ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಭೂಬಳಕೆ ನೀತಿ ಬೇಕು

ನೆಲ–ಜಲ ನಿರ್ವಹಣೆಯನ್ನು ಕ್ಷಮತೆಯೊಂದಿಗೆ ಸಾಧಿಸಲು ಹೊಸ ಚೈತನ್ಯ ನೀಡಬಲ್ಲ ಭೂಬಳಕೆ ನೀತಿ ಇಂದಿನ ತುರ್ತು ಅಗತ್ಯ
Last Updated 2 ಮೇ 2017, 19:30 IST
ಅಕ್ಷರ ಗಾತ್ರ
ನಾಡನ್ನೆಲ್ಲ  ಬರ ವ್ಯಾಪಿಸುತ್ತಿದ್ದಂತೆ, ನದಿ-ತೊರೆ, ಕೆರೆ-ಬಾವಿಗಳು ಬರಿದಾಗುತ್ತಿವೆ. ಮನೆ ಬಳಕೆ ಮತ್ತು ಕೃಷಿಗಾಗಿನ  ಕನಿಷ್ಠ ಅವಶ್ಯಕತೆಯ ನೀರಿಗಾಗಿ, ನೀತಿ
ನಿಯಮಗಳನ್ನೆಲ್ಲ ಮೀರಿ ಕೊಳವೆಬಾವಿ ತೋಡುತ್ತಿರುವ ದೃಶ್ಯ ರಾಜ್ಯದಾದ್ಯಂತ ಕಂಡುಬರುತ್ತಿದೆ.
 
2014ರಲ್ಲಿ ನೀರು ಬರದ ಕಾರಣ ಬಳಸದೇ ಉಳಿದಿದ್ದ ಸುಮಾರು 1.41 ಲಕ್ಷ ಅಪಾಯಕಾರಿ ಕೊಳವೆಬಾವಿಗಳನ್ನು ಮುಚ್ಚಿಸಬೇಕಾಯಿತೆಂದು ಸರ್ಕಾರವೇ ಹೇಳಿದೆ. ಇದೀಗ ಪುನಃ ಅದೆಷ್ಟು ಲಕ್ಷ ಕೊಳವೆಬಾವಿಗಳನ್ನು ಮುಚ್ಚಬೇಕಾಗಿದೆಯೋ! 
 
ಇಂಥ ಪರಿಸ್ಥಿತಿ ಬಂದದ್ದಾದರೂ ಏಕೆ? ಅರಣ್ಯ ಮತ್ತು ಪರಿಸರ ನಾಶದಿಂದಾಗಿ ಉಂಟಾಗುತ್ತಿರುವ ಹವಾಮಾನ ಬದಲಾವಣೆಯೇ ಈ ಬಗೆಯ ಪ್ರಕೃತಿ ವಿಕೋಪಕ್ಕೆ ಮೂಲ ಕಾರಣವೆಂಬುದು ಎಲ್ಲರೂ ಒಪ್ಪುವ ಮಾತು. ಅದರೊಂದಿಗೆ, ಇನ್ನೊಂದು ಕಾರಣವನ್ನೂ ಗಮನಿಸಬೇಕಿದೆ. ಸೂಕ್ತ ನೀತಿಯ ಮೂಲಕ ನಾಡಿನ ನೆಲ-ಜಲ-ಕಾಡಿನ ಸಂವರ್ಧನೆ ಮತ್ತು ಸುಸ್ಥಿರ ಬಳಕೆಯನ್ನು ಸಾಧಿಸುವಲ್ಲಿ ನಾವು ವಿಫಲರಾಗಿದ್ದೇವೆ.
 
ಸರ್ಕಾರದ ಎಷ್ಟೆಲ್ಲ ಇಲಾಖೆಗಳು, ಯೋಜನೆಗಳು ಮತ್ತು ಅನುದಾನ ಇದ್ದಾಗ್ಯೂ ಹೀಗೇಕಾಯಿತು? ನೈಸರ್ಗಿಕ ಸಂಪನ್ಮೂಲಗಳ ಏರುತ್ತಿರುವ ಬೇಡಿಕೆಯ ಜೊತೆಗೆ, ಆಡಳಿತ ಯಂತ್ರದ ಭ್ರಷ್ಟಾಚಾರ ಮತ್ತು ಕ್ಷಮತೆಯಿಲ್ಲದ ಯೋಜನೆಗಳ ಅನುಷ್ಠಾನವೂ ಇದಕ್ಕೆ ಕಾರಣ ಎನ್ನದೆ ವಿಧಿಯಿಲ್ಲ.  ಭೂಬಳಕೆ ಕುರಿತಾದ ಸಮಗ್ರ ನೀತಿಯೊಂದು ನಾಡಿನಲ್ಲಿ ಇರದಿರುವುದೇ ಈ ಬಗೆಯ ದಿಕ್ಕುದೆಸೆಯಿಲ್ಲದ ನೆಲ-ಜಲ ನಿರ್ವಹಣೆಗೆ ದಾರಿ ಮಾಡಿಕೊಟ್ಟಿದೆ!
 
ನಮ್ಮ ಹಳ್ಳಿಗಳು, ಕೃಷಿ ಭೂಮಿ ಹಾಗೂ ಕಾಡಿನ ಪರಿಸ್ಥಿತಿಯನ್ನೊಮ್ಮೆ ಗಮನಿಸಿ. ವಾಣಿಜ್ಯ ಉದ್ದೇಶಗಳಿಗಾಗಿ  ಕೃಷಿ ಭೂಮಿಯ ಮಿತಿಯಿಲ್ಲದ ಪರಿವರ್ತನೆ,  ಹೊಳೆ-ಹಳ್ಳಗಳಲ್ಲಿ ಅತಿಯಾಗಿ ಮರಳು ತೆಗೆಯುವುದು, ಬೃಹತ್ ಮಣ್ಣೆತ್ತುವ ಯಂತ್ರಗಳಿಂದ ಗುಡ್ಡ-ಕಣಿವೆಗಳನ್ನು ಬೇಕಾಬಿಟ್ಟಿಯಾಗಿ  ಅಗೆದು ಭೂಮೇಲ್ಮೈ ಪರಿಸರವನ್ನೇ ಬದಲಿಸುತ್ತಿರುವುದು, ಫಲವತ್ತಾದ ಭೂಮಿಯಲ್ಲೂ ಗಣಿಗಾರಿಕೆ, ಎಲ್ಲೆಂದರಲ್ಲಿ ಕೊಳವೆಬಾವಿಗಳನ್ನು ತೋಡುವುದು, ನಿಯಂತ್ರಣವಿಲ್ಲದ ಕಾಡಿನ ಅತಿಕ್ರಮಣ ಮತ್ತು ನಾಶ... ಇವೆಲ್ಲ ಏನನ್ನು ಹೇಳುತ್ತಿವೆ? ನಾಡಿನ ಭೂಪ್ರದೇಶದ ನಿರ್ವಹಣೆಗೆ ಕನಿಷ್ಠ ಮಾರ್ಗಸೂತ್ರವೂ ಇಲ್ಲವೆಂದು.
 
ಅಭಿವೃದ್ಧಿಯ ಓಘದಲ್ಲಿ  ಭೂಬಳಕೆ ಸ್ವರೂಪದ ಕುರಿತು ನಿಷ್ಕಾಳಜಿ ತೋರಿದ್ದರ ಘೋರ ಪರಿಣಾಮವಿದು. ಹೀಗಾಗಿ, ವೈಜ್ಞಾನಿಕ ನೆಲೆಗಟ್ಟುಳ್ಳ ಜನಸ್ನೇಹಿ ಭೂಬಳಕೆ ನೀತಿಯೊಂದನ್ನು  ಜಾರಿ ಮಾಡುವುದು ಇಂದಿನ ತುರ್ತು ಅಗತ್ಯವಾಗಿದೆ.  
 
ಹಾಗಾದರೆ, ಈ ನೀತಿ ಹೇಗಿರಬೇಕು? ಇದಕ್ಕೇನೂ ಹೊಸ ಕಾನೂನಿನ ಅಗತ್ಯ ಇಲ್ಲ. ನೆಲ-ಜಲ-ಕಾಡುಗಳ ನಿರ್ವಹಣೆಯ ಕುರಿತು ಈಗಾಗಲೇ ಇರುವ ವಿವಿಧ ಕಾನೂನಿನ ಆಶಯಗಳನ್ನು ಕ್ರೋಡೀಕರಿಸಿ, ಸೂಕ್ತ  ವಿಧಿ-ನಿಷೇಧಗಳ ಆಧಾರದಲ್ಲಿ ಮಾರ್ಗದರ್ಶಿ ಸೂತ್ರ ರೂಪಿಸಬೇಕಷ್ಟೇ. ಇಲಾಖೆಗಳೆಲ್ಲ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಈ ಸೂತ್ರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನಿಯಂತ್ರಿಸುವ ಒಂದು ಆಡಳಿತಾತ್ಮಕ ವ್ಯವಸ್ಥೆಯನ್ನೂ ರಚಿಸಬೇಕು.

ನಗರ ಪ್ರದೇಶಗಳ ಭೂಬಳಕೆಯನ್ನು ನಿರ್ದೇಶಿಸುವ ನಗರಾಭಿವೃದ್ಧಿ ಪ್ರಾಧಿಕಾರಗಳ ರೀತಿಯಲ್ಲಿ ಇವು ಗ್ರಾಮೀಣ ಪ್ರದೇಶದಲ್ಲಿ ಕೆಲಸ ನಿರ್ವಹಿಸುವಂತಾಗಬೇಕು (ನಗರಾಭಿವೃದ್ಧಿ ಪ್ರಾಧಿಕಾರಗಳಲ್ಲಿ ಪಾರದರ್ಶಕತೆಯ ಕೊರತೆಯಿಂದಾಗಿ ನಗರಗಳ ಯೋಜನಾ ವ್ಯವಸ್ಥೆ ಹಳಿತಪ್ಪಿರುವುದು ವಿಷಾದದ ಸಂಗತಿಯಾದರೂ, ಅದು ನೀತಿಯ ತಪ್ಪಲ್ಲ).

ಈ ಕುರಿತಂತೆ ಸಂವಿಧಾನಬದ್ದ ಸಂಸ್ಥೆಗಳು ಮತ್ತು ಅವಕಾಶಗಳು ಈಗಾಗಲೇ ಇವೆ. ಹಲವು ತಜ್ಞ ವರದಿಗಳು ಕೂಡ ಸರ್ಕಾರದ ಮುಂದಿವೆ. ಆದರೆ, ಸರ್ಕಾರದ ದೂರದರ್ಶಿತ್ವ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ, ಇಂಥ ಅತ್ಯಗತ್ಯ ನೀತಿ ಇನ್ನೂ ಜಾರಿಗೆ ಬಂದಿಲ್ಲ. ಭೂಬಳಕೆ ನೀತಿಯೊಂದು  ಜಾರಿಯಾದರೆ, ನೆಲ-ಜಲ-ಕಾಡಿನ ಸಂರಕ್ಷಣೆ ಮತ್ತು ನಿರ್ವಹಣೆಗೆ ಕಾಲಬದ್ಧ ಕಾರ್ಯತಂತ್ರಗಳು ಮತ್ತು ಕಾರ್ಯಕ್ರಮಗಳನ್ನು ಕಂಡುಕೊಳ್ಳಲು ಸಾಧ್ಯ. ರಾಜ್ಯದ ಗ್ರಾಮೀಣ ಪ್ರದೇಶ, ಕೃಷಿ ಭೂಮಿ ಹಾಗೂ ಕಾಡುಗಳನ್ನು ನಿರ್ವಹಿಸುವ ಸಮಗ್ರ ನೀತಿಯೊಂದನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಮೂರು ಪ್ರಮುಖ ಸಾಧ್ಯತೆಗಳನ್ನು ಇಲ್ಲಿ ಸೂಚಿಸಲಾಗಿದೆ. 
 
ಒಂದನೆಯದು, ಹಳ್ಳಿಗಳ ಭೂಬಳಕೆ ಕುರಿತಾಗಿ. ಗ್ರಾಮೀಣ ಪ್ರದೇಶ ವೇಗವಾಗಿ ಬೆಳೆಯುತ್ತಿದೆ. ವಸತಿ ಪ್ರದೇಶಗಳು, ರಸ್ತೆಗಳು, ಸಾಮೂಹಿಕ ಭೂಮಿ, ವಾಣಿಜ್ಯ ಕಟ್ಟಡಗಳು, ಚರಂಡಿ ವ್ಯವಸ್ಥೆ- ಇವೆಲ್ಲ ಗೊತ್ತುಗುರಿಯಿಲ್ಲದೆ  ರಚಿತವಾಗುತ್ತಿವೆ. ಗ್ರಾಮಸಭೆಗಳು ಈ ಕುರಿತಾಗಿ ಸೂಕ್ತ ರೂಪುರೇಷೆಯನ್ನು ನಿರ್ಧರಿಸಿ, ಗ್ರಾಮ ಪಂಚಾಯಿತಿಗಳು ವ್ಯವಸ್ಥಿತ ಅಭಿವೃದ್ಧಿಯನ್ನು ಹಮ್ಮಿಕೊಳ್ಳಬೇಕಿತ್ತು.
 
ಆದರೆ ಸೂಕ್ತ ನಾಯಕತ್ವ, ಸಬಲೀಕರಣದ ವಾತಾವರಣ ಮತ್ತು ಅನುದಾನದ ಕೊರತೆಯಿಂದಾಗಿ ಪಂಚಾಯಿತಿ ವ್ಯವಸ್ಥೆಯೇ ಸೊರಗುತ್ತಿದೆ. ಇವುಗಳಿಗೆ ಮಾರ್ಗದರ್ಶನ ನೀಡಲೆಂದೇ ರಚಿತವಾಗಿರುವ ‘ಜಿಲ್ಲಾ ಯೋಜನಾ ಸಮಿತಿ’ಗಳ ಕುರಿತು ಜನರಿಗೂ ಅರಿವಿಲ್ಲ. ಆಡಳಿತ ವಿಕೇಂದ್ರೀಕರಣದ ಉದ್ದೇಶದಿಂದ ಸಂವಿಧಾನದ 73 ಮತ್ತು 74ನೇ ತಿದ್ದುಪಡಿ ಮೂಲಕ  ಜಿಲ್ಲಾ ಪಂಚಾಯಿತಿಗಳಡಿಯಲ್ಲಿ ರಚಿತವಾದ ಶಾಸನಬದ್ಧ  ಸಮಿತಿಗಳಿವು.

ನಮ್ಮ ರಾಜ್ಯದಲ್ಲಿ ‘ಜಿಲ್ಲಾ ಯೋಜನಾ ಸಮಿತಿ’ಗಳನ್ನು 2001ರಲ್ಲೇ ರಚಿಸಲಾಗಿದೆ! ಆದರೆ, ಅವು ಇಂದಿಗೂ ಕಾರ್ಯಶೀಲವಾಗಿಲ್ಲ. ಗ್ರಾಮೀಣ ಪರಿಸರದ ವ್ಯವಸ್ಥಿತ ಅಭಿವೃದ್ಧಿ ಮತ್ತು ಸಂಪನ್ಮೂಲ ನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಈ ಸಮಿತಿಗಳಿಗೆ ಶೀಘ್ರ ಚಾಲನೆ ನೀಡಬೇಕಿದೆ.
 
ಎರಡನೆಯದು, ಕೃಷಿಭೂಮಿ ಕುರಿತಂತೆ. ರಾಜ್ಯದಾದ್ಯಂತ ವ್ಯಾಪಕ ಒಕ್ಕಲುಭೂಮಿ, ಒಣಭೂಮಿ ಮತ್ತು ಗೋಮಾಳ ಪ್ರದೇಶಗಳಿವೆ. ಸ್ಥಳವೊಂದರ ಭೂಗುಣ, ಮಳೆಯ ಪ್ರಮಾಣ, ನೀರಿನ ಲಭ್ಯತೆ,  ಹವಾಗುಣ- ಇತ್ಯಾದಿಗಳನ್ನೆಲ್ಲ ಆಧರಿಸಿ ಅಲ್ಲಿಗೆ ಸೂಕ್ತವಾದ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಷ್ಟೇ.
 
ಜೊತೆಗೆ, ಜಲಾನಯನ ಅಭಿವೃದ್ಧಿ ತತ್ವದಲ್ಲಿ ನೆಲಸಾರ ಮತ್ತು ಜಲಮೂಲ ಪೋಷಿಸಲು ಜಿಲ್ಲಾ ಪಂಚಾಯಿತಿಗಳು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಬೇಕು. ಈ ಬಗೆಯ ಕೃಷಿ ಭೂಮಿ ಬಳಕೆಯ ವೈಜ್ಞಾನಿಕ ಸೂತ್ರಗಳಿಗೆ ರೈತ ಸಮುದಾಯ ಬದ್ಧವಾಗಿರಲು ಪ್ರೇರೇಪಿಸಬೇಕಾಗಿದೆ. 
 
ಈ ಉದ್ದೇಶಕ್ಕಾಗಿಯೇ ರಾಜ್ಯಮಟ್ಟದ ಭೂಬಳಕೆ ಮಂಡಳಿಯೊಂದನ್ನು ರಚಿಸಲಾಗುವುದೆಂದು ರಾಜ್ಯ ಸರ್ಕಾರ 2006ರ ಕೃಷಿ ನೀತಿಯಲ್ಲೇ ಹೇಳಿತ್ತು. ರಾಜ್ಯ ಯೋಜನಾ ಮಂಡಳಿ ಹಾಗೂ ಕೃಷಿ ಇಲಾಖೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸಬೇಕಾದ ಈ ಉದ್ದೇಶಿತ ಮಂಡಳಿ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ! ಕೃಷಿ ಭೂಮಿಯ ಸುಸ್ಥಿರ ಬಳಕೆಯ ಮೂಲಕ ರೈತರಿಗೆ ಸುಭದ್ರತೆ ಒದಗಿಸಬಲ್ಲ ಈ ಮಹತ್ವದ ಮಂಡಳಿಯನ್ನು ರಾಜ್ಯ ಸರ್ಕಾರ ಶೀಘ್ರವಾಗಿ ರಚಿಸಬೇಕಾಗಿದೆ.
 
ಮೂರನೆಯದು, ಅರಣ್ಯ ಪ್ರದೇಶಗಳ ಸಂರಕ್ಷಣೆ ಮತ್ತು ಸುಸ್ಥಿರ ನಿರ್ವಹಣೆ ಕುರಿತಾದದ್ದು.  ರಾಜ್ಯದಲ್ಲಿರುವ ಎಲ್ಲ ಬಗೆಯ ಅರಣ್ಯಗಳನ್ನು, ಪ್ರದೇಶಕ್ಕೆ ಅನುಗುಣವಾಗಿ ಪಾರಿಸರಿಕ ತತ್ವಗಳ ಆಧಾರದಲ್ಲಿ ನಿರ್ವಹಿಸುವ ಹಲವು ನಿರ್ದೇಶನಗಳು ಅರಣ್ಯ ಇಲಾಖೆಯ ‘ಅರಣ್ಯ ನಿರ್ವಹಣಾ ಕೈಪಿಡಿ’ಯಲ್ಲಿವೆ.
 
ಆದರೆ, ಸಂರಕ್ಷಣೆಯ ಕುರಿತು ಅನಾದರ ಹಾಗೂ ವಸಾಹತು ಕಾಲದ ಕಾರ್ಯಶೈಲಿಯಿಂದಾಗಿ ಅರಣ್ಯ ಇಲಾಖೆಗೆ ಅರಣ್ಯ ಭೂಮಿಯನ್ನು ಉಳಿಸಿಕೊಳ್ಳಲೂ ಆಗುತ್ತಿಲ್ಲ! ಅರಣ್ಯ ಮತ್ತು ಪರಿಸರ ಸಂರಕ್ಷಣಾ ಕಾಯ್ದೆಗಳ  ಆಶಯಗಳನ್ನು ಜನಪರ ಕಾರ್ಯಕ್ರಮಗಳ ಮೂಲಕ ಸಾಧಿಸಬೇಕೆಂದರೆ, ಇಲಾಖೆಯಲ್ಲಿ ಆಮೂಲಾಗ್ರ ಸುಧಾರಣೆಯೇ ಆಗಬೇಕಿದೆ.
 
ನೆಲ–ಜಲ ನಿರ್ವಹಣೆಯನ್ನು ಸೂಕ್ತ ದಿಕ್ಕು ಮತ್ತು ಕ್ಷಮತೆಯೊಂದಿಗೆ ಸಾಧಿಸಲು ಹೊಸ ಚೈತನ್ಯ ನೀಡಬಲ್ಲ  ಭೂಬಳಕೆ ನೀತಿ ಹಾಗೂ ಅದರಲ್ಲಿ ಅಳವಡಿಸಬಹುದಾದ ಈ ಮೇಲಿನ ಮೂರು ಅಂಶಗಳು ವ್ಯಾಪಕವಾಗಿ ಚರ್ಚೆಯಾಗಲಿ.  ಸರ್ಕಾರ ಈ ಕುರಿತಂತೆ ಶೀಘ್ರ ನಿರ್ಧಾರ ಕೈಗೊಳ್ಳುವಂತಾಗಲಿ. 
ಲೇಖಕ: ನಿರ್ದೇಶಕ, ಸಂರಕ್ಷಣಾ ಜೀವಶಾಸ್ತ್ರ ಮತ್ತು ಸುಸ್ಥಿರ ಅಭಿವೃದ್ಧಿ ಅಧ್ಯಯನ ಕೇಂದ್ರ, ಶಿರಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT