ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಂ ಆಟಕ್ಕೆ ಬೇಕಿದೆ ವಿಶಾಲ ನೆಲೆಗಟ್ಟು...

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಕೇರಂ ಚೇತೋಹಾರಿಯಾದ ಆಟ. ಏಕಾಗ್ರತೆ, ಗುರಿ ಮುಟ್ಟಿಸುವ ನೈಪುಣ್ಯ, ತಂತ್ರಗಾರಿಕೆ, ಸತತ ಅಭ್ಯಾಸ  ಬೇಡುವ ಈ ಆಟದ ಬಗ್ಗೆ ಆಸಕ್ತಿ ಬೆಳೆಸಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಈ ಆಟವನ್ನು ಟೈಂ ಪಾಸ್‌ ಮಾಡುವ, ಕ್ಲಬ್‌ಗಳಲ್ಲಿ ಆಡುವ ಆಟ ಎನ್ನುವವರೂ ಇದ್ದಾರೆ. ಆದರೆ ಏಷ್ಯ ರಾಷ್ಟ್ರಗಳಲ್ಲಿ ಜನಪ್ರಿಯವಾಗಿದ್ದ ಕೇರಂ ಈಗ ಯುರೋಪಿನ ರಾಷ್ಟ್ರಗಳಲ್ಲೂ ಜನಪ್ರಿಯತೆ ಕಂಡುಕೊಂಡಿದೆ.

ಭಾರತದಲ್ಲಿ ಈ ಆಟ ಬಲವಾಗಿ ಬೇರೂರಿದೆ. ವಿಶೇಷವಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಆಟಗಾರರು ಹೆಸರು ಮಾಡಿದ್ದಾರೆ.
ಭಾರತದ ನಾಲ್ವರು ಆಟಗಾರರು ವಿಶ್ವ ಚಾಂಪಿಯನ್‌ ಪಟ್ಟಕ್ಕೂ ಏರಿದ್ದಾರೆ. ಕೇರಂ ಆಡುವವರು ರಾಜ್ಯದ ಉದ್ದಗಲಕ್ಕೂ ಇದ್ದರೂ, ಚಾಂಪಿಯನ್‌ಷಿಪ್‌ ಅಥವಾ ರ‍್ಯಾಂಕಿಂಗ್‌ ಟೂರ್ನಿಗಳು ರಾಜಧಾನಿ ಬಿಟ್ಟು ಹೊರಗೆ ನಡೆಯುವುದು ಅತಿ ವಿರಳ. ಹೀಗಾಗಿ ರಾಜ್ಯದಲ್ಲಿ ಈ ‘ಬೋರ್ಡ್‌ ಆಟ’ಕ್ಕೆ ವಿಶಾಲ ನೆಲೆಗಟ್ಟು ಸಿಕ್ಕಿಲ್ಲ ಎನ್ನುವುದು ಹಲವು ಆಟಗಾರರ ಅಭಿಮತ.

ಎರಡು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ರಾಜ್ಯ ರ‍್ಯಾಂಕಿಂಗ್‌ ಕೇರಂ ಟೂರ್ನಿ ನಡೆದಿತ್ತು. ಇತ್ತೀಚೆಗೆ ದಾವಣಗೆರೆಯ ಗುರುಭವನದಲ್ಲಿ ಇಂಥದ್ದೇ ಟೂರ್ನಿ ನಡೆಯಿತು. ದಾವಣಗೆರೆಯಲ್ಲಿ ಇಷ್ಟು ದೊಡ್ಡ ಮಟ್ಟದ ಟೂರ್ನಿ ನಡೆದಿದ್ದು ಇದೇ ಮೊದಲು.

ನಾಲ್ಕು ದಿನಗಳ ಟೂರ್ನಿಯಲ್ಲಿ ಬೆಂಗಳೂರು, ದಾವಣಗೆರೆ ಆಟಗಾರರ ಜೊತೆಗೆ ಚಿತ್ರದುರ್ಗದ ಆಯ್ದ ಆಟಗಾರರು ಪಾಲ್ಗೊಂಡಿದ್ದರು. ಎರಡು ಬಾರಿ ವಿಶ್ವ ಚಾಂಪಿಯನ್‌ ಆಗಿದ್ದ ಬೆಂಗಳೂರಿನ ಆರ್‌.ಎಂ.ಶಂಕರ್‌ (ಏರ್‌ ಇಂಡಿಯಾ), ರಾಜ್ಯ ಚಾಂಪಿಯನ್‌ ಜಹೀರ್‌ ಪಾಷಾ (ಆರ್‌ಬಿಐ), ಮಹಿಳೆಯರ ಚಾಂಪಿಯನ್‌ ಅಂಬಿಕಾ (ಆರ್‌ಬಿಐ), ಮಾಜಿ ರಾಜ್ಯ ಚಾಂಪಿಯನ್ನರು ಭಾಗವಹಿಸಿದ್ದರು. ದಾವಣಗೆರೆಯಲ್ಲಿ ಸ್ಥಳೀಯವಾಗಿ ಟೂರ್ನಿಗಳು  ನಡೆಯುವುದೂ ವಿರಳ. ಇಂಥದ್ದರಲ್ಲೂ ಇಲ್ಲಿನ ಆಟಗಾರರೂ ಬೆಂಗಳೂರಿನ ಅನುಭವಿ ಆಟಗಾರರಿಗೆ ಉತ್ತಮ ಸ್ಪರ್ಧೆಯನ್ನೇ ಒಡ್ಡಿದರು.

ಪುರುಷರ ಸಿಂಗಲ್ಸ್‌, ಮಹಿಳೆಯರ ಸಿಂಗಲ್ಸ್‌, ವೆಟರನ್ಸ್‌ ಸಿಂಗಲ್ಸ್‌ನಲ್ಲಿ ಸ್ಪರ್ಧೆಗಳು ನಡೆದಿದ್ದು, ಒಟ್ಟು 160 ಸ್ಪರ್ಧಿಗಳು ಭಾಗವಹಿಸಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಅತೀ ಹೆಚ್ಚು ಅಂದರೆ 120 ಆಟಗಾರರು ಕಣದಲ್ಲಿದ್ದರು. ವೆಟರನ್ಸ್‌ ವಿಭಾಗದಲ್ಲಿ 32 ಮಂದಿ ಪಾಲ್ಗೊಂಡಿದ್ದರು.

(ಶೈನಿ )

ಉತ್ತಮ ಹೋರಾಟ
ಪುರುಷರ ವಿಭಾಗದಲ್ಲಿ ಜಹೀರ್‌ ಪಾಷಾ ಮೊದಲ ಸ್ಥಾನ ಪಡೆದರು. ಫೈನಲ್‌ನಲ್ಲಿ ಅವರು ಬೆಂಗಳೂರಿನ ಅರುಣ್‌ ಕುಮಾರ್‌ ಅವರಿಂದ ಪ್ರತಿರೋಧ ಎದುರಿಸಿದರು. ಸೆಮಿಫೈನಲ್‌ನಲ್ಲಿ ಪ್ರತಿಭಾವಂತ ಅರುಣ್‌, ಅನುಭವಿ ಆಟಗಾರ ಆರ್‌.ಎಂ.ಶಂಕರ್‌ ಅವರನ್ನು ಮಣಿಸಿದ್ದು ಗಮನ ಸೆಳೆಯಿತು. ದಾವಣಗೆರೆಯ ಆಟಗಾರ ಶಿವಕುಮಾರ್‌, ಬೆಂಗಳೂರಿನ ಎಂ.ವಿನೋದ್‌ ಅವರನ್ನು ಸೋಲಿಸಿ ಮೂರನೇ ಸ್ಥಾನ ಗಳಿಸಿದ್ದು ಕಡಿಮೆ ಸಾಧನೆಯೇನಲ್ಲ. ಹೆಚ್ಚಿನ ಪಂದ್ಯಗಳು ಹೋರಾಟದಿಂದ ಕೂಡಿದ್ದವು.

ಕೇರಂ ಸುಲಭವಾಗಿ ಒಲಿಯುವ ಆಟವಲ್ಲ. ಏಕಾಗ್ರತೆ ಜೊತೆ ಸ್ಟ್ರೈಕರ್‌ನಲ್ಲಿ ನಾನಾ ರೀತಿಯ ಹೊಡೆತಗಳನ್ನು ಪ್ರದರ್ಶಿಸುವ ಕೌಶಲ ಇರಬೇಕು. ಇದಕ್ಕೆ ನಿತ್ಯ ಅಭ್ಯಾಸ ಬೇಕಾಗುತ್ತದೆ. ‘ನಾನು ಈಗಲೂ ಐದರಿಂದ ಆರು ಗಂಟೆ ಅಭ್ಯಾಸ ಮಾಡುತ್ತೇನೆ. ಯೋಗ ಮಾಡುವುದರಿಂದ ಆಡುವಾಗ ತಾಜಾತನ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ 2000 ಮತ್ತು 2004ರಲ್ಲಿ ವಿಶ್ವ ಚಾಂಪಿಯನ್‌ ಆಗಿದ್ದ ಆರ್‌.ಎಂ.ಶಂಕರ್‌. 2004ರಲ್ಲಿ ಫೆಡರೇಷನ್‌ ಕಪ್‌ ಮತ್ತು ಸಾರ್ಕ್‌ ಚಾಂಪಿಯನ್‌ಷಿಪ್‌ನಲ್ಲಿ ಶಂಕರ್‌ ವಿಜೇತರಾಗಿದ್ದು, ರಾಜ್ಯದ ಆಟಗಾರರ ಪಾಲಿಗೆ ‘ಕೇರಂ ಕಿಂಗ್‌’ ಎನಿಸಿದ್ದಾರೆ.

‘ಈಗ ಆಟಗಾರರೆಲ್ಲ ಶ್ರಮ ವಹಿಸುತ್ತಿದ್ದಾರೆ. ಮೊದಲಿನ ದಿನಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪ್ರತಿಭಾನ್ವಿತ ಆಟಗಾರರು ಮೂಡಿಬರುತ್ತಿದ್ದಾರೆ. ಬೆಂಗಳೂರು ಬಿಟ್ಟರೆ ದಾವಣಗೆರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರು ಇದ್ದಾರೆ’ ಎನ್ನುವುದು ಅವರ ಅನಿಸಿಕೆ.

ಪ್ರಸ್ತುತ ವಿಶ್ವ ಮಟ್ಟದಲ್ಲಿ ಶ್ರೀಲಂಕಾ, ಭಾರತ ಜೊತೆಗೆ ಅಮೆರಿಕ, ಜರ್ಮನಿ, ಫ್ರಾನ್ಸ್‌, ಕೆನಡಾ ಮೊದಲಾದ ರಾಷ್ಟ್ರಗಳಲ್ಲೂ ಪ್ರತಿಭಾನ್ವಿತ ಆಟಗಾರರು ಹೊರಹೊಮ್ಮುತ್ತಿದ್ದಾರೆ ಎನ್ನುತ್ತಾರೆ.

ಮಹಿಳೆಯರ ಸಿಂಗಲ್ಸ್‌ ಪ್ರಶಸ್ತಿ ಗೆದ್ದ ಎಸ್‌.ಶೈನಿ ಉದಯೋನ್ಮುಖ ಆಟಗಾರ್ತಿ ಎನ್ನುವುದರಲ್ಲಿ ಸಂಶಯವಿರಲಿಲ್ಲ. 13 ವರ್ಷ ವಯಸ್ಸಿನಲ್ಲಿ ಎರಡು ಬಾರಿ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಶೈನಿ ಪ್ರಶಸ್ತಿ ಜಯಿಸಿದ್ದಾಳೆ. ದಾವಣಗೆರೆ ಟೂರ್ನಿಯ ಫೈನಲ್‌ನಲ್ಲಿ ಶೈನಿ, ಆರ್‌ಬಿಐನ ಅಂಬಿಕಾ ಹರಿತ್‌ ಮೇಲೆ ನೇರ ಆಟಗಳಲ್ಲಿ ಜಯಗಳಿಸಿದಳು. ಈಕೆಯ ಸೋದರಿ ಸ್ಟಾಲಿನಾ ಏಂಜೆಲ್‌ ಕೂಡ ಸೆಮಿಫೈನಲ್‌ ತಲುಪಿದ್ದಳು. ಬೆಂಗಳೂರಿನ ಕೆನ್‌ ಪಬ್ಲಿಕ್‌ ಶಾಲೆಯ ಶೈನಿ, 2015ರಲ್ಲಿ ದೊಡ್ಡಬಳ್ಳಾಪುರದಲ್ಲಿ ನಡೆದ ಟೂರ್ನಿಯಲ್ಲೂ ಈಕೆ ಪ್ರಶಸ್ತಿ ಗೆದ್ದುಕೊಂಡಿದ್ದಳು. ಸಬ್‌ ಜೂನಿಯರ್‌ ವಯಸ್ಸಿನಲ್ಲೇ ಮಹಿಳೆಯರ ವಿಭಾಗದಲ್ಲಿ ಗೆಲ್ಲುವ ಮೂಲಕ ಭರವಸೆ ಮೂಡಿಸಿದ್ದಾಳೆ.

(ಜಹೀರ್‌ ಪಾಷಾ)

**

ಪ್ರೋತ್ಸಾಹ ಸಾಲದು

ರಾಜ್ಯದಲ್ಲಿ ಕೇರಂ ಆಟಗಾರರಿಗೆ ಪ್ರೋತ್ಸಾಹ ಸಾಲದು ಎನ್ನುತ್ತಾರೆ ಕೆಲವು ಹಿರಿಯ ಆಟಗಾರರು. ‘ಈ ವರ್ಷ ವಿಶ್ವ ಚಾಂಪಿಯನ್‌ ಪಟ್ಟ ಗೆದ್ದಿರುವ ಮುಂಬೈನ ಪ್ರಶಾಂತ್‌ ಮೋರೆ ಅವರಿಗೆ ಮಹಾರಾಷ್ಟ್ರ ಸರ್ಕಾರ ₹ 70 ಲಕ್ಷ ಬಹುಮಾನ ನೀಡಿದೆ’ ಎನ್ನುತ್ತಾರೆ ಜಹೀರ್‌ ಪಾಷಾ.

‘ಆಂಧ್ರಪ್ರದೇಶ, ತಮಿಳುನಾಡು, ಬಿಹಾರ ರಾಜ್ಯಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿದ ಆಟಗಾರರಿಗೆ ನಗದು ಬಹುಮಾನ ನೀಡಲಾಗುತ್ತಿದೆ. ಆದರೆ ರಾಜ್ಯದಲ್ಲಿ ಬರೇ ಟ್ರೋಫಿ  ಮಾತ್ರ ಸಿಗುತ್ತಿದೆ. ನಗದು ಬಹುಮಾನ ಕೊಟ್ಟರೆ ಪ್ರೋತ್ಸಾಹ ಸಿಗುತ್ತದೆ. ರಾಜಧಾನಿ ಬೆಂಗಳೂರಿನಲ್ಲೇ ಆಟಗಾರರಿಗೆ ಉತ್ತೇಜನ ಸಿಗುತ್ತಿಲ್ಲ’ ಎನ್ನುತ್ತಾರೆ ಎರಡು ಬಾರಿ (2002, 06) ಅಖಿಲ ಭಾರತ ಅಂಚೆ ಇಲಾಖೆ ಕೇರಂ ಟೂರ್ನಿ ಗೆದ್ದಿರುವ ಶ್ಯಾಮಸುಂದರ್‌.

ರ‍್ಯಾಂಕಿಂಗ್‌ ಟೂರ್ನಿಗಳು ಇತರ ಜಿಲ್ಲೆಗಳಿಗೂ ವಿಸ್ತರಿಸಬೇಕಾದ ಅಗತ್ಯವಿದೆ. ಆಯಾ ಜಿಲ್ಲೆಗಳ ಸ್ಥಳೀಯ ಆಟಗಾರರಿಗೆ ಬೆಂಗಳೂರಿನ ವೃತ್ತಿಪರ, ಕ್ಲಬ್‌ ಆಟಗಾರರ ನೈಪುಣ್ಯ ನೋಡಲು, ಕಲಿಯಲು ಅವಕಾಶ ದೊರೆಯುತ್ತದೆ. ಈ ಆಟವನ್ನು ಇತರ ಪ್ರಮುಖ ಜಿಲ್ಲೆಗಳಲ್ಲಿ ಪಸರಿಸುವ ನಿಟ್ಟಿನಲ್ಲಿ ರಾಜ್ಯ ಕೇರಂ ಸಂಸ್ಥೆ ಗಮನಹರಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT