ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಗ್ರಾ.ಪಂ. ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಇಳಿಕೆ

Last Updated 11 ಮೇ 2017, 7:34 IST
ಅಕ್ಷರ ಗಾತ್ರ

ಬಾಗಲಕೋಟೆ:  ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಮಕ್ಕಳ ಲಿಂಗಾನುಪಾತದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದ ಕಾರಣ ರಾಜ್ಯದ ಬಾಗಲಕೋಟೆ, ವಿಜಯಪುರ, ಕೋಲಾರ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಗ್ರಾಮ ಮಟ್ಟದಲ್ಲಿ ಜಾಗೃತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಜಿಲ್ಲೆಯ10 ಗ್ರಾಮ ಪಂಚಾಯ್ತಿಗಳನ್ನು ಯೋಜನೆಯಡಿ ಆಯ್ಕೆ ಮಾಡಿಕೊಂಡು ಅಲ್ಲಿ ಗ್ರಾಮ ಸಮನ್ವಯ ಮತ್ತು ಸೌಲಭ್ಯಗಳ ಸೇವೆ (ವಿಸಿಎಫ್‌ಎಸ್) ಆರಂಭಿಸಲಾಗುತ್ತಿದೆ. ಇದಕ್ಕಾಗಿ ವರ್ಷಕ್ಕೆ ₹19.20 ಲಕ್ಷ ವಿನಿಯೋಗಿಸಲಾಗುತ್ತಿದೆ.

ಸಮೀಕ್ಷೆಯ ವೇಳೆ ಈ ಜಿಲ್ಲೆಗಳಲ್ಲಿ ಲಿಂಗಾನುಪಾತದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿದೆ. ಹಾಗಾಗಿ ಆಯ್ಕೆ ಮಾಡಲಾಗಿದೆ. ಹೆಣ್ಣು ಮಕ್ಕಳ ಸಂಖ್ಯೆ ಅತ್ಯಂತ ಕಡಿಮೆ ಇರುವ ಗ್ರಾಮಪಂಚಾಯ್ತಿಗಳನ್ನೇ ಆಯ್ಕೆ ಮಾಡಿಕೊಂಡು 11 ತಿಂಗಳು ಜಾಗೃತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಿಸಿಎಫ್‌ಎಸ್ ಸಮನ್ವಯಕಾರರಾದ ವಿಜಯಪುರದ ಡಾ.ಭಾರತಿ ಪಾಟೀಲ ಹೇಳುತ್ತಾರೆ.

ಮೋಕ್ಷದ ತಪ್ಪು ಕಲ್ಪನೆ:  ಹೆಣ್ಣು ಮಕ್ಕಳು ದೊಡ್ಡವರಾದ ಮೇಲೂ ಬೇರೆ ಮನೆಗೆ ಹೋಗುತ್ತಾರೆ. ಹಾಗಾಗಿ ಗಂಡು ಮಕ್ಕಳಿಂದ ಮಾತ್ರ ಮೋಕ್ಷ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಜನಸಾಮಾನ್ಯರಲ್ಲಿದೆ. ವರದಕ್ಷಿಣೆ ಪಿಡುಗು, ಮೂಢನಂಬಿಕೆಗಳಿಂದಾಗಿ ಹೆಣ್ಣು ಮಕ್ಕಳ ಬಗ್ಗೆ ತಾತ್ಸಾರ ಭಾವನೆ ಮೂಡಿ ಲಿಂಗಾನುಪಾತದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬರುತ್ತಿದೆ. ಆ ಭಾವನೆ ಹೋಗಲಾಡಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಅವರು ತಿಳಿಸಿದರು.

ಸ್ವಯಂ ಸೇವಕರ ತಂಡ ರಚನೆ:  ರಾಜ್ಯ ಮಹಿಳಾ ಸಂಪನ್ಮೂಲ ಕೇಂದ್ರ ಯೋಜನೆಯ ಅನುಷ್ಠಾನಗೊಳಿಸುತ್ತಿದೆ. ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ವಾಸವಿರುವ ಇಬ್ಬರು ಸ್ವಯಂ ಸೇವಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರೊಂದಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಕೈ ಜೋಡಿಸಲಿದ್ದಾರೆ.

ಈ ತಂಡ ಹೆಣ್ಣು ಭ್ರೂಣ ಹತ್ಯೆಯಂತಹ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ. ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾದರೆ ಆಗುವ ಪರಿಣಾಮಗಳ ಬಗ್ಗೆ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.  ಗ್ರಾಮೀಣ ಪ್ರದೇಶದಲ್ಲಿ ಸಮುದಾಯಿಕ ಚಟುವಟಿಕೆಗಳಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ನೋಡಿಕೊಂಡು ಗ್ರಾಮಸಭೆ ಹಾಗೂ ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಉತ್ತೇಜಿಸಲಿದ್ದಾರೆ.

ಮಹಿಳೆಯರ ಸಮಸ್ಯೆಗಳ ಬಗ್ಗೆ ಜಾಗೃತಿ, ಚರ್ಚೆ ನಡೆಸಲು ಸಭೆಗಳನ್ನು ಆಯೋಜಿಸಿ ವೇದಿಕೆ ಕಲ್ಪಿಸುವುದು. ಮನೆ ಮನೆ ಭೇಟಿ ಕೈಗೊಂಡು ಮಹಿಳೆಯರಿಗೆ ಮೀಸಲಾದ ಸರ್ಕಾರದ ಯೋಜನೆ, ಕಾರ್ಯಕ್ರಮಗಳು ಹಾಗೂ ಸೇವೆಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈ ಸವಲತ್ತುಗಳು ಸುಲಭವಾಗಿ ದೊರೆಯುವಂತೆ ಮಾಡಲಿದ್ದಾರೆ.

ಸೌಲಭ್ಯ ನೀಡಿಕೆಯಲ್ಲಿ ವಿಳಂಬ, ನಿರಾಕರಣೆಯಾದರೆ ಆ ಬಗ್ಗೆ ಗ್ರಾಮ ಸಮನ್ವಯ ಸಮಿತಿ, ಗ್ರಾಮಸಭೆಗಳಲ್ಲಿ ಚರ್ಚಿಸಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಮನೆಗಳ ಸಮೀಕ್ಷೆ ಮಾಡಿ ಮಹಿಳೆಯರ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆ, ಅವರ ಮೇಲಿನ ನಿರಂತರ  ದೌರ್ಜನ್ಯ ಕಡಿಮೆ ಮಾಡುವುದಕ್ಕೆ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ.

ಲಿಂಗಾನುಪಾತದ ನಿಖರ ಅಂಕಿ–ಅಂಶ ಸಂಗ್ರಹ ಹಾಗೂ ಕಾಲಕಾಲಕ್ಕೆ ಅದರ ಪರಿಷ್ಕರಣೆ ಕಾರ್ಯ ಕೈಗೆತ್ತಿಕೊಳ್ಳಲಿದ್ದಾರೆ. ಆಯಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ನೇತೃತ್ವದ ಜಿಲ್ಲಾ ಮಟ್ಟದ ಕಾರ್ಯಪಡೆ ಈ ಚಟುವಟಿಕೆಗಳ ಮೇಲ್ವಿಚಾರಣೆ  ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT