ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್‌ನಲ್ಲಿ ಕನ್ನಡಿಗನ ಕೈಚಳಕ

Last Updated 14 ಮೇ 2017, 19:30 IST
ಅಕ್ಷರ ಗಾತ್ರ
ಭಾರತದ ಬಾಕ್ಸಿಂಗ್‌ ಕ್ಷೇತ್ರ ತುಸು ಸಂಕಷ್ಟದಲ್ಲಿದೆ. ಬಾಕ್ಸಿಂಗ್‌ ಫೆಡರೇಷನ್‌ ಮೇಲೆ ಇದ್ದ ನಿಷೇಧ ತೆರವುಗೊಂಡ ಬಳಿಕ ಚೇತರಿಸಿಕೊಳ್ಳುತ್ತಿದೆ ಯಾದರೂ ಹೊಸ ಪ್ರತಿಭೆಗಳು ಕಾಣಿಸುತ್ತಿಲ್ಲ. ಇದಕ್ಕೆ ಕಾರಣ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸರಿಯಾಗಿ ಚಾಂಪಿಯನ್‌ಷಿಪ್‌ಗಳು ನಡೆಯದಿರುವುದು.
 
ಶಿವ ತಾಪ, ವಿಕಾಸ್‌ ಕೃಷ್ಣನ್‌, ಮನೋಜ್ ಕುಮಾರ್‌, ಎಲ್‌.ದೇವೇಂದ್ರೂ ಸಿಂಗ್‌, ಸುಮಿತ್‌ ಸಂಗ್ವಾನ್‌ ಅವರಂಥ ಹಳಬರನ್ನೇ ಈಗಲೂ ನೆಚ್ಚಿಕೊಂಡಿದೆ. ಈಚೆಗೆ ಕೆಲ ಬಾಕ್ಸರ್‌ಗಳನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. 
 
ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ಈಚೆಗೆ ನಡೆದ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಬಾಕ್ಸರ್‌ಗಳು ಉತ್ತಮ ಪ್ರದರ್ಶನವನ್ನೇ ನೀಡಿ ಬಂದಿದ್ದಾರೆ. ಶಿವ ತಾಪ ಹಾಗೂ ಸುಮಿತ್‌ ಸಂಗ್ವಾನ್‌ ಬೆಳ್ಳಿ ಪದಕ, ಅಮಿತ್‌ ಹಾಗೂ ವಿಕಾಸ್‌ ಕೃಷ್ಣನ್ ಕಂಚಿನ ಪದಕ ಗೆದ್ದು ಬಂದಿದ್ದಾರೆ.
 
ಇವರೆಲ್ಲಾ ಹಳಬರೇ. ಅಲ್ಲದೆ, ಏಳು ಬಾಕ್ಸರ್‌ಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆದಿದ್ದಾರೆ. ವಿಶೇಷವೆಂದರೆ ತಂಡಕ್ಕೆ ಮಾರ್ಗದರ್ಶನ ನೀಡುತ್ತಿರುವ ಕೋಚ್‌ಗಳಲ್ಲಿ ಕರ್ನಾಟಕದ ಸಿ.ಎ.ಕುಟ್ಟಪ್ಪ ಕೂಡ ಒಬ್ಬರು. ಎಸ್‌.ಆರ್‌.ಸಿಂಗ್‌ ಮುಖ್ಯ ಕೋಚ್‌ ಆಗಿದ್ದಾರೆ. ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್‌ಗೆ ತೆರಳಿದ್ದ ಭಾರತ ಬಾಕ್ಸಿಂಗ್‌ ತಂಡಕ್ಕೂ ಕುಟ್ಟಪ್ಪ ಸಹಾಯಕ ಕೋಚ್‌ ಆಗಿದ್ದರು.
 
ವಿರಾಜಪೇಟೆಯ ಇವರು ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ. ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದ ವಿಜೇಂದರ್‌ ಅವರಿಗೂ ಮಾರ್ಗದರ್ಶನ ನೀಡಿದ್ದಾರೆ.
ಪಟಿಯಾಲದ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸ್ಪೋರ್ಟ್ಸ್‌ನಲ್ಲಿ (ಎನ್‌ಐಎಸ್‌) ಕೋಚಿಂಗ್‌ ತರಬೇತಿ ಪಡೆದಿರುವ ಅವರು 2007ರಿಂದಲೇ ಭಾರತ ತಂಡದೊಂದಿಗೆ ಇದ್ದಾರೆ.
 
ಇಟಲಿಯಲ್ಲಿ ನಡೆದ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌, ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌, ದೆಹಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ, ವಿಶ್ವ ಮಿಲಿಟರಿ ಕ್ರೀಡಾಕೂಟಗಳಲ್ಲಿ ಸಹಾಯಕ ಕೋಚ್‌ ಆಗಿದ್ದರು.
 
ರಾಷ್ಟ್ರೀಯ ಸಬ್‌ ಜೂನಿಯರ್‌ ಹಾಗೂ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ್ದ ಇವರು ಸೀನಿಯರ್‌ ವಿಭಾಗದಲ್ಲಿ ಕೇರಳ ರಾಜ್ಯದ ಪರ ಕಣಕ್ಕಿಳಿದಿದ್ದರು. ಅಲ್ಲದೆ, ಹೈದರಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಕುಟ್ಟಪ್ಪ ಅವರೊಂದಿಗೆ ‘ಪ್ರಜಾವಾಣಿ’ಗಾಗಿ ನಡೆಸಿದ ಸಂದರ್ಶನ ಇಲ್ಲಿದೆ.
 
* ಭಾರತ ಬಾಕ್ಸಿಂಗ್‌ ತಂಡದಲ್ಲಿ ನಿಮ್ಮ ಪಾತ್ರವೇನು?
ಬಾಕ್ಸಿಂಗ್‌ ಸ್ಪರ್ಧೆಗಳ ವಿಡಿಯೊ ವಿಶ್ಲೇಷಣೆ ಮಾಡಿ ಮಾರ್ಗದರ್ಶನ ನೀಡುವುದು. ತಪ್ಪುಗಳನ್ನು ಗುರುತಿಸಿ ಅದನ್ನು ಸರಿಪಡಿಸುವುದು. ಯಾವ ವಿಭಾಗದಲ್ಲಿ ದುರ್ಬಲರಿದ್ದಾರೆ, ಯಾವ ವಿಭಾಗದಲ್ಲಿ ಉತ್ತಮ ಕೌಶಲ ಹೊಂದಿದ್ದಾರೆ ಎಂಬುದನ್ನು ಗುರುತಿಸಿ ಮುಖ್ಯ ಕೋಚ್‌ಗೆ ಹೇಳಬೇಕು. ಸಮಸ್ಯೆಗಳಿದ್ದರೆ ವೈಯಕ್ತಿಕವಾಗಿ ಆಟಗಾರರನ್ನು ಕರೆದು ಹೆಚ್ಚುವರಿ ತರಬೇತಿ ನೀಡಬೇಕು.
 
 * ಕೋಚಿಂಗ್‌ನಲ್ಲಿ ಆಸಕ್ತಿ ಬಂದಿದ್ದು ಹೇಗೆ?
ಚಿಕ್ಕಂದಿನಿಂದಲೇ ಬಾಕ್ಸಿಂಗ್ ಕ್ರೀಡೆಯಲ್ಲಿ ನನಗೆ ಆಸಕ್ತಿ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದೇನೆ. ನಾನು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ಗೆದ್ದೆ.

ಪಟಿಯಾಲದ ಎನ್‌ಐಎಸ್‌ನಲ್ಲಿ ಇದ್ದಾಗ ಗುರುಬಕ್ಷ್‌ ಸಿಂಗ್‌ ಸಂಧು ಅವರು ನನ್ನನ್ನು ಶಿಬಿರಕ್ಕೆ ಕರೆತಂದು ತರಬೇತಿ ನೀಡಲು ಹೇಳಿದರು. ಅಲ್ಲದೆ, ಭಾರತ ತಂಡದ ಸಹಾಯಕ ಕೋಚ್‌ ಆಗಿ ನೇಮಕವಾಗಲು ಕಾರಣರಾದರು.
 
* ರಿಯೊ ಒಲಿಂಪಿಕ್ಸ್‌ ಅನುಭವ ಹೇಳಿ?
ಮೊದಲ ಬಾರಿ ನಾನು ಭಾರತ ಬಾಕ್ಸಿಂಗ್‌ ತಂಡದೊಂದಿಗೆ ಒಲಿಂಪಿಕ್ಸ್‌ ಹೋಗಿದ್ದೆ. ಸಹಜವಾಗಿಯೇ ಇದೊಂದು ವಿಶೇಷ ಅನುಭವ. ಪದಕ ಗೆಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ನಿರಾಸೆ ಇದೆ. ಖುಷಿಯ ವಿಚಾರವೆಂದರೆ ನಾನು ಮಾರ್ಗದರ್ಶನ ನೀಡಿದ ವಿಜೇಂದರ್‌ ಅವರು 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದು. 2007ರಿಂದ 2014ರವರೆಗೆ ಅವರಿಗೆ ತರಬೇತಿ ನೀಡಿದ್ದೇನೆ. ಆದರೆ, ಆ ಒಲಿಂಪಿಕ್ಸ್‌ಗೆ ಅವರೊಂದಿಗೆ ಹೋಗಲು ಸಾಧ್ಯವಾಗಲಿಲ್ಲ.
 
* ಭಾರತ ಬಾಕ್ಸಿಂಗ್‌ ತಂಡದ ಸದ್ಯದ ಪ್ರದರ್ಶನ ಮಟ್ಟ ಈಗ ಹೇಗಿದೆ?
2012ರಿಂದ 2016ರವರೆಗೆ ಫೆಡರೇಷನ್‌ ಮೇಲೆ ನಿಷೇಧ ಹೇರಿದ್ದರಿಂದ ತುಸು ಹಿನ್ನಡೆಯಾಗಿದೆ. ಸಬ್‌ ಜೂನಿಯರ್‌, ಜೂನಿಯರ್‌ ಟೂರ್ನಿಗಳೇ ನಡೆದಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಹೊಸ ಹುಡುಗರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ.

ಆದರೆ, ಅವರಿನ್ನೂ ದೊಡ್ಡಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿಲ್ಲ. ಈಚೆಗೆ ವಿದೇಶದ ಕೋಚ್‌ ಒಬ್ಬರನ್ನು ನೇಮಿಸಲಾಗಿದೆ. ಎಲ್ಲಿ ಹಾಗೂ ಯಾವ ರೀತಿ ತರಬೇತಿ ನಡೆಸಬೇಕು ಎಂಬುದರ ರೂಪುರೇಷೆ ಸಿದ್ಧಪಡಿಸುತ್ತಿದ್ದೇವೆ. ಪ್ರಮುಖವಾಗಿ ವಿದೇಶಗಳಲ್ಲಿ ಹೆಚ್ಚು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕಿದೆ. 
****
ಸದ್ಯದಲ್ಲೇ ಐಪಿಎಲ್‌ ಮಾದರಿಯಲ್ಲಿ ಬಾಕ್ಸಿಂಗ್‌ ಲೀಗ್‌ ಶುರುವಾಗಲಿದೆ. ಆಗ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಬಹುದು. ಭಾರತದ ಬಾಕ್ಸಿಂಗ್‌ನಲ್ಲಿ ಹೊಸ ಶಕೆ ಆರಂಭವಾಗಬಹುದು
–ಸಿ.ಎ.ಕುಟ್ಟಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT