೆ ಭಾರತ ತಂಡ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡದೇ ಇದ್ದರೆ ಕ್ರಿಕೆಟ್‌ ಪ್ರೇಮಿಗಳಿಗಷ್ಟೇ ನಿರಾಸೆಯಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆದಾಯಕ್ಕೂ ಪೆಟ್ಟು ಬೀಳುತ್ತದೆ. ಭಾರತ ಆಡುವ ಪಂದ್ಯಗಳ ಪ್ರಸಾರದ ಹಕ್ಕು ಪಡೆದುಕೊಂಡಿರುವ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಕೂಡ ಭಾರತ ತಂಡ ಇಲ್ಲದಿದ್ದರೆ ಟೂರ್ನಿಯನ್ನು ಪ್ರಸಾರ ಮಾಡುವುದು ಅನುಮಾನವಿದೆ. ಆದ್ದರಿಂದ  ಭಾರತ ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕಾಗಿ ಮೇ 7ರಂದು ಬಿಸಿಸಿಐ ವಿಶೇಷ ಸಭೆ ಕೂಡ ನಡೆಸಲಿದೆ.

ಆದಾಯ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಹಾಗೂ ಐಸಿಸಿ ನಡುವೆ ಜಟಾಪಟಿ ನಡೆಯುತ್ತಿದೆ. ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎನ್ನುವ ಹಾಗೆ ಕ್ರಿಕೆಟ್‌ ಆಡಳಿತಗಾರರ ನಡುವಣ ಭಿನ್ನಾಭಿಪ್ರಾಯ ಆಟಗಾರರ ಸಂಕಷ್ಟಕ್ಕೆ ಕಾರಣವಾಗುತ್ತಿದೆ.

ಆದಾಯದಲ್ಲಿ ನಮಗೆ ಬರಬೇಕಾದಷ್ಟು ಪಾಲು ಸಿಗದೇ ಹೋದರೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಭಾರತ ತಂಡವನ್ನು ಕಳುಹಿಸುವುದಿಲ್ಲ ಎಂದು  ಬಿಸಿಸಿಐ ಪಟ್ಟು ಹಿಡಿಯಿತು.

ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡುವುದೇ ಹೆಮ್ಮೆ. ಟೂರ್ನಿಯ ಹಾಲಿ ಚಾಂಪಿಯನ್‌ ಕೂಡ ಆಗಿರುವ ಭಾರತ ತಂಡ ಈ ಬಾರಿಯೂ ಪ್ರಶಸ್ತಿ ಉಳಿಸಿ ಕೊಳ್ಳಲು ತುದಿಗಾಲಲ್ಲಿ ನಿಂತಿದೆ. ಇದೇ ಕಾರಣಕ್ಕಾಗಿ ವಿರಾಟ್‌ ಕೊಹ್ಲಿ ಹಾಗೂ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌   ಐಪಿಎಲ್‌ಗಿಂತ ಚಾಂಪಿಯನ್ಸ್‌ ಟ್ರೋಫಿಗೆ ಹೆಚ್ಚು ಮಹತ್ವ ನೀಡಿದ್ದಾರೆ.

ಸತತ ಸರಣಿಗಳನ್ನು ಆಡಿರುವ ಅಶ್ವಿನ್‌  ಐಪಿಎಲ್‌ನಲ್ಲಿ ಆಡದೇ ವಿಶ್ರಾಂತಿ ಪಡೆದಿದ್ದಾರೆ. ಆರ್‌ಸಿಬಿ ತಂಡದ ನಾಯಕ ಕೊಹ್ಲಿ ಆರಂಭದ ಐಪಿಎಲ್‌ ಪಂದ್ಯಗಳಲ್ಲಿ ಆಡಿರಲಿಲ್ಲ. ಇತ್ತೀಚೆಗೆ ನಡೆದ ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಉತ್ತಮ ಸಾಮರ್ಥ್ಯ ನೀಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಭಾರತ ಗೆದ್ದುಕೊಂಡಿದೆ. ಏಕದಿನ ಸರಣಿಯಲ್ಲಿ ಜಯಿಸಿದೆ. ಹೀಗೆ ಸತತ ಉತ್ತಮ ಆಟವಾಡುತ್ತಿರುವ ಭಾರತ ತಂಡ ಪ್ರತಿ ಗೆಲುವನ್ನೂ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಯಶಸ್ಸು ಪಡೆಯಲು ಊರುಗೋಲಾಗಿ ಬಳಸಿಕೊಂಡಿದೆ.

‘ನಾವು ಈಗ ಎಷ್ಟೇ ಟೂರ್ನಿಗಳಲ್ಲಿ ಗೆದ್ದರೂ ತೃಪ್ತಿಯಾಗುವುದಿಲ್ಲ. ನಮ್ಮ ಗುರಿ ಚಾಂಪಿಯನ್ಸ್‌ ಟ್ರೋಫಿ. ಈ ಟೂರ್ನಿಯಲ್ಲಿ ಪ್ರಶಸ್ತಿ ಉಳಿಸಿಕೊಂಡರೆ 2019ರ  ಐಸಿಸಿ ಏಕದಿನ ವಿಶ್ವಕಪ್‌ಗೆ ಸಜ್ಜಾಗಲು ವಿಶ್ವಾಸ ಹೆಚ್ಚಾಗುತ್ತದೆ’ ಎಂದು ಕೊಹ್ಲಿ ಇಂಗ್ಲೆಂಡ್‌ ಎದುರಿನ ಸರಣಿಯ ಬಳಿಕ ಹೇಳಿದ್ದರು.

**

ಹೆಚ್ಚುತ್ತಿರುವ ಖ್ಯಾತಿ

1998ರಲ್ಲಿ ಟೂರ್ನಿ ಮೊದಲ ಬಾರಿಗೆ ಆರಂಭವಾದಾಗ ಒಂಬತ್ತು ತಂಡಗಳು ಪಾಲ್ಗೊಂಡಿದ್ದವು.

ಟೂರ್ನಿಯಲ್ಲಿ ಆಡಲು ಪ್ರತ್ಯೇಕ ಅರ್ಹತಾ ಪಂದ್ಯಗಳು ನಡೆಯುವುದಿಲ್ಲ. ಐಸಿಸಿ ರ್‍ಯಾಂಕಿಂಗ್‌ನಲ್ಲಿ ಮೊದಲ ಎಂಟು ಸ್ಥಾನಗಳನ್ನು ಹೊಂದಿರುವ ತಂಡಗಳಿಗೆ ನೇರವಾಗಿ ಅರ್ಹತೆ ಲಭಿಸುತ್ತದೆ. ಕ್ರಿಕೆಟ್‌ ಜಗತ್ತಿನ ಪುಟ್ಟ ರಾಷ್ಟ್ರಗಳಾದ ಕೆನ್ಯಾ, ಅಮೆರಿಕ, ನೆದರ್ಲೆಂಡ್ಸ್ ತಂಡಗಳೂ ಟೂರ್ನಿಯಲ್ಲಿ ಆಡಿವೆ.

ಕೆನ್ಯಾ ತಂಡ ಕ್ರಿಕೆಟ್‌ ವಲಯದಲ್ಲಿ ಬೆಳಕಿಗೆ ಬರಲು ಕಾರಣವಾಗಿದ್ದೇ ಚಾಂಪಿಯನ್ಸ್‌ ಟ್ರೋಫಿ. 2000ರಲ್ಲಿ ಮೊದಲ ಬಾರಿಗೆ ಟೂರ್ನಿಯಲ್ಲಿ ಆಡಿದ್ದ ತಂಡ ಪ್ರಾಥಮಿಕ ಸುತ್ತಿನ ಅರ್ಹತಾ ಹಂತದಲ್ಲಿ ಪರಾಭವಗೊಂಡಿತ್ತು. ನಂತರದ ಮೂರೇ ವರ್ಷಗಳಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಕೆನ್ಯಾ ಪ್ರತಿಯೊಬ್ಬರೂ ಮೆಚ್ಚುವಂಥ ಸಾಧನೆ ಮಾಡಿತ್ತು. ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದು ಇದಕ್ಕೆ ಸಾಕ್ಷಿ. ಇದಕ್ಕೆಲ್ಲಾ ‘ಮಿನಿ ವಿಶ್ವಕಪ್‌’ ಎಂದೇ ಹೆಸರಾಗಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಿದ ಅನುಭವ ನೆರವಿಗೆ ಬಂದಿತ್ತು.

ಆದ್ದರಿಂದ ಭಾರತ ತಂಡ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಆಡಲೇ ಬೇಕು. ಕೋಟ್ಯಂತರ ಅಭಿಮಾನಿಗಳು ಇಟ್ಟುಕೊಂಡಿರುವ ಪ್ರಶಸ್ತಿಯ ನಿರೀಕ್ಷೆಯೂ ನಿಜವಾಗಲಿ.

**

ಹಿಂದಿನ ಟೂರ್ನಿಗಳಲ್ಲಿ ಆಡಿದ್ದ ಕರ್ನಾಟಕದ ಆಟಗಾರರು

(2006ರಲ್ಲಿ ಮೊಹಾಲಿಯಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ರಾಹುಲ್‌ ದ್ರಾವಿಡ್‌ ಅರ್ಧಶತಕ ಗಳಿಸಿದ್ದರು  –ಪ್ರಜಾವಾಣಿ ಚಿತ್ರ/ಆರ್‌. ಶ್ರೀಕಂಠ ಶರ್ಮಾ)

* ರಾಹುಲ್‌ ದ್ರಾವಿಡ್‌
* ಸುನಿಲ್‌ ಜೋಶಿ
* ವೆಂಕಟೇಶ್ ಪ್ರಸಾದ್‌
* ಜಾವಗಲ್‌ ಶ್ರೀನಾಥ್‌
* ಅನಿಲ್‌ ಕುಂಬ್ಳೆ
* ಆರ್‌. ವಿನಯ್‌ ಕುಮಾರ್

*

* ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ್ದು ಕ್ರಿಸ್‌ ಗೇಲ್‌ (791)
* ಟೂರ್ನಿಯಲ್ಲಿ ಒಟ್ಟು ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದು ನ್ಯೂಜಿಲೆಂಡ್‌ನ  ಕೈಲ್‌ ಮಿಲ್ಸ್‌ (28)
* ಒಟ್ಟಾರೆ ಹೆಚ್ಚು ಬಾರಿ ಪ್ರಶಸ್ತಿ ಜಯಿಸಿದ ಕೀರ್ತಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿಗಿದೆ. ಈ ತಂಡಗಳು ತಲಾ ಎರಡು ಸಲ ಈ ಸಾಧನೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT