ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾತ್ಕಾಲಿಕ ಪರಿಹಾರ ಮಾತುಕತೆಗೆ ಮುಂದಾಗಿ

Last Updated 11 ಮೇ 2017, 19:30 IST
ಅಕ್ಷರ ಗಾತ್ರ

ಭಾರತದ ನಿವೃತ್ತ ನೌಕಾ ಅಧಿಕಾರಿ  ಕುಲಭೂಷಣ್ ಜಾಧವ್ ಅವರಿಗೆ ಗೂಢಚರ್ಯೆ ಆರೋಪದಲ್ಲಿ  ಪಾಕಿಸ್ತಾನದ ಸೇನಾ ನ್ಯಾಯಾಲಯ ವಿಧಿಸಿರುವ ಮರಣ ದಂಡನೆಗೆ ಹೇಗ್‌ನಲ್ಲಿರುವ ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಡೆ ನೀಡಿದೆ.  ಸದ್ಯಕ್ಕಂತೂ ಭಾರತಕ್ಕೆ ತಾತ್ಕಾಲಿಕವಾಗಿ ದೊರೆತ ದೊಡ್ಡ ಪರಿಹಾರ ಇದು.  ‘ಕೂಲಂಕಷವಾಗಿ ಪರಿಶೀಲನೆ ನಡೆಸಿದ ನಂತರವೇ ಈ ವಿಚಾರದ ಬಗ್ಗೆ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಯಿತು’ ಎಂದು ಭಾರತ ಹೇಳಿದೆ. 

ಈಗ ಮರಣದಂಡನೆಗೆ ತಡೆ ಆದೇಶ ಸಿಕ್ಕಿರುವುದು ಒಂದು ರೀತಿಯಲ್ಲಿ  ರಾಜತಾಂತ್ರಿಕ ಗೆಲುವು ಎಂದು ಹೇಳಿಕೊಳ್ಳಬಹುದು. ಕಳೆದ ವರ್ಷದ ಮಾರ್ಚ್ ತಿಂಗಳಿಂದಲೂ  ಪಾಕಿಸ್ತಾನದ ವಶದಲ್ಲಿದ್ದು ಈಗ ಮರಣದಂಡನೆಗೆ ಗುರಿಯಾಗಿರುವ ಜಾಧವ್ ಅವರನ್ನು ರಕ್ಷಿಸುವ ಭಾರತದ ಪ್ರಯತ್ನಕ್ಕೆ  ಅಂತೂ ಒಂದಿಷ್ಟು ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ.  ಈ ವಿಚಾರದಲ್ಲಿ ತಾನು ತೀರ್ಪು ನೀಡುವವರೆಗೂ  ಮರಣ ದಂಡನೆ ಜಾರಿ ಮಾಡಬಾರದೆಂದು ಪಾಕಿಸ್ತಾನದ ಪ್ರಧಾನಿಗೆ ಐಸಿಜೆ  ಪತ್ರ ಬರೆದಿದೆ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಸೋಮವಾರ ಭಾರತ ಮತ್ತು ಪಾಕಿಸ್ತಾನದ ವಾದಗಳ ವಿಚಾರಣೆಯನ್ನೂ ಐಸಿಜೆ ನಡೆಸಲಿದೆ. ಬಂಧಿತ ವಿದೇಶಿ ಪ್ರಜೆಗೆ ಆ ದೇಶದ ಕಾನ್ಸಲ್ ಕಚೇರಿ ಜತೆ ಸಂಪರ್ಕಕ್ಕೆ ಅವಕಾಶ  ಕೊಡಬೇಕು ಎಂದು ವಿಯೆನ್ನಾ ಒಪ್ಪಂದ ಹೇಳುತ್ತದೆ.  ಆದರೆ ಭಾರತ ಹಲವು ಬಾರಿ ಮನವಿ ಮಾಡಿದರೂ ಜಾಧವ್ ಜೊತೆ ಸಂಪರ್ಕಕ್ಕೆ ಪಾಕಿಸ್ತಾನ ಅವಕಾಶ ನೀಡಿಲ್ಲ ಎಂಬ ವಾದವನ್ನು ಭಾರತ ಮಂಡಿಸಿದೆ.  ಈಗ, ವಿಯೆನ್ನಾ ಒಪ್ಪಂದದ ಅನುಸಾರ ಪಾಕಿಸ್ತಾನ ನಡೆದುಕೊಳ್ಳುತ್ತದೆ ಎಂಬಂತಹ ಆಶಾಭಾವ ಭಾರತದ್ದಾಗಿದೆ.

ಪಾಕಿಸ್ತಾನದ ಜೊತೆಗಿನ  ಈ ವಿವಾದ ಪರಿಹಾರಕ್ಕಾಗಿ  ಮೂರನೆಯವರನ್ನು ಭಾರತ ತೊಡಗಿಸಿಕೊಂಡಿದ್ದೇ ಇಲ್ಲಿ ಅಚ್ಚರಿಯ ಸಂಗತಿ. ಇದು ಈವರೆಗೆ ಕಟ್ಟಿಕೊಂಡು ಬಂದಿರುವ ಭಾರತದ ವಿದೇಶಾಂಗ ನೀತಿಯ ಮೂಲ ತತ್ವಗಳಿಗೆ  ತದ್ವಿರುದ್ಧವಾದದ್ದು. ಹೀಗಾಗಿ ಇದು ಕೆಲವು ವಲಯಗಳಲ್ಲಿ ಟೀಕೆಗಳಿಗೆ ಕಾರಣವಾಗಬಹುದು. ಆದರೆ ಸಂಘರ್ಷ ಪರಿಹಾರದಲ್ಲಿ ಹೊಸ ಮಾರ್ಗ ತೆರೆದಂತಾಗಿದೆ ಎಂದೂ ಭಾವಿಸಬಹುದು. 

ಬಹುಶಃ ಈ ಪ್ರಕರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಆದ್ಯತೆಗೂ ಇದು ದ್ಯೋತಕ. ವಿವಾದ ಪರಿಹಾರದಲ್ಲಿ ಮೂರನೆಯ ಪಕ್ಷ  ಅಥವಾ ಬಹುಪಕ್ಷೀಯ ಒಳಗೊಳ್ಳುವಿಕೆ   ನಿರಾಕರಣೆ ಮೂಲಕ ರಾಷ್ಟ್ರದ  ಸಾರ್ವಭೌಮತ್ವ ಪ್ರತಿಪಾದಿಸುವಂತಹದ್ದು ನೆಹರೂ ಅವರ ಪರಿಕಲ್ಪನೆ. ತನ್ನ ವ್ಯವಹಾರಗಳನ್ನು ನಿರ್ವಹಿಸಿಕೊಳ್ಳಲು  ಭಾರತಕ್ಕೆ ಯಾವುದೇ  ಹೊರಗಿನ ಅಧಿಕಾರ ಶಕ್ತಿಯ ನೆರವಿನ ಅಗತ್ಯವಿಲ್ಲ ಎಂಬುದು ಇದರ ಹಿಂದಿರುವ ಸಿದ್ಧಾಂತ ಎಂಬುದನ್ನು ನೆನಪಿಸಿಕೊಳ್ಳಬಹುದು. 

ಐಸಿಜೆಯಲ್ಲಿ ಬರುವ ಸೋಮವಾರ ಈ ಪ್ರಕರಣದ ವಿಚಾರಣೆ ಆರಂಭವಾದಾಗ ಪಾಕಿಸ್ತಾನ ತನ್ನ ನಿಲುವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ನಿರೀಕ್ಷೆಯೂ  ಇದೆ. ‘ಜಾಧವ್ ಅವರಿಗೆ ಯಾಕೆ ಮರಣ ದಂಡನೆ ನೀಡಲಾಗಿದೆ ಎಂಬುದನ್ನು ಯಾವುದೇ ನ್ಯಾಯಾಲಯಕ್ಕೆ ವಿವರಿಸಲು ಸಿದ್ಧ’ ಎಂದು ಪಾಕಿಸ್ತಾನದ ಸೇನೆ ಈಗಾಗಲೇ ಹೇಳಿದೆ.  ಅಲ್ಲದೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಐಸಿಜೆಗೆ ಅಧಿಕಾರವಿದೆಯೇ ಎಂಬುದನ್ನೂ ಪರಿಶೀಲಿಸಲಾಗುವುದು ಎಂದೂ ಪಾಕಿಸ್ತಾನ ಹೇಳಿದೆ.  ಆದರೆ ಈ ವಿಚಾರದಲ್ಲಿ ಬಿಗಿಪಟ್ಟು ಸಡಿಲಿಸಿ ಭಾರತ– ಪಾಕಿಸ್ತಾನ  ಮಾತುಕತೆ ಎಳೆಗಳನ್ನು ಎತ್ತಿಕೊಳ್ಳಬೇಕಿರುವುದು ಅಪೇಕ್ಷಣೀಯ ಕ್ರಮ.  ಭಾರತ ಮತ್ತು ಪಾಕಿಸ್ತಾನದ ನಡುವಣ ಯಾವುದೇ ವಿವಾದವನ್ನು 1972ರ ಶಿಮ್ಲಾ ಒಪ್ಪಂದದ ಪ್ರಕಾರ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕು ಎಂದು ಭಾರತ ಹಿಂದಿನಿಂದಲೂ ಪ್ರತಿಪಾದಿಸುತ್ತಾ ಬಂದಿದೆ.  ಉಪಖಂಡದಲ್ಲಿ ಶಾಂತಿ ಹಾಗೂ ಸ್ಥಿರತೆಗಾಗಿ ಪಾಕಿಸ್ತಾನವೂ ಇದಕ್ಕೆ ಬದ್ಧವಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT