ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕ್ಕೆ ಮುದ ನೀಡುವ ಡೆಸ್ಕ್‌ಟಾಪ್ ಗಿಡಗಳು

Last Updated 4 ಮೇ 2017, 19:30 IST
ಅಕ್ಷರ ಗಾತ್ರ

ಮನೆಯಿರಲಿ, ಕಚೇರಿಯಿರಲಿ ಕಣ್ಣಿಗೆ ತುಸು ಹಸಿರು ಕಂಡರೆ ಮನಸಿಗೆ ಏನೋ ಒಂಥರಾ ಖುಷಿ.

ಕಚೇರಿಯಲ್ಲಿ ವಿಶೇಷವಾಗಿ ಕಂಪ್ಯೂಟರ್‌ ಮುಂದೆ ಕೆಲಸ ಮಾಡುವವರಿಗೆ ಕಣ್ಣಿಗೆ ಹೆಚ್ಚು ಶ್ರಮವಾಗುತ್ತಿರುತ್ತದೆ. ಕಣ್ಣಿಗೆ ತಂಪು ನೀಡುವ ಹಸಿರು ಗಿಡವೊಂದು ಎದುರಿಗಿದ್ದರೆ ಕಣ್ಣಿನ ಆರೋಗ್ಯಕ್ಕಷ್ಟೇ ಅಲ್ಲ ಮನಸಿನ ಆರೋಗ್ಯಕ್ಕೂ ಉತ್ತಮ.

ಕುಂಡಗಳಲ್ಲಿ ಗಿಡ ಬೆಳೆಸಲಾಗದವರು  ಮನೆ ಅಥವಾ ಕಚೇರಿಯ ಟೇಬಲ್‌ ಮೇಲೆ ಇಡಬಹುದಾದ ಸಣ್ಣ ಕುಂಡಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಇಂಥ ಗಿಡಗಳ ಆರೈಕೆಯೂ ಸುಲಭ. ಒಂದೆರೆಡು ದಿನಗಳ ಮಟ್ಟಿಗೆ ಊರಿಗೆ ಹೋದರೂ ಗಿಡಗಳಿಗೆ ನೀರಿನ ಅವಶ್ಯಕತೆ ಇರುವುದಿಲ್ಲ. ಕಚೇರಿಯಲ್ಲಿ ಟೇಬಲ್ ಮೇಲೆ ಇಡಬಹುದಾದ ಡೆಸ್ಕ್‌ಟಾಪ್ ಗಿಡಗಳು ಮನಸಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೇ ನಮ್ಮ ಮೂಡ್ ಅನ್ನು  ತಾಜಾತನಗೊಳಿಸುತ್ತದೆ. ಅಂಥ ಡೆಸ್ಕ್‌ಟಾಪ್ ಗಿಡಗಳ ಬಗ್ಗೆ ಇಲ್ಲಿದೆ ಮಾಹಿತಿ.

ಅಲೊವೆರಾ (ಲೋಳೆಸರ), ಮನಿ ಪ್ಲಾಂಟ್‌, ಸ್ನೇಕ್ ಪ್ಲಾಂಟ್‌, ಕ್ಯಾಕ್ಟಸ್, ಆರ್ಕಿಡ್‌, ಪೀಸ್‌ ಲಿಲ್ಲಿ, ಜೇಡ್, ಸಕ್ಯುಲೆಂಟ್ ಜಾತಿಯ ಗಿಡಗಳನ್ನು ಡೆಸ್ಕ್‌ಟಾಪ್ ಗಿಡಗಳನ್ನಾಗಿ ಬೆಳೆಸಬಹುದು. ಇವು ಬೆಳೆಯಲು ಸ್ವಲ್ಪ ಸೂರ್ಯನ ಬೆಳಕು ಮತ್ತು ನೀರು ಸಾಕು.

ಸಕ್ಯುಲೆಂಟ್‌ ಗಿಡ: ಡೆಸ್ಕ್‌ಟಾಪ್‌ ಗಿಡಗಳಲ್ಲಿ ಸಕ್ಯುಲೆಂಟ್‌ ಗಿಡಗಳದ್ದೇ ಮೇಲುಗೈ. ಈ ಗಿಡಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲದಿರುವುದು ಮತ್ತು ನೋಡಲು ಆಕರ್ಷಕ, ನಿಧಾನವಾಗಿ ಬೆಳವಣಿಗೆ ಇರುವುದೇ ಈ ಗಿಡಗಳ ಜನಪ್ರಿಯತೆಗೆ ಕಾರಣ.

ಸಣ್ಣ ಎಲೆಗಳ ಜೇಡ್‌, ಕಮಲದ ಹೂವಿನ ರೀತಿ ಅರಳುವ   ಸಕ್ಯುಲೆಂಟ್‌, ಅಲೊ ಸಕ್ಯುಲೆಂಟ್, ದ್ರಾಕ್ಷಿ ಗೊಂಚಲಿನಂತೆ ಹರಡುವ ಸಕ್ಯುಲೆಂಟ್, ನಕ್ಷಾತ್ರಾಕಾರದ ಸಕ್ಯುಲೆಂಟ್ ಹೀಗೆ ವಿವಿಧ ಬಗೆಯ ಸಕ್ಯುಲೆಂಟ್‌ ಗಿಡಗಳನ್ನು ಡೆಸ್ಕ್ ಟಾಪ್‌ ಗಿಡಗಳನ್ನಾಗಿ ಬೆಳೆಸಬಹುದು.

ಜೇಡ್ ಸಕ್ಯುಲೆಂಟ್‌ ಗಿಡ ಡೆಸ್ಕ್‌ಟಾಪ್ ಗಿಡಗಳಲ್ಲಿ ಈಚೆಗೆ ಹೆಚ್ಚು ಟ್ರೆಂಡಿಯಾಗಿದೆ. ಇದನ್ನು ಅದೃಷ್ಟದ ಗಿಡವೆಂದೇ ಕೆಲವರು ಪರಿಗಣಿಸುತ್ತಾರೆ.

ಲೋಳೆಸರ: ಈ ಸಸ್ಯ ಅಲಂಕಾರಿಕವಷ್ಟೇ ಅಲ್ಲ ಔಷಧೀಯ  ಸಸ್ಯವಾಗಿಯೂ ಚಿರ

ಪರಿಚಿತ. ಈ ಸಸ್ಯ ಇರುವೆಡೆ ಸೊಳ್ಳೆಕಾಟ ಇರದು. ಮನೆಮದ್ದಾಗಿ ಮತ್ತು ಸೌಂದರ್ಯವರ್ಧಕವಾಗಿಯೂ ಇದು ಉಪಯುಕ್ತ. ತನ್ನ ಸುತ್ತಲಿನ ಗಾಳಿಯನ್ನೂ ಸ್ವಚ್ಛವಾಗಿಡುವ ಗುಣ ಈ ಸಸ್ಯದ್ದು.

ಮನಿಪ್ಲಾಂಟ್‌: ಬಹುತೇಕರ ಸಸ್ಯಪ್ರಿಯರ ಮನೆಗಳಲ್ಲಿ ಮನಿಪ್ಲಾಂಟ್‌ಗೆ ಖಾಯಂ ಸ್ಥಾನ. ಈ ಗಿಡವನ್ನು ಹಾಕಿದರೆ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿರುತ್ತಾಳೆಂಬ ನಂಬಿಕೆ ಜನರದ್ದು. ನಂಬಿಕೆ ಏನೇ ಇರಲಿ  ಇದೊಂದು ಅಲಂಕಾರಿಕ ಬಳ್ಳಿಯೂ ಹೌದು.

ಮಣ್ಣಿನಲ್ಲಿ, ನೀರಿನಲ್ಲಿ ಎರಡಲ್ಲೂ ಬೆಳೆಯುವ ಮನಿಪ್ಲಾಂಟ್‌ ಕಣ್ಣಿಗೆ ತಂಪುಂಟು ಮಾಡುತ್ತದೆ. ಹಸಿರಾದ ಎಲೆಗಳು ಕಚೇರಿಯಲ್ಲಿ ದಣಿದ ಮನವನ್ನು ಉಲ್ಲಸಿತಗೊಳಿಸುತ್ತದೆ. ನೀರಿನಲ್ಲಿ ಮನಿಪ್ಲಾಂಟ್ ಅನ್ನು ಬೆಳೆಯುವುದಾದರೆ ಪದೇಪದೆ ನೀರನ್ನು ಬದಲಾಯಿಸಬೇಕು. ಇಲ್ಲದಿದ್ದಲ್ಲಿ  ಗಾಜು, ಪ್ಲಾಸ್ಟಿಕ್ ಬಾಟಲಿಯ ತಳದಲ್ಲಿ ಪಾಚಿಗಟ್ಟುವ  ಸಾಧ್ಯತೆ ಇರುತ್ತದೆ. ಬರೀ ನೀರಿನಲ್ಲಿ ಒಳಾಂಗಣ ಸ್ಥಳದಲ್ಲಿ ಈ ಗಿಡವನ್ನು ಇಟ್ಟರೆ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇಟ್ಟು ಲಾರ್ವಾ ಉತ್ಪಾದಿಸುವ ಅಪಾಯವೂ ಇರುತ್ತದೆ.

ಸ್ನೇಕ್ ಪ್ಲಾಂಟ್‌: ನೋಡಲು ತುಸು ಕತ್ತಾಳೆ ಗಿಡದಂತೆ ಕಾಣುವ ಸ್ನೇಕ್ ಪ್ಲಾಂಟ್‌ಗೆ ಹೆಚ್ಚಿನ ಆರೈಕೆಯ ಅಗತ್ಯವಿಲ್ಲ.  ಸೂರ್ಯನ ಬಿಸಿಲು ಬೀಳುವ ಜಾಗದಲ್ಲಿ ಈ ಸಸ್ಯವನ್ನು ಬೆಳೆಸಬೇಕು. ಈ ಸಸ್ಯಕ್ಕೆ ಹೆಚ್ಚಿನ ನೀರಿನ ಅಗತ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT