ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷರ ನಡೆಗೆ ಸದಸ್ಯರ ಅಸಮಾಧಾನ

ತಾಲ್ಲೂಕು ಪಂಚಾಯಿತಿ ಸಭೆ ಬಹಿಷ್ಕಾರಕ್ಕೆ ಮುಂದಾದ ಸದಸ್ಯರು
Last Updated 6 ಮೇ 2017, 8:38 IST
ಅಕ್ಷರ ಗಾತ್ರ

ರಾಮನಗರ: ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಣಯಗಳೇ ಬದಲಾವಣೆ ಆದರೆ ಸಾಮಾನ್ಯ ಸಭೆಯನ್ನು ಏಕೆ ನಡೆಸಬೇಕು ಎಂದು ಪ್ರಶ್ನಿಸಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ವಿರುದ್ಧ ಸದಸ್ಯರು ಹರಿಹಾಯ್ದು ಸಭೆ ಬಹಿಷ್ಕಾರಕ್ಕೆ ಮುಂದಾದ ಘಟನೆ ಶುಕ್ರವಾರ ನಡೆಯಿತು.

ನಗರದ ಮಿನಿ ವಿಧಾನಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ದಾಸಪ್ಪ, ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಸದಸ್ಯ ಗಾಣಕಲ್ ನಟರಾಜ್‌ ಮಾತನಾಡಿ ‘ಹಿಂದಿನ ಸಭೆಯಲ್ಲಿ ನಡೆದ ವಿಷಯ ನಡಾವಳಿಯಲ್ಲಿ ದಾಖಲಿಸದೆ ಸದಸ್ಯರ ಗಮನಕ್ಕೆ ತರದೆ ₹4 ಲಕ್ಷವನ್ನು ಅಭಿವೃದ್ಧಿಗಾಗಿ ಬಳಸಲಾಗಿದೆ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಕಳೆದ ಫೆಬ್ರವರಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಚೇರಿ ಉಪಯೋಗಕ್ಕಾಗಿ ಲಿಂಕ್ ಡಾಂಕ್ಯುಮೆಂಟ್ ಅನುದಾನದಲ್ಲಿ 4 ಲಕ್ಷವನ್ನು ವಾಹನ ಖರೀದಿಗೆ ಬಳಸಲು ಸಭೆ ನಿರ್ಣಯಿಸಿತ್ತು. ಆದರೆ ಆ ಅನುದಾನವನ್ನು ವಾಹನ ಖರೀದಿಗೆ ಬಳಸಿಲ್ಲ.

ಯಾರ ಸದಸ್ಯರ ಗಮನಕ್ಕೂ ತರದೆ ಏಕಾಏಕಿ ದೇವೇಗೌಡ ವಾಣಿಜ್ಯ ಸಂಕೀರ್ಣದ ಉಳಿಕೆ ಕಾಮಗಾರಿಗೆ ₹2 ಲಕ್ಷ, ಕೂಟಗಲ್ ಹೋಬಳಿ ಹುಣಸೇದೊಡ್ಡಿ ಮೊರಾರ್ಜಿ ದೇಸಾಯಿ ಶಾಲೆ ಶುದ್ಧ ನೀರಿನ ಆರ್.ಒ ಅಳವಡಿಸುವ ಕಾಮಗಾರಿಗೆ ₹1 ಲಕ್ಷ, ಬಾಳಲಿಂಗೇಗೌಡನದೊಡ್ಡಿ ಗ್ರಾಮದ ಕಾಂಕ್ರೀಟ್ ಚರಂಡಿ ಕಾಮಗಾರಿಗೆ ₹1 ಲಕ್ಷ ಬಳಕೆ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಅಧಿಕಾರಿಗಳ ವಿರುದ್ಧ ಅಸಮಾಧಾನ: ಸಾಮಾನ್ಯ ಸಭೆಯಲ್ಲಿ ಎಲ್ಲಾ ವಿಚಾರಗಳಿಗೂ ಅನುಮೋದನೆ ಸಿಗುವುದಿಲ್ಲ. ಅನುಮೋದನೆ ಸಿಗದ ಯೋಜನೆಗಳಿಗೆಲ್ಲಾ ಸದಸ್ಯರ ಒಪ್ಪಿಗೆ ದೊರೆತಿದೆ ಎಂದು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಸುಳ್ಳು ವರದಿ ಸಿದ್ಧ ಪಡಿಸಿ ಕೊಡುತ್ತಿದ್ದಾರೆ.

ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹಾದೇವಯ್ಯ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ‘ನಮ್ಮನ್ನು ಕರೆದು ನೀವು ತೀರ್ಮಾನ ತೆಗೆದುಕೊಳ್ಳಬೇಕು. ಎಲ್ಲರನ್ನು ಸಮಾನ ದೃಷ್ಟಿಕೋನದಲ್ಲಿ ನೋಡಬೇಕು. ಸರ್ವಾಧಿಕಾರಿ ಧೋರಣೆ ಅನುಸರಿಸುವುದನ್ನು ಮೊದಲು ಬಿಡಿ’ ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ. ಮಹಾದೇವಯ್ಯ ಮಾತನಾಡಿ ‘ಹಿಂದಿನ ಸಭೆಯಲ್ಲಿ ನಿರ್ಣಯಿಸಿದಂತೆ ವಾಹನ ಖರೀದಿಗೆ ಸರ್ಕಾರದ ಅನುಮತಿ ಸಿಗಲಿಲ್ಲ. ಇದರಿಂದ ಅನುದಾನ ಮಾರ್ಚ್ ತಿಂಗಳ ಅಂತ್ಯದಲ್ಲಿ ಸರ್ಕಾರಕ್ಕೆ ವಾಪಾಸ್ ಹೋಗುತ್ತದೆ ಎಂಬ ದೃಷ್ಟಿಯಿಂದ ಈ ₹4 ಲಕ್ಷ ಅನುದಾನ ಅಭಿವೃದ್ಧಿ ಕೆಲಸಗಳಿಗೆ ಬಳಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಲಹೆಯಂತೆ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.

ಅಧ್ಯಕ್ಷ ಮಹದೇವಯ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಅಸಮಾಧಾನಗೊಂಡ ನಟರಾಜ್ ಸೇರಿದಂತೆ ಎಲ್ಲ ಸದಸ್ಯರನ್ನು ಮನವೊಲಿಸಿದ ನಂತರ ಸಭೆ ಎಂದಿನಂತೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT