ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಹಾದ್‌ ಹೆಸರಿನಲ್ಲಿ ಭಯೋತ್ಪಾದನೆ

ಸಯೀದ್‌ ಗೃಹ ಬಂಧನ ವಿಸ್ತರಣೆಗೆ ಸಮರ್ಥನೆ
Last Updated 14 ಮೇ 2017, 20:13 IST
ಅಕ್ಷರ ಗಾತ್ರ

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಮತ್ತು ಭಯೋತ್ಪಾದನಾ ಗುಂಪು ಜಮಾತ್‌ ಉದ್‌ ದವಾದ (ಜೆಯುಡಿ) ಮುಖ್ಯಸ್ಥ ಹಫೀಜ್‌ ಸಯೀದ್ ಮತ್ತು ಆತನ ನಾಲ್ವರು ಸಹಚರರು ‘ಜಿಹಾದ್‌ನ ಹೆಸರಿನಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದ್ದಾರೆ’ ಎಂದು ಪಾಕಿಸ್ತಾನ ಹೇಳಿದೆ.

ಈ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದೂ ಅಲ್ಲಿನ ಒಳಾಡಳಿತ ಸಚಿವಾಲಯವು ನ್ಯಾಯಾಂಗ ಪರಾಮರ್ಶೆ ಸಮಿತಿಗೆ ತಿಳಿಸಿದೆ.

ಸಯೀದ್‌ ಈ ಸಮಿತಿಯ ಮುಂದೆ ಶನಿವಾರ ಹಾಜರಾಗಿದ್ದ. ಕಾಶ್ಮೀರದ ಜನರ ಪರವಾಗಿ ಧ್ವನಿ ಎತ್ತುವುದನ್ನು ತಡೆಯುವುದಕ್ಕಾಗಿಯೇ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ ಎಂದು ಆತ ಹೇಳಿಕೆ ಕೊಟ್ಟಿದ್ದಾನೆ. ಆದರೆ ಒಳಾಡಳಿತ ಸಚಿವಾಲಯ ಈ ವಾದವನ್ನು ತಿರಸ್ಕರಿಸಿದೆ.

ಸಯೀದ್‌ ಮತ್ತು ಆತನ ಸಹಚರರಾದ ಜಫರ್ ಇಕ್ಬಾಲ್‌, ಅಬ್ದುಲ್ ರೆಹಮಾನ್‌ ಆಬಿದ್‌, ಅಬ್ದುಲ್ಲಾ ಉಬೈದ್‌ ಮತ್ತು ಖಾಜಿ ಖಾಶಿಫ್‌ ನಿಯಾಜ್‌ ಅವರ ಬಂಧನಕ್ಕೆ ಸಂಬಂಧಿಸಿ ಸಂಪೂರ್ಣ ದಾಖಲೆಗಳನ್ನು ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಜಾಜ್‌ ಅಫ್ಜಲ್‌ ಖಾನ್‌ ಅವರ ನೇತೃತ್ವದ ಸಮಿತಿ ಸೂಚಿಸಿದೆ. ಸೋಮವಾರ ಮುಂದಿನ ವಿಚಾರಣೆ ನಡೆಯಲಿದೆ.

ಭಾರಿ ಭದ್ರತೆಯಲ್ಲಿ ಸಯೀದ್‌ ಮತ್ತು ಇತರ ನಾಲ್ವರನ್ನು ನ್ಯಾಯಾಲಯಕ್ಕೆ ಲಾಹೋರ್‌ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಲಯದ ಹೊರಗೆ ಸಯೀದ್‌ನ ಬೆಂಬಲಿಗರು ಸೇರಿದ್ದರು.

‘ನನ್ನ ವಿರುದ್ಧ ಸರ್ಕಾರ ಹೊರಿಸಿರುವ ಆರೋಪವನ್ನು ದೇಶದ ಯಾವುದೇ ಸಂಸ್ಥೆ ಸಾಬೀತು ಮಾಡಿಲ್ಲ. ಕಾಶ್ಮೀರದ ಜನರ ಪರವಾಗಿ ಧ್ವನಿ ಎತ್ತಿರುವುದಕ್ಕೆ ಮತ್ತು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿ ಪಾಕಿಸ್ತಾನ ಸರ್ಕಾರದ ನಿಲುವು ದುರ್ಬಲವಾಗಿದೆ ಎಂದು ಹೇಳಿರುವುದಕ್ಕೆ ನನ್ನನ್ನು ಮತ್ತು ನನ್ನ ಸಂಘಟನೆಯನ್ನು ಬಲಿಪಶು ಮಾಡಲಾಗಿದೆ’ ಎಂದು ಸಯೀದ್‌ ನ್ಯಾಯಾಲಯಕ್ಕೆ ಹೇಳಿದ್ದಾನೆ.

ಇದೇ ಕಾರಣಕ್ಕಾಗಿ ತನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿತ್ತು ಎಂದೂ ಆತ ಹೇಳಿದ್ದಾನೆ. ಗೃಹ ಬಂಧನದಲ್ಲಿ ಇರಿಸುವಂತೆ ಪಂಜಾಬ್‌ ಸರ್ಕಾರ ಮಾಡಿರುವ ಆದೇಶವನ್ನು ರದ್ದು ಮಾಡಬೇಕು ಎಂದು ಸಮಿತಿಯನ್ನು ಆತ ಕೋರಿದ್ದಾನೆ.

‘ವಿಶ್ವ ಸಂಸ್ಥೆ ಮತ್ತು ಕೆಲವು ಅಂತರರಾಷ್ಟ್ರೀಯ ಸಂಸ್ಥೆಗಳ ಒತ್ತಡದಿಂದಾಗಿ ಜಮಾತ್ ಉದ್ ದವಾ ಸಂಘಟನೆಗಳ ಮುಖಂಡರನ್ನು ಬಂಧಿಸಲಾಗಿತ್ತು’ ಎಂದು ಒಳಾಡಳಿತ ಸಚಿವಾ ಲಯದ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಸಯೀದ್‌ ಮತ್ತು ಇತರ ನಾಲ್ವರ ಬಂಧನ ಅವಧಿಯನ್ನು ಏಪ್ರಿಲ್‌ 30ರಂದು ಮತ್ತೆ 90 ದಿನ ವಿಸ್ತರಿಸಿ ಪಂಜಾಬ್‌ ಸರ್ಕಾರ ಆದೇಶ ಹೊರಡಿಸಿತ್ತು. ಶಾಂತಿ ಮತ್ತು ಸುರಕ್ಷತೆಗೆ ಅಪಾಯ ಒಡ್ಡುವ ಚಟುವಟಿಕೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಜನವರಿ 30 ರಂದು ಇವರನ್ನು ವಶಕ್ಕೆ ಪಡೆಯಲಾಗಿತ್ತು. ಜೆಯುಡಿ ಮತ್ತು ಫಲಾಹ್‌ ಎ ಇನ್ಸಾನಿಯತ್‌ ಫೌಂಡೇಶನ್‌ ಎಂಬ ಗುಂಪುಗಳನ್ನು ಉಗ್ರಗಾಮಿ ಸಂಘಟನೆಗಳು ಎಂದು ಪಾಕಿಸ್ತಾನ ಸರ್ಕಾರ ಪರಿಗಣಿಸಿದೆ.

ಜೆಯುಡಿ ಮತ್ತು ಸಯೀದ್‌ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಿರ್ಬಂಧ ವಿಧಿಸಲಾಗುವುದು ಎಂದು ಅಮೆರಿಕ ಎಚ್ಚರಿಕೆ ನೀಡಿದ್ದರಿಂದಾಗಿ ಅವರ ವಿರುದ್ಧ  ಪಾಕಿಸ್ತಾನ ಕ್ರಮ ಕೈಗೊಂಡಿದೆ.

ಕಾಶ್ಮೀರಕ್ಕಾಗಿ ಹೋರಾಟ
ಭಾರತದ ವಶದಲ್ಲಿರುವ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸು ತ್ತಿರುವುದಾಗಿ ನ್ಯಾಯಾಂಗ ಸಮಿತಿಗೆ ಸಯೀದ್‌ ತಿಳಿಸಿದ್ದಾನೆ. ಇತ್ತೀಚೆಗೆ ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾದ ಹಿಜ್ಬುಲ್‌ ಮುಜಾಹಿದೀನ್‌ ಮುಖಂಡ ಬುರ್ಹಾನ್‌  ವಾನಿಯ ಪರವಾಗಿ ಚಳವಳಿ ನಡೆಸುತ್ತಿರುವುದಾಗಿ ಆತ ಹೇಳಿದ್ದಾನೆ. ಅದನ್ನು ಮುಂದುವರಿಸುವು ದಾಗಿಯೂ ತಿಳಿಸಿದ್ದಾನೆ.

ಸಯೀದ್‌, ದಾವೂದ್‌ ಹಸ್ತಾಂತರಕ್ಕೆ ಮನವಿ ಮಾಡಿಲ್ಲ: ವಿದೇಶಾಂಗ ಇಲಾಖೆ
ನವದೆಹಲಿ:
ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್‌ ಮತ್ತು 1993ರ ಮುಂಬೈ ದಾಳಿಯ ಆರೋಪಿ ದಾವೂದ್‌ ಇಬ್ರಾಹಿಂನನ್ನು ಗಡೀಪಾರು ಮಾಡಲು ಪಾಕಿಸ್ತಾನವನ್ನು ಕೋರುವಂತೆ ಪ್ರಕರಣಗಳ ತನಿಖಾ ಸಂಸ್ಥೆಗಳು ಹೇಳಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಇಬ್ಬರನ್ನು ಭಾರತಕ್ಕೆ ಕರೆತರಲು ಸರ್ಕಾರ ನಡೆಸಿದ ಕ್ರಮಗಳೇನು ಎಂಬ ಮಾಹಿತಿ ಹಕ್ಕು ಅಡಿಯಲ್ಲಿನ ಅರ್ಜಿಗೆ ಈ ಉತ್ತರ ನೀಡಲಾಗಿದೆ. 1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದಲ್ಲಿ 260 ಜನರು ಮೃತಪಟ್ಟು 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸ್ಫೋಟದ ನಂತರ  ದಾವೂದ್‌ ಭಾರತದಿಂದ ಪರಾರಿಯಾ ಗಿದ್ದಾನೆ. ಆತ ಪಾಕಿಸ್ತಾನದಲ್ಲಿ ಆಶ್ರಯ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ.

* ಭಯೋತ್ಪಾದನಾ ಸಂಘಟನೆ ಎಂದು ಅಮೆರಿಕ 2014ರಲ್ಲಿ ಘೋಷಿಸಿದೆ.
* ಸಯೀದ್‌ ಗೃಹಬಂಧನ ಮತ್ತೆ 90 ದಿನ ವಿಸ್ತರಣೆ.
* ಗೃಹ ಬಂಧನ ವಿಸ್ತರಣೆ ಪ್ರಶ್ನಿಸಿ ಸಯೀದ್‌ ಸಲ್ಲಿಸಿರುವ ಅರ್ಜಿ ವಿಚಾರಣೆ.
* ಬಂಧನಕ್ಕೆ ಕಾರಣ ಕೊಡಲು ಸರ್ಕಾರಕ್ಕೆ ಸೂಚಿಸಿದ ನ್ಯಾಯಾಂಗ ಸಮಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT