ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರು ಸಂಗ್ರಹಿಸಿ ಕೈತೋಟ ನಿರ್ಮಾಣ

ಬರದಾಪುರ ಸರ್ಕಾರಿ ಶಾಲೆಯ ಪರಿಸರ ಕಾಳಜಿ: ಮುದ ನೀಡುವ ಹಸಿರು ಪರಿಸರ
Last Updated 3 ಮೇ 2017, 9:15 IST
ಅಕ್ಷರ ಗಾತ್ರ

ಔರಾದ್: ಸತತ ಮೂರು ವರ್ಷಗಳ ಬರದ ನಡುವೆಯೂ ತಾಲ್ಲೂಕಿನ ಸರ್ಕಾರಿ ಶಾಲೆಯೊಂದು ಅತ್ಯುತ್ತಮ ಕೈತೋಟದ ಮೂಲಕ ಗಮನ ಸೆಳೆದಿದೆ.
ನದಿ, ಹಳ್ಳ, ಕೊಳ್ಳ ಸೇರಿದಂತೆ ಯಾವುದೇ ನೀರಾವರಿ ಸೌಲಭ್ಯ ಇಲ್ಲದ ಚಿಂತಾಕಿ ಹೋಬಳಿಯ ಬರದಾಪುರ ಗ್ರಾಮ ಈಗ ಮಕ್ಕಳು ಮತ್ತು ಶಿಕ್ಷಕರ ಪರಿಶ್ರಮದಿಂದ ಜಿಲ್ಲೆಯಾದ್ಯಂತ ಹೆಸರು ಮಾಡಿದೆ.

ಬೇಸಿಗೆಯ ಮೂರು ತಿಂಗಳು ಇಲ್ಲಿ ಕೊಡ ನೀರಿಗಾಗಿ ಪರದಾಡಬೇಕು. ಹೀಗಿರುವ ಈ ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಕೈತೋಟ ರೂಪುಗೊಂಡಿದ್ದು ಹೇಗೆ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಅದಕ್ಕೆ ಶಾಲೆ ಶಿಕ್ಷಕರು ಮತ್ತು ಮಕ್ಕಳು ಶಾಲಾ ಆವರಣದಲ್ಲಿ ಬೆಳೆಸಿರುವ ಹೂ, ಹಣ್ಣು, ತರಕಾರಿ ಸೇರಿದಂತೆ ಹತ್ತಾರು ಗಿಡಗಳು ಉತ್ತರ ನೀಡುತ್ತವೆ.

ಐದಾರು ವರ್ಷದ ಹಿಂದೆ ಗ್ರಾಮದ ಹೊರವಲಯದಲ್ಲಿ ಶಾಲೆ ಸ್ಥಳಾಂತರಿಸಲು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. ‘ಮಕ್ಕಳಿಗೆ ಬಾಯಾರಿದರೆ ಕುಡಿಯಲು ಹನಿ ನೀರು ಸಿಗುವುದಿಲ್ಲ. ಅಂತಹ ಕಡೆ ಶಾಲೆ ಬೇಡ’ ಎಂದು ಪಾಲಕರು ಹಟ ಮಾಡಿದ್ದರು. ಆದರೆ, ಶಿಕ್ಷಕರು ಪೋಷಕರ ಮನ­ವೊಲಿಸಿ ಊರಿನಿಂದ ಎರಡು ಕಿಲೊ ಮೀಟರ್‌ ದೂರದಲ್ಲಿ ದಾನಿ ಯೊಬ್ಬರು ನೀಡಿದ ಅರ್ಧ ಎಕರೆ ಜಮೀನಿಗೆ ಶಾಲೆ ಸ್ಥಳಾಂತರಿಸಿ­ದರು. ಆರಂಭದಲ್ಲಿ ಮಕ್ಕ ಳಿಗೆ ಕುಡಿಯಲು ಮತ್ತು ಬಿಸಿಯೂಟಕ್ಕೆ ನೀರು ಖರೀದಿಸ ಬೇಕಿತ್ತು.

ಮುಂದೆ ಶಾಲಾ ಆವರಣದಲ್ಲಿ ಗ್ರಾಮ ಪಂಚಾಯಿತಿಯವರು ಕೊಳವೆ­ಬಾವಿ ಕೊರೆದರು. ಆದರೆ, ಕೆಲವೇ ದಿನಗಳಲ್ಲಿ ಅದು ಬರಿದಾಯಿತು. ಇಷ್ಟಕ್ಕೆ ಸುಮ್ಮನಾಗದ ಶಿಕ್ಷಕರು ನೀರು ತಜ್ಞರೊಬ್ಬರ ಸಲಹೆ ಪಡೆದು ಮಕ್ಕಳ ನೆರವಿನಿಂದ ಕೊಳವೆಬಾವಿ ಸುತ್ತ 10/10 ಅಡಿಯಲ್ಲಿ ಅಗೆದು ಒಳಗೆ ಕಲ್ಲು ಚೂರು, ಮರಳು, ಕಲ್ಲಿದ್ದಲು ಚೂರು ಹಾಕಿ ಮುಚ್ಚಿ ಅಲ್ಲಿ ನೀರು ಇಂಗುವಂತೆ ಮಾಡಿದರು.

‘ಮಳೆ ಬರುತ್ತಿದ್ದಂತೆ ಕೊಳವೆಬಾವಿ­ಯಲ್ಲಿ ಸಾಕಷ್ಟು ನೀರು ಬಂತು. ಇದರಿಂದ ನಮಗೆ ಖುಷಿಯಾಯಿತು. ಇನ್ನಷ್ಟು ಕೆಲಸ ಮಾಡಲು  ಪ್ರೇರಣೆ ಸಿಕ್ಕಿತು. ಕಳೆದ ವರ್ಷ ಮಳೆ ಕೊರತೆಯಿಂದ ವಿವಿಧೆಡೆ 30ರಿಂದ 40 ವರ್ಷದ ಹಳೆಯ ಕೊಳವೆಬಾವಿಗಳು ಬತ್ತಿದವು. ಆದರೆ, ನಮ್ಮ ಶಾಲೆಯ ಕೊಳವೆಬಾವಿಗೆ ಮಾತ್ರ ನೀರು ಕಡಿಮೆಯಾಗಲಿಲ್ಲ’ ಎಂದು ಮುಖ್ಯ ಶಿಕ್ಷಕ ದತ್ತಾತ್ರಿ ಬಿರಾದಾರ ತಿಳಿಸಿದರು. 

‘ಶಾಲಾ ಪಠ್ಯದ ಜತೆ ಪರಿಸರ ಪಾಠ ಹೇಳಿಕೊಡುತ್ತೇವೆ. ರೈತ ಕುಟುಂಬದ ಬಹುತೇಕ ಮಕ್ಕಳು ಸಹಜವಾಗಿ ಪರಿಸರದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಶಾಲಾ ಅವಧಿ ಹೊರ­ತುಪಡಿಸಿ ಅವರು ನಿತ್ಯ ಎರಡು ಗಂಟೆ ಕೈತೋಟದಲ್ಲಿ ಕೆಲಸ ಮಾಡುತ್ತಾರೆ. ರಜೆ ದಿನಗಳಲ್ಲೂ ಐವರು ಮಕ್ಕಳು ಒಳಗೊಂಡ ತಂಡ ದಿನಬಿಟ್ಟು ಗಿಡಗಳಿಗೆ ನೀರು ಹಾಕು­ತ್ತಾರೆ’ ಎಂದು ಶಿಕ್ಷಕಿ ಲಕ್ಷ್ಮಿ ತಿಳಿಸಿದರು.

‘ಶಾಲೆಯಲ್ಲಿ ಹನಿ ನೀರು ಕೂಡ ವ್ಯರ್ಥ ಆಗುವುದಿಲ್ಲ. ಗಿಡಗಳಿಗೆ ಹಾಕಿದ ಬಳಿಕವೂ ನೀರು ಹೆಚ್ಚಾದರೆ, ಅದನ್ನು ಕೊಳವೆಬಾವಿಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ. ಬಿಸಿಯೂಟದ ಪಾತ್ರೆಗ­ಳನ್ನು ತೊಳೆದ ನೀರನ್ನೂ ಸಹ ಪೋಲು ಮಾಡುವುದಿಲ್ಲ. ಶಾಲೆಯ ಸಾಧನೆ ಶ್ಲಾಘನೀಯ’ ಎಂದು ಸಿಆರ್‌ಸಿ ಸೂರ್ಯಕಾಂತ ಸಿರಂಜೆ ತಿಳಿಸಿದರು. 

ಈ ಶಾಲೆಯು ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತ ಬಳಕೆಗೆ ಖ್ಯಾತಿ ಗಳಿಸಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಈ ಶಾಲೆಗೆ ಹಸಿರು ಶಾಲಾ ಪ್ರಶಸ್ತಿ ನೀಡಿ ಗೌರವಿಸಿದೆ.
–ಮನ್ಮಥಪ್ಪ ಸ್ವಾಮಿ

*
ಶಾಲೆಯಲ್ಲಿ ಕೈತೋಟ ಸಿದ್ಧಪಡಿಸಲು ಉತ್ತಮ ಅವಕಾಶ ಇದೆ. ನಿತ್ಯ 10 ರಿಂದ 12 ಗಂಟೆ ಸಮಯ ಶಾಲೆಯಲ್ಲಿ ಕಳೆಯುತ್ತೇನೆ.
-ದತ್ತಾತ್ರಿ ಬಿರಾದಾರ,
ಮುಖ್ಯ ಶಿಕ್ಷಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT