ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿ ನೀರಿನ ಹಿಂದೆ ಸಾವಿಲ್ಲದ ನೆನಪು

Last Updated 10 ಮೇ 2017, 19:30 IST
ಅಕ್ಷರ ಗಾತ್ರ

ನೆಲದವ್ವನ ಎದೆಯಲ್ಲಿ ಹನಿ ನೀರು ತೊಟ್ಟಿಕ್ಕಿದರೂ ಅದು ಅಮೃತ. ಬೊಗಸೆಯೊಡ್ಡಿ ಕುಡಿಯುವ ಒಣಗಿದ ಗಂಟಲಿಗೆ ಈ ಹನಿಯೇ ಜೀವ. ಉರಿಮಾರಿ ಬೇಸಿಗೆಯಲ್ಲಿ ಮಾವಿನ ಸೀಕರಣೆ ಕೊಟ್ಟರೂ ನಿರಾಕರಣೆ. ಒಂದು ತಂಬಿಗೆ ನೀರು ಕೊಡಿ. ಅದೇ ಸೀಕರಣೆ. ಕೊಟ್ಟ ನೀರು ಗಟ ಗಟನೇ ಕುಡಿದು ಕೊಟ್ಟವಳ ಹೊಟ್ಟಿ ತಣ್ಣಗಿರಲೆಂಬ ಹಾರೈಕೆ.

ಈ ಉರಿ ಬಿಸಿಲಲ್ಲಿ ನೀರಿನ ದಾಹ ನಿನ್ನೆ ಮೊನ್ನೆಯದ್ದಲ್ಲ ಬಿಡಿ. ಈಗಿನಂತೆ ಆಗ ಬೇಸಿಗೆ ಸಂಭ್ರಮ ಇರಲಿಲ್ಲ. ಬ್ಯಾಸಗೀ ಯಾಕರ ಬರುತ್ತೋ ಪಿರಿ ಪಿರಿ ತಿರಗಾತ ಅನ್ನುವ ದೊಡ್ಡವರಿಗೆ ನಮ್ಮ ನೀರಾಟ ಹೇಗೆ ಅರ್ಥವಾಗಬೇಕು ಹೇಳಿ? ರಜೆ ಬಿಟ್ಟ ಕ್ಷಣ ನಮ್ಮ ಪಯಣ ಡೇರೆದ ಹೇಮಕ್ಕರ ತೋಟಕ್ಕೆ ಸಾಗುತ್ತಿತ್ತು. ಅಲ್ಲಿ ನೀರಿನ ಜೊತೆ ಚೆಲ್ಲಾಟ. ಹುಡುಗಿಯರಾದರೂ ಕೋತಿಯಂತೆ ಗಿಡಕ್ಕೆ ಜೋತು ಬೀಳುವುದು ಹಬ್ಬ. ಕಡು ಬೇಸಿಗೆಯಲ್ಲೂ ಹಿಗ್ಗಿದ ಮೊಗ್ಗು.

ಬಡಿವಾರ ಬಿಟ್ಟು ನಗುತ್ತಿದ್ದ ಮಲ್ಲಿಗೆ ಮದುಮಗಳಂತೆ ಹಳದಿಯಲ್ಲಿ ಶೃಂಗರಿಸಿಕೊಂಡ ಪುಟಾಣಿ ಹೂ. ಕೆಂಪಗೆ ಗಲ್ಲುಬ್ಬಿಸಿ ನಿಂತ ಕೆಂಪು ಡೇರೆದ ಹೂ... ಒಂದೇ... ಎರಡೇ... ಹೇಮಾರ ತೋಟ ನಮ್ಮ ಪಾಲಿನ ಕಾಣದ ಸ್ವರ್ಗ. ಈ ಸಂಭ್ರಮಕ್ಕೆ  ಕಾರಣ, ತುಂಬಿದ ಬಾವಿ. ಏತದಿಂದ ಕಾಲುವೆಗೂ ಡೋಣಿಗೂ ಬಂದು ಬೀಳುತ್ತಿದ್ದ ನೀರು ಬರೀ ನೀರಲ್ಲ ಎಳನೀರು.

ಆ ರುಚಿ ಈಗಿನ ಅಕ್ವಾನೀರಿಗೆ ಸಕ್ಕರೆ ಕಲಿಸಿ ಕುಡಿದರೂ ದಕ್ಕುವುದಿಲ್ಲ. ಐದಾರು ಗೆಳತಿಯರು ಮೊದಲು ಮಾಡುತ್ತಿದ್ದ ಕೆಲಸ ಸಿಮೆಂಟಿನ ಕಲ್ಲಿನ ಡೋಣಿಯಲ್ಲಿ ಇಳಿದು ಈಜಿದಂತೆ ತಳಕ್ಕೆ ಬೀಳುವುದು. ಕೈ ಕಾಲು ಬಡಿಯುವುದು. ನೀರು ಬಿಡುವವನಿಗೆ ಸಂಕಟ. ‘ತಂಗೇರ... ನಿಮ್ಮ ಗೆಳತೇರನ ಕರೀರಿ..! ನೀರಾಗ ಮುಳುಗಿ ಸತ್ತರ ನಾ ಸಾಯತೀನಿ’ ಅಂತಿದ್ದ. ನಾವು ತೋಟ ಬಿಟ್ಟು ಬರುವವರೆಗೆ ಅವನ ಜೀವ ಅವನ ಕೈಯಲ್ಲಿ ಇರುತ್ತಿದ್ದಿಲ್ಲ.

ಊರಲ್ಲಿ ಒಂದೊಂದು ಬಾವಿಗೂ ಒಂದೊಂದು ಹೆಸರು. ಕನಕನಬಾವಿ, ಬೆನಕನಬಾವಿ, ಪಿಂಜಾರಬಾವಿ, ವಾಲಿಯರ ಬಾವಿ ಹೀಗೆ ಹೆಸರಿಗೆ ತಕ್ಕಂತೆ ಬಾವಿಯ ಇತಿಹಾಸಗಳು. ನೀರು ತಂದು ಹಾಕುತ್ತಿದ್ದ ತಿಪ್ಪವ್ವ, ಶೇಖಪ್ಪ, ಈರಯ್ಯ ಬಾವಿಗೆ ನೀರು ತರಾಕ ತಾವೇ ಹೋಗತಿದ್ದರೆ ಹೊರತು ನಮ್ಮನ್ನು ಕೆರೆದುದಿಲ್ಲ.

ಅವರ ಹಿಂದೆ ಪುಟ್ಟ ತಾಮ್ರದ ಬಿಂದಿಗೆ ಹಿಡಿದು 30–40 ಕನಕನಬಾವಿ ಮೆಟ್ಟಿಲಿಳಿದು ಡುಬ್ ಡುಬ್ ಸಪ್ಪಳ ಮಾಡುತ್ತ ನೀರಲ್ಲಿ ಕೈಯಾಡಿಸಿ ತುಂಬಿಸಿದ ಕೊಡವನ್ನೂ ತುಳುಕಿಸುವ ಗಮ್ಮತ್ತೇ ಬೇರೆ. ಕೊಡ ಹೊತ್ತ ಅಭಿನವ ಶಕುಂತಲೆಯರು ಆಗ ನಾವು.  ಹಸಿರಾಗಿ ಕಾಣುವ ಬಾವಿ ಒಡಲು ತಿಳಿ ನೀರಿನ ಹರವು. ಹಾಗೆ ಹೊತ್ತ ಮನಸ್ಸುಗಳು.

ಸುತ್ತಲೂ ಬಾವಿಗೆ ಕಟ್ಟಿದಕೋಟೆ ಗೋಡೆ. ಗೋಡಿ ಗೂಡಿನಲಿ ಪಾರಿವಾಳಗಳು. ಪಕ್ಕದಲ್ಲೇ ಕದಳಿ ಸಾಲು. ಅಲ್ಲಲ್ಲಿ ಇಣುಕಿದ ಕಾಗೆ ಗುಬ್ಬಿಗಳು. ಯಾವುದೋ ಧರೆಗಿಳಿದ ಸ್ವರ್ಗ. ಎರಡು ಕೊಡ ಹೊತ್ತು ಏರಿ ಬರುತ್ತಿದ್ದ ನಮ್ಮ ಹಳ್ಳಿ ಹೆಣ್ಣು ಮಕ್ಕಳು ಉಸ್ಸಪ್ಪ ಅಂದಿದ್ದೇ ಇಲ್ಲ.

ಪುಟ್ಟ ರೊಟ್ಟಿ ಬಡಿದು ದನಕರ ಬಿಟಕೊಂಡು ಹೊಲಕ್ಕೆ ಹೋಗುವ ಬಸವ್ವಜ್ಜಿ ಆ ಕಾಲದ ಸ್ತ್ರೀ ವಾದಿ. ಬುತ್ತಿಗಂಟು ತಲಿ ಮೇಲಿದ್ದರ ಬಗಲಲ್ಲಿ ತುಂಬಿದ ತತ್ರಾಣಿ. ನನಗೋ ಆ ನೀರೇ ಕುಡಿವ ಚಪಲ. ಎತ್ತಿ ಕುಡಿಯಲು ಹೋಗಿ ಕೈ ಜಾರಿ ಕೆಳಗೆ ಬಿದ್ದು ಚೂರಾಯಿತು. ಅವ್ವ ಹುಚ್ಚಖೋಡಿ ಅಂತ ನಾಲ್ಕು ಬಾರಿಸಿದ್ದೂ ಆಯ್ತು. ಮನೆಯಲ್ಲಿ ವೈರ್ ಹೆಣೆದಿದ್ದ ಗಾಜಿನ ಬಾಟಲಿಯಲ್ಲಿ ನೀರು ತುಂಬಿ ಕೊಟ್ಟಾಗ- ಅಯ್ಯ... ಯವ್ವ ಇಟ ನೀರು ಎದಕ್ಕ ಆಗತ್ತ ? ನಿನ್ನ ಮಗನ ಕುಂಡಿಗಿ ಆಗಲ್ಲ!

ತಗಿ ಅನ್ನುವಾಗಲೇ ದನ ಮುಂದೆ ಹೋಗಿದ್ದು ಬಸವ್ವಜ್ಜಿ ಬುತ್ತಿನೂ ನೀರೂ ಬಿಟ್ಟು ಓಡಿದ್ದು ಕಣ್ಣ ಮುಂದೆ ಓಡುತ್ತಿದೆ, ಇಡೀ ದಿನ ಬಿಸಿಲಲ್ಲಿ ನೀರಿಲ್ಲದೇ ಬಾಯಾರಿ ಗೋದೂಳಿ ಸಮಯಕ್ಕೆ ಬಂದವಳೇ ಗಟಗಟ ಎರಡು ತಂಬಿಗೆ ನೀರು ಕುಡಿದು ನಿತ್ರಾಣ ಕಳೆದುಕೊಂಡಿದ್ದೆ. ಆದರೂ ಒಂದು ಮಾತಾಡದೇ ಅದೇ ಬೊಚ್ಚು ಬಾಯಲ್ಲಿ ನಕ್ಕದುದು ನೀರಿನ ಹರಿವಿನ ಗುಣ. ಮುಂದೆ ಅವಳ ಹತ್ತರ ಹೋದಾಗಲೆಲ್ಲ ಕೇಳುತ್ತಿದ್ದುದು ಅವಳ ತತ್ರಾಣಿ. ಕಾರಣ ಯಾರಿಗೂ ಗೊತ್ತಾಗಂತೆ ಕುಳ್ಳಿ ಒಡೆದು ಕುಂಬಾರ ಅನ್ನಕ್ಕರ ಅವ್ವನ ಕಡಿಂದ  ತತ್ರಾಣಿ ತಂದು ಕೊಟ್ಟ ಕಳ್ಳಿ ನಾ. ಅದಕ್ಕೆ ಅವಳ ತತ್ರಾಣಿ ಮೇಲೆ ನಂದೊಂದು ಕಣ್ಣಿತ್ತು.

ಸೆಲಿ ಹೆಕ್ಕಿ ಕೊಡುವ ಹನಿ ನೀರಿನ ಹಿಂದೆ ಸಾವಿಲ್ಲದ ನೆನಪುಗಳು. ಖುಶಿ ಕೊಡುವ ಕ್ಷಣದ ಹಿಂದೆ ಬಣ್ಣವಾಡಿದ ಮೈ ತೊಳೆಯಲು ಕೆರೆಯಲಿ ತಮ್ಮ ಹೆಣವಾದನೆಂದು ಹನಿಗಣ್ಣಾಗಿರುತ್ತಿದ್ದ ಗೆಳತಿಯ ನೋವಿದೆ. ರಾತ್ರಿ ಪಾಳೆ ಇಟ್ಟು ಕೊಡ ತುಂಬುವಾಗ ಕೊಡದ ಬದಲು ಬೊಗುಣಿ ಬಕೀಟು ತಂಬಿಗೆ ಇಟ್ಟವನೊಂದಿಗೆ ಜಗಳ ತೆಗೆದು ಹಳ್ಳಕ್ಕೆ ಅವರ ಪಾತ್ರೆ ಒಗೆದು ನೀರು ತುಂಬದೇ ಮುನಿಸಿಕೊಂಡು ಮನೆಗೆ ಬಂದ ಅತ್ತೆಯ ಸೆಡುವಿದೆ.ಈಗ ಸಣ್ಣ ಕೊಳದಲ್ಲೂ ಹಳ್ಳವಾಗಿ ಹರಿದು ಬೇಸಿಗೆಯ ದಾಹ ತೀರಿಸುವ ನೀರಿನ ಮೇಲೆ ಧನ್ಯತಾ ಭಾವ ಬಂದಿದೆ.
–ಲಲಿತಾ ಕೆ ಹೊಸಪ್ಯಾಟಿ ಹುನಗುಂದ

*
ನೀರ ಹನಿಗಳ ಹಾಡು...
ನನ್ನಜ್ಜನೂರು ವಾರಾಹಿ ತಟದ ಸೌಡ. ಹೊಳೆ ಊರನ್ನು ಸೀಳಿ ಹರಿಯುತ್ತಿಲ್ಲಿ. ಏಪ್ರಿಲ್‌ನಲ್ಲೂ ಸೊಂಟ ಮುಳುಗುವಷ್ಟು ನೀರು! ಬೇಸಿಗೆ ಬಂದರೆ ನಾವಲ್ಲಿ ಹಾಜರ್. ತಂದೆಯ ಭುಜವೇರಿ ಹೊಳೆ ದಾಟಿ ಹೋಗುತ್ತಿದ್ದೆ. ಮತ್ತೆ ಹೊಳೆಗೆ ಮರಳಿ ನೀರಲಿ ನಮ್ಮ ಸೊಕ್ಕಾಟ ಶುರು. ನೀರ ನಡುವಿನ ಕಲ್ಲು ಹತ್ತಿ ಹೊಳೆಗೆ ಹಾರುವುದು, ಮುಳುಗಿ ಈಜುವುದು, ಜಲಯುದ್ಧ ಮುಂತಾದ ಸಾಹಸ ಮಾಡುತ್ತಿದ್ದೆವು. ಹೊಟ್ಟೆ ಚುರುಗುಡದೇ ಮರಳುತ್ತಿರಲಿಲ್ಲ.

ಒಬ್ಬೊಬ್ಬರ ಕಣ್ಣು ಗುಡ್ಡೆ ನೋಡಬೇಕು. ಕೆಂಪಾದ ಕಣ್ಣು, ಕೆಂಪು ಕೋತಿಯಂತಾದ ಕೆನ್ನೆ, ಕೂದಲು ಹಂದಿ ಮುಳ್ಳಿನಂತಾಗಿ ಥೇಟ್ ಕಾಡು ಮನುಷ್ಯರಂತಾಗಿ ವಾಪಸಾಗುತ್ತಿದ್ದೆವು. ಊಟಕ್ಕಂತೂ ಮಾವಿನ ವಿವಿಧ ಖಾದ್ಯವಿರುತ್ತಿತ್ತು. ಮನೆ ಸನಿಹದ ಭಟ್ಕಳ ಹಣ್ಣಿನ ಗೊಜ್ಜು, ಸೀಕರಣೆ ಇದ್ದರಂತೂ ಸೇರು ಅನ್ನಕ್ಕೆ ಕನ್ನ. ಉಂಡು, ಈಜಿ ಸುಸ್ತಾಗಿ ಮನೆಯ ಜಗಲಿಯಲ್ಲಿ ಕುಂಭಕರ್ಣ ನಿದ್ದೆ.

ಎದ್ದು ಕಾಫಿ ಹೀರಿ, ಗೆಳೆಯರ ಜೊತೆ ಕ್ರಿಕೆಟ್‌ ಅಂಗಳಕ್ಕೆ ದೌಡು. ಹೊಳೆಯ ಬಾಗಿಲಲ್ಲೇ ಕ್ರಿಕೆಟ್ ಭಜನೆ. ಮನಸೋ ಇಚ್ಛೆ ಆಡಿ ಮತ್ತೆ ಹೊಳೆಗೆ ಪರಾರಿ. ಸೂರ್ಯ ಕಂತದೇ ನಾವು ಮೇಲೇಳುತ್ತಿರಲಿಲ್ಲ. ಬಾಲ್ಯದಲ್ಲಿ  ತಾಪವಾಗಲಿ, ಸೆಕೆಯಾಗಲಿ ನಮ್ಮನ್ನು ತಾಕಿದಿಲ್ಲ. ಗೊಣಗಾಡಿದ್ದ ನೆನಪೇ ಇಲ್ಲ!

ಹೊಳೆ ದಾಟಿದರೆ ಹೊಸಂಗಡಿ ಎಂಬ ಗ್ರಾಮ. ಜಾಂಬೂರಿನ ಹಳ್ಳಿಗರು ನದಿ ದಾಟಲು ಸಣ್ಣ ಮರದ ಸೇತುವೆ ಜನರ ಸಹಭಾಗಿತ್ವದಲ್ಲಿ ವರ್ಷಂಪ್ರತಿ ನಿರ್ಮಿಸುತ್ತಿದ್ದರು. ಇಲ್ಲಿ ನದಿ ದಾಟಿ ಆಸು-ಪಾಸಿನ ಹಳ್ಳಿಗಳಿಗೆ ಜನರು ನಡೆದೇ ಹೋಗುತ್ತಿದ್ದರು! ಇದನ್ನು ಸ್ಥಳೀಯ ಭಾಷೆಯಲ್ಲಿ ಕಡು ಎನ್ನುತ್ತಿದ್ದರು. ಇಂತಹ ಕಡುವಿಗೊಮ್ಮೆ ಸ್ನೇಹಿತರ ಜೊತೆ ಕದ್ದು ಮುಚ್ಚಿ ರಜೆಯಲ್ಲಿ ಈಜಲು ಹೋಗಿದ್ದೆ.

ಮರದ ಸೇತುವೆಯಿಂದ ಹಾರಿ ಸುಲಭಕ್ಕೆ ದಡ ಸೇರುತ್ತಿದ್ದೆ. ಒಮ್ಮೆಯಂತೂ ಈಜಿ ಸುಸ್ತಾದಾಗ ಕಾಲು ಸೆಟೆದುಕೊಂಡು ಬಿಟ್ಟಿತ್ತು. ನೀರ ಸೆಳತಕ್ಕೆ ಸೆಳೆದುಕೊಂಡು ತುಂಬಾ ದೂರ ಹೋಗಿ ಬಿಟ್ಟಿದ್ದೆ. ಹೇಗೋ ಸಣ್ಣ ಬಂಡೆ ಹಿಡಿದು ಮೇಲೆ ಬಂದೆ.

ಹೊಳೆಯಂತಹ ಹೊಳೆ ಅನೇಕ ಗೆಳೆಯರನ್ನು ನನಗೆ ಸಂಪಾದಿಸಿಕೊಟ್ಟಿತ್ತು. ಬದುಕಿನ ಪಯಣದ ಹಾದಿಯಲ್ಲಿ ಎಲ್ಲಿ ಕಳೆದು ಹೋದರೋ ನಾ ತಿಳಿಯೆ. ಮತ್ತೆ ನಾವು ಸೇರಲೇ ಇಲ್ಲ. ಹೀಗೆ ಏಪ್ರಿಲ್ ಬಂದರೆ ನನ್ನ ಪ್ರೀತಿಯ ಹೊಳೆ ಮತ್ತು ಕಾಟು ಮಾವು ಬಿಡದೇ ನೆನಪಾಗುತ್ತೆ.
-ಶ್ರೀಧರ್ ಎಸ್. ಸಿದ್ದಾಪುರ ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT