ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಗೆ 316 ಹೊಸ ಬಸ್‌ ಶೀಘ್ರ

Last Updated 14 ಮೇ 2017, 8:58 IST
ಅಕ್ಷರ ಗಾತ್ರ

ಬಬಲೇಶ್ವರ (ವಿಜಯಪುರ): ‘ವಿಜಯಪುರ ಜಿಲ್ಲೆಗೆ ₹70 ಕೋಟಿ ಮೊತ್ತದ 316 ಹೊಸ ಬಸ್‌ಗಳನ್ನು ಶೀಘ್ರವೇ ಒದಗಿಸಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಕಟಿಸಿದರು.
ಗ್ರಾಮದಲ್ಲಿ ಶನಿವಾರ ಸುಸಜ್ಜಿತ ಬಸ್ ನಿಲ್ದಾಣ ಲೋಕಾರ್ಪಣೆಗೊಳಿಸಿ ಮಾತನಾಡಿದ ಸಚಿವರು, ‘ಸಾರಿಗೆ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಇಲಾಖೆ ಹಲವಾರು ಕ್ರಮ ಕೈಗೊಂಡಿದೆ’ ಎಂದರು.

‘ವಿಜಯಪುರ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಹಲ ದಿನಗಳಿಂದ ಬೇಡಿಕೆ ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಹ ಈ ವಿಷಯದ ಬಗ್ಗೆ ಹಲ ಬಾರಿ ವಿನಂತಿಸಿಕೊಂಡಿದ್ದಾರೆ. ನಗರದಲ್ಲಿ ಜಾಗ ಒದಗಿಸಿಕೊಟ್ಟರೆ ನಗರ ಸಾರಿಗೆ ಬಸ್ ನಿಲ್ದಾಣ ನಿರ್ಮಿಸಲು ಇಲಾಖೆ ಸಿದ್ಧವಿದೆ’ ಎಂದು ಇದೇ ಸಂದರ್ಭ ಘೋಷಿಸಿದರು.

ಬಬಲೇಶ್ವರ ಭಾಗದಲ್ಲಿ ಬಸ್ ಡಿಪೋ ನಿರ್ಮಾಣದ ಬಗ್ಗೆಯೂ ಮನವಿ ಬಂದಿವೆ. ಬಬಲೇಶ್ವರದಲ್ಲಿ ಐದು ಎಕರೆ ಜಾಗ ನೀಡಿದರೆ ಅಲ್ಲಿ ಬಸ್ ಡಿಪೋ ನಿರ್ಮಾಣಕ್ಕೆ ಸಾರಿಗೆ ಇಲಾಖೆ ಮುಂದಾಗಲಿದೆ. ಜಾಗದ ಲಭ್ಯತೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರೆ ಶೀಘ್ರದಲ್ಲೇ ಬಸ್ ಡಿಪೋ ನಿರ್ಮಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಸೂಕ್ತ ಉತ್ತರ ನೀಡುತ್ತೇವೆ:  ಸಚಿವ ಎಂ.ಬಿ. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಪಟ್ಟಿ ಮಾಡಿ ಚಾರ್ಜ್‌ಶೀಟ್ ಹೊರಡಿಸಿರುವ ಬಿಜೆಪಿಗೆ ನಾವು ಸೂಕ್ತ ಉತ್ತರ ನೀಡುತ್ತೇವೆ. ನಾಲ್ಕು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಕೈಗೊಂಡ ಜನಪರ ಕಾರ್ಯ, ಅಭಿವೃದ್ಧಿ ಯೋಜನೆಗಳ ಸಮಗ್ರವಾದ ವಿವರಗಳನ್ನು ಸಿದ್ಧಪಡಿಸುತ್ತಿದ್ದೇವೆ. ಎಲ್ಲವನ್ನೂ ಜನತೆಯ ಮುಂದಿಡುತ್ತೇವೆ ಎಂದು ಹೇಳಿದರು.

‘ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಬಿಜೆಪಿ ಸರ್ಕಾರ ಐದು ವರ್ಷದ ಅವಧಿಯಲ್ಲಿ ಕೇವಲ ₹18 ಸಾವಿರ ಕೋಟಿ ಖರ್ಚು ಮಾಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈಗಾಗಲೇ ₹ 45 ಸಾವಿರ ಕೋಟಿ ವೆಚ್ಚ ಮಾಡಿ ಎಲ್ಲಾ ನೀರಾವರಿ ಯೋಜನೆಗಳನ್ನು ನಿರ್ಣಾಯಕ ಹಂತಕ್ಕೆ ತಲುಪಿಸುವ ಧೃಡಸಂಕಲ್ಪ ಮಾಡಿದೆ’ ಎಂದರು.

‘ನೀರಾವರಿ ಸೇರಿದಂತೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರದಲ್ಲಿ ಕೈಗೊಂಡಿದ್ದೇನೆ. ಜನತೆಯ ಆಶೀರ್ವಾದ ನನ್ನ ಮೇಲಿದೆ. ಮುಂದೆಯೂ ಸಹ ಆಶೀರ್ವಾದ ರೂಪದ ಪಗಾರವನ್ನು ನನಗೆ ನೀವು ನೀಡಬೇಕು’ ಎಂದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಯಡವೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಉಮೇಶ ಕೋಳಕೂರ, ಸುಜಾತಾ ಕಳ್ಳಿಮನಿ, ರಾಜ್ಯ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ವಿ.ಎನ್.ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT