ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಚಿಗುರಿನ ನಿರೀಕ್ಷೆಯಲ್ಲಿ...

Last Updated 7 ಮೇ 2017, 19:30 IST
ಅಕ್ಷರ ಗಾತ್ರ

ರವತ್ತರ ದಶಕದಲ್ಲಿ ಮುಂಚೂಣಿ ಆಟಗಾರರಾದ ಎಂ. ರಾಜಗೋಪಾಲ್‌  ಮತ್ತು ವಿ.ಜೆ. ಪೀಟರ್‌ ಅವರು ಕನ್ನಡಿಗರ ಸಾಮರ್ಥ್ಯವನ್ನು ಹಾಕಿ ಲೋಕಕ್ಕೆ ಸಾರಿ ಹೇಳಿದ್ದರು.

1952ರ ಹೆಲ್ಸಿಂಕಿ ಒಲಿಂಪಿಕ್ಸ್‌ನಲ್ಲಿ ಭಾರತ ಚಿನ್ನ ಗೆದ್ದಾಗ ರಾಜಗೋಪಾಲ್‌ ತಂಡದ ಭಾಗವಾಗಿದ್ದರು. 1964 ಟೋಕಿಯೊ ಒಲಿಂಪಿಕ್ಸ್‌ನಲ್ಲಿ  ಚಿನ್ನ ಮತ್ತು 1968ರ ಮೆಕ್ಸಿಕೊ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದ ತಂಡಗಳಲ್ಲಿ  ಪೀಟರ್‌ ಇದ್ದರು ಎಂಬುದು ಹೆಮ್ಮೆಯ ವಿಷಯ.

ಆ ನಂತರದ ಕಾಲಘಟ್ಟದಲ್ಲಿ ಮ್ಯಾನುಯೆಲ್‌ ಫ್ರೆಡ್ರಿಕ್ಸ್‌, ಬಿ.ಕೆ. ಸುಬ್ರಮಣಿ, ಜೂಡ್‌ ಫೆಲಿಕ್ಸ್‌, ಆಶಿಶ್‌ ಬಲ್ಲಾಳ್‌, ಎ.ಬಿ. ಸುಬ್ಬಯ್ಯ, ಇಗ್ನೇಶ್‌ ಟರ್ಕಿ, ವಿಕ್ರಂ ಕಾಂತ್‌, ಸಂದೀಪ್‌ ಮೈಕಲ್‌, ಬಿ.ಪಿ. ಗೋವಿಂದ, ಎಂ.ಪಿ. ಗಣೇಶ್‌, ಅರ್ಜುನ್‌ ಹಾಲಪ್ಪ, ವಿ.ಆರ್‌. ರಘುನಾಥ್‌, ಎಸ್‌. ವಿ. ಸುನಿಲ್‌ ಹೀಗೆ ಅನೇಕ ಸಾಧಕರು ಒಲಿಂಪಿಕ್ಸ್‌, ವಿಶ್ವಕಪ್‌, ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಗಮನಾರ್ಹ ಆಟ ಆಡಿ ಹಾಕಿ ರಂಗದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.

ಮೊದಲೆಲ್ಲಾ ಭಾರತದ ಸಬ್‌ ಜೂನಿಯರ್‌, ಜೂನಿಯರ್‌ ಮತ್ತು ಸೀನಿಯರ್‌ ತಂಡಗಳಲ್ಲಿ ರಾಜ್ಯದ ಆಟಗಾರರೇ ಪ್ರಜ್ವಲಿಸುತ್ತಿದ್ದರು. ಈ ಹೊಳಪು ದಿನದಿಂದ ದಿನಕ್ಕೆ ಮಸುಕಾಗುತ್ತಿದೆಯೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.

ಈಗಿನ ರಾಷ್ಟ್ರೀಯ ಸಬ್‌ಜೂನಿಯರ್‌ ಮತ್ತು ಜೂನಿಯರ್‌ ತಂಡಗಳಲ್ಲಿ ಕನ್ನಡಿಗರೇ ಇಲ್ಲ ಎಂಬುದು ಇದಕ್ಕೆ ಪುಷ್ಟಿ ನೀಡುವಂತಿದೆ. ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಸಬ್‌ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲೂ ರಾಜ್ಯ ತಂಡಗಳು ನಿರೀಕ್ಷಿಸಿದ ಮಟ್ಟಿಗೆ ಆಡಲಿಲ್ಲ.

ಹಾಗಂತ ನಮ್ಮಲ್ಲಿ ಪ್ರತಿಭೆಗಳಿಗೇನೂ ಕೊರತೆ ಇಲ್ಲ. ಆದರೆ ಅವರಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಚೆನ್ನಾಗಿ ಆಡುವವರನ್ನು ಗುರುತಿಸುವ ಕೆಲಸದಲ್ಲಿ ನಾವು ಹಿಂದೆ ಬಿದ್ದಿದ್ದೇವೆಯೇ ಎಂಬುದು ಈಗಿನ ಪ್ರಶ್ನೆ. 

ಅಕಾಡೆಮಿಗಳ ಕೊರತೆ
ಮುಂಬೈ, ಪಂಜಾಬ್‌, ಪಶ್ಚಿಮ ಬಂಗಾಳ, ರಾಜಸ್ತಾನ ಹೀಗೆ ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಹಾಕಿಗೆ ಸಂಬಂಧಿಸಿದಂತೆ ಹೆಚ್ಚಿನ ಅಕಾಡೆಮಿಗಳು ಮತ್ತು ಕ್ರೀಡಾ ವಸತಿ ನಿಲಯಗಳು ಇಲ್ಲ.

ಹುಬ್ಬಳ್ಳಿಯಲ್ಲಿ ಅಕಾಡೆಮಿ ಆರಂಭಿಸಬೇಕೆಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಆದರೆ ಈ ಕುರಿತು ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕ್ರೀಡಾ ಇಲಾಖೆಯೂ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಹೀಗಾಗಿ ಈ ಭಾಗದ ಮಕ್ಕಳು ಬೆಂಗಳೂರಿಗೆ ಬಂದು ತರಬೇತಿ ಪಡೆಯುವ ಅನಿವಾರ್ಯತೆ  ನಿರ್ಮಾಣವಾಗಿದೆ.

‘ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಕ್ರೀಡೆಗಳಿಗೆ ಸಂಬಂಧಿಸಿದಂತೆ 12 ಅಕಾಡೆಮಿಗಳನ್ನು ಶುರು ಮಾಡುವ ಯೋಜನೆ ಇದೆ. ಈ ಪೈಕಿ ಆರು ಅಕಾಡೆಮಿಗಳಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುಮೋದನೆ ಸಿಕ್ಕಿದೆ. ಹಾಕಿ ಅಕಾಡೆಮಿಯು ದಕ್ಷಿಣ ಕರ್ನಾಟಕದಲ್ಲೇ ಇದೆ.

ಒಂದು ವೇಳೆ ಒತ್ತಾಯಕ್ಕೆ ಮಣಿದು ಉತ್ತರ ಕರ್ನಾಟಕದಲ್ಲಿ ಅಕಾಡೆಮಿ ಅಥವಾ ವಸತಿ ಶಾಲೆ ಆರಂಭಿಸಿದರೂ ನುರಿತ ಕೋಚ್‌ಗಳು ಮತ್ತು ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವುದು ಕಷ್ಟವಾಗಬಹುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಅನುಪಮ್‌ ಅಗರವಾಲ್‌ ಹೇಳುತ್ತಾರೆ.

‘ಎಲ್ಲಿ ಯಾವ ಕ್ರೀಡೆ ಹೆಚ್ಚು ಜನ ಮನ್ನಣೆ ಗಳಿಸಿದೆ ಎಂಬುದನ್ನು ಗಮನಿಸಿ ಅಂತಹ ಪ್ರದೇಶಗಳಲ್ಲಿ  ನಾವು ಆ ಕ್ರೀಡೆಗೆಂದೇ ನಿರ್ದಿಷ್ಟ ಅಕಾಡೆಮಿಗಳನ್ನು ಸ್ಥಾಪಿಸಿದ್ದೇವೆ. ಕೊಡಗಿನಲ್ಲಿ ಮೊದಲಿನಿಂದಲೂ ಹಾಕಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಬಿಜಾಪುರದಲ್ಲಿ ಸೈಕ್ಲಿಂಗ್‌  ಜನಪ್ರಿಯವಾಗಿದೆ’ ಎಂದೂ ಅವರು ವಿವರಿಸುತ್ತಾರೆ.

ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು ಅತ್ಯಾಧುನಿಕ ಆಸ್ಟ್ರೋ ಟರ್ಫ್‌ ಅಂಗಳಗಳಲ್ಲಿ ನಡೆಯುತ್ತಿದ್ದರೂ ನಾವು ಆಧುನಿಕತೆಗೆ ದೊಡ್ಡ ಮಟ್ಟದಲ್ಲಿ ತೆರೆದುಕೊಂಡಿಲ್ಲ. ಉತ್ತರ ಕರ್ನಾಟಕದ ಬಹುತೇಕ ಕಡೆ ಹುಲ್ಲಿನಂಕಣ ಮತ್ತು ಗಟ್ಟಿ ಮಣ್ಣಿನಂಕಣಗಳಲ್ಲಿ ಹಾಕಿ ಆಡಲಾಗುತ್ತದೆ. ಬೆಂಗಳೂರು, ಮೈಸೂರು, ಕೊಡಗಿನಲ್ಲಿ ಟರ್ಫ್‌ ಸೌಲಭ್ಯ ಇವೆ. 

ಉತ್ತರ ಕರ್ನಾಟಕದಿಂದ ಬರುವ ಮಕ್ಕಳೂ ಸೇರಿದಂತೆ ಬೆಂಗಳೂರಿನಲ್ಲಿರುವ ಮೂರೂ ಹಾಕಿ ಸಂಸ್ಥೆಗಳ ಆಟಗಾರರೂ  ಬೆಂಗಳೂರಿನ ಕೆ.ಎಂ.ಕಾರ್ಯಪ್ಪ ಕ್ರೀಡಾಂಗಣದಲ್ಲೇ  ಆಟದ ಪಾಠಗಳನ್ನು ಕಲಿಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ಕ್ರೀಡೆಯ ಬೆಳವಣಿಗೆಯ ವೇಗಕ್ಕೆ ತಡೆಯಾಗಿ ಪರಿಣಮಿಸಿದೆ. 

‘ಉತ್ತರ ಕರ್ನಾಟಕದಲ್ಲಿ ಹಾಕಿ ತರಬೇತಿಗೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಹುಬ್ಬಳ್ಳಿ, ಗದಗ, ಬೆಳಗಾವಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಬೆಂಗಳೂರಿಗೆ ಬರುತ್ತಾರೆ. ಇಲ್ಲಿ ಇರುವ ಒಂದೇ ಟರ್ಫ್‌ ಅಂಗಳದಲ್ಲಿ ಎಲ್ಲರೂ ತಾಲೀಮು ನಡೆಸಬೇಕು. ಹೀಗಾಗಿ  ಒಂದೊಂದು ತಂಡಕ್ಕೆ ಇಂತಿಷ್ಟು ಸಮಯ ನಿಗದಿ ಮಾಡಲಾಗಿದ್ದು ಆ ಅವಧಿಯಲ್ಲೇ ಅವರು ಅಭ್ಯಾಸ ನಡೆಸಬೇಕಿದೆ. ಇನ್ನೊಂದು ಟರ್ಫ್‌ ಅಂಗಳ ನಿರ್ಮಿಸಿದರೆ ಈ ಪರಿಸ್ಥಿತಿ ಸುಧಾರಿಸಬಹುದು’ ಎಂದು ಹಾಕಿ ಬೆಂಗಳೂರು ಕಾರ್ಯದರ್ಶಿ ಕೆ. ಕೃಷ್ಣಮೂರ್ತಿ ಅಭಿಪ್ರಾಯಪಡುತ್ತಾರೆ.

ಹಾಕಿ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಿ ಬದುಕು ಕಟ್ಟಿಕೊಂಡ ಹಲವು ನಿದರ್ಶನಗಳು ಇವೆ. ಹೀಗಿದ್ದರೂ ಬೆಂಗಳೂರಿನಂತಹ ನಗರದಲ್ಲೇ ಪೋಷಕರು ತಮ್ಮ ಮಕ್ಕಳಿಗೆ ಈ ಆಟ ಕಲಿಸಲು ಹಿಂದೇಟು ಹಾಕುತ್ತಿದ್ದಾರೆ. ಪೋಷಕರ ಈ ಮನೋಧೋರಣೆ ಕೂಡ ಪ್ರತಿಭಾನ್ವೇಷಣೆಗೆ ತೊಡಕಾಗಿ ಪರಿಣಮಿಸಿದೆ.

ಬೆಂಗಳೂರಿನ ಹಾಕಿ ಸಂಸ್ಥೆ  ಪ್ರತಿ ವರ್ಷವೂ ಅಂತರ ಶಾಲೆ ಮತ್ತು ಕಾಲೇಜು ಟೂರ್ನಿಗಳನ್ನು ನಡೆಸುತ್ತಿದೆ. ಇದರ ಜೊತೆಗೆ ಸೂಪರ್‌ ಡಿವಿಷನ್‌, ಎ, ಬಿ ಮತ್ತು ಸಿ ಡಿವಿಷನ್‌ ಹಾಕಿ ಲೀಗ್‌ಗಳನ್ನೂ ಆಯೋಜಿಸುತ್ತಲೇ ಬರುತ್ತಿದೆ. ಈ ಲೀಗ್‌ಗಳಲ್ಲಿ ಮಿಂಚಿದ ಆಟ ಗಾರರು ದೇಶಕ್ಕಾಗಿ ಆಡುವ ಅವಕಾಶ ಸಿಗುವ ಹೊತ್ತಿಗೆ ಈ ಕ್ರೀಡೆಯಿಂದ ವಿಮುಖರಾಗುತ್ತಿದ್ದಾರೆ.

‘ಶಾಲಾ ಹಂತದಿಂದಲೇ ಮಕ್ಕಳಲ್ಲಿ ಹಾಕಿಯ ಬಗ್ಗೆ ಆಸಕ್ತಿ ಮೂಡಿಸಲು ನಮ್ಮ ಸಂಸ್ಥೆ ಉಚಿತ ತರಬೇತಿ ಶಿಬಿರ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ. ಅದರೆ ಈ ಯೋಜನೆಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಶಿಬಿರಗಳಿಗೆ ಹೆಸರು ನೋಂದಾಯಿಸುವ ಮಕ್ಕಳು ಕೊನೆ ಕ್ಷಣದಲ್ಲಿ ಹಿಂದೆ ಸರಿಯುತ್ತಾರೆ. ಶಾಲಾ ದಿನಗಳಲ್ಲಿದ್ದಾಗ ಹಾಕಿ ಆಡುವ ಮಕ್ಕಳು ರಜೆಗೆ ಹೋದಾಗ ಬೇರೆ ಆಟಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದರಿಂದ ನಿರಂತರ ಕಲಿಕಾ ಪ್ರಕ್ರಿಯೆಗೆ ಅಡ್ಡಿಯಾಗುತ್ತಿದೆ’ ಎಂದು ಕೃಷ್ಣಮೂರ್ತಿ ಹೇಳುತ್ತಾರೆ.

ಹೋದ ವಾರ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯದಿಂದ ಮೂರು ತಂಡಗಳು ಭಾಗವಹಿಸಿದ್ದವು. ಹಾಕಿ ಬೆಂಗಳೂರು, ಹಾಕಿ ಕರ್ನಾಟಕ ಮತ್ತು ಹಾಕಿ ಕೂರ್ಗ್‌ ಪೈಕಿ ಯಾವ ತಂಡಕ್ಕೂ ಪ್ರಶಸ್ತಿ ಸುತ್ತು ತಲುಪಲಾಗಲಿಲ್ಲ.

ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಒಟ್ಟು 43 ತಂಡಗಳ ಪೈಕಿ ಮುಂಬೈ, ಲೂಧಿಯಾನದ ನಾಮಧಾರಿ ಇಲೆವನ್‌, ಹಾಕಿ ರಾಜಸ್ತಾನ ಮತ್ತು ಬಂಗಾಳ ಹಾಕಿ ಸಂಸ್ಥೆಗಳು ಗಮನ ಸೆಳೆದವು. 

ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ
ರಾಜ್ಯದ ಅನೇಕ ಜಿಲ್ಲೆಗಳಲ್ಲೂ ಹಾಕಿ ಕ್ರೀಡೆಯ ಕಂಪು ಪಸರಿಸಿದೆ. ಅದರಲ್ಲೂ ಬಹುಮುಖ್ಯವಾಗಿ ಉತ್ತರ ಕರ್ನಾಟಕದಲ್ಲಿ ಹಾಕಿಯ ಬೇರುಗಳು ನಿಧಾನವಾಗಿ ಆಳಕ್ಕಿಳಿಯುತ್ತಿವೆ. ಗದಗ, ಬೆಳಗಾವಿ, ಹುಬ್ಬಳ್ಳಿ, ಬಾಗಲಕೋಟೆ ಮತ್ತು ಧಾರವಾಡ ಭಾಗಗಳಿಂದಲೂ ಹೊಸ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬರುತ್ತಿವೆ. ಆದರೆ ಅಗತ್ಯ ಮಾರ್ಗದರ್ಶನ ಮತ್ತು ಮೂಲ ಸೌಕರ್ಯಗಳ ಕೊರತೆ ಯಿಂದಾಗಿ ಇವರೆಲ್ಲಾ ಅರಳುವ ಮುನ್ನವೇ ಮುದುಡಿ ಹೋಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT