ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದ ತಾರೆ ಜೋಷ್ನಾ

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ಮಲೇಷ್ಯಾ, ಹಾಂಕಾಂಗ್‌, ಚೀನಾದ ಆಟಗಾರರ ಪ್ರಾಬಲ್ಯ ಹೊಂದಿದ್ದ ಏಷ್ಯನ್ ವೈಯಕ್ತಿಕ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಭಾರತ ಮೊದಲ ಬಾರಿಗೆ ತನ್ನ ಛಾಪು ಮೂಡಿಸಿದೆ.

ಜೋಷ್ನಾ ಚಿಣ್ಣಪ್ಪ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಈ ಎತ್ತರದ ಸಾಧನೆ ಮಾಡಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಪ್ರಶಸ್ತಿ ಕೂಡ ಹೌದು.

ಈ ಚಾಂಪಿಯನ್‌ಷಿಪ್‌ನಲ್ಲಿ ಮಲೇಷ್ಯಾ ಎಷ್ಟರ ಮಟ್ಟಿಗೆ ಪ್ರಾಬಲ್ಯ ಹೊಂದಿದೆ ಎಂದರೆ ಮಹಿಳೆಯರ ವಿಭಾಗದಲ್ಲಿ ಬರೋಬ್ಬರಿ ಒಂಬತ್ತು ಬಾರಿ ಇಲ್ಲಿ ಪ್ರಶಸ್ತಿ ಗೆದ್ದಿದೆ.

ವಿಶೇಷ ಎಂದರೆ ಮಲೇಷ್ಯಾದ ಆಟಗಾರ್ತಿ ನಿಕೊಲ್ ಡೇವಿಡ್‌ ಒಬ್ಬರೇ ಒಟ್ಟು ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 1998ರಿಂದ 2011ರವರೆಗೂ ನಿಕೊಲ್ ಸತತವಾಗಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ಈ ನಡುವೆ 2013ರಲ್ಲಿ ಮಾತ್ರ ಹಾಂಕಾಂಗ್‌ನ ಅನ್ನಿಅವು ಚಾಂಪಿಯನ್ ಆಗಿದ್ದರು. ನಂತರ ಮತ್ತೆ 2015ರಲ್ಲಿ ನಿಕೊಲ್ ಪ್ರಾಬಲ್ಯ ಮೆರೆದಿದ್ದಾರೆ.

ಪುರುಷರ ವಿಭಾಗದಲ್ಲೂ ಮಲೇಷ್ಯಾ ಇದೇ ರೀತಿಯ ಪ್ರಾಬಲ್ಯ ಹೊಂದಿದೆ. ಈ ದೇಶದ ಒಂಗ್‌ಬೆಂಗ್‌ ಹೀ ಸತತ ನಾಲ್ಕು ವರ್ಷ ಪ್ರಶಸ್ತಿ ಜಯಿಸಿದ್ದಾರೆ. ಏಷ್ಯನ್ ವೈಯಕ್ತಿಕ ಚಾಂಪಿಯನ್‌ಷಿಪ್‌ಗೆ ಭಾರತ ಮೂರು ಬಾರಿ ಆತಿಥ್ಯ ವಹಿಸಿದೆ.

1990ರಲ್ಲಿ ಕೋಲ್ಕತ್ತದಲ್ಲಿ, 2010, 2017ರಲ್ಲಿ ಚೆನ್ನೈನಲ್ಲಿ ಟೂರ್ನಿಗಳು ನಡೆದಿವೆ. ಆದರೆ ಇಲ್ಲಿಯವರೆಗೂ ಭಾರತದ ಸಾಧನೆ ಅಷ್ಟಕಷ್ಟೇ ಎನಿಸಿತ್ತು.  2017ರಲ್ಲಿ ಭಾರತದ ಸ್ಕ್ವಾಷ್ ಕ್ರೀಡೆಯಲ್ಲಿ ಹಲವು ಪ್ರಥಮಗಳು ಘಟಿಸಿವೆ.



ಚೆನ್ನೈನಲ್ಲಿ ನಡೆದ ಟೂರ್ನಿಯಲ್ಲಿ ಪುರುಷರ ವಿಭಾಗದಲ್ಲಿ ಭಾರತ ರನ್ನರ್ ಅಪ್‌ ಸ್ಥಾನ ಪಡೆದಿರುವುದು ಕೂಡ ಇದೇ ಮೊದಲು. ಸೌರವ್ ಘೋಷಾಲ್ ಈ ಸಾಧನೆ ಮಾಡಿದ್ದಾರೆ. ಆದರೆ ಈ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಳ್ಳಲು ಮಾತ್ರ ಭಾರತಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಪ್ರಶಸ್ತಿ ಸುತ್ತಿನಲ್ಲಿ ಘೋಷಾಲ್ 11–5, 4–11, 8–11, 7–11ರಲ್ಲಿ ಹಾಂಕಾಂಗ್‌ನ ಮ್ಯಾಕ್ಸ್ ಲೀ ಎದುರು ಸೋಲು ಕಂಡರು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಮೊದಲ ಬಾರಿಗೆ ಭಾರತದ ಇಬ್ಬರು ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಇದು ಐತಿಹಾಸಿಕ ಕ್ಷಣ ಎನಿಸಿತ್ತು. ದೀಪಿಕಾ ಪಳ್ಳಿಕಲ್ ಪ್ರಶಸ್ತಿ ಸುತ್ತಿನಲ್ಲಿ ಸೋಲು ಕಂಡಿದ್ದರೂ ಭಾರತದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆದ ಮೊದಲ ಆಟಗಾರ್ತಿ ಎಂಬ ಗೌರವ ಅವರಿಗೆ ಸಿಕ್ಕಿದೆ. 1996ರಲ್ಲಿ ಜೋರ್ಡನ್‌ನಲ್ಲಿ ಟೂರ್ನಿ ನಡೆದಾಗ ಭಾರತದ ಮಿಶ್ರಾ ಗ್ರೆವೆಲ್ ರನ್ನರ್ ಅಪ್ ಆಗಿದ್ದರು.

ದೀಪಿಕಾ ಹಾಗೂ ಜೋಷ್ನಾ ಇಂಡಿಯನ್ ಸ್ಕ್ವಾಷ್ ಅಕಾಡೆಮಿಯಲ್ಲಿ ಒಟ್ಟಿಗೆ ಅಭ್ಯಾಸ ನಡೆಸುತ್ತಾರೆ. ಈ ಆಟಗಾರ್ತಿಯರು ಭಾರತದ ಸ್ಕ್ವಾಷ್ ನಕ್ಷೆಯಲ್ಲಿ ಹೊಳೆಯುವ ನಕ್ಷತ್ರಗಳು. ಈ ಜೋಡಿ ಡಬಲ್ಸ್ ವಿಭಾಗದಲ್ಲಿ ಸಾಕಷ್ಟು ಎತ್ತರದ ಸಾಧನೆ ಮಾಡಿದೆ. 2014ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಈ ಜೋಡಿ ಚಿನ್ನದ ಪದಕ ಎತ್ತಿಹಿಡಿದಿತ್ತು.

ಜೋಷ್ನಾ ಅವರ ತಂದೆ ಕೊಡಗಿನವರಾದರೂ ಅವರು ಹುಟ್ಟಿ ಬೆಳೆದದ್ದು ಚೆನ್ನೈನಲ್ಲಿಯೇ. ಸ್ಕ್ವಾಷ್ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅವರು 14ನೇ ಸ್ಥಾನದಲ್ಲಿದ್ದಾರೆ. ಈವರೆಗೂ ಒಟ್ಟು ಏಳು ಪ್ರಶಸ್ತಿಗಳು ಅವರ ಮುಡಿಸೇರಿವೆ.

‘ಏಷ್ಯನ್ ಪ್ರಶಸ್ತಿ ನನ್ನ ವೃತ್ತಿಜೀವನದ ಶ್ರೇಷ್ಠ ಕ್ಷಣ. ಇನ್ನೂ ಎತ್ತರದ ಸಾಧನೆಗೆ ಇದು ಸ್ಪೂರ್ತಿ’ ಎಂದು ಹೇಳಿರುವ ಜೋಷ್ನಾ ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಸೂಚನೆ ನೀಡಿದ್ದಾರೆ.

ಚೆನ್ನೈನಲ್ಲಿ ಪೈಪೋಟಿ
ಈ ಬಾರಿಯ 19ನೇ ಏಷ್ಯನ್ ಇಂಡಿವಿಜುವಲ್‌ ಸ್ಕ್ವಾಷ್ ಚಾಂಪಿಯನ್‌ಷಿಪ್ ಚೆನ್ನೈನಲ್ಲಿ ಏಪ್ರಿಲ್‌ 26ರಿಂದ 30ರವರೆಗೆ ನಡೆದಿದೆ. ಭಾರತದ ಜೋಷ್ನಾ ಹಾಗೂ ಘೋಷಾಲ್ ಎರಡನೇ ಶ್ರೇಯಾಂಕದ ಆಟಗಾರರಾಗಿ ಕಣಕ್ಕಿಳಿದಿದ್ದರು. ಸ್ಥಳೀಯ ಆಟಗಾರ ವೆಲಾವನ್‌ ಸೆಂಥಿಲ್‌ಕುಮಾರ್ ಕೂಡ ಇಲ್ಲಿ ಸ್ಪರ್ಧಿಸಿದ್ದರು. ಹರಿಂದರ್ ಪಾಲ್ ಸಂಧು ಹಾಗೂ ವಿಕ್ರಮ್ ಮಲ್ಹೋತ್ರ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಕಂಡು ಹೊರಬಿದ್ದಿದ್ದರು. ಮಹೇಶ್ ಮಂಗಾವ್ಕರ್‌ ಮೂರನೇ ಸುತ್ತಿನಲ್ಲೇ ಮುಗ್ಗರಿಸಿದ್ದರು.

ವೀಸಾ ಸಮಸ್ಯೆಯಿಂದಾಗಿ ಪಾಕಿಸ್ತಾನದ ಸ್ಪರ್ಧಿಗಳು ಟೂರ್ನಿಯಲ್ಲಿ ಭಾಗವಹಿಸಿರಲಿಲ್ಲ. ಹಾಂಕಾಂಗ್‌ನ ಆಟಗಾರ ಮ್ಯಾಕ್ಸ್‌ ಲೀ ಹಾಗೂ ಅನ್ನಿ ಅವ್ವು ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಅಗ್ರರ್‍ಯಾಂಕಿಂಗ್ ಹೊಂದಿದ್ದರು.

ಸೆಮಿಫೈನಲ್‌ನಲ್ಲಿ ಜೋಷ್ನಾ  ಹಾಂಕಾಂಗ್‌ನ ತೊಂಗ್‌ ಜಿ ವುಂಗ್ ಅವರನ್ನು ಮಣಿಸಿದ್ದರು. ದೀಪಿಕಾ ಅಗ್ರ ಶ್ರೇಯಾಂಕದ ಅನ್ನಿ ಅವ್ವು ಅವರಿಗೆ ಆಘಾತ ನೀಡಿದ್ದರು. 9ನೇ ಶ್ರೇಯಾಂಕ ಹೊಂದಿದ್ದ ಭಾರತದ ಸಚಿಕಾ ಇಂಗ್ಳೆ ಮೊದಲ ಸುತ್ತಿನಲ್ಲೇ ಸೋಲು ಕಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT