ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲ ನೀಡಿದ ‘ಪಾಸಿಂಗ್‌ ಪ್ಯಾಕೇಜ್‌’

Last Updated 13 ಮೇ 2017, 8:59 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಂಡಿದ್ದು ಶೇ 72.23 ದಾಖಲಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಮೂರು ವರ್ಷಗಳಿಂದ ರ್‌್ಯಾಂಕಿಂಗ್‌ ಪಟ್ಟಿಯಲ್ಲಿ ಕೊನೆಯ ಸ್ಥಾನಗಳಿಗೆ ಸೀಮಿತವಾಗಿದ್ದ ಜಿಲ್ಲೆ, ಈ ಬಾರಿ 20ನೇ ಸ್ಥಾನ ಪಡೆಯುವ ಜತೆಗೆ, ಫಲಿತಾಂಶದ ಶೇಕಡಾವಾರು ಗಳಿಕೆಯಲ್ಲೂ ಕೊಂಚ ಹೆಚ್ಚಳ ಪಡೆದಿರುವುದು ಶೈಕ್ಷಣಿಕ ವಲಯದಲ್ಲಿ ಸಂತಸ ಮೂಡಿಸಿದೆ.

2014ರಲ್ಲಿ 32ನೇ ಸ್ಥಾನ, ಶೇ 78.70 ಫಲಿತಾಂಶ ಗಳಿಸಿದ್ದರೆ, 2015ರಲ್ಲಿ 31ನೇ ಸ್ಥಾನ, ಶೇ 75.70, 2016ರಲ್ಲಿ 31ನೇ ಸ್ಥಾನ, ಶೇ 71.12ರಷ್ಟು ಫಲಿತಾಂಶವನ್ನು ಪಡೆದಿತ್ತು. ಮೂರು ವರ್ಷದಿಂದ ಫಲಿತಾಂಶದಲ್ಲಿ ಸತತ ಇಳಿಕೆಯಾಗಿತ್ತು. ಪ್ರಸ್ತುತ ಬಾರಿ ರ್‌್ಯಾಂಕಿಂಗ್‌ ಪಟ್ಟಿಯಲ್ಲಿ 11 ಸ್ಥಾನ ಮೇಲಕ್ಕೆ ಜಿಗಿದಿದ್ದು, ಫಲಿತಾಂಶದಲ್ಲೂ ಶೇ 1.11ರಷ್ಟು ಹೆಚ್ಚು ಗಳಿಸಿದೆ.

ಪಾಸಿಂಗ್ ಪ್ಯಾಕೇಜ್‌: ‘ಹಿಂದಿನ ವರ್ಷದ ಫಲಿತಾಂಶಕ್ಕಿಂತ ಹೆಚ್ಚಿನ ಸಾಧನೆ ಮಾಡಲು, ಜಿಲ್ಲೆಗಳ ರ್‌್ಯಾಂಕಿಂಗ್‌ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಗಳಿಸಿಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಲವು ಸುಧಾರಣಾ ಕ್ರಮ ತೆಗೆದುಕೊಂಡಿತ್ತು. ಇದರ ಪ್ರತಿಫಲ ಫಲಿತಾಂಶದಲ್ಲಿ ಹೊರಹೊಮ್ಮಿದೆ’ ಎಂದು ಡಿಡಿಪಿಐ ಶ್ರೀಶೈಲ ಎಸ್‌.ಬಿರಾದಾರ ತಿಳಿಸಿದರು.

‘ಶೈಕ್ಷಣಿಕ ವರ್ಷದ ಆರಂಭದಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸೂಚನೆಯಂತೆ ಕ್ರಮ ಕೈಗೊಳ್ಳಲಾಯಿತು. ಹಿಂದಿನ ವರ್ಷದಲ್ಲಿ ಉತ್ತಮ ಫಲಿತಾಂಶ ಗಳಿಸಿದ್ದ ಧಾರವಾಡ, ಚಿಕ್ಕೋಡಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜಿಲ್ಲೆಯ ಅಧ್ಯಯನ ತಂಡ ಕಳುಹಿಸಿಕೊಡಲಾಗಿತ್ತು’ ಎಂದರು.

ಅಲ್ಲಿ ಅಳವಡಿಸಿಕೊಂಡ ಉತ್ತಮ ಅಂಶಗಳನ್ನು ಕ್ರೋಢೀಕರಿಸಿ ಜಿಲ್ಲೆಯಲ್ಲಿ ಕ್ರಿಯಾಯೋಜನೆ ರೂಪಿಸಲಾಯಿತು. ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಯಿತು.
ಫಲಿತಾಂಶ ನಿರೀಕ್ಷಿತ:‘ಪರೀಕ್ಷೆ ಮುಗಿಯುತ್ತಿದ್ದಂತೆ ಈ ಬಾರಿಯ ರ್‌್ಯಾಂಕಿಂಗ್‌ನಲ್ಲಿ ಜಿಲ್ಲೆ ಸ್ಥಾನಮಾನ ವೃದ್ಧಿಸಿಕೊಳ್ಳುವುದು ಖಚಿತ. ಪರೀಕ್ಷಾ ಕೇಂದ್ರದ ಹೊರಭಾಗದಲ್ಲಿ ಭಾರಿ ಬಿಗಿ ಭದ್ರತೆಯಿದ್ದರೂ; ಒಳಭಾಗದಲ್ಲಿ ‘ಸರ್ಕಾರಿ ಸಾಮೂಹಿಕ ನಕಲಿನ ಪಾಸಿಂಗ್ ಪ್ಯಾಕೇಜ್‌’ ನಡೆಯಿತು’ ಎಂದು ಹೆಸರು ಬಹಿರಂಗ ಪಡಿಸಲಿಚ್ಚಿಸದ ವಿವಿಧ ಪ್ರೌಢಶಾಲೆಗಳ ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಮೂಹಿಕ ನಕಲ ನಡೆದಿರುವುದರಿಂದ ಫಲಿತಾಂಶದಲ್ಲಿ ಹೆಚ್ಚಳ ಕಾಣಬಹುದು ಎಂದು ಈ ಮೊದಲೇ ನಿಮಗೆ ಮಾಹಿತಿ ನೀಡಿದ್ದೆವು. ಈಗಲೂ ಇದಕ್ಕಿಂತಲೂ ಹೆಚ್ಚಿನದ್ದು ಹೇಳಲು ಸಾಧ್ಯವಿಲ್ಲ’ ಎಂದು ಕೆಲವು ಶಿಕ್ಷಕರು ಹೇಳಿದರು.

‘ಕೇಂದ್ರವಾರು ಪರೀಕ್ಷೆಗಳ ಫಲ’

‘ಕಿರು ಪರೀಕ್ಷೆಗಳನ್ನು ಸಹ ಶಾಲಾವಾರು ನಡೆಸದೆ ಕೇಂದ್ರವಾರು ನಡೆಸುವ ಮೂಲಕ ಮಕ್ಕಳಲ್ಲಿ ಆರಂಭದಿಂದಲೇ ಪರೀಕ್ಷಾ ಭಯ ಹೋಗಲಾಡಿಸಲಾಯಿತು. ಈ ಪರೀಕ್ಷೆಯಲ್ಲಿ ಕಡಿಮೆ ಸಾಮರ್ಥ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲಾಯಿತು’ ಎಂದು ಡಿಡಿಪಿಐ ಶ್ರೀಶೈಲ ಎಸ್‌.ಬಿರಾದಾರ ತಿಳಿಸಿದರು.

ಯಾವ ವಿಷಯದಲ್ಲಿ ವಿದ್ಯಾರ್ಥಿಗಳು ನಪಾಸಾಗಿದ್ದಾರೆ ಎಂಬುದರ ಮಾಹಿತಿ ಆಧಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರ ನಡೆಸಲಾಯಿತು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಬಿ.ಎಂ.ಪಾಟೀಲ ಫೌಂಡೇಷನ್‌ ವತಿಯಿಂದ ‘ಪಾಸಿಂಗ್‌ ಪ್ಯಾಕೇಜ್‌’ ಡೈರಿ ವಿತರಿಸಲಾಯಿತು.

ಕಡಿಮೆ ಸಾಮರ್ಥ್ಯ ಗಳಿಸಿದ ಬಹುತೇಕ ವಿದ್ಯಾರ್ಥಿಗಳಿಗೆ ಇದು ವರದಾನವಾಗಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆಯಾಗಿದ್ದರಿಂದ ಜಿಲ್ಲೆಯ ಫಲಿತಾಂಶದ ಜತೆ ಜತೆಗೆ ರ್‌್ಯಾಂಕಿಂಗ್‌ನಲ್ಲೂ 11 ಸ್ಥಾನ ಮೇಲಕ್ಕೆ ಜಿಗಿಯಲು ಕಾರಣವಾಗಿದೆ’ ಎಂದು ಡಿಡಿಪಿಐ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT