ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ಕಥನದ ಸಾಮಾನ್ಯ ವಾಚನ

Last Updated 12 ಮೇ 2017, 13:05 IST
ಅಕ್ಷರ ಗಾತ್ರ

ಸಿನಿಮಾ: ಲಿಫ್ಟ್‌ ಮ್ಯಾನ್‌
ನಿರ್ಮಾಪಕರು: ರಾಮ್‌ ನಾಯಕ್‌
ತಾರಾಬಳಗ: ಸುಂದರ್‌ರಾಜ್‌, ನಿಹಾರಿಕಾ, ಶೀತಲ್‌ ಶೆಟ್ಟಿ

ಮಂಜಪ್ಪನಿಗೆ ಕಾವೇರಿಯ ಮೇಲೆ ಪ್ರೀತಿ. ಆದರೆ ಅವನು ಕಾವೇರಿಯನ್ನು ಮದುವೆ ಆಗಬೇಕು ಅಂದರೆ ಒಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು. ಕೆಲಸ ಕೇಳಲಿಕ್ಕೆ ಎಂದು ವಿಧಾನಸೌದಕ್ಕೆ ಹೋಗುವ ಮಂಜಪ್ಪ ಅಚಾನಕ್‌ ಆಗಿ ಅಲ್ಲಿಯ ಲಿಫ್ಟ್‌ ನಿರ್ವಾಹಕನಾಗಿಬಿಡುತ್ತಾನೆ.

ಇಪ್ಪತ್ತು ವರ್ಷಗಳ ಕಾಲ ಒಂದೇ ಲಿಫ್ಟ್‌ನಲ್ಲಿ ನಿರ್ವಾಹಕನಾಗಿ ಕೆಲಸ ಮಾಡಿರುವವನ ಏರಿಳಿತಗಳ ಬದುಕನ್ನು ಇಟ್ಟುಕೊಂಡು ‘ಲಿಫ್ಟ್‌ ಮ್ಯಾನ್‌’ ಸಿನಿಮಾ ಕಟ್ಟಿದ್ದಾರೆ ನಿರ್ದೇಶಕ ಕಾರಂಜಿ ಶ್ರೀಧರ್‌.

ಆ ಲಿಫ್ಟ್‌ ಮಂಜಪ್ಪನ ಬದುಕಿನ ಭಾಗವೇ ಆಗಿಬಿಟ್ಟಿದೆ. ಅದರ ಮೂಲಕವೇ ಅವನು ಸಮಾಜಕ್ಕೆ ಕಾಣದ ಮತ್ತೊಂದು ಜಗತ್ತನ್ನೂ, ಅನೇಕ ಮನುಷ್ಯರ ಮತ್ತೊಂದು ಮುಖವನ್ನೂ ನೋಡುತ್ತಿರುತ್ತಾನೆ.

‘ಇನ್ನೊಬ್ಬರ ಮುಖದ ನಗುವಲ್ಲಿ ನಮ್ಮ ಸುಖವನ್ನು ಹುಡುಕಬೇಕು’ ಎಂಬ ಮಂಜಪ್ಪನ ನಂಬಿಕೆಯ ಕಾರಣಕ್ಕೆ ಅವನು ತನ್ನದೇ ಕುಟುಂಬದ ವಿರೋಧವನ್ನು ಎದುರಿಸಬೇಕಾಗುತ್ತದೆ. ಒಳ್ಳೆಯತನವೇ ಅವನ ಕೆಲಸವನ್ನು ಅಧಿಕೃತಗೊಳಿಸುತ್ತದೆ. ಹಾಗೆಯೇ ಪತ್ನಿಯೊಂದಿಗೆ ಮನಸ್ಸು ಕೆಡಿಸಿಕೊಳ್ಳಲಿಕ್ಕೂ ಕಾರಣವಾಗುತ್ತದೆ.

ಸಿನಿಮಾ ಪ್ರಾರಂಭವಾಗುವುದು ಟೀವಿ ವಾಹಿನಿಯೊಂದರ ನೇರಪ್ರಸಾರದ ಕಾರ್ಯಕ್ರಮದ ಮೂಲಕ. ಈ ಕಾರ್ಯಕ್ರಮದಲ್ಲಿ ಲಿಫ್ಟ್‌ ಮ್ಯಾನ್‌ ಮಂಜಪ್ಪ ತನ್ನ ಬದುಕು ಮತ್ತು ತಾನು ಲಿಫ್ಟ್‌ನಲ್ಲಿ ಕಂಡ ಬದುಕಿನ ತುಣುಕುಗಳನ್ನು ಹೇಳುತ್ತಾ ಹೋಗುತ್ತಾನೆ.

ವಿಭಿನ್ನವಾದ ವಸ್ತುವನ್ನು ಆಯ್ದುಕೊಂಡಿದ್ದರೂ ನೀರಸ ನಿರೂಪಣೆಯ ಶೈಲಿಯೇ ಸಿನಿಮಾಕ್ಕೆ ಮಾರಕವಾಗಿದೆ. ವಾಹಿನಿಯ ‘ನೇರ ಪ್ರಸಾರ’ದ ಮೂಡ್‌ನಿಂದ ಪ್ರೇಕ್ಷಕರನ್ನು ಹೊರತರುವಲ್ಲಿ ನಿರ್ದೇಶಕರು ವಿಫಲರಾಗಿದ್ದಾರೆ. ಇದಕ್ಕೆ ಕಾರಣ ದುರ್ಬಲ ಚಿತ್ರಕಥೆ. ಮಂಜಪ್ಪ ಹೇಳುವ ಘಟನೆಗಳು ಬಿಡಿಬಿಡಿ ಘಟನೆಗಳಾಗಿಯೇ ಉಳಿಯುತ್ತವೆಯೇ ಹೊರತು, ಬದುಕಿನ ಕುರಿತ ಅನುಭವವನ್ನು ಇಡಿಯಾಗಿ ಕಟ್ಟಿಕೊಡುವುದೇ ಇಲ್ಲ.

ಮಂಜಪ್ಪನನ್ನು ಎದುರಿಗೆ ಕೂಡಿಸಿಕೊಂಡೇ ನಿರೂಪಕಿ (ಶೀತಲ್‌ ಶೆಟ್ಟಿ) ಸುದ್ದಿ ಮುಖ್ಯಾಂಶಗಳನ್ನು  ಓದುತ್ತಾಳೆ. ಆ ವಾರ್ತಾ ವಾಚನದ ಗುಣವೇ ಇಡೀ ಚಿತ್ರದಲ್ಲಿಯೂ ಮುಂದುವರಿದಿದೆ. ಆದ್ದರಿಂದ ಮಂಜಪ್ಪನ ಬದುಕಿನ ಘಟನೆಗಳೂ ವರದಿಯಾಗಿಯೇ ನಮ್ಮನ್ನು ತಲುಪುತ್ತವೆಯೇ ಹೊರತು ಭಾವಕೋಶವನ್ನು ಮೀಟಲು ಸಮರ್ಥವಾಗಿಲ್ಲ.

ಲಿಫ್ಟ್‌ನೊಳಗಿನ ಸಣ್ಣ ಜಾಗ, ಮನೆಯ ಒಂದು ಹಾಲ್‌ನಲ್ಲಿಯೇ ಬಹುತೇಕ ನಡೆಯುವ ಕಥೆಯಲ್ಲಿನ ಏಕತಾನತೆಯನ್ನು ಮುರಿಯುವಲ್ಲಿ ಛಾಯಾಗ್ರಾಹಕ ಲಕ್ಷ್ಮೀನಾರಾಯಣ ಯಶಸ್ವಿಯಾಗಿಲ್ಲ. ಧ್ವನಿಜೋಡಣೆ ಮತ್ತು ಸಂಕಲನವೂ ತೃಪ್ತಿಕರ ಎನ್ನಿಸುವುದಿಲ್ಲ. ಪ್ರವೀಣ್‌ ಗೋಡ್ಖಿಂಡಿ ಸಂಗೀತಕ್ಕೂ ಸಿನಿಮಾವನ್ನು ‘ಲಿಫ್ಟ್‌’ ಮಾಡಲು ಸಾಧ್ಯವಾಗಿಲ್ಲ.

ಸಿನಿಮಾದ ಒಂದೆರಡು ದೃಶ್ಯಗಳು ಮನಸನ್ನು ಆರ್ದ್ರಗೊಳಿಸುತ್ತವೆ. ಕೆಲವು ಸಂಭಾಷಣೆಗಳು ಸಿನಿಮಾ ಮುಗಿದ ಮೇಲೆಯೂ  ಕಾಡುತ್ತಿರುತ್ತವೆ. ಸುಂದರ್‌ರಾಜ್‌ ಮಧ್ಯಮವರ್ಗದ ಮಂಜಪ್ಪನ ಪಾತ್ರಕ್ಕೆ ತಮ್ಮ ಇಷ್ಟು ವರ್ಷದ ನಟನಾಪ್ರತಿಭೆಯನ್ನು ಧಾರೆ ಎರೆದಂತಿದೆ. ಅವರಿಗೆ ಪೈಪೋಟಿ ನೀಡುವಂತೆ ನಿಹಾರಿಕಾ ನಟಿಸಿದ್ದಾರೆ. ಇವರಿಬ್ಬರ ಅಭಿನಯವೇ ಚಿತ್ರದ ಪ್ರಮುಖ ಧನಾತ್ಮಕ ಅಂಶ. ಶೀತಲ್‌ ಶೆಟ್ಟಿ, ಸುರೇಶ್‌ ಹೆಬ್ಳೀಕರ್‌, ಅರುಣಾ ಬಾಲರಾಜ್‌ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಒಟ್ಟಾರೆ ಬೇರೆ ಬೇರೆ ಕಡೆಗಳಿಂದ ಬಿಡಿ ದೃಶ್ಯಗಳನ್ನು ಕತ್ತರಿಸಿ ಜೋಡಿಸಿಟ್ಟಂತೆ ಕಾಣುವ ಲಿಫ್ಟ್‌ ಮ್ಯಾನ್‌, ನೋಡುವವರ ಮನಸ್ಸಿನಲ್ಲಿಯೂ ಅಪೂರ್ಣವಾಗಿಯೇ ಉಳಿದುಕೊಳ್ಳುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT