ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಲನ್ ಯಶೋಗಾಥೆ

Last Updated 14 ಮೇ 2017, 19:30 IST
ಅಕ್ಷರ ಗಾತ್ರ
‘ನೀನು ತುಂಬಾ ನಿಧಾನವಾಗಿ ಬೌಲಿಂಗ್ ಮಾಡ್ತಿ. ಎದುರಾಳಿ ತಂಡಕ್ಕೆ ಹೆಚ್ಚು ರನ್ ನೀಡಿ ನಾವು ಸೋಲುವಂತೆ ಮಾಡುತ್ತಿ. ಬರೀ ಬ್ಯಾಟಿಂಗ್, ಫೀಲ್ಡಿಂಗ್ ಮಾಡು ಸಾಕು'-
 
ಪಶ್ಚಿಮ ಬಂಗಾಳದ ಪುಟ್ಟ ಊರು ಚಕ್ಡಾದಲ್ಲಿ 22 ವರ್ಷಗಳ ಹಿಂದೆ ಇಂತಹ ಬಿರುನುಡಿಗಳನ್ನು ಹೇಳಿದ್ದ ಆ ಹುಡುಗ ಇವತ್ತು ಎಲ್ಲಿದ್ದಾನೋ ಗೊತ್ತಿಲ್ಲ. ಆದರೆ  ಆ ಮಾತುಗಳಿಂದ ಕಣ್ಣಾಲಿಗಳನ್ನು ತುಂಬಿಕೊಂಡು ಟೆನಿಸ್ ಚೆಂಡನ್ನು ಆ ಹುಡುಗನಿಗೆ ಮರಳಿಸಿದ್ದ ಹುಡುಗಿ ಮಾತ್ರ ಈಗ ಮಹಿಳಾ ಕ್ರಿಕೆಟ್ ಲೋಕದ ಶ್ರೇಷ್ಠ ಮಧ್ಯಮವೇಗದ ಬೌಲರ್ ಆಗಿದ್ದಾರೆ. ಅವರೇ ಜೂಲನ್ ಗೋಸ್ವಾಮಿ.
 
ವನಿತೆಯರ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 181 ವಿಕೆಟುಗಳನ್ನು ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದ ಬೌಲರ್ ಆಗಿದ್ಧಾರೆ. ಹೋದವಾರ ಪೊಟೆಸ್ಕೂಮ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದಿದ್ದ ಏಕದಿನ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಅದರೊಂದಿಗೆ ದಶಕದ ಹಿಂದೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರಿನ್ ಫಿಟ್‍ಪ್ಯಾಟ್ರಿಕ್ ಅವರ 180 ವಿಕೆಟ್ ಗಳಿಕೆ ಸಾಧನೆಯನ್ನು ಮೀರಿ ನಿಂತರು. ಕ್ಯಾಥರಿನ್ ಅವರು 103 ಪಂದ್ಯಗಳಲ್ಲಿ ಆ ಸಾಧನೆ ಮಾಡಿದ್ದರು. ಜೂಲನ್‌ ಆ ಸಾಧನೆಗಾಗಿ 153 ಪಂದ್ಯಗಳನ್ನು ಆಡಿದರು.  
 
2002ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಜೂಲನ್ ಅವರು ಕಳೆದ 15 ವರ್ಷಗಳಿಂದ ಭಾರತ ತಂಡಕ್ಕಾಗಿ ತಮ್ಮ ಸಾಮರ್ಥ್ಯವನ್ನು ಧಾರೆಯೆರೆಯುತ್ತಿದ್ದಾರೆ. ಇಷ್ಟು ಸುದೀರ್ಘ ಅವಧಿಯಲ್ಲಿ ಬೌಲಿಂಗ್ ಮಾಡುತ್ತಿರುವುದು ಕೂಡ ಅವರ ವಿಶೇಷ ಸಾಧನೆಯಾಗಿದೆ. 
 
ಈ ಎತ್ತರವನ್ನು ಸಾಧಿಸಲು ಅವರು ಪಟ್ಟ ಶ್ರಮ ಸಣ್ಣದಲ್ಲ. ಭಾರತದ ಸಾಮಾಜಿಕ ವಾತಾವರಣದಲ್ಲಿ ಎಲ್ಲ ಮಹಿಳೆಯರು ಎದುರಿಸುವ ಸಂಕಷ್ಟ, ನಿಬಂಧನೆಗಳನ್ನು ಅವರು ಕೂಡ ಎದುರಿಸಿದ್ದಾರೆ. ಆದರೆ ಅವುಗಳನ್ನೆಲ್ಲ ಮೀರಿ ನಿಂತು, ಸತತ ಪ್ರಯತ್ನ, ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಅವರು ಸಾಧನೆಯ ತುತ್ತತುದಿ ಏರಿ ನಿಂತಿದ್ದಾರೆ. 
 
ಹುಡುಗರೊಂದಿಗೆ ಅಭ್ಯಾಸ; 
ಕೋಲ್ಕತ್ತದಿಂದ ಸುಮಾರು 80 ಕಿಲೋಮೀಟರ್ ದೂರದ ಊರಿನಲ್ಲಿ 1982ರಲ್ಲಿ ಜೂಲನ್ ಜನಿಸಿದರು. ಅವರ ತಂದೆ ವಾಯುಪಡೆಯಲ್ಲಿ ಉದ್ಯೋಗಿಯಾಗಿದ್ದರು. ಅವರ ಮೂವರು ಪುತ್ರಿಯರಲ್ಲಿ ಜೂಲನ್ ದೊಡ್ಡವರು.
 
ತನ್ನ ಸಹೋದರಿಯರೊಂದಿಗೆ ವಾಲಿಬಾಲ್, ಫುಟ್‌ಬಾಲ್‌ ಆಡುತ್ತಿದ್ದರು. ಎಂಟನೇ ವಯಸ್ಸಿನಲ್ಲಿದ್ದಾಗ ತಮ್ಮ ಮುಂದೆ ಕ್ರಿಕೆಟ್ ಆಡುತ್ತಿದ್ದ ಹುಡುಗರೊಂದಿಗೆ ತಾವು ಸೇರಿ ಕೊಂಡರು. ಟೆನಿಸ್‌ಬಾಲ್‌ ಬೌಲಿಂಗ್ ಮಾಡುವಾಗ ಅತಿ ನಿಧಾನವಾಗಿ ಅವರು ಎಸೆತಗಳನ್ನು ಹಾಕುತ್ತಿದ್ದರು.
 
ಬ್ಯಾಟ್ಸ್‌ಮನ್‌ಗಳು ಆ ಎಸೆತಗಳನ್ನು ಸಿಕ್ಸರ್‌ಗೆ ಎತ್ತುತ್ತಿದ್ದರು. ಜೂಲನ್ ಬ್ಯಾಟಿಂಗ್ ಮಾಡುವಾಗ ಹುಡುಗರು ಬಿರುಗಾಳಿ ವೇಗದಲ್ಲಿ ಎಸೆತಗಳನ್ನು ಹಾಕಿ ಔಟ್ ಮಾಡುತ್ತಿದ್ದರು. ಅಷ್ಟರ ಮೇಲೆ 'ಕ್ರಿಕೆಟ್ ಹುಡುಗಿಯರಿಗಲ್ಲ ಹೋಗು' ಎನ್ನುವ ಕಟಕಿಗಳು ಬೇರೆ. ಆ ಮಾತುಗಳೇ ಜೂಲನ್ ಮನದಲ್ಲಿ ಛಲದ ಬೀಜ ಬಿತ್ತಿದವು. ಮನರಂಜನೆಗಾಗಿ ಆಡುತ್ತಿದ್ದ ಆಟವನ್ನು ಗಂಭೀರವಾಗಿ ಪರಿಗಣಿಸಿದರು.
 
ಚೆಂಡನ್ನು ಜೋರಾಗಿ ಎಸೆಯುವ ಅಭ್ಯಾಸವನ್ನು ಏಕಾಂಗಿಯಾಗಿ ಮಾಡಿದರು. ಇದನ್ನು ಗಮನಿಸಿದ ತಂದೆ-ತಾಯಿ ದಿಗಿಲುಗೊಂಡರು. "ಕ್ರಿಕೆಟ್‌ನಲ್ಲಿ ಭವಿಷ್ಯ ಇಲ್ಲ. ಓದು-ಬರಹ ಮಾಡಿ ಉದ್ಯೋಗ ಹಿಡಿದು ಜೀವನ ರೂಪಿಸಿಕೊ' ಎಂದು ಬುದ್ಧಿವಾದ ಹೇಳಿದರು. ಅದಕ್ಕೆ ಬಗ್ಗದ ಜೂಲನ್ ಅವರಿಗೆ ಗದರಿಸುವ ಯತ್ನ ಮಾಡಿದರು. ಆಗೇನಾದರೂ ಆ ಬಾಲಕಿ ಹೆದರಿಬಿಟ್ಟಿದ್ದರೆ ಭಾರತದ ವನಿತೆಯರ ಕ್ರಿಕೆಟ್ ಕ್ಷೇತ್ರಕ್ಕೆ ಬಹುದೊಡ್ಡ ನಷ್ಟವಾಗುತ್ತಿತ್ತು. ಆದರೆ, ಹಾಗಾಗಲಿಲ್ಲ. ತಮ್ಮೂರಿನ ಕ್ರಿಕೆಟ್ ಕ್ಲಬ್ ಸೇರಿಕೊಂಡರು. 
 
ಆದರೆ 1997ರಲ್ಲಿ ಅವರ ಜೀವನಕ್ಕೆ ಮಹತ್ವದ ತಿರುವು ಲಭಿಸಿತು. ಈಡನ್ ಗಾರ್ಡನ್‌ನಲ್ಲಿ ನಡೆದ ನ್ಯೂಜಿಲೆಂಡ್  ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳ ನಡುವೆ ನಡೆದ ಫೈನಲ್ ಪಂದ್ಯ ನೋಡಿದರು. ಆ ಎರಡೂ ದೇಶಗಳ ಆಟಗಾರ್ತಿಯರ ಆಟದಿಂದ ಪ್ರಭಾವಿತರಾದ ಅವರು ಕ್ರಿಕೆಟ್‌ಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ನಿರ್ಧರಿಸಿದರು. ತಮ್ಮ ಊರಿನ ಅಕಾಡೆಮಿ ತೊರೆದರು.
 
ಅವರು ಕೋಲ್ಕತ್ತದ ವಿವೇಕಾನಂದ ಪಾರ್ಕ್‌ನಲ್ಲಿರುವ ಕ್ರಿಕೆಟ್ ಅಕಾಡೆಮಿಗೆ ಪ್ರವೇಶ ಪಡೆದುಕೊಂಡರು. ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ತಮ್ಮ ಊರಿನಿಂದ ಲೋಕಲ್ ಟ್ರೈನ್‌ನಲ್ಲಿ ಕೋಲ್ಕತ್ತಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 7.30ರಿಂದ ಸುಮಾರು 2 ತಾಸುಗಳ ತರಬೇತಿಯಲ್ಲಿ ಭಾಗವಹಿಸಿ ಊರಿಗೆ ಮರಳುತ್ತಿದ್ದರು. ಜೊತೆಗೆ ವಿದ್ಯಾಭ್ಯಾಸಕ್ಕೂ ಒತ್ತು ನೀಡಿದರು. ಅವರ ಶ್ರಮಕ್ಕೆ ಬೆಲೆ ಸಿಕ್ಕಿತು. ಮುಂದಿನ ಎರಡೇ ವರ್ಷಗಳಲ್ಲಿ ಬಂಗಾಳ ತಂಡಕ್ಕೆ ಅವರು ಆಯ್ಕೆಯಾದರು. 2002ರಲ್ಲಿ ಭಾರತ ತಂಡಕ್ಕೂ ಅವರು ಪದಾಪರ್ಣೆ ಮಾಡಿದರು. 
 
ವೇಗದ ಬೌಲರ್ ಶ್ರೇಯ:
2007ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದ ಭಾರತ ತಂಡದಲ್ಲಿ ಅವರಿದ್ದರು. ಟೆಸ್ಟ್ ಪಂದ್ಯದಲ್ಲಿ ಅವರು (78ಕ್ಕೆ10) ಅಮೋಘ ಬೌಲಿಂಗ್ ಮೂಲಕ ಭಾರತಕ್ಕೆ ಗೆಲುವಿನ ಕಾಣಿಕೆ ನೀಡಿದ್ದರು. ಅಲ್ಲದೇ ಪ್ರತಿ ಗಂಟೆಗೆ 120 ಕಿಲೋಮೀಟರ್ಸ್ ವೇಗದಲ್ಲಿ ಬೌಲಿಂಗ್ ಮಾಡಿದ ಅವರು ವಿಶ್ವದ ಅತಿ ವೇಗದ ಮಹಿಳಾ ಬೌಲರ್ ಶ್ರೇಯಕ್ಕೂ ಪಾತ್ರರಾದರು. ಅದೇ ವರ್ಷ ಐಸಿಸಿ ವರ್ಷದ ಆಟಗಾರ್ತಿ ಪುರಸ್ಕಾರವನ್ನೂ ತಮ್ಮದಾಗಿಸಿಕೊಂಡರು.
 
ಪದ್ಮ ಪುರಸ್ಕಾರವೂ ಅವರ ಮುಡಿಯನ್ನು ಅಲಂಕರಿಸಿತು. ಕೇವಲ 10 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು ನಿಗದಿಯ ಓವರುಗಳ ಕ್ರಿಕೆಟ್‌ಗೆ ಹೆಚ್ಚು ಗಮನ ನೀಡಿದರು. ತಂಡದಲ್ಲಿ ಹಲವು ಕಿರಿಯ ಆಟಗಾರ್ತಿಯರೊಂದಿಗೆ 34 ವರ್ಷದ ಜೂಲನ್‌ ಆಡುತ್ತಿದ್ದಾರೆ. ತಮ್ಮ ಅನುಭವದ ಪಾಠಗಳನ್ನು ಕಿರಿಯರೊಂದಿಗೆ ಹಂಚಿಕೊಳ್ಳುತ್ತ ತಾವೂ ಬೆಳೆಯುತ್ತಿದ್ದಾರೆ. 
 
ಅವರು ಇದೀಗ ರಚಿಸಿರುವ ದಾಖಲೆಯು ಇನ್ನೂ ಕೆಲವು ವರ್ಷಗಳವರೆಗೆ ಇರುವುದಂತೂ ಖಚಿತ. ಏಕೆಂದರೆ ಭಾರತಕ್ಕೆ ವನಿತೆಯರ ವಿಶ್ವಕಪ್ ಗೆದ್ದುಕೊಟ್ಟ ಮೇಲೆಯೇ ನಿವೃತ್ತರಾಗುವ ಛಲದಲ್ಲಿ ಜೂಲನ್ ಇದ್ದಾರೆ. ಅಲ್ಲಿಯವರೆಗೆ ಅವರು ತಮ್ಮ ವಿಕೆಟ್ "ದ್ವಿಶತಕ' ಬಾರಿಸುವ ನಿರೀಕ್ಷೆಯೂ ಇದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT