ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಾಮಿಕ ‘ಪಯಣಿಗರು’

Last Updated 6 ಮೇ 2017, 19:30 IST
ಅಕ್ಷರ ಗಾತ್ರ

ನಾಲ್ಕು ಚಕ್ರಗಳ ವಾಹನದ ಒಡೆಯನಾಗಬೇಕೆಂಬ ನನ್ನ ಕನಸು, ಸೇವಾನಿವೃತ್ತಿಯ ನಂತರ ಸೆಕೆಂಡ್‌ ಹ್ಯಾಂಡ್‌ ಫಿಯಟ್‌ ಕಾರನ್ನು ಕೊಳ್ಳುವ ಮೂಲಕ ನನಸಾಯಿತು. ಆದರೆ, ಅದು ನನ್ನೊಡನೆ ಮುನಿಸಿಕೊಂಡು ಪದೇ ಪದೇ ಎಲ್ಲೆಂದರಲ್ಲಿ ನಿಂತುಬಿಡುತ್ತಿತ್ತು.

ಆ ದಿವಸ ನಾವು ಚಿತ್ರದುರ್ಗದ ಮಾರ್ಗವಾಗಿ ಭರಮಸಾಗರಕ್ಕೆ ಬೀಗರ ಮನೆಗೆ ಹೋಗುವದಿತ್ತು. ಇನ್ನೇನು ಭರಮಸಾಗರ ತಲುಪಲು 8 ಕಿ.ಮೀ. ದೂರವಿದೆ ಎನ್ನುಷ್ಟರಲ್ಲಿ ಕಾರು ನಿಂತುಬಿಟ್ಟಿತು. ನಮ್ಮ ಕಾರಿನ ಚಾಲಕನು ಹೊಸಬ. ಅವನಿಗೆ ಕಾರಿನ ಸಮಸ್ಯೆಗಳ ಬಗ್ಗೆ ಏನೂ ಗೊತ್ತಾಗಲಿಲ್ಲ. ಆಗಲೇ ಕತ್ತಲಾವರಿಸುತ್ತಲಿತ್ತು. ನನ್ನ ಜೊತೆ ನನ್ನ ಅರ್ಧಾಂಗಿ ಮತ್ತು ಮಗಳು ಇದ್ದರು. ಅವರ ಮೈ ಮೇಲೆ ಸಾಕಷ್ಟು ಆಭರಣಗಳಿದ್ದವು. ನನ್ನ ಬಳಿ ಹಣವಿತ್ತು. ನಮಗೆ ಸ್ವಾಭಾವಿಕವಾಗಿ ಭಯವಾಗತೊಡಗಿತು.

ಕಾರಿನ ತುರ್ತು ದೀಪಗಳನ್ನು ಬೆಳಗಿಸಿ, ಬರುವ ವಾಹನಗಳಿಗೆ ಸಹಾಯಕ್ಕಾಗಿ ಕೈ ಮಾಡಿದೆವು. ಆ ಹೆದ್ದಾರಿಯ ಮೇಲೆ ವಾಹನಗಳು ವೇಗದಿಂದಲೇ ಓಡುತ್ತಿದ್ದವು. ಅವುಗಳಲ್ಲಿ ಒಂದೂ ನಿಲ್ಲಲಿಲ್ಲ.

ಒಂದು ಟ್ರ್ಯಾಕ್ಸ್ ವಾಹನವು ನಮಗಿಂತ ಸ್ವಲ್ಪ ಮುಂದೆ ಹೋಗಿ ನಿಂತಿತು. ಅದರೊಳಗಿಂದ ಇಬ್ಬರು ಇಳಿದು ಬಂದು ‘ಏನಾಯಿತು’ ಎಂದು ಕೇಳಿದರು. ‘ನಮ್ಮ ಕಾರು ನಿಂತು ಬಿಟ್ಟಿದೆ, ಸ್ಟಾರ್ಟ್‌ ಆಗುತ್ತಿಲ್ಲ’ ಎಂದೆ. ಅವರಲ್ಲೊಬ್ಬರು ಕಾರಿನಲ್ಲಿ ಕುಳಿತು ಸ್ಟಾರ್ಟ್‌ ಮಾಡಲು ನೋಡಿದರು.

ಇನ್ನೊಬ್ಬರು ಬ್ಯಾನೆಟ್‌ ತರೆದು ನೋಡಿದರು. ‘ಬ್ಯಾಟರಿ ಚಾರ್ಜ್‌ ಹೋಗಿದೆ’ ಎಂದರು. ಆಮೇಲೆ ತಮ್ಮ ಕಾರಿಗೆ ಹೋಗಿ ಹಗ್ಗವನ್ನು ತಂದು ಎರಡೂ ವಾಹನಗಳಿಗೆ ಸಂಪರ್ಕ ಕಲ್ಪಿಸಿ – ‘ನಾವು ಮುಂದೆ ಮುಂದೆ ಹೋಗುತ್ತೇವೆ, ನೀವು ನಮ್ಮನ್ನು ಹಿಂಬಾಲಿಸಿ’ ಎಂದು ಕಾರು ಓಡಿಸಿದರು. ನಮ್ಮನ್ನು ಭರಮಸಾಗರದ ಬೀಗರ ಮನೆಯ ಮುಂದೆ ಬಿಟ್ಟು ‘ನಾಳೆ ಬೆಳಿಗ್ಗೆ ಬ್ಯಾಟರಿ ಚಾರ್ಜ್‌ ಮಾಡಿಸಿಕೊಳ್ಳಿ’ ಎಂದು ಹೇಳಿ ಹೊರಡಲನುವಾದರು. ನಾನು ನಮ್ಮ ಬೀಗರಿಗೆ ಅವರ ಉಪಕಾರವನ್ನು ವಿವರಿಸುತ್ತ, ‘ಬನ್ನಿ ಕಾಫಿ ಕುಡಿದು ಹೋಗಿ’ ಎಂದೆ. ‘ಬೇಡ, ಸಮಯವಿಲ್ಲ’ ಎಂದು ತಮ್ಮ ವಾಹನದ ಕಡೆಗೆ ಹೊರಟರು. ಹೆಸರು ಕೇಳಿದರೆ, ‘ಜೀವನದ ಪಯಣದಲ್ಲಿ ಎಲ್ಲಿಯೋ ಕೂಡುತ್ತೇವೆ, ಮತ್ತೆಲ್ಲಿಯೋ ಹೊರಡುತ್ತೇವೆ. ನಾವೆಲ್ಲ ಆ ಹೊತ್ತಿನ ಪಯಣಿಗರು ಮಾತ್ರ’ ಎಂದು ಹೊರಟೇಬಿಟ್ಟರು.
–ಡಾ. ಕೆ.ಬಿ. ಪವಾರ, ಶಿರಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT