ಸ್ವಾರ್ಥ ಒಳ್ಳೆಯದೋ? ಕೆಟ್ಟದ್ದೋ?

ಸ್ವಾರ್ಥದ ಮೇಲೆ ಹತೋಟಿ ತಪ್ಪಿದರೆ  ಆಗ ಸಂತೋಷದಿಂದ ವಂಚಿತರಾಗಬೇಕಾಗುತ್ತದೆ. ಎಷ್ಟೇ ಪ್ರಾಪಂಚಿಕ, ಭೌತಿಕ ವಸ್ತುಗಳಿದ್ದರೂ ನಮ್ಮಲ್ಲಿ ಸ್ವಾರ್ಥ ಹೆಚ್ಚಾದಾಗ ಆನಂದ, ನೆಮ್ಮದಿ, ತೃಪ್ತಿ ದೂರವಾಗುತ್ತದೆ.

ಸ್ವಾರ್ಥ ಒಳ್ಳೆಯದೋ? ಕೆಟ್ಟದ್ದೋ?

‘ಸ್ವಾರ್ಥ’ ಎಂದೊಡನೆ ನಾವು ಯೋಚಿಸುವುದು ‘ಅದು ತಪ್ಪು, ಅನಾರೋಗ್ಯಕರ’ ಎಂದು. ಇದು ನಿಜವೇ? ಮಾನವನ ದಿನನಿತ್ಯದ ಸಾಮಾನ್ಯ ವರ್ತನೆಗಳಾದ ಉಸಿರಾಡುವುದು, ತಿನ್ನುವುದು, ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು, ಇವೆಲ್ಲವೂ ಸ್ವಾರ್ಥದ ಕ್ರಿಯೆಗಳೇ! ಸ್ವಾರ್ಥ ಇಲ್ಲದಿದ್ದರೆ ಯಾರೊಬ್ಬರ ಅಸ್ತಿತ್ವವೇ ಸಾಧ್ಯವೆನಿಸುವುದಿಲ್ಲ.

ಸ್ವಾರ್ಥ ಕೆಟ್ಟ ರೀತಿಯಲ್ಲಿ ಹೆಚ್ಚಾದಾಗ ಸಮಾಜ ಘಾತುಕರಾಗತೊಡಗುತ್ತೇವೆ. ಸಮಾಜದಲ್ಲಿ ಮಾನವನ ಹೊಂದಾಣಿಕೆ ಮತ್ತು ಸಂತೋಷವು ಆತನ ಸ್ವಾರ್ಥಗುಣ ಯಾವ ಪ್ರಮಾಣದಲ್ಲಿ ನಿಯಂತ್ರಣದಲ್ಲಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಸ್ವಾರ್ಥದ ಮೇಲೆ ಹತೋಟಿ ತಪ್ಪಿದರೆ  ಆಗ ಸಂತೋಷದಿಂದ ವಂಚಿತರಾಗಬೇಕಾಗುತ್ತದೆ. ಎಷ್ಟೇ ಪ್ರಾಪಂಚಿಕ, ಭೌತಿಕ ವಸ್ತುಗಳಿದ್ದರೂ ನಮ್ಮಲ್ಲಿ ಸ್ವಾರ್ಥ ಹೆಚ್ಚಾದಾಗ ಆನಂದ, ನೆಮ್ಮದಿ, ತೃಪ್ತಿ ದೂರವಾಗುತ್ತದೆ.

ಮಕ್ಕಳಿಂದ ವೃದ್ಧರವರೆಗೆ ಪ್ರತಿಯೊಂದು ಜೀವಿಯೂ ಸ್ವಭಾವತಃ ಸ್ವಾರ್ಥಿಯೇ. ಕೆಲವರಲ್ಲಿ ಕೆಟ್ಟ ಸ್ವಾರ್ಥವಿದ್ದರೆ ಮತ್ತೆ ಕೆಲವರಲ್ಲಿ ಒಳ್ಳೆಯ ಸ್ವಾರ್ಥವಿರುತ್ತದೆ, ಅಷ್ಟೆ! ಕೆಟ್ಟ ಸ್ವಾರ್ಥಿಗಳು, ಬೇರೆಯವರಿಗೆ ಏನಾದರೂ ಪರವಾಗಿಲ್ಲ ತಾವು ಚೆನ್ನಾಗಿರಬೇಕೆಂದು ಬಯಸುವವರು.

ಇನ್ನು ಒಳ್ಳೆಯ ಸ್ವಾರ್ಥಿಗಳು, ತಮ್ಮ ಜೊತೆಗೆ ಬೇರೆಯವರ ಒಳಿತನ್ನೂ ಯೋಚಿಸುವವರು. ತಿಳಿವಳಿಕೆ ಬಂದಿರದ ಚಿಕ್ಕ ಮಗುವಿನಿಂದ ಹಿಡಿದು ಸರ್ವಸಂಗ ಪರಿತ್ಯಾಗಿಗಳವರೆಗೆ ಪ್ರತಿಯೊಬ್ಬರೂ ಸ್ವಾರ್ಥದ ಮುಷ್ಟಿಯಲ್ಲಿ ಸಿಲುಕಿರುವವರೇ!  ಚಿಕ್ಕ ಮಕ್ಕಳಿಗೆ ಮೊದಲು ತಿಳಿಯುವ ಪದವೇ ‘ನಾನು’, ‘ನನ್ನದು’ ಎಂದು. ನನ್ನ ಅಪ್ಪ, ನನ್ನ ಅಮ್ಮ, ನನ್ನ ಗೊಂಬೆ – ಹೀಗೆ ಪ್ರತಿಯೊಂದರ ಹಿಂದೆಯೂ ‘ನನ್ನತನ’ ಮನೆ ಮಾಡಿರುತ್ತದೆ. ಇದು ಸಹಜ ಕೂಡ.

ಎಲ್ಲವನ್ನೂ ತ್ಯಜಿಸಿರುವ ಸರ್ವಸಂಗ ಪರಿತ್ಯಾಗಿಗಳು ತಮ್ಮ ಮೋಕ್ಷಸಾಧನೆಯ ಅಪೇಕ್ಷೆಯಲ್ಲಿರುತ್ತಾರೆ. ಮೋಕ್ಷಸಾಧನೆಯೂ ಒಂದು ರೀತಿಯಲ್ಲಿ ಸ್ವಾರ್ಥವಲ್ಲವೇ?
ಪ್ರಪಂಚದ ಒಂದಲ್ಲಾ ಒಂದು ಕಡೆ ದಿನವೂ ಹಲವಾರು ಜನರು ಸಾಯುತ್ತಲೇ ಇರುತ್ತಾರೆ. ಅದು ನಮ್ಮ ಗಮನಕ್ಕೆ ಬಂದರೂ, ವಿಷಯ ತಿಳಿದ ಕೆಲವು ಕ್ಷಣಗಳು ಮಾತ್ರ ನಮ್ಮ ಮನಸ್ಸು ಅದರ ಬಗ್ಗೆ ಯೋಚಿಸುತ್ತದೆ. ನಂತರ ಅದನ್ನು ಮರೆಯುತ್ತೇವೆ.

ಅದೇ ಸಾವು ನಮ್ಮ ಹತ್ತಿರದ ಬಂಧುಗಳನ್ನು ಬಾಧಿಸಿದಾಗ ಮಾತ್ರ ಅದನ್ನು ನಮ್ಮ ಮನಸ್ಸಿನಿಂದ ಕಿತ್ತೊಗೆಯಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅಲ್ಲಿ ನನ್ನತನ ತಲೆಯೆತ್ತುತ್ತದೆ.

ನನ್ನ ಬಂಧು, ನನ್ನ ಸ್ನೇಹಿತ ಇತ್ಯಾದಿ. ನಾನು, ನನ್ನದು ಎಂಬುದು ಎಚ್ಚರವಾದಾಗ, ಕರುಣೆ, ಅನುಕಂಪ, ಮರುಕ, ದಯೆಗಳು ನಮ್ಮ  ದುಃಖವನ್ನು ಹೆಚ್ಚಿಸುತ್ತವೆ. ಆಗ ನಮ್ಮ ಮೇಲೆ ನಮಗೇ ಉಂಟಾಗುವ ಕನಿಕರಕ್ಕಿಂತ ಕೆಟ್ಟ ಅನರ್ಥ ಇನ್ನೊಂದಿಲ್ಲ. ಇದರಿಂದ ದುಃಖ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಯಾವುದೇ ಅಹಿತಕರ ಘಟನೆ ನಡೆದರೂ ಆ ಸಂದರ್ಭದಲ್ಲಿ ಉಂಟಾಗುವ ದುಃಖ ಸ್ವಲ್ಪ ಕಾಲದವರೆಗೆ ನಮ್ಮನ್ನು ಬಾಧಿಸುತ್ತದೆ. ನಂತರವೂ ಮುಂದುವರೆದ ದುಃಖವು  ‘ನನ್ನತನದ’ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿ ಬಾರಿ ಬೇಸರವಾದಾಗಲೂ ಕೊಂಚ ಯೋಚಿಸಿ ನೋಡಿ.

ಅಲ್ಲಿ ‘ನಾನು’, ‘ನನ್ನದು’, ‘ನನಗೆ’ ಎಂಬುದೇ ಹೆಚ್ಚಾಗಿರುತ್ತದೆ. ಯಾರೋ ‘ನನಗೆ’ ಬೈದರು, ಯಾರೋ ‘ನನ್ನವರು’ ದೂರಾದರು, ಯಾರೋ ‘ನನ್ನ’ ಬಗ್ಗೆ ಮಾತನಾಡಿದರು – ಹೀಗೆ ನಮಗೆ ಒದಗುವ ಬಹಳಷ್ಟು ದುಃಖದ, ಬೇಸರದ ಸಂದರ್ಭಗಳು ಸ್ವಾರ್ಥದ ಮೂಲವಾಗಿರುತ್ತವೆ.

‘ಸ್ವಾರ್ಥ’ ಎಂದಾಕ್ಷಣ ಪ್ರತಿಯೊಬ್ಬರ ಮನದಲ್ಲೂ ನಕಾರಾತ್ಮಕ ಚಿಂತನೆಗಳೇ ಬರುತ್ತವೆ. ಸ್ವಾರ್ಥ ಎಂದರೆ ಕೆಟ್ಟದ್ದು ಎಂಬ ಭಾವನೆ ಎಲ್ಲರಲ್ಲೂ ಬೇರೂರಿದೆ. ನಮ್ಮ ಬಗ್ಗೆ ನಮಗೆ ಚಿಂತೆ, ಕಳವಳ, ವ್ಯಾಕುಲತೆ ಇರುವುದು ತಪ್ಪಲ್ಲ. ದಾರಿಯಲ್ಲಿ ಸ್ನೇಹಿತರ ಜೊತೆ ಹೋಗುತ್ತಿದ್ದೇವೆ ಎಂದುಕೊಳ್ಳೋಣ.

ಆಗ ವಾಹನವೊಂದು ನಮಗೆ ಅಡ್ಡವಾಗಿ ಬಂದರೆ, ಮೊದಲು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ತಪ್ಪೇ? ಸ್ನೇಹಿತರನ್ನು ಉಳಿಸಲು ಹೋಗಿ ನಮ್ಮ ಜೀವವನ್ನು ಬಲಿಕೊಡುವುದು ಸರಿಯೇ? ನಮ್ಮ ಜೀವ ಉಳಿದರೆ ತಾನೆ ನಾವು ಬೇರೆಯವರ ಬಗ್ಗೆ ಯೋಚಿಸಲು ಸಾಧ್ಯ?.

ನಮ್ಮನ್ನು ನಾವು ರಕ್ಷಿಸುವುದಕ್ಕಿಂತ ಹೆಚ್ಚಾಗಿ ಬೇರೆ ಯಾರು ನಮ್ಮನ್ನು ರಕ್ಷಿಸಬಲ್ಲರು? ನಮ್ಮ ಜೀವದ ಬೆಲೆಯೇ ನಮಗೆ ತಿಳಿಯದ ಮೇಲೆ ಬೇರೆಯವರ ಜೀವದ ಬೆಲೆ ಹೇಗೆ ತಿಳಿದೀತು? ಒಂದು ಹಂತದವರೆಗೆ ಮನುಷ್ಯನಲ್ಲಿ ಸ್ವಾರ್ಥ ಇರಲೇಬೇಕು ಹಾಗೂ ಅದಕ್ಕೆ ಬೆಲೆ ಇದೆ ಕೂಡ. ಅದು ಮೀರಿದರೆ ಅನಾಹುತವಾಗುತ್ತದೆ. ಅಹಂ ಇದ್ದಲ್ಲಿ ಕೆಟ್ಟ ಸ್ವಾರ್ಥ ತಲೆಯೆತ್ತುತ್ತದೆ.

ಆಗ ಮನುಷ್ಯ ಎಷ್ಟು ಕೆಳಮಟ್ಟಕ್ಕಾದರೂ ಇಳಿದು ತನ್ನ ಕಾರ್ಯಸಾಧನೆಯನ್ನು ಮಾಡಿಕೊಳ್ಳುತ್ತಾನೆ. ಸ್ವಾರ್ಥ ಕೆಟ್ಟ ರೀತಿಯದಾಗಿದ್ದಾಗ ನಮಗೆ ಸಂತೋಷ ಸಿಗುವುದಿಲ್ಲ. ಮಾನವನಲ್ಲಿ ಸ್ವಾರ್ಥ ಇರಬೇಕಾದದ್ದು ಸಂತೋಷವನ್ನು ಪಡೆಯಲು. ಆದರೆ ಅದು ಅತಿಯಾದಾಗ ಖಂಡಿತ ನಾವು ಸಂತಸದಿಂದಿರಲು ಸಾಧ್ಯವಾಗದು.  ಕೆಲವೊಮ್ಮೆ ನಿಃಸ್ವಾರ್ಥದಿಂರಲು ಸ್ವಾರ್ಥಿಗಳಾಗಬೇಕಾಗುತ್ತದೆ!

‘ಸ್ವಾರ್ಥ’ ಎನ್ನುವ ಪದ ಎರಡು ಗೂಢಾರ್ಥಗಳನ್ನು ಒಳಗೊಂಡಿದೆ. ಒಂದು ಮತ್ತೊಬ್ಬರ ಬಗ್ಗೆ ಕನಿಕರವಿಲ್ಲದೆ, ಆದರವಿಲ್ಲದೆ, ಗಮನವಿಲ್ಲದೆ ಇರುವುದು. ಮತ್ತೊಂದು  ವೈಯಕ್ತಿಕವಾಗಿ, ಭಾವನಾತ್ಮಕವಾಗಿ, ದೈಹಿಕವಾಗಿ ಜವಾಬ್ದಾರಿಯನ್ನು ಅರಿತು, ಬೇರೆಯವರಿಗೆ ನೋವಾಗದಂತೆ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು.

ನಮ್ಮನ್ನು ನಾವು ನೋಡಿಕೊಳ್ಳಲು ಆಗದಿದ್ದ ಮೇಲೆ ಬೇರೆಯವರನ್ನು ಗಮನಿಸಲು ಹೇಗೆ ಸಾಧ್ಯ?.ಒಳ್ಳೆಯ ಸ್ವಾರ್ಥ ಜೀವನದಲ್ಲಿ ಯಶಸ್ಸನ್ನು ಗಳಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಸಂತೋಷವಾಗಿದ್ದಾನೆಂದರೆ, ಆತನಲ್ಲಿ ಸ್ವಾರ್ಥ ಇರಲೇಬೇಕು.

ನಾವು ನಮ್ಮ ವೈಯಕ್ತಿಕ ಬೆಳವಣಿಗೆಯ ಬಗ್ಗೆ ಗಮನಿಸಿಕೊಳ್ಳಲು ಸಾಧ್ಯವಾದಾಗ ಮಾತ್ರ ನಾವು ಬೇರೆಯವರ ಬಗ್ಗೆಯೂ ಗಮನ ಕೊಡಲು ಸಾಧ್ಯ. ಆದ್ದರಿಂದ ಸ್ವಾರ್ಥ ಒಂದು ಹಂತದವರೆಗೆ ಅವಶ್ಯಕ ಹಾಗೂ ಅನಿವಾರ್ಯ.

ಸ್ವಾರ್ಥ ಕೆಟ್ಟದ್ದು ಎಂಬ ಭಾವನೆಯಿದ್ದರೆ  ಅದನ್ನು ಇಂದೇ ಮನಸ್ಸಿನಿಂದ ತೆಗೆದು ಹಾಕಿ. ಜೀವನದಲ್ಲಿ ಅವಶ್ಯಕತೆಯಿರುವಷ್ಟು ಸ್ವಾರ್ಥವನ್ನು ಅಳವಡಿಸಿಕೊಂಡು ಸಂತೋಷವಾಗಿರಿ. ನಾವು ಸಂತೋಷವಾಗಿದ್ದರೆ ಮಾತ್ರ ಇತರರನ್ನೂ ಸಂತೋಷದಿಂದಿಡಲು ಸಾಧ್ಯ. 
v

Comments
ಈ ವಿಭಾಗದಿಂದ ಇನ್ನಷ್ಟು
ಬೇಸಿಗೆಯಲ್ಲಿ ಬೆವರಿಳಿಸಿ  ಬೆಂಡಾಗಿಸುವ ನಿರ್ಜಲೀಕರಣ

ಕರಾವಳಿ
ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

25 Apr, 2018
ನಗು ನಗುತಾ ನಲಿ ನಲಿ…

ಸೆಲೆಬ್ರಿಟಿ ಅ–ಟೆನ್ಶನ್‌
ನಗು ನಗುತಾ ನಲಿ ನಲಿ…

25 Apr, 2018
ಅಪೂರ್ವ ದಿನವೇ  ನಿನಗೆ ನಮಸ್ಕಾರ

ಸ್ವಸ್ಥ ಬದುಕು
ಅಪೂರ್ವ ದಿನವೇ ನಿನಗೆ ನಮಸ್ಕಾರ

25 Apr, 2018
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

ಅಂಕುರ
ನಾಳಬಂಧಕ ಚಿಕಿತ್ಸೆ ಅರಿಯಬೇಕಾದ ಅಂಶಗಳು...

21 Apr, 2018
ಮಜ್ಜಿಗೆ ಎಂಬ ಅಮೃತಪೇಯ

ಬಾಯಾರಿಕೆ ತಣಿವು
ಮಜ್ಜಿಗೆ ಎಂಬ ಅಮೃತಪೇಯ

21 Apr, 2018