ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆಯೆಂಬ ನಿತ್ಯ ಪ್ರಕೃತಿಚಿಕಿತ್ಸೆ

Last Updated 13 ಮೇ 2017, 3:41 IST
ಅಕ್ಷರ ಗಾತ್ರ

- ರಘು ಕೆ. ಸಿ.
ಸರಿಯಾಗಿ ನಿದ್ರೆ ಮಾಡುವಂತಾದರೆ, ಭ್ರಾಂತಿರೋಗವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಅಧ್ಯಯನ ಒಂದು ತಿಳಿಸಿದೆ.

ನಮ್ಮ ನಾಗರಿಕತೆ ತಾಂತ್ರಿಕವಾಗಿ ಮುಂದುವರಿದಂತೆ, ಬದುಕಿನ ಮೂಲಭೂತ ಸ್ವಾಭಾವಿಕ ವಿಷಯಗಳಾದ ಆಹಾರ, ನಿದ್ರಾ ಮತ್ತು ಮೈಥುನ ಜ್ವಲಂತ ಸಮಸ್ಯೆಗಳಾಗಿ ನಮ್ಮನ್ನು ಕಾಡತೊಡಗಿವೆ. ಇಂದು ನಿದ್ರಾತಜ್ಞರು, ಚಿಕಿತ್ಸಕರಿಗೆ ಎಲ್ಲಿಲ್ಲದ ಬೇಡಿಕೆ. ಅಂತರ್ಜಾಲದಲ್ಲಿ ನಿದ್ದೆಮಾಡಿಸಲು ಸಾವಿರಾರು ಆಪ್‌ಗಳು. ನಿದ್ರೆ ಅಳೆಯಲು ಕೈಗಡಿಯಾರ, ದಿಂಬಿನಡಿ ಇಡುವ ತಾಂತ್ರಿಕ ಸಾಧನಗಳು ಹತ್ತು ಹಲವು.

ಇದು ಬರಿಯ ಗಾಳಿಮಾತಿರಬಹುದೆಂದು ಸುತ್ತಮುತ್ತ ವಿಚಾರಿಸಿದರೆ, ಇವುಗಳನ್ನು ಬಳಸುವವರು ಕಡಿಮೆಯೇನಿಲ್ಲ. ‘ಬೆಡಿಟ್’ ಎಂಬುದು ನಿದ್ರಾ ಮಾನೀಟರನ್ನು ತಾಯಾರಿಸುವ ಕಂಪೆನಿ. ಅದನ್ನು ಮೊನ್ನೆ ತಾನೆ ಆಪಲ್ ಸಂಸ್ಥೆ   ಕೊಂಡುಕೊಂಡಿತು. ಅಮೆರಿಕಾದಲ್ಲಿ ಶೇ. 35ರಷ್ಟು ಜನರಿಗೆ ನಿದ್ರೆಯ ಸಮಸ್ಯೆ ಇದೆ ಎನ್ನುತ್ತದೆ, ಅಲ್ಲಿನ ಸೆಂಟರ್ ಫಾರ್ ಡಿಸೀಸ್ ಕಂಡ್ರೋಲ್ ಅಂಡ್ ಪ್ರಿವೆನ್ಷನ್.

‘ನಿದ್ರಾ ಉದ್ಯಮ’ ಇದಾಗಲೇ ಒಂದು ಕೋಟಿ ಡಾಲರ್ ದಾಟಿದೆ. ನಿದ್ರಾಭಂಗದಿಂದ ಹತ್ತು ಲಕ್ಷ ಕೋಟಿ ಡಾಲರ್‌ಗಳಷ್ಟು ಅಮೆರಿಕಾಕ್ಕೆ ನಷ್ಟವಾಗುತ್ತಿದೆ ಎನ್ನಲಾಗುತ್ತಿದೆ. ಈ ಸಮಸ್ಯೆ ಕೇವಲ ಅಮೆರಿಕಕ್ಕಷ್ಟೆ ಸಂಬಂಧಿಸಿದ್ದಲ್ಲ, ಜಗತ್ತಿನ ಎಲ್ಲೆಡೆ ಕಾಡುವ ವಿಷಯವಾಗಿದೆ.

ನಿದ್ರಾಭಂಗದಿಂದ ಪ್ರಪಂಚದಲ್ಲಿ ಆಗಿರುವ ಅನಾಹುತಗಳ ಪಟ್ಟಿಗೆ ಭೋಪಾಲ್ ಅನಿಲ ದುರಂತ, ಚರ್ನೊಬೈಲ್ ಅಣುಸ್ಥಾವರ ದುರಂತ, ಎಕ್ಸಾನ್ ಕಚ್ಚಾ ತೈಲ ದುರಂತ, ಅನೇಕ ವಿಮಾನ ದುರಂತ ಮತ್ತು ಕೈಗಾರಿಕ ಅನಾಹುತಗಳು ಜೊತೆಗೆ ನಿತ್ಯ ಕಾಣುತ್ತಿರುವ ಅಪಘಾತಗಳು ಸೇರಿವೆ.

ಇತ್ತೀಚಿನ ವರ್ಷಗಳಲ್ಲಿ ಸರಿಯಾಗಿ ನಿದ್ರೆಯಿಲ್ಲದೆ ಅನೇಕರು ವಿವಿಧ ಮಾನಸಿಕ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಅವುಗಳ ಪಟ್ಟಿಯಲ್ಲಿ ಅಲ್ಜೈಮರ್ಸ್, ಡಿಮೇನ್ಸಿಯಾ ಕೂಡ ಸೇರಿವೆ. ಹದಿನೈದು ದಿನಗಳಷ್ಟು ಸಮಯ ನಿದ್ರಾಭಂಗವಾದ ಇಲಿಗಳು ಸಾಯುತ್ತವೆ ಎನ್ನುವುದು ಪ್ರಯೋಗಗಳಿಂದ ತಿಳಿದುಬಂದಿದೆ. ನಿದ್ರಾಭಂಗವಾದ ಇಲಿಗಳು ಅತ್ಮಹತ್ಯೆ ಮಾಡಿಕೊಂಡಿರುವುದು ಇನ್ನೊಂದು ಪ್ರಯೋಗದಲ್ಲಿ ವರದಿಯಾಗಿದೆ.

ನಮ್ಮ ಮೆದುಳಿನಲ್ಲಿ ಒಂದು ಗಡಿಯಾರವಿದೆ. ಅದನ್ನು ನಡೆಸುತ್ತಿರುವವನು ಆ ಸೂರ್ಯ. ಇನ್ನೊಂದು ಅರ್ಥದಲ್ಲಿ ನಮ್ಮೊಳಗೆ ಆ ಸೂರ್ಯನಿದ್ದು ನಮ್ಮ ಬದುಕಿನ ಹತೋಟಿ ಅವನ ಕೈಯಲ್ಲಿದೆ ಎನ್ನಬಹುದು. ಇದನ್ನು ‘ಸರ್ಕೇಡಿಯನ್ ರಿಧಮ್’ ಎನ್ನುತ್ತಾರೆ. ಇನ್ನು ಕೆಲವು ವರದಿಯ ಪ್ರಕಾರ ಪ್ರತಿ ಜೀವಕೋಶದಲ್ಲಿ ಒಂದು ಗಡಿಯಾರವಿದೆ. ಅದು ಸೂರ್ಯನ ಉದಯ ಮತ್ತು ಅಸ್ತಮಾನಕ್ಕೆ ಹೊಂದಿಕೊಂಡಿದೆ.

ದೇಹದಲ್ಲಿ ಉತ್ಪತ್ತಿಯಾಗುವ ಅನೇಕ ಹಾರ್ಮೋನ್‌ಗಳಿಗೂ ಇದಕ್ಕೂ ಸಂಬಂಧವಿದೆ. ಮೆಲೊಟೊನಿನ್ ಎಂಬ ಹಾರ್ಮೋನ್‌ಗೆ ‘ರಾತ್ರಿ ಹಾರ್ಮೋನ್’ ಎಂದೇ ಹೆಸರು. ಇದರ ಕೊರತೆಯಾದರೆ ವಿವಿಧ ಕಾಯಿಲೆಗಳಿಗೆ ಆಹ್ವಾನ ಮಾಡಿದಂತೆ. ಸರಿಯಾಗಿ ನಿದ್ರೆ ಮಾಡುವಂತಾದರೆ, ಭ್ರಾಂತಿರೋಗವನ್ನು ಶೇ.50ರಷ್ಟು ಕಡಿಮೆ ಮಾಡಬಹುದು ಎನ್ನುತ್ತದೆ ಅಕ್ಸ್‌ಫ಼ರ್ಡ್ ವಿಶ್ವವಿದ್ಯಾಲಯದ ಅಧ್ಯಯನ.

ನಾವು ನೂರು ವರ್ಷ ಬದುಕಿದರೆ ಅದರಲ್ಲಿ 36 ವರ್ಷಗಳು ನಿದ್ರೆಯಲ್ಲಿ ಕಳೆದಿರುತ್ತದೆ. ಮೂರು ತಿಂಗಳಿನೊಳಗಿನ ಮಕ್ಕಳು ಆರೋಗ್ಯವಂತರಾಗಿರಲು ಸುಮಾರು ದಿನಕ್ಕೆ 18 ಗಂಟೆ ನಿದ್ರೆ ಮಾಡುತ್ತದೆ. ಒಂದು ವರ್ಷದೊಳಗಿನ ಮಕ್ಕಳಿಗೆ ದಿನಕ್ಕೆ ಸುಮಾರು 15 ಗಂಟೆಗಳ ನಿದ್ರೆ ಬೇಕಾಗುತ್ತದೆ. ಸುಮಾರು ಐದು ವರ್ಷದವರೆಗೆ 13 ಗಂಟೆಗಳ ನಿದ್ರೆ ಬೇಕಾಗುತ್ತದೆ.

ವಯಸ್ಕರಿಗೆ ದಿನಕ್ಕೆ ಸುಮಾರು ಏಳು ಗಂಟೆಗಳ ನಿದ್ರೆ ಬೇಕಾಗುತ್ತದೆ ಎನ್ನುತ್ತದೆ, ‘ನ್ಯು ಸೈನ್ಟಿಸ್ಟ್’ ವರದಿ. ವೈಯಕ್ತಿಕವಾಗಿ ಈ ನಿದ್ರಾ ಪ್ರಮಾಣದಲ್ಲಿ ವ್ಯತ್ಯಾಸವಿರಬಹುದು. ಸರಿಯಾದ ನಿದ್ರೆಯಿಂದ ನಮ್ಮ ಜ್ಞಾಪಕಶಕ್ತಿ ಹೆಚ್ಚುತ್ತದೆ. ಮೆದುಳಿನಲ್ಲಿ ಉಂಟಾಗುವ ಕಲ್ಮಶಗಳ ಹೊರಹಾಕುವ ಕೆಲಸ ನಿದ್ರೆಯ ಸಮಯದಲ್ಲಿ ನಡೆಯುತ್ತದೆ.

ದಿನದ ಒಟ್ಟು ಅನುಭವವನ್ನು ಕ್ರೋಡೀಕರಿಸಿ ಮುಂದೆ ಸಹಾಯವಾಗುವಂತೆ ಶೇಖರಿಸಿಡುವುದು – ಅಡುಗೆಯಾದ ಮೇಲೆ ಪಾತ್ರೆ ತೊಳೆದಂತೆ. ಥಾಮಸ್ ಅಲ್ವಾ ಎಡಿಸನ್ ‘sleep is a criminal waste of time, inherited from our cave days’ ಎಂದಿದ್ದ. ಸತ್ತ ಮೇಲೆ ನಿದ್ರೆಗೆ ಬೇಕಾದಷ್ಟು ಸಮಯವಿದೆ ಎಂದೂ ಹೇಳಿದ್ದ! ನಮ್ಮಲ್ಲೂ ನಿದ್ರೆಯನ್ನು ಗೆಲ್ಲುವುದರ ಬಗ್ಗೆ ಹೊಗಳಿಕೆಯ ಮಾತುಗಳಿವೆ. ಆದರೆ ನಿದ್ರೆಯ ಮಹತ್ವ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಯಲಿಗೆ ಬರುತ್ತಿದೆ.

ವಿಜ್ಞಾನ ಎಷ್ಟೇ ಮುಂದುವರಿದರೂ ಇಂದಿಗೂ ನಿದ್ರೆಯ ಬಗ್ಗೆ ನಮ್ಮ ಆರಿವು ಅತ್ಯಲ್ಪ. ‘ನಿದ್ರೆ ಬರುವುದರಿಂದ ನಿದ್ರೆ ಮಾಡುತ್ತೇವೆ’ ಎಂದು ಕೊನೆಗೆ ಹೇಳುವುದಾಗಿದೆ! ‘ದಿ ಸ್ಲೀಪ್ ರೆವಲೂಶನ್’ ಎಂಬ ಪುಸ್ತಕದಲ್ಲಿ ಎರಿಯಾನ ಹಫಿಂಗ್‌ಟನ್ ನಿದ್ರೆಯನ್ನು ಕುರಿತಾದ ಇತ್ತೀಚಿನ ಅಧ್ಯಯನಗಳನ್ನು ದಾಖಲಿಸಿದ್ದಾರೆ. ನಿದ್ರೆ, ಎಚ್ಚರ, ಕನುಸುಗಳ ಸುತ್ತ ವಿಜ್ಞಾನ, ಮನಃಶಾಸ್ತ್ರ, ತತ್ವಶಾಸ್ತ್ರ ಅನೇಕ ಸಿದ್ಧಾಂತಗಳನ್ನು ಕಟ್ಟಿಕೊಂಡಿದೆ.

ಭಾರತಿಯ ತತ್ವಶಾಸ್ತ್ರವು ಅವಸ್ಥಾತ್ರಯ ಮೀಮಾಂಸದ ಮೂಲಕ ವೇದಾಂತಶಾಸ್ತ್ರವನ್ನು ಮನಸ್ಸಿಗೆ ಮುಟ್ಟುವಂತೆ ತಿಳಿಸಿದೆ. ಒಬ್ಬ ಝೆನ್‌ಗುರು ‘ಜ್ಞಾನೋದಯವೆಂದರೆ ಬಾಯಾರಿಕೆಯಾದಾಗ ನೀರು ಕುಡಿಯುವುದು, ಹಸಿವಾದಾಗ ಊಟ ಮಾಡುವುದು, ನಿದ್ರೆ ಬಂದಾಗ ಮಲಗುವುದು’ ಎನ್ನುತ್ತಾನೆ! ಗೀತೆಯು ಸಹ ಯೋಗವೆಂದರೆ ನಿದ್ರೆ ಮತ್ತು ಎಚ್ಚರಗಳ ಸಾಮರಸ್ಯ ಎನ್ನುತ್ತದೆ.

ಶೇಕ್ಸ್‌ಪೀಯರ್ ನಿದ್ರೆಯ ಬಗ್ಗೆ ಹೀಗೆನ್ನುತ್ತಾನೆ:
Sleep that knits up the ravell’d sleave of care
The death of each day’s life, sore labour’s bath
Balm of hurt minds, great nature’s second course
Chief nourisher in life’s feast. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT