ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲೆ ಫೋಟೊ ಕಳುಹಿಸುವಂತೆ ಪೀಡಿಸುತ್ತಿದ್ದ!

Last Updated 4 ಮೇ 2017, 19:51 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಕಂಪೆನಿಯೊಂದರ ಮಹಿಳಾ ಉದ್ಯೋಗಿ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಬೆತ್ತಲೆ ಫೋಟೊಗಳನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸುವಂತೆ ಪೀಡಿಸುತ್ತಿದ್ದ ಆರೋಪದ ಮೇಲೆ ಹೋಟೆಲ್‌ ನೌಕರ ಕುಮಾರ್ ಗೌರವ್ (28) ಎಂಬಾತನನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ 2ನೇ ಆರೋಪಿ ಸುಧಾ ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಅವರು ಮನೆ ಖಾಲಿ ಮಾಡಿದ್ದು, ಮೊಬೈಲ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಗೆಳತಿ ಮನೆಯಲ್ಲಿ ಅತ್ಯಾಚಾರ: ‘ನಾನು ಹಾಗೂ ಸುಧಾ ಮೂರ್ನಾಲ್ಕು ವರ್ಷಗಳ ಸ್ನೇಹಿತೆಯರು. ಶೇಷಾದ್ರಿಪುರದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್‌ನನ್ನು ಇದೇ ಫೆಬ್ರುವರಿಯಲ್ಲಿ ಆಕೆಯೇ ಪರಿಚಯ ಮಾಡಿಸಿದ್ದಳು. ಮಾರ್ಚ್ 1ರಂದು ನಾನು ಬನಶಂಕರಿ 2ನೇ ಹಂತದ ಸಾರೇಬಂಡೆಪಾಳ್ಯದಲ್ಲಿರುವ ಆಕೆಯ ಮನೆಗೆ ಹೋಗಿದ್ದೆ. ಅಲ್ಲಿಗೆ ಕುಮಾರ್ ಸಹ ಬಂದಿದ್ದ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಗೆಳತಿ ಮನೆಯಲ್ಲಿ ಊಟ ಮಾಡಿ, ತಂಪು ಪಾನೀಯ ಕುಡಿದೆ. ಅದರಲ್ಲಿ ಮತ್ತು ಬರುವ ಪುಡಿ ಬೆರೆಸಿರುವ ಸಂಗತಿ ನನಗೆ ಗೊತ್ತಿರಲಿಲ್ಲ. ಸ್ವಲ್ಪ ಸಮಯದಲ್ಲೇ ಪ್ರಜ್ಞೆ ಕಳೆದುಕೊಂಡ ನನ್ನ ಮೇಲೆ ಕುಮಾರ್ ಅತ್ಯಾಚಾರ ಎಸಗಿದ್ದ. ಅಲ್ಲದೆ, ನಾನು ಅರೆನಗ್ನ ಸ್ಥಿತಿಯಲ್ಲಿದ್ದಾಗ ಮೊಬೈಲ್‌ನಲ್ಲಿ ಫೋಟೊಗಳನ್ನು ತೆಗೆದುಕೊಂಡಿದ್ದ.’
‘ದೂರು ಕೊಟ್ಟರೆ, ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಹಾಗೂ  ಸ್ನೇಹಿತರಿಗೂ ವಾಟ್ಸ್‌ಆ್ಯಪ್ ಮೂಲಕ ಕಳುಹಿಸುವುದಾಗಿ ಇಬ್ಬರೂ ಬೆದರಿಸುತ್ತಿದ್ದರು. ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ, ಪದೇ ಪದೇ ಖರ್ಚಿಗೆ ಹಣ ಪಡೆಯುತ್ತಿದ್ದರು.’

‘ಈ ನಡುವೆ ತನ್ನ ಬೆತ್ತಲೆ ಫೋಟೊಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸುತ್ತಿದ್ದ ಕುಮಾರ್, ನಾನು ನಗ್ನ ಸ್ಥಿತಿಯಲ್ಲಿರುವ ಫೋಟೊ ತೆಗೆದು ಕಳುಹಿಸುವಂತೆ ಪೀಡಿಸಲು ಆರಂಭಿಸಿದ್ದ.  ಕಿರುಕುಳ ಹೆಚ್ಚಾಗಿದ್ದರಿಂದ ಪೋಷಕರಿಗೆ ವಿಷಯ ತಿಳಿಸುವುದಾಗಿ ಹೇಳಿದ್ದೆ. ಆಗ, ‘ಇನ್ನು ಮುಂದೆ ತೊಂದರೆ ಕೊಡುವುದಿಲ್ಲ. ಲಾಡ್ಜ್‌ಗೆ ಬಾ, ಮಾತನಾಡೋಣ’ ಎಂದಿದ್ದ. ಅಲ್ಲಿಗೆ ಹೋದಾಗ ಕುತ್ತಿಗೆ ಹಿಸುಕಿ ಕೊಲ್ಲಲು ಯತ್ನಿಸಿದ್ದ’ ಎಂದು ಸಂತ್ರಸ್ತೆ ದೂರಿದ್ದಾರೆ.

₹  50 ಸಾವಿರ ಕೇಳಿದಳು: ‘ಕುಮಾರ್‌ನ ಮೊಬೈಲ್‌ನಲ್ಲಿರುವ ನನ್ನ ಫೋಟೊಗಳನ್ನು ಆತನಿಗೆ ಗೊತ್ತಾಗದಂತೆ ಅಳಿಸಿ ಹಾಕುವುದಾಗಿ ಸುಧಾ ಹೇಳಿದ್ದಳು. ಈ ಕೆಲಸಕ್ಕೆ ಆಕೆ ₹ 50 ಸಾವಿರ ಕೇಳಿದ್ದಳು’ ಎಂದು ಯುವತಿ ಆರೋಪಿಸಿದ್ದಾರೆ.

‘ಏ.25ರ ಸಂಜೆ 6 ಗಂಟೆ ಸುಮಾರಿಗೆ ಕುಮಾರ್‌ನ ಹೋಟೆಲ್‌ ಬಳಿ ಹೋಗಿ ಫೋಟೊಗಳನ್ನು ಅಳಿಸುವಂತೆ ಅಂಗಲಾಚಿದ್ದೆ. ‘₹ 50 ಸಾವಿರ ಹೊಂದಿಸಿದ್ದೀಯಾ’ ಎಂದು ಆತ ಕೇಳಿದ. ಸ್ವಲ್ಪ ಕಾಲಾವಕಾಶ ಬೇಕೆಂದಾಗ ಜಗಳ ಪ್ರಾರಂಭಿಸಿದ. ನನ್ನ ತಲೆಗೆ ಗುದ್ದಿ, ಕಪಾಳಕ್ಕೆ ಹೊಡೆದ. ಅಲ್ಲದೆ, ಹೋಟೆಲ್‌ ಹಿಂಭಾಗಕ್ಕೆ ಎಳೆದೊಯ್ದು ಕುತ್ತಿಗೆ ಹಿಸುಕಿದ. ಹೇಗೋ ಆತನಿಂದ ತಪ್ಪಿಸಿಕೊಂಡು ಬಂದೆ’ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ಗೆಳೆಯನ ಮನೆಯಲ್ಲಿದ್ದ
‘ಅತ್ಯಾಚಾರ (ಐಪಿಸಿ 376), ಕೊಲೆಯತ್ನ (307),  ಅಪರಾಧ ಕೃತ್ಯ ಎಸಗಲು ವಿಷಕಾರಿ ಪದಾರ್ಥ ತಿನಿಸುವುದು (ಐಪಿಸಿ 328) ಹಾಗೂ ಹಲ್ಲೆ ನಡೆಸಿ, ಮಹಿಳೆ ಗೌರವಕ್ಕೆ ಧಕ್ಕೆ ತಂದ (323, 354)  ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ.

ದೂರು ದಾಖಲಾದ ನಂತರ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ, ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವಿನಿಂದ ಗೆಳೆಯನ ಮನೆಯಲ್ಲಿ ಸಿಕ್ಕಿ ಬಿದ್ದ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT