ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲ್ಮನೆಗೆ ರಾಜಕಾರಣಿಗಳ ನಾಮಕರಣ ಬೇಡ

Last Updated 3 ಮೇ 2017, 19:30 IST
ಅಕ್ಷರ ಗಾತ್ರ
ವಿಧಾನ ಪರಿಷತ್‌ನ ಖಾಲಿ ಇರುವ ಮೂರು ಸ್ಥಾನಗಳಿಗೆ ಮೋಹನ್ ಕೊಂಡಜ್ಜಿ, ಸಿ.ಎಂ.ಲಿಂಗಪ್ಪ ಹಾಗೂ ಪಿ.ಆರ್.ರಮೇಶ್ ಅವರನ್ನು ನಾಮ ನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಇವರೆಲ್ಲರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು.

ಇಂಥವರನ್ನು ನಾಮಕರಣ ಮಾಡಲು ಹೊರಟಿರುವುದು ಕೆಟ್ಟ ಸಂಪ್ರದಾಯದ ಮುಂದುವರಿದ ಭಾಗವಾಗಿದೆ. ವಿಧಾನ ಪರಿಷತ್ ಕಾಯ್ದೆಯಲ್ಲಿ ಸಮಾಜಸೇವೆ, ಸಹಕಾರ, ಕಲೆ, ಸಾಹಿತ್ಯ ಕ್ಷೇತ್ರದ ತಜ್ಞರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಬೇಕು ಎಂಬ ನಿಯಮವಿದೆ. ಹಲವಾರು ವರ್ಷಗಳಿಂದ ಈ ನಿಯಮವನ್ನು ಉಲ್ಲಂಘಿಸಲಾಗುತ್ತಿದೆ.
 
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಮಾಜ ಸೇವೆಯ ಹೆಸರಿನಲ್ಲಿ ವೃತ್ತಿನಿರತ ರಾಜಕಾರಣಿಗಳನ್ನೇ ನಾಮಕರಣ ಮಾಡಲಾಗುತ್ತಿದೆ. ಹಿಂದೆ ಅಧಿಕಾರದಲ್ಲಿ ಇದ್ದ ಪಕ್ಷ ಕೂಡ ಹೀಗೆಯೇ ಮಾಡಿತ್ತು. ಅದೇ ಕೆಟ್ಟ ಚಾಳಿಯನ್ನು ಈಗಿನ ಸರ್ಕಾರ ಮುಂದುವರಿಸಿದೆ.
 
ಇದು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹ. ಅಧಿಕಾರ ಇದೆ ಎಂದು ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಇಲ್ಲಿ ವ್ಯಕ್ತವಾಗುತ್ತದೆ. ಅಲ್ಲದೆ ವಿಧಾನ ಪರಿಷತ್ ಸದಸ್ಯ ಸ್ಥಾನ ಮಾರಾಟಕ್ಕೆ ಇದೆ ಎಂಬ ಭಾವನೆ ಜನರಲ್ಲಿ ಬಂದುಬಿಟ್ಟಿದೆ. ಇದಕ್ಕೆ ನಿಯಂತ್ರಣ ಹಾಕುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. 
 
ರಾಜಕಾರಣಿಗಳು ಹಿಂಬಾಗಿಲಿನ ಮೂಲಕ ವಿಧಾನ ಪರಿಷತ್ ಪ್ರವೇಶಿಸಲು ಅವಕಾಶ ಮಾಡಿಕೊಡುವುದಕ್ಕೆ ಈಗಲಾದರೂ ಕಡಿವಾಣ ಹಾಕಬೇಕಿದೆ. ವಿಧಾನಸಭೆ  ಚುನಾವಣೆಯಲ್ಲಿ ಸೋತವರನ್ನು ಅಧಿಕಾರದ ಸ್ಥಾನದಲ್ಲಿ ಕುಳ್ಳಿರಿಸಲೂ ವಿಧಾನ ಪರಿಷತ್ ಬಳಕೆಯಾಗುತ್ತಿರುವುದು ಅತ್ಯಂತ ವಿಷಾದನೀಯ. ಇದು ಜನರಿಗೆ ಮಾಡಿದ ಅಪಮಾನ. ಹಿರಿಯರ ಮನೆ, ಮೇಲ್ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್ ಅನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದು ಕೂಡ ಅಕ್ಷಮ್ಯ.
 
ಸಾಮಾನ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗದೇ ಇರುವ ವ್ಯಕ್ತಿಗಳನ್ನೂ ರಾಜ್ಯದ ಆಡಳಿತ, ಅಭಿವೃದ್ಧಿಯಲ್ಲಿ ಭಾಗಿಯಾಗಿಸಿಕೊಳ್ಳಬೇಕು, ನಿರ್ದಿಷ್ಟ ಕ್ಷೇತ್ರಗಳಲ್ಲಿ ಅಪಾರ ಜ್ಞಾನ ಹೊಂದಿದವರನ್ನು  ನಾಮಕರಣ ಮಾಡುವ ಮೂಲಕ ಯಾವುದೇ ವಿಷಯದ ಬಗ್ಗೆ ಮೇಲ್ಮನೆಯಲ್ಲಿ ಪಕ್ಷಾತೀತವಾದ ಮತ್ತು ಗಂಭೀರವಾದ ಚರ್ಚೆ ನಡೆಯಬೇಕು ಎನ್ನುವುದು ವಿಧಾನ ಪರಿಷತ್ ಸ್ಥಾಪನೆಯ ಹಿಂದಿರುವ  ಉದ್ದೇಶವಾಗಿತ್ತು.
 
ರಾಜಕೀಯ ಪಕ್ಷಗಳ ದಾಕ್ಷಿಣ್ಯದಿಂದ ಮುಕ್ತರಾದ, ಪೂರ್ವಗ್ರಹಪೀಡಿತರಾಗದ, ಹಿರಿಯರ ಹಾಗೂ ತಜ್ಞರ ಸಲಹೆ-ಸೂಚನೆಗಳು ಸರ್ಕಾರಕ್ಕೆ ಸಿಗಬೇಕೆಂಬುದು ಮೂಲ ಉದ್ದೇಶವಾಗಿತ್ತು. ಈ ಕಾರಣಕ್ಕಾಗಿಯೇ ವಿಧಾನ ಪರಿಷತ್ತನ್ನು  ವಿಶಿಷ್ಟವಾಗಿ ರಚಿಸಲಾಗಿದೆ. ವಿಧಾನಸಭೆಯಿಂದ 25, ಸ್ಥಳೀಯ ಸಂಸ್ಥೆಗಳಿಂದ 25, ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದಿಂದ ತಲಾ 7 ಸದಸ್ಯರು ಚುನಾವಣೆಯ ಮೂಲಕ ಆಯ್ಕೆಯಾದರೆ 11 ಸದಸ್ಯರನ್ನು ರಾಜ್ಯಪಾಲರು ನಾಮಕರಣ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
 
ಶಾಸನ ನಿರೂಪಣೆ ಮತ್ತು ಆಡಳಿತದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ನೆರವಾಗಲಿ ಎನ್ನುವುದು ಇದರ ಉದ್ದೇಶ. ಹೀಗೆ ಸ್ಥಾಪಿಸಲಾದ ವಿಧಾನ ಪರಿಷತ್, ರಾಜಕಾರಣಿಗಳ ಸ್ವಹಿತಾಸಕ್ತಿಯ ತಾಣವಾಗಿರುವುದು ವಿಪರ್‍್ಯಾಸ. ಮೇಲ್ಮನೆಗೆ ರಾಜಕಾರಣಿಗಳನ್ನು ನಾಮಕರಣ ಮಾಡುವ ಮೂಲಕ ಮೂಲ ಉದ್ದೇಶಕ್ಕೇ ಧಕ್ಕೆ ತಂದಂತೆ ಆಗಿದೆ. ನಾಮಕರಣ ಮಾಡುವಾಗಲೂ ಜಾತಿ ಲೆಕ್ಕಾಚಾರ ಹಾಕುವುದಂತೂ ಅತ್ಯಂತ ನಾಚಿಕೆಗೇಡಿನ ಸಂಗತಿ. ಅಲ್ಲದೆ ಮೇಲ್ಮನೆ ಸದಸ್ಯತ್ವಕ್ಕೆ ಲಾಬಿ ನಡೆಯುವುದೂ ನೋವಿನ ಸಂಗತಿ.
 
ಯಾವುದೇ ಉನ್ನತ ಸ್ಥಾನಕ್ಕೆ ನಾಮಕರಣ ಮಾಡಬೇಕು ಎನ್ನುವಾಗ ಸಾಮಾಜಿಕ ನ್ಯಾಯವನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವುದು ಒಪ್ಪಬಹುದಾದ ವಿಚಾರವಾದರೂ ಈ ನೆಪದಲ್ಲಿ ವೃತ್ತಿ ರಾಜಕಾರಣಿಗಳನ್ನು ಪಟ್ಟಕ್ಕೆ ತಂದು ಕೂರಿಸುವುದು ಸರ್ವಥಾ ಸಲ್ಲ. ಕರ್ನಾಟಕ ವಿಧಾನ ಪರಿಷತ್‌ಗೆ ಉನ್ನತವಾದ ಇತಿಹಾಸ ಇದೆ. ಕೆ.ಟಿ.ಭಾಷ್ಯಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಬಸವರಾಜ ಕಟ್ಟೀಮನಿ, ಅಕ್ಬರ್ ಅಲಿ, ಚಂದ್ರಶೇಖರ ಕಂಬಾರ, ದೊಡ್ಡರಂಗೇಗೌಡ, ಸಿದ್ಧಲಿಂಗಯ್ಯ ಅವರಂಥ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳ ದಿಗ್ಗಜರು ಮೇಲ್ಮನೆಯ ಸದಸ್ಯರಾಗಿದ್ದರು. ಇವರೆಲ್ಲಾ ಯಾವುದೇ ಪಕ್ಷಕ್ಕೆ ಸೀಮಿತರಾದವರಲ್ಲ.
 
ಆದರೂ ಇತ್ತೀಚಿನ ದಿನಗಳಲ್ಲಿ ಕಲೆ, ಸಾಹಿತ್ಯ, ಶಿಕ್ಷಣ, ಸಹಕಾರ ಕ್ಷೇತ್ರದ ತಜ್ಞರು ಎಂದು ನಾಮಕರಣಗೊಂಡವರನ್ನೂ ಪಕ್ಷದ ಮಿತಿಯೊಳಗೆ ಸೇರಿಸುವುದು ಆಯಾ ಕ್ಷೇತ್ರಕ್ಕೆ ಮಾಡಿದ ಅಪಮಾನ. ಈ ಪದ್ಧತಿಯನ್ನು ಈಗಲಾದರೂ ಬದಲಾಯಿಸದೇ ಹೋದರೆ ಜನರು ಪ್ರಜಾಪ್ರಭುತ್ವದ ಮೇಲೆ ಇಟ್ಟಿರುವ  ನಂಬಿಕೆ ಉಳಿಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT