ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಬಾಲಕಿಯರ ಮೇಲುಗೈ

Last Updated 14 ಮೇ 2017, 9:45 IST
ಅಕ್ಷರ ಗಾತ್ರ

ಗದಗ:  ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‌ಸಿ ಪರೀಕ್ಷೆಯಲ್ಲಿ ಗದಗ ಜಿಲ್ಲೆ ಉತ್ತಮ ಫಲಿತಾಂಶ ಪಡೆದಿದೆ. ಶೇ 100 ರಷ್ಟು ಶಾಲೆಗಳ ಫಲಿತಾಂಶ ಹೆಚ್ಚಾಗಿದೆ. ಜಿಲ್ಲೆಯ 18 ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದುಕೊಂಡಿವೆ. ಗ್ರಾಮೀಣ ಭಾಗದ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಬಾಲಕಿಯರ ಸಾಧನೆ:
ಪ್ರಸಕ್ತ ಸಾಲಿನಲ್ಲಿ ಗದಗ ಜಿಲ್ಲೆಯ 6,559 ಬಾಲಕರು, 6,678 ಬಾಲಕಿಯರು ಸೇರಿದಂತೆ ಒಟ್ಟು 13,237 ವಿದ್ಯಾ­ರ್ಥಿಗಳು ಎಸ್‍ಎಸ್‍ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಪೈಕಿ 4,687 (ಶೇ 71.46) ಬಾಲಕರು ಹಾಗೂ 5,323 (ಶೇ 79.71) ಬಾಲಕಿಯರು ಸೇರಿದಂತೆ 10,010 (ಶೇ 75.62) ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ. ಗ್ರಾಮಾಂತರ ಪ್ರದೇಶದ ಶೇ 73.37 ರಷ್ಟು ಬಾಲಕರು, ಶೇ 79.95 ರಷ್ಟು ಬಾಲಕಿಯರು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ನಗರದ ಪ್ರದೇಶದ ಶೇ 69.10 ರಷ್ಟು ಬಾಲಕರು, ಶೇ 79.45 ರಷ್ಟು ಬಾಲಕಿಯರು ಪಾಸಾಗಿದ್ದಾರೆ.

ಸರ್ಕಾರಿ ಶಾಲೆಗಳ ಸಾಧನೆ:
ಜಿಲ್ಲೆಯ 15 ಸರ್ಕಾರಿ, 3 ಖಾಸಗಿ ಸೇರಿದಂತೆ ಒಟ್ಟು 18 ಶಾಲೆಗಳು ಶೇ 100 ರಷ್ಟು ಫಲಿತಾಂಶ ಪಡೆದಿವೆ. ಗದಗ ಗ್ರಾಮೀಣ ವಲಯ ವ್ಯಾಪ್ತಿಯ ಮುಳ­ಗುಂ­ದದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮಲ್ಲಸಮುದ್ರದ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಪ್ರೌಢಶಾಲೆ ಶೇ 100 ರಷ್ಟು ಫಲಿತಾಂಶ ದಾಖಲಿಸಿವೆ.

ನರಗುಂದ ವಲಯದ ಬೆನಕೊಪ್ಪದ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಅರಷಿಣಗೋಡಿಯ ಉನ್ನತೀಕರಿಸಿದ ಪ್ರೌಢಶಾಲೆ ಹಾಗೂ ಮುಂಡರಗಿ ವಲಯದ ಯಕ್ಲಾಸಪುರದ ಉನ್ನತೀಕರಿಸಿದ ಸರ್ಕಾರಿ ಪ್ರೌಢ ಶಾಲೆ, ಹಿರೇವಡ್ಡ­ಟ್ಟಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊರ್ಲಹಳ್ಳಿಯ ಆದರ್ಶ ವಿದ್ಯಾಲಯ ಹಾಗೂ ರೋಣ ವಲಯದ ಬೆನಹಾಳ, ಹಾಲಕೆರೆಯ ಸರ್ಕಾರಿ ಪ್ರೌಢ ಶಾಲೆ, ನೆಲ್ಲೂರಿನ ಉನ್ನತೀಕರಿಸಿದ ಪ್ರೌಢಶಾಲೆ, ಗಜೇಂದ್ರಗಡದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಮತ್ತು ಶಿರಹಟ್ಟಿ ವಲಯದ ಪಿ.ಬಡ್ನಿಯ ಸರಕಾರಿ ಪ್ರೌಢಶಾಲೆ, ಛಬ್ಬಿ, ಮಜ್ಜೂರಿನ ಉನ್ನತೀಕರಿಸಿದ ಪ್ರೌಢಶಾಲೆ, ಶಿರಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಶೇ 100 ರಷ್ಟು ಫಲಿತಾಂಶ ಪಡೆದಿವೆ.ಜಿಲ್ಲೆಯ ಅನುದಾನಿತ 11, ಅನುದಾ­ನ ರಹಿತ 2 ಸೇರಿದಂತೆ ಒಟ್ಟು 13 ಶಾಲೆಗಳು ಶೇ 40 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿವೆ.

ಆಂಗ್ಲ ಮಾಧ್ಯಮದಲ್ಲಿ ಸಾಧನೆ:
ನಗರದ ಲೋಯಲಾ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಭಾಗ್ಯ ಸೂಡಿ, ಶಿರಹಟ್ಟಿ ತಾಲ್ಲೂಕು ಶಿಗ್ಲಿಯ ಎಸ್‍ಎಸ್‌ಕೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಕಾವ್ಯಾ ಸಂಗಣ್ಣವರ ತಲಾ 621 (ಶೇ 99.36) ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಸ್ಥಳೀಯ ಸಿಡಿಒ ಜೈನ ಪ್ರೌಢಶಾಲೆಯ ಲಕ್ಷ್ಮಿ ಪಾಟೀಲ, ಸಾಕ್ಷಿ ಜೈನ ಹಾಗೂ ಲಕ್ಷ್ಮೇಶ್ವರ ಪಟ್ಟಣದ ಸೆವೆಂಥ್ ಡೆ ಪ್ರೌಢ ಶಾಲೆಯ ಸುರಭಿ ಮರಿಸಿದ್ದಣ್ಣವರ ತಲಾ 620 (ಶೇ 99.20) ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಲೋಯಲಾ ಪ್ರೌಢಶಾಲೆಯ ನೇಹಾರಿಕಾ ಕೋರಿ 619 (ಶೇ 99.04) ಅಂಕ ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಸಾಧನೆ:
ಕನ್ನಡ ಮಾಧ್ಯಮದಲ್ಲಿ 616 (ಶೇ 98.56) ಅಂಕ ಪಡೆದ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಬಸವರಾಜ ಮಡಿವಾಳರ (ಪ್ರಥಮ), ರೋಣ ತಾಲ್ಲೂಕಿನ ನರೇಗಲ್‌ನ ಅನ್ನದಾನೇಶ್ವರ ವಿಜಯ ಕಾಲೇಜಿನ ಲತಾ ಕೊಟಗಿ 612 (ಶೇ 97.92 –ದ್ವಿತೀಯ), ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಲಕ್ಷ್ಮಿ ಜಂಗಲಿ 611 (ಶೇ 97.76 –ತೃತೀಯ) ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT