ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ಅನುದಾನ ರಹಿತ ಶಾಲೆಗಳ ಪ್ರತಿಶತ ಸಾಧನೆ

Last Updated 14 ಮೇ 2017, 7:19 IST
ಅಕ್ಷರ ಗಾತ್ರ

ಬೀದರ್‌: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳಿಗಿಂತ ಸರ್ಕಾರದ ಸೌಲಭ್ಯ ಪಡೆಯದ ಅನುದಾನ ರಹಿತ ಪ್ರೌಢ ಶಾಲೆಗಳೇ ಸ್ವಲ್ಪ ಮಟ್ಟಿಗೆ ಉತ್ತಮ ಸಾಧನೆ ಮಾಡಿವೆ. ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದ 11 ಶಾಲೆಗಳಲ್ಲಿ ಎರಡು ಸರ್ಕಾರಿ ಪ್ರೌಢಶಾಲೆಗಳು ಹಾಗೂ ಒಂದು ಅನುದಾನಿತ ಪ್ರೌಢ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಪಾಸಾಗಿದ್ದಾರೆ. ಅನುದಾನ ರಹಿತ 8 ಎಂಟು ಶಾಲೆಗಳು ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದಿವೆ.

2015ರಲ್ಲಿ 32 ಹಾಗೂ 2016ರಲ್ಲಿ 29 ಪ್ರೌಢಶಾಲೆಗಳ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದರು. ಸಕಲ ಸೌಲಭ್ಯ ಪಡೆಯುವ ಸರ್ಕಾರಿ ಹಾಗೂ ಅನುದಾನಿತ ಪ್ರೌಢ ಶಾಲೆಗಳ ಫಲಿತಾಂಶ ಕಳೆದ ಮೂರು ವರ್ಷಗಳಿಂದ ಕುಸಿಯುತ್ತಲೇ ಇದ್ದು,  ಪಾಲಕರಲ್ಲಿ ಆತಂಕ ಸೃಷ್ಟಿಸಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬೀದರ್‌ ಜಿಲ್ಲೆಯಲ್ಲಿ ಶೇ 68.92ರಷ್ಟು ಫಲಿತಾಂಶ ಪಡೆದ ಹುಮನಾಬಾದ್‌ ತಾಲ್ಲೂಕು ಮೊದಲ ಹಾಗೂ ಶೇ 68.04ರಷ್ಟು ಫಲಿತಾಂಶ ಪಡೆದ ಭಾಲ್ಕಿ ಎರಡನೇ ಸ್ಥಾನದಲ್ಲಿದೆ. ಶೇ 59.24 ಫಲಿತಾಂಶ ಪಡೆದ ಔರಾದ್‌ ಹಾಗೂ ಶೇ 57.51ರಷ್ಟು ಫಲಿತಾಂಶ ಪಡೆದ ಬೀದರ್‌ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ಗುರುತಿಸಿಕೊಂಡಿವೆ. ಶೇ 55.53ರಷ್ಟು ಫಲಿತಾಂಶ ಪಡೆದು ಕಳಪೆ ಸಾಧನೆ ಮಾಡಿರುವ ಬಸವಕಲ್ಯಾಣ ಕೊನೆಯ ಸ್ಥಾನದ ಕಳಂಕ ಹೊತ್ತುಕೊಂಡಿದೆ.

ಅನುದಾನ ರಹಿತ ಏಳು ಪ್ರೌಢ ಶಾಲೆಗಳಲ್ಲಿ ಒಂದು ವಿದ್ಯಾರ್ಥಿಯೂ ಪಾಸಾಗಿಲ್ಲ. 2015ರಲ್ಲಿ ಆರು ಶಾಲೆಗಳು ಹಾಗೂ 2016ರಲ್ಲಿ ಐದು ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದವು. ಶೂನ್ಯ ಫಲಿತಾಂಶ ಪಡೆಯುವ ಶಾಲೆಗಳ ಸಂಖ್ಯೆ ಮೂರು ವರ್ಷಗಳಿಂದ ಹೆಚ್ಚುತ್ತಲೇ ಇದೆ. ಬಸವಕಲ್ಯಾಣ, ಬೀದರ್‌ ಹಾಗೂ ಔರಾದ್‌ ತಾಲ್ಲೂಕಿನಲ್ಲಿ ಶೈಕ್ಷಣಿಕ ಮಟ್ಟ ಪಾತಾಳಕ್ಕೆ ಕುಸಿದಿದೆ.

ರಾಜ್ಯದ ಜಿಲ್ಲೆಗಳ ಪಟ್ಟಿಯಲ್ಲಿ ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದ್ದರೂ ಪಾಸಾಗಿರುವ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ 23,550 ವಿದ್ಯಾರ್ಥಿಗಳಲ್ಲಿ 14,649 ವಿದ್ಯಾರ್ಥಿಗಳು ಪಾಸಾಗಿದ್ದು, ಇದರಲ್ಲಿ  781 ವಿದ್ಯಾರ್ಥಿಗಳು ಶೇ 90ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಿದ್ದಾರೆ.

2,214 ವಿದ್ಯಾರ್ಥಿಗಳು ಶೇ 80ರಿಂದ 89ರಷ್ಟು ಅಂಕ, 3,499 ವಿದ್ಯಾರ್ಥಿಗಳು ಶೇ 70 ರಿಂದ 79 ರಷ್ಟು ಅಂಕ, 4,366 ವಿದ್ಯಾರ್ಥಿಗಳು ಶೇ 60ರಿಂದ 69ರಷ್ಟು ಅಂಕ, 3,384 ವಿದ್ಯಾರ್ಥಿಗಳು ಶೇ 50ರಿಂದ 59ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. 405 ವಿದ್ಯಾರ್ಥಿಗಳು ಶೇ 50ಕ್ಕಿಂತ ಕಡಿಮೆ ಅಂಕ ಗಳಿಸಿದ್ದಾರೆ.

ಜಿಲ್ಲೆಯಲ್ಲಿ ಬಾಲಕರ ಸಂಖ್ಯೆ ಅಧಿಕ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾತ್ರ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.  ಶೇ 60.49 ಬಾಲಕರು ಹಾಗೂ ಶೇ 63.94 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಜಾತಿಯ 5,423 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿ 2,865 (ಶೇ 52.83) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರಿಶಿಷ್ಟ ಪಂಗಡದ 3,675 ವಿದ್ಯಾರ್ಥಿಗಳ ಪೈಕಿ 2,173 (ಶೇ59.12) ಪಾಸಾಗಿದ್ದಾರೆ.

‘ಜಿಲ್ಲೆಯಲ್ಲಿ ಉರ್ದು ಹಾಗೂ ಮರಾಠಿ ಶಾಲೆಗಳ ಹೆಚ್ಚು ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ಗಣಿತದಲ್ಲಿ ಅನುತ್ತೀರ್ಣರಾಗಿದ್ದಾರೆ. ಕಡಿಮೆ ಗೌರವಧನ ಇರುವ ಕಾರಣ ಗ್ರಾಮೀಣ ಪ್ರದೇಶದ ಪ್ರೌಢ ಶಾಲೆಗಳಿಗೆ ಹೋಗಿ ಕೆಲಸ ಮಾಡಲು ಇಂಗ್ಲಿಷ್‌ ಶಿಕ್ಷಕ ಅಭ್ಯರ್ಥಿಗಳು ಆಸಕ್ತಿ ತೋರಲಿಲ್ಲ. ಇದು ಕಡಿಮೆ ಫಲಿತಾಂಶ ಬರಲು ಕಾರಣವಾಯಿತು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಇನಾಯತ್‌ ಅಲಿ ಶಿಂಧೆ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT