ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪು ತುಟಿಯ ಬಾವಲಿ ಮೀನು

Last Updated 12 ಮೇ 2017, 19:30 IST
ಅಕ್ಷರ ಗಾತ್ರ

ಲಿಪ್‌ಸ್ಟಿಕ್‌ ಬಳಿದುಕೊಂಡಂತಿರುವ ತುಟಿ ಇರುವ ಈ ವಿಚಿತ್ರ ಪ್ರಾಣಿ ಯಾವುದು ಗೊತ್ತೆ? ಅಯ್ಯೋ, ಅಷ್ಟೇಕೆ ತಲೆ ಕೆರೆದುಕೊಂಡು ಯೋಚ್ನೆ ಮಾಡ್ತೀರಿ. ಇದು ಒಂದು ‘ಮೀನು’ ಅಷ್ಟೇ.

ಈ ಜಲಚರವನ್ನು ಕೆಂಪು ತುಟಿಯ ಬಾವಲಿ ಮೀನು (ರೆಡ್ ಲಿಪ್ಡ್ ಬ್ಯಾಟ್‌ಫಿಶ್) ಎಂದು ಕರೆಯಲಾಗುತ್ತದೆ. ವಿಕಾಸವಾದವನ್ನು ಪ್ರತಿಪಾದಿಸಿದ ವಿಜ್ಞಾನಿ, ಚಾರ್ಲ್ಸ್ ಡಾರ್ವಿನ್‌ನ ನೆನಪಿಗಾಗಿ ‘ಆಗ್ಸೋಸೆಫಲಸ್ ಡಾರ್ವಿನ್” ಎಂದೂ ಸಹ ಇದನ್ನು ಕರೆಯುತ್ತಾರೆ.

ಇದು ಮೀನಿನ ಜಾತಿಗೆ ಸೇರಿದ್ದರೂ ಇದಕ್ಕೆ ಈಜಲು ಬರುವುದಿಲ್ಲ. ಇದರ  ಕಿವಿರುಗಳು ಮಾರ್ಪಾಡು ಹೊಂದಿರುವ ಕಾರಣ ಇದು ಕಡಲ ತಳದ ಮರಳ ನೆಲದ ಮೇಲೆ ಕುಳಿತುಕೊಳ್ಳಬಲ್ಲದು ಅಷ್ಟೇ. ನಡೆಯುವಾಗ ಅಡ್ಡಾದಿಡ್ಡಿ ಹೆಜ್ಜೆ ಹಾಕಿದಂತೆ ಕಾಣಿಸುತ್ತದೆ.

ಸಾಮಾನ್ಯವಾಗಿ ಕೆಂಪು ತುಟಿಯ ಬಾವಲಿ ಮೀನುಗಳು, ಪೆಸಿಫಿಕ್ ಸಮುದ್ರದ ಆಳದಲ್ಲಿ ಹಾಗೂ ಪೆರುವಿನ ಹತ್ತಿರವಿರುವ ಗ್ಯಾಲಾಪಗೋಸ್ ದ್ವೀಪಗಳ ಸುತ್ತಮುತ್ತಲಿರುವ ಸಮುದ್ರದಲ್ಲಿ, ಸುಮಾರು 30 ಅಡಿ ಅಳದಲ್ಲಿ ಜೀವಿಸುತ್ತವೆ.

ಈ ಮೀನು 25 ಸೆಂಟಿಮೀಟರ್ (10 ಇಂಚು) ಉದ್ದ ಬೆಳೆಯುತ್ತದೆ. ಇದರ ಚಪ್ಪಟೆ ದೇಹವನ್ನು ನೋಡಿದವರಿಗೆ ರೆಕ್ಕೆ ಚಾಚಿಕೊಂಡಿರುವ ಬಾವಲಿಯಂತೆ ಕಾಣುವುದರಿಂದ ಇದಕ್ಕೆ ಬಾವಲಿ ಮೀನು ಎಂಬ ಹೆಸರು ಬಂದಿದೆ.

ತಲೆಯ ಭಾಗದಲ್ಲಿ ಚೂಪಾಗಿರುವ, ಕೊಂಬಿನ ರೀತಿಯ ಮೂತಿಯು ಕೆಲವು ರೋಮಗಳನ್ನು ಹೊಂದಿರುತ್ತದೆ. ಎರಡು ಕಣ್ಣುಗಳ ಮಧ್ಯ ಭಾಗದಲ್ಲಿ ಮುಂದೆ ಚಾಚಿಕೊಂಡಿರುವ ಈ ಮೂತಿಯು ಬೇಟೆಯನ್ನು ಹಿಡಿಯಲು ಸಹಾಯಕ.

ಮುಳ್ಳುಗಳಿರುವ ಬಾಯಿಯಿಂದ ಗಾಢ ಕೆಂಪು ವರ್ಣದ ತುಟಿಗಳು ಜೋತು ಬಿದ್ದಿರುತ್ತವೆ. ಇವು ಹೊಟ್ಟೆಬಾಕ ಮಾಂಸಾಹಾರಿ ಪ್ರಾಣಿಗಳು. ಸಮುದ್ರದಲ್ಲಿರುವ ಸಣ್ಣ ಸಣ್ಣ ಮೀನುಗಳು, ಮೃದ್ವಂಗಿಗಳು, ಏಡಿಗಳು ಇವುಗಳ ಆಹಾರ.

ಈ ಕೆಂಪು ವರ್ಣದ ತುಟಿಗಳಿರುವುದು ಹೆಣ್ಣು ಮೀನನ್ನು ಆಕರ್ಷಿಸಲು ಎಂದು ಕೆಲವು ಜೀವಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ ಕೆಂಪು ತುಟಿಗಳ ನಿಖರ ಪ್ರಯೋಜನವೇನೆಂಬುದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT