ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನ ದಿನದಿಂದ ಅಣು ಪರೀಕ್ಷೆಯವರೆಗೆ...

Last Updated 11 ಮೇ 2017, 20:19 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯನ್ನು ಯಾವ ವರ್ಷದಿಂದ ಆರಂಭಿಸಲಾಯಿತು? ನಿರ್ಮಾಣ ಪೂರ್ಣಗೊಂಡ ದಿನವೇ ಪ್ರಯೋಗಾರ್ಥ ಪರೀಕ್ಷೆ ಮಾಡಲಾದ ಕ್ಷಿಪಣಿ ಯಾವುದು? ಹೆಚ್ಚು ರೊಬೊಟ್‌ಗಳನ್ನು ಹೊಂದಿರುವ ದೇಶ ಯಾವುದು?

ಈ ರೀತಿಯ ಪ್ರಶ್ನೆಗಳು ತೂರಿಬರುತ್ತಿದ್ದಾಗ ಉತ್ತರಿಸಲು ಶಾಲಾ ಮಕ್ಕಳು ಉತ್ಸುಕರಾಗಿ ಕೈ ಎತ್ತುತ್ತಿದ್ದರು. ಆತುರಪಟ್ಟವರ ಉತ್ತರಗಳು ತಪ್ಪಾಗಿ ಬಹುಮಾನವೂ ಕೈತಪ್ಪಿತ್ತು. ಕ್ಷಣಕಾಲ ಯೋಚಿಸಿ ಉತ್ತರಿಸಿದ ಮಕ್ಕಳು ಬಹುಮಾನ ಪಡೆದರು.

ರಾಷ್ಟ್ರೀಯ ವಿಜ್ಞಾನ ಸ್ಪರ್ಧಾಸಮೂಹವು ‘ರಾಷ್ಟ್ರೀಯ ತಾಂತ್ರಿಕತೆ ದಿನ’ದ ಪ್ರಯುಕ್ತ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಗುರುವಾರ ಆಯೋಜಿಸಿದ್ದ ‘ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ’ದಲ್ಲಿ ಕಂಡುಬಂದ ಚಿತ್ರಣವಿದು.

‘ತಂತ್ರಜ್ಞಾನ ದಿನಾಚರಣೆ ಆರಂಭವಾದ ವರ್ಷ 1999. ತ್ರಿಶೂಲ್‌ ಕ್ಷಿಪಣಿ ನಿರ್ಮಾಣ ಪೂರ್ಣಗೊಂಡ ದಿನವೇ ಪರೀಕ್ಷಾರ್ಥ ಪ್ರಯೋಗ ಮಾಡಲಾಯಿತು. ಜಪಾನ್‌ನಲ್ಲಿ ಹೆಚ್ಚು ರೊಬೊಟ್‌ಗಳಿವೆ’ ಎಂಬ ಸರಿ ಉತ್ತರಗಳು ವಿದ್ಯಾರ್ಥಿಗಳು ಹೇಳಿದಾಗ ಕರತಾಡನ ಕೇಳಿಬಂತು.

ಭಾರತ ಯಾವ ವರ್ಷ, ಎಲ್ಲಿ ಮೊದಲ ಅಣುಬಾಂಬ್‌ ಪರೀಕ್ಷೆ ಮಾಡಿತು, ಪರೀಕ್ಷೆಗೆ ಇಟ್ಟಿದ್ದ ರಹಸ್ಯ ಹೆಸರೇನು? ಎಂಬ ಪ್ರಶ್ನೆ ಕೇಳಿದಾಗ, ‘1974ರಲ್ಲಿ ರಾಜಸ್ತಾನದ ಪೊಖ್ರಾನ್‌ನಲ್ಲಿ ಅಣುಬಾಂಬ್‌ ಪರೀಕ್ಷೆ ನಡೆಸಲಾಯಿತು. ಅದಕ್ಕೆ ಸ್ಮೈಲಿಂಗ್‌ ಬುದ್ಧ ಎಂಬ ರಹಸ್ಯ ಹೆಸರಿಡಲಾಗಿತ್ತು’ ಎಂದು ಸುಜ್ಞಾನ ಶಾಲೆಯ ವಿದ್ಯಾರ್ಥಿನಿ ಸುಜಾತ ಸರಿ ಉತ್ತರ ನೀಡಿದಳು.

‘ಈ ವರ್ಷದ ಫೆಬ್ರುವರಿ 15 ರಂದು ಉಪಗ್ರಹಗಳನ್ನು ಬಾಹ್ಯಕಾಶಕ್ಕೆ ಸೇರಿಸಲಾಯಿತು. ಪಾಶ್ಚರೀಕರಣದಿಂದ ನೀರಿನಲ್ಲಿನ ಕೀಟಾಣು ಕೊಲ್ಲಬಹುದು. ಹೈಡ್ರೊಪೊನಿಕ್ಸ್‌ ವಿಧಾನದಲ್ಲಿ ಸಸಿಗಳನ್ನು ಬೆಳೆಸಲು   ಮಣ್ಣು ಬೇಕಾಗಿಲ್ಲ’ ಎಂದು ವಿದ್ಯಾರ್ಥಿಗಳು ಉತ್ತರಿಸಿದರು.

ರಸಪ್ರಶ್ನೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದ್ದರು. ಸರಿ ಉತ್ತರ ನೀಡಿದ ಮಕ್ಕಳಿಗೆ ವಿಜ್ಞಾನದ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು.

ಬಿ.ಆರ್‌.ವಿಶ್ವನಾಥ್ ಹಾಗೂ ಆರ್.ಕೆ.ಬಿಸ್ವಾಲ್‌ ಅವರು ಕ್ವಿಜ್‌ ಮಾಸ್ಟರ್‌ ಆಗಿ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT