ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 10–5–1967

Last Updated 9 ಮೇ 2017, 19:30 IST
ಅಕ್ಷರ ಗಾತ್ರ

ಭಾರತದ ತೃತೀಯ ರಾಷ್ಟ್ರಪತಿ: ಡಾ. ಜಾಕಿರ್ ಹುಸೇನ್ ಆಯ್ಕೆ
ನವದೆಹಲಿ, ಮೇ 9–
ಭಾರತ ಗಣರಾಜ್ಯದ ಮೂರನೆಯ ರಾಷ್ಟ್ರಪತಿಯಾಗಿ 70 ವರ್ಷ ವಯಸ್ಸಿನ ಡಾ. ಜಾಕಿರ್ ಹುಸೇನ್ ಅವರು ಇಂದು ತೃಪ್ತಿಕರ ಬಹುಮತದಿಂದ ಆಯ್ಕೆಯಾದರು.

ಅವರ ಸಮೀಪ ಸ್ಪರ್ಧಿ ಹಾಗೂ ವಿರೋಧ ಪಕ್ಷಗಳ ಅಭ್ಯರ್ಥಿಯಾದ ಶ್ರೀ ಕೆ. ಸುಬ್ಬರಾವ್ ಅವರಿಗಿಂತ ಡಾ. ಹುಸೇನ್‌ರಿಗೆ 1,07,273 ಹೆಚ್ಚು ಮತಗಳು ದೊರಕಿದವು.

ಡಾ. ಜಾಕಿರ್ ಹುಸೇನ್‌ರಿಗೆ 4,71,244 ಮೊದಲ ಪ್ರಾಶಸ್ತ್ಯದ ಮತಗಳೂ ಶ್ರೀ ಸುಬ್ಬರಾವ್ ಅವರಿಗೆ 3,63,971 ಮೊದಲ ಪ್ರಾಶಸ್ತ್ಯದ ಮತಗಳು ದೊರಕಿದವು.

ಸ್ಪರ್ಧೆಯಲ್ಲಿ ಇವರಿಬ್ಬರೇ ಅಲ್ಲದೆ ಇನ್ನು ಹದಿನೈದು ಜನ ಅಭ್ಯರ್ಥಿಗಳಿದ್ದರು. ಈ ಹದಿನೈದು ಜನರ ಪೈಕಿ 1700 ಮತಗಳನ್ನು ಪಡೆದವರೇ ಅತ್ಯಂತ ಹೆಚ್ಚಿನ ಮತಗಳಿಸಿದವರು. 9 ಜನ ಅಭ್ಯರ್ಥಿಗಳಿಗೆ ಒಂದು ಮತವೂ ದೊರಕಲಿಲ್ಲ.

ಕೃತಜ್ಞತೆ
ನವದೆಹಲಿ, ಮೇ 9–
ಭಾರತದ ರಾಷ್ಟ್ರಪತಿಯಾಗಿ ತಮ್ಮನ್ನು ಆಯ್ಕೆ ಮಾಡಿ ಆ ಉನ್ನತ ಅಧಿಕಾರ ಸ್ಥಾನಕ್ಕೆ ತಾವು ಅರ್ಹರೆಂದು ತಮ್ಮಲ್ಲಿ ವಿಶ್ವಾಸವಿಟ್ಟಿರುವ ಇಡೀ ರಾಷ್ಟ್ರಕ್ಕೆ, ಜನತಾ ಪ್ರತಿನಿಧಿಗಳಿಗೆ ಮತ್ತು ಜನತೆಗೆ ಡಾ. ಜಾಕಿರ್ ಹುಸೇನರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಜನತೆ ತಮ್ಮಲ್ಲಿ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಸದಾ ಶ್ರಮಿಸುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ.

ಇಂದಿರಾ ಆನಂದ
ನವದೆಹಲಿ, ಮೇ 9–
ರಾಷ್ಟ್ರಪತಿ ಚುನಾವಣೆಯಲ್ಲಿ ಗೆದ್ದರೆಂದು ಪ್ರಕಟಿಸಿದ ಕೂಡಲೇ ಡಾ. ಜಾಕಿರ್ ಹುಸೇನರನ್ನು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿಯವರು ಭೇಟಿ ಮಾಡಿದರು.

ಇದಕ್ಕೆ ಮುಂಚೆ ಅವರು ಡಾ. ಜಾಕಿರ್ ಹುಸೇನರಿಗೆ ಫೋನ್ ಮೂಲಕ ತಮ್ಮ ಅಭಿನಂದನೆ ತಿಳಿಸಿದರು.

ಸಂದೇಶವೊಂದರಲ್ಲಿ ಅವರು ‘ರಾಷ್ಟ್ರಪತಿಯಾಗಿ ಆಯ್ಕೆಯಾದ ಡಾ. ಜಾಕಿರ್ ಹುಸೇನ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಹಾರೈಕೆಗಳು’ ಎಂದು ತಿಳಿಸಿದ್ದಾರೆ.

ಶ್ರೀ ಸುಬ್ಬರಾವ್  ಅಭಿನಂದನೆ
ಮದರಾಸು, ಮೇ 9–
ರಾಷ್ಟ್ರಪತಿಯಾಗಿ ಚುನಾಯಿತರಾದ ಡಾ. ಜಾಕಿರ್ ಹುಸೇನ್ ಅವರನ್ನು ಅವರ ಪ್ರತಿಸ್ಪರ್ಧಿಯಾಗಿದ್ದ ಶ್ರೀ ಕೆ. ಸುಬ್ಬರಾವ್ ಅವರು ಅಭಿನಂದಿಸಿ ಯಶಸ್ಸು ಕೋರಿದ್ದಾರೆ.

ಇಂದು ಇಲ್ಲಿಗೆ ದೆಹಲಿಯಿಂದ ರೈಲಿನಲ್ಲಿ ಆಗಮಿಸಿದ ಶ್ರೀ ಸುಬ್ಬರಾವ್ ಅವರು ಪತ್ರಕರ್ತರು ಅವರ ಭೇಟಿಗೆ ಹೋದಾಗ ವಿಶ್ರಾಂತಿ ಪಡೆಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT