ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಿಲೇಶೇ ಅಧ್ಯಕ್ಷ

Last Updated 30 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
ಲಖನೌ: ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ  (ಎಸ್‌ಪಿ) ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವುದಿಲ್ಲ ಎಂದು ಪಕ್ಷದ  ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಸ್ಪಷ್ಟಪಡಿಸಿದ್ದಾರೆ.
 
ಪಕ್ಷದ ಹಿರಿಯ ಮುಖಂಡ ಹಾಗೂ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರು ರಾಷ್ಟ್ರೀಯ ಅಧ್ಯಕ್ಷ  ಸ್ಥಾನ ಬಿಡುವಂತೆ ಒತ್ತಾಯಿಸಿದ್ದಾರೆ. ಆದರೆ, ಅಖಿಲೇಶ್ ಆ ಸ್ಥಾನ ಬಿಟ್ಟುಕೊಡುವುದಿಲ್ಲ ಎಂದು ಅವರು ಹೇಳಿದ್ದಾರೆ.
 
‘ಒಮ್ಮತದ ಅಧ್ಯಕ್ಷ ಬೇಕು’
ನವದೆಹಲಿ: ಎಐಸಿಸಿಯ ಹೊಸ ಅಧ್ಯಕ್ಷರನ್ನು ಸರ್ವಾನುಮತದ ಮೂಲಕ ನೇಮಿಸಬೇಕೇ ವಿನಾ ಚುನಾವಣೆ ಮೂಲಕ ಅಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದರು.
 
‘ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ಅರ್ಹ ವ್ಯಕ್ತಿ. ಆದರೆ, ಪಕ್ಷದ ಅಧ್ಯಕ್ಷರಾಗಿ ಇನ್ನೊಂದು ಅವಧಿಗೆ ಮುಂದುವರಿಯಬೇಕೇ ಎಂಬುದನ್ನು ತೀರ್ಮಾನಿಸುವುದು ಸೋನಿಯಾ ಗಾಂಧಿ ಅವರಿಗೆ ಬಿಟ್ಟ ವಿಚಾರ. ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ತೀರ್ಮಾನಿಸಿದರೆ ಪಕ್ಷಕ್ಕೆ ಸಂತೋಷವಾಗಲಿದೆ’ ಎಂದು ಹೇಳಿದರು.
 
ಪಕ್ಷವು ಪ್ರಾದೇಶಿಕ ಮುಖಂಡರನ್ನು ಮುನ್ನೆಲೆಗೆ ತಂದು, ರಾಜ್ಯಗಳ ವಿಧಾನಸಭಾ ಚುನಾವಣೆ ವೇಳೆ ಅವರನ್ನು ಪಕ್ಷದ ಮುಖಂಡರನ್ನಾಗಿ ಬಿಂಬಿಸಬೇಕು ಎಂದು ಹೇಳಿದರು.
 
‘ಅವಧಿಪೂರ್ವ ಚುನಾವಣೆ ಇಲ್ಲ’ 
ಹೈದರಾಬಾದ್‌:  ಅವಧಿಪೂರ್ವ ಚುನಾವಣೆ  ನಡೆಯಲಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಕೇಂದ್ರ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ಸರ್ಕಾರ 2019ತನಕ ಸಂಪೂರ್ಣ ಅವಧಿಯನ್ನು ಪೂರೈಸಲಿದೆ ಎಂದು ಹೇಳಿದ್ದಾರೆ. 
 
‘ರಾಜ್ಯದಲ್ಲಾಗಲೀ ಅಥವಾ ಕೇಂದ್ರದಲ್ಲಾಗಲೀ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ವದಂತಿ ಆಧಾರರಹಿತ’ ಎಂದಿದ್ದಾರೆ.
₹ 4.4 ಕೋಟಿ ರದ್ದಾದ ನೋಟು ವಶ
 
ಹೈದರಾಬಾದ್ (ಪಿಟಿಐ): ರದ್ದಾಗಿರುವ ₹ 500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು  ಹೊಸ ನೋಟುಗಳಿಗೆ ಬದಲಿಸಿಕೊಳ್ಳಲು ಸಂಚು ರೂಪಿಸಿದ್ದ ಎಂಟು ಜನರನ್ನು ಪೊಲೀಸರು ಇಲ್ಲಿನ ಬಂಜಾರ್‌ ಹಿಲ್ಸ್‌ನಲ್ಲಿ ಬಂಧಿಸಿದ್ದಾರೆ.  ಬಂಧಿತರಿಂದ ₹ 4.41 ಕೋಟಿ ಮೊತ್ತದ ಹಳೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಗೋವು ಕಳ್ಳತನ ಶಂಕೆ: ಇಬ್ಬರ ಕೊಲೆ
ಗುವಾಹಟಿ: ಗೋ ಕಳ್ಳರು ಎಂದು ಶಂಕಿಸಿ ಇಬ್ಬರನ್ನು ಜನರ ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣ ಅಸ್ಸಾಂನ ನಾಗಾಂವ್‌ ಜಿಲ್ಲೆಯಲ್ಲಿ  ನಡೆದಿದೆ.
‘20–25 ವರ್ಷ ವಯಸ್ಸಿನ ಇಬ್ಬರು ಯುವಕರು ಗೋವನ್ನು ಕದ್ದಿದ್ದಾರೆ ಎಂದು ಆರೋಪ ಹೊರಿಸಿದ ಗ್ರಾಮಸ್ಥರ ಗುಂಪು ಅವರ ಮೇಲೆ ತೀವ್ರ ಹಲ್ಲೆ ನಡೆಸಿತು’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. 
 
ತೀವ್ರವಾಗಿ ಗಾಯಗೊಂಡಿದ್ದ ಯುವಕರನ್ನು ಪೊಲೀಸರು ಆಸ್ಪತ್ರೆಗೆ ಸೇರಿದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ನಾಗಾಂವ್‌ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದಾರೆ.
 
ಇಂದಿನಿಂದ ಪ್ರತಿದಿನ ಇಂಧನ ಬೆಲೆ ಪರಿಷ್ಕರಣೆ
ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯಲ್ಲಿನ ಬದಲಾವಣೆ ಆಧರಿಸಿ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಿಸುವ ಪದ್ಧತಿ ಪ್ರಾಯೋಗಿಕವಾಗಿ ಸೋಮವಾರದಿಂದ ಜಾರಿಯಾಗಲಿದೆ.
 
 ಪುದುಚೇರಿ, ವಿಶಾಖಪಟ್ಟಣ (ಆಂಧ್ರಪ್ರದೇಶ), ಉದಯಪುರ (ರಾಜಸ್ತಾನ), ಜೆಮ್‌ಷೆಡ್‌ಪುರ (ಜಾರ್ಖಂಡ್) ಮತ್ತು ಚಂಡೀಗಡದಲ್ಲಿ   ಈ ವ್ಯವಸ್ಥೆ ಜಾರಿಯಾಗಲಿದೆ.
 
‘ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡಬೇಕು’
ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ವಿರೋಧಪಕ್ಷಗಳಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿ ವಿರುದ್ಧ ಬೇರೆ ಪಕ್ಷಗಳೂ ಒಂದುಗೂಡುವುದಕ್ಕೆ ಸಹಕಾರಿಯಾಗಲಿದೆ ಎಂದು ಜೆಡಿ(ಯು) ಹಿರಿಯ ನಾಯಕ ಶರದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
 
‘ಪ್ರತಿಪಕ್ಷಗಳು ಬಿಜೆಪಿ ವಿರುದ್ಧ ಒಗ್ಗೂಡುವುದು ಇಂದಿನ ಅಗತ್ಯವಾಗಿದೆ. ಅವು ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಿದೆ’ ಎಂದ ಶರದ್‌ ಯಾದವ್‌, ‘ಈ ಬಾರಿಯ ಉತ್ತರ ಪ್ರದೇಶ ಮತ್ತು ದೆಹಲಿಯ ಚುನಾವಣೆಯಲ್ಲಿ ಕೇಸರಿ ಪಕ್ಷ ದಿಗ್ವಿಜಯ ಸಾಧಿಸಲು ಕೂಡ ಬಿಜೆಪಿಯೇತರ ಪಕ್ಷದಲ್ಲಿ ಒಡಕು ಮೂಡಿದ್ದೇ ಕಾರಣ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
 
ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ ಇನ್ನು ಒಂದೇ ಬಾರಿ
ನವದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಪಠ್ಯಕ್ರಮದ  1ರಿಂದ 8ನೇ ತರಗತಿಗಳಿಗೆ ಬೋಧನೆ ಮಾಡುವ ಶಿಕ್ಷಕರ ನೇಮಕಾತಿಗಾಗಿ ನಡೆಯುವ ಅರ್ಹತಾ ಪರೀಕ್ಷೆಯು (ಸಿಟಿಇಟಿ) ಇನ್ನು ಮುಂದೆ ವರ್ಷಕ್ಕೆ ಒಮ್ಮೆ ಮಾತ್ರ ನಡೆಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT