ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ 4ಗೆ ದೇಶೀ ತಂತ್ರಜ್ಞಾನ

Last Updated 3 ಮೇ 2017, 19:30 IST
ಅಕ್ಷರ ಗಾತ್ರ

ಭಾರತ್‌ ಸ್ಟೇಜ್ 3 (ಬಿಎಸ್‌3) ವಾಯುಮಾಲಿನ್ಯ ನಿಯಂತ್ರಣ ಮಾನದಂಡದ ಎಂಜಿನ್‌ ಹೊಂದಿರುವ ಹೊಸ ವಾಹನಗಳ ಮಾರಾಟ ಮತ್ತು ನೋಂದಣಿಗೆ ಏಪ್ರಿಲ್ 1ರ ನಂತರ  ಅವಕಾಶ ನೀಡಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ಮಾರ್ಚ್ 31ಕ್ಕೆ ಹೇಳಿದ್ದು ಸರ್ವವೇದ್ಯ. ಆ ಸಂದರ್ಭ, ತಮ್ಮಲ್ಲಿ ಉಳಿದಿರುವ ಬಿಎಸ್‌3 ವಾಹನಗಳನ್ನು ಹೇಗಾದರೂ ಮಾಡಿ ಗಡುವಿಗೂ ಮುನ್ನ ಮಾರಾಟ ಮಾಡಲು ಆಟೊಮೊಬೈಲ್ ಕಂಪೆನಿಗಳು ಗ್ರಾಹಕರಿಗೆ ಹಲವು ರಿಯಾಯಿತಿಗಳನ್ನು ನೀಡಿದ್ದು ಸಾಕಷ್ಟು ಸುದ್ದಿಯಾಗಿತ್ತು. ಸಂಭಾವ್ಯ ನಷ್ಟದ ಪ್ರಮಾಣ ಕಡಿಮೆ ಮಾಡಿಕೊಳ್ಳಲು ಅವು ಈ ಕ್ರಮ ಕೈಗೊಂಡಿದ್ದವೆಂಬುದು ಸ್ಪಷ್ಟ.

ಆದರೆ, ದೇಶದ ಆಟೊಮೊಬೈಲ್ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ನಾಂದಿ ಹಾಡಿರುವ ಅಶೋಕ್ ಲೇಲ್ಯಾಂಡ್‍ ಮಾತ್ರ ಬಿಎಸ್‌ 3 ಎಂಜಿನ್ ವಾಹನಗಳ ಬಗ್ಗೆ ಚಿಂತೆ ಮಾಡುವ ಗೋಜಿಗೇ ಹೋಗಲಿಲ್ಲ! ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಅಶೋಕ್ ಲೇಲ್ಯಾಂಡ್‌ನ ಹತ್ತು ಸಾವಿರಕ್ಕೂ ಹೆಚ್ಚು ಬಿಎಸ್‌ 3 ವಾಹನಗಳು ಡೀಲರ್‌ಗಳ ಬಳಿ ಇದ್ದವು. ಆದರೂ ಡೀಲರ್‌ಗಳ ಮೇಲೆ ಯಾವುದೇ ಒತ್ತಡ ಹೇರದೆ ಕಂಪೆನಿಯು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿತು. ಇದಕ್ಕೆ ಕಾರಣವಿಷ್ಟೆ. ಈಗಾಗಲೇ ಡೀಲರ್‌ಗಳಿಗೆ ನೀಡಲಾಗಿರುವ ಬಿಎಸ್‌ 3 ವಾಹನಗಳಿಗೂ ಬಿಎಸ್‌ 4 ಎಂಜಿನ್ ಅಳವಡಿಸಿಕೊಡುವ ವ್ಯವಸ್ಥೆಯನ್ನು ಕಂಪೆನಿ ಅದಾಗಲೇ ಮಾಡಿತ್ತು. ಬಿಎಸ್‌ 4 ಎಂಜಿನ್‌ಗೆ ಬೇಕಾದ ತಂತ್ರಜ್ಞಾನವನ್ನು 2010ರಲ್ಲೇ ಅಭಿವೃದ್ಧಿಪಡಿಸಿದ್ದುದು ಪ್ರಸಕ್ತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಕಂಪೆನಿಗೆ ನೆರವಾಯಿತು ಎನ್ನುತ್ತಾರೆ ಅಶೋಕ್ ಲೇಲ್ಯಾಂಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನೋದ್ ಕೆ. ದಾಸರಿ.

ವಾಯುಮಾಲಿನ್ಯ ತಡೆಗೆ ಕ್ರಮ
ವಾಯುಮಾಲಿನ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಕಂಪೆನಿ ಬಿಎಸ್‌ 4 ಎಂಜಿನ್‌ಗೆಂದೇ ‘ಇಂಟೆಲಿಜೆಂಟ್ ಎಗ್ಸಾಸ್ಟ್ ಗ್ಯಾಸ್ ರಿಸರ್ಕ್ಯೂಲೇಷನ್ (ಐಇಜಿಆರ್)’ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಚೆನ್ನೈನ ವ್ಯಾಪಾರ ಕೇಂದ್ರದಲ್ಲಿ ಏಪ್ರಿಲ್ 20ರಿಂದ 24ರವರೆಗೆ ನಡೆದ ಅಶೋಕ್ ಲೇಲ್ಯಾಂಡ್ ಜಾಗತಿಕ ಸಮಾವೇಶದಲ್ಲಿ ಪ್ರದರ್ಶಿಸಲಾಗಿರುವ 30 ವಾಹನಗಳೇ ಇದಕ್ಕೆ ಸಾಕ್ಷಿ.

ಬಿಎಸ್‌ 4 ವಾಯುಮಾಲಿನ್ಯ ನಿಯಂತ್ರಣ ಮಾನದಂಡವನ್ನು ಪಾಲಿಸಲು ಐಇಜಿಆರ್ ತಂತ್ರಜ್ಞಾನ ಉತ್ತಮ ಪರಿಹಾರ ಎಂಬುದು ಕಂಪೆನಿಯ ಅಭಿಪ್ರಾಯ. ಭಾರತದ ರಸ್ತೆಗಳು, ಅದಕ್ಕೆ ಅನುಕೂಲಕರವಾದ ಇಲ್ಲಿನ ವಾಹನಗಳ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ಐಇಜಿಆರ್ ಅಭಿವೃದ್ಧಿಪಡಿಸಲಾಗಿದೆ. ವಾಹನಗಳ ತಯಾರಿಕಾ ವೆಚ್ಚದ ದೃಷ್ಟಿಕೋನದಿಂದ ನೋಡಿದರೂ ಯುರೋಪ್‌ನ ‘ಸೆಲೆಕ್ಟಿವ್ ಕೆಟಲಿಸ್ಟಿಕ್ ರಿಡಕ್ಷನ್ (ಎಸ್‌ಸಿಆರ್‌) ತಂತ್ರಜ್ಞಾನಕ್ಕಿಂತ ಐಇಜಿಆರ್ ಉತ್ತಮ ಎಂಬುದು ತಜ್ಞರ ಅಭಿಮತ.

‘ಗ್ರಾಹಕರ ದೃಷ್ಟಿಕೋನದಿಂದ ನೋಡಿದರೆ ಈ ತಂತ್ರಜ್ಞಾನ ಕಡಿಮೆ ವೆಚ್ಚದಾಯಕವಾಗಿರಲಿದೆ. ಇಂಧನ ದಕ್ಷತೆ ಮತ್ತು ಸುಧಾರಿತ ಹೊಗೆ ಸೂಸುವಿಕೆಯಿಂದಾಗಿ ವಾಯುಮಾಲಿನ್ಯ ತಡೆಗೂ ಪ್ರಯೋಜನಕಾರಿಯಾಗಿದೆ’ ಎಂದಿದ್ದಾರೆ ದಾಸರಿ.

ಏನಿದು ಐಇಜಿಆರ್?
ಐಇಜಿಆರ್ ಅಂದರೆ, ದಶಕಗಳ ಹಿಂದಿನಿಂದಲೇ ಜಾಗತಿಕ ಆಟೊಮೊಬೈಲ್ ಕ್ಷೇತ್ರದಲ್ಲಿ ಅಸ್ತಿತ್ವದಲ್ಲಿರುವ ಎಗ್ಸಾಸ್ಟ್ ಗ್ಯಾಸ್ ರಿಸರ್ಕ್ಯೂಲೇಷನ್ (ಇಜಿಆರ್‌) ತಂತ್ರಜ್ಞಾನದ ಮುಂದುವರಿದ ರೂಪಕ್ಕೆ ಸಮ. ಅಂದರೆ, ಆ ತಂತ್ರಜ್ಞಾನಕ್ಕಿಂತಲೂ ಒಂದು ಹೆಜ್ಜೆ ಮುಂದಡಿಯಿಟ್ಟು ಅಶೋಕ್ ಲೇಲ್ಯಾಂಡ್ ಕಂಪೆನಿ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನ. ಹಾಗಾದರೆ, ಇಜಿಆರ್‌ ಎಂದರೇನು ಎಂಬ ಕುತೂಹಲ ಮೂಡುವುದು ಸಹಜ.

ಇಜಿಆರ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಸುಮಾರು 1950ರ ದಶಕದಿಂದಲೇ ಪ್ರಯತ್ನ, ಪ್ರಯೋಗಗಳು ಆರಂಭವಾಗಿದ್ದವು. ಡೀಸೆಲ್‌ ಎಂಜಿನ್‌ಗಳಿಂದ ನೈಟ್ರೋಜನ್ ಆಕ್ಸೈಡ್ ಹೊಗೆ ಉಗುಳುವಿಕೆಯನ್ನು ಕಡಿಮೆ ಮಾಡಿ ವಾಯುಮಾಲಿನ್ಯ ತಡೆಗಟ್ಟುವುದೇ ಈ ತಂತ್ರಜ್ಞಾನದ ಉದ್ದೇಶ. ಡೀಸೆಲ್ ಎಂಜಿನ್‌ಗಳಿಂದಾಗುವ ವಾಯುಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ 1970ರ ದಶಕದಲ್ಲಿ ಇಜಿಆರ್‌ ಅಳವಡಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಈ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಬಳಕೆಗೆ ಹೆಚ್ಚಿನ ಆದ್ಯತೆ ಅಮೆರಿಕದಲ್ಲಿ ನೀಡಲಾಗಿತ್ತೆಂಬುದು ಗಮನಾರ್ಹ.

ಕಾರುಗಳಲ್ಲಿ ಮತ್ತು ಲಘು ಟ್ರಕ್‌ಗಳಲ್ಲಿ ಇಜಿಆರ್‌ ಬಳಕೆ ಮಾಡುವುದು ಉತ್ತರ ಅಮೆರಿಕದಲ್ಲಿ 1980ರಲ್ಲೇ ಸಾಮಾನ್ಯವಾಗಿಬಿಟ್ಟಿತ್ತು. 1990ರ ದಶಕದಲ್ಲಿ ಭಾರಿ ಗಾತ್ರದ ವಾಹನಗಳ ಡೀಸೆಲ್ ಎಂಜಿನ್‌ಗಳಲ್ಲೂ ಇಜಿಆರ್‌ ಬಳಕೆ ಆರಂಭವಾಗಿತ್ತು. ಆದರೆ, ಲಘು ವಾಹನಗಳಿಗೆ ಹೋಲಿಸಿದರೆ ಭಾರಿ ಗಾತ್ರದ ವಾಹನಗಳ ಎಂಜಿನ್‌ಗಳಿಗೆ ಇಜಿಆರ್‌ ತಂತ್ರಜ್ಞಾನ ಅಳವಡಿಸುವುದು ಸವಾಲಿನ ಕೆಲಸವಾಗಿತ್ತು. 2000ನೇ ಇಸವಿ ವೇಳೆಗೆ ಕೂಲ್ಡ್ ಇಜಿಆರ್ ಎಂಜಿನ್‌ಗಳ ಬಳಕೆ ಅಮೆರಿಕದಲ್ಲಿ ಆರಂಭವಾಯಿತು.

ಇನ್ನು, 2010ರ ವೇಳೆಗೆ ಗ್ಯಾಸೋಲಿನ್ ಎಂಜಿನ್‌ಗಳಿಗೂ ಇಜಿಆರ್ ಬಳಕೆ ವಿಸ್ತರಿಸಲಾಯಿತು (ಇಂಧನ ದಕ್ಷತೆ ಹೆಚ್ಚಿಸುವ ಸಲುವಾಗಿ ಮಾತ್ರ). ಪಂಪಿಂಗ್ ಲಾಸ್‌ (ಇಂಧನ ಎಂಜಿನ್‌ಗೆ ಪಂಪ್ ಆಗುವ ಸಂದರ್ಭದಲ್ಲಾಗುವ ನಷ್ಟ) ತಡೆಯಲು, ಇಂಧನ ಬಳಕೆ ದಕ್ಷತೆ ಸುಧಾರಿಸಲು ಇಜಿಆರ್‌ ತಂತ್ರಜ್ಞಾನವನ್ನು ಗ್ಯಾಸೋಲಿನ್ ಎಂಜಿನ್‌ಗಳಲ್ಲಿ ಬಳಸಲಾಯಿತು. ಎಂಜಿನ್‌ಗಳಲ್ಲಿ ಅನವಶ್ಯಕ ಇಂಧನ ಬಳಕೆ ಹೆಚ್ಚಾಗುವುದನ್ನು ತಡೆಯಲೂ ಈ ತಂತ್ರಜ್ಞಾನ ಸಹಕಾರಿ.

ಹೀಗೆ ಕಾರ್ಯನಿರ್ವಹಿಸುತ್ತದೆ
ಇಂಧನ ಮತ್ತು ಶುದ್ಧ ಗಾಳಿಯನ್ನು ದಹಿಸುವ ಮೂಲಕ ವಾಹನಗಳ ಎಂಜಿನ್‌ಗಳು ಕಾರ್ಯನಿರ್ವಹಿಸುತ್ತವೆ ಎಂಬುದು ತಿಳಿದ ವಿಚಾರ. ಈ ಪ್ರಕ್ರಿಯೆಯ ವೇಳೆ ಅಲ್ಪ ಪ್ರಮಾಣದ ಇಂಧನ ಹಾಗೂ ಶುದ್ಧ ಗಾಳಿ ಪೂರ್ತಿಯಾಗಿ ದಹಿಸದೆ ಉಳಿದುಬಿಡುತ್ತದೆ. ಇದು ಅನಿಲ ರೂಪದಲ್ಲಿರುತ್ತದೆ (ನಿಷ್ಕಾಸ ಅನಿಲ). ಇದರಿಂದ ಎಂಜಿನ್‌ನ ತಾಪ ಕಡಿಮೆಯಾಗಿ ದಕ್ಷತೆಗೆ ಅಡಚಣೆಯಾಗುತ್ತದೆ. ಇದನ್ನು ತಡೆಯುವುದೇ ಇಜಿಆರ್‌ ಕೆಲಸ. ಅಂದರೆ, ನಿಷ್ಕಾಸ ಅನಿಲವನ್ನು ಮರಳಿ ಮೊದಲಿನ ರೂಪಕ್ಕೆ ತಂದು ಮರುಪೂರಣ ಮಾಡುವ ಕೆಲಸವನ್ನು ಇಜಿಆರ್‌ ಮಾಡುತ್ತದೆ. ಇದು ಇಂಧನ ದಕ್ಷತೆ ಹೆಚ್ಚಿಸುವುದರ ಜತೆಗೆ ನೈಟ್ರೋಜನ್ ಆಕ್ಸೈಡ್ ಹೊಗೆ ಉಗುಳುವಿಕೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ.

ಡೀಸೆಲ್ ಎಂಜಿನ್‌ಗಳಲ್ಲಿ ಇಜಿಆರ್‌ ಬಳಕೆಯ ಪ್ರಯೋಜನ
* ಲ್ಯುಬ್ರಿಕೇಟಿಂಗ್ ಆಯಿಲ್ ಬಳಕೆ ಕಡಿಮೆ ಮಾಡಲು ಸಹಕಾರಿ
* ಇಂಧನ ಪೂರೈಕೆ ವೇಗ ಹೆಚ್ಚಿಸಲು ಪೂರಕ
* ಡೀಸೆಲ್ ಉತ್ಕರ್ಷಣ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT