ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಪಾರ್ಕಿಂಗ್‌ ಶುಲ್ಕ ರದ್ದು

Last Updated 15 ಮೇ 2017, 5:06 IST
ಅಕ್ಷರ ಗಾತ್ರ

ವಿಜಯಪುರ: ಜನಾಕ್ರೋಶಕ್ಕೆ ವಿಜಯ­ಪುರ ಮಹಾನಗರ ಪಾಲಿಕೆ ಆಡಳಿತ ಮಣಿದಿದೆ. ಕಾರ್ಪೋರೇಟರ್‌ಗಳ ಸರ್ವಾನುಮತದ ನಿರ್ಣಯ ಅಂಗೀಕಾರ­ದಿಂದ ನಗರದ ಜನನಿಬಿಡ ರಸ್ತೆಗಳಲ್ಲಿ ವಸೂಲಾಗುತ್ತಿದ್ದ ವಾಹನ ಪಾರ್ಕಿಂಗ್‌ ಶುಲ್ಕ ರದ್ದುಗೊಂಡಿದೆ.

ಮಹಾತ್ಮಗಾಂಧಿ ರಸ್ತೆ, ಸಿದ್ಧೇಶ್ವರ ಗುಡಿ ರಸ್ತೆ ನಗರದ ಪ್ರಮುಖ ರಸ್ತೆಗಳು. ಬಹುತೇಕ ವಹಿವಾಟು ನಡೆಯುವುದು ಈ ಭಾಗದಲ್ಲೇ. ಬಹುಪಾಲು ಜನರು ತಮ್ಮ ಖಾಸಗಿ ವಾಹನಗಳಲ್ಲಿ ಈ ಕೇಂದ್ರ ಭಾಗಕ್ಕೆ ಭೇಟಿ ನೀಡಿ ವಿವಿಧ ಬಜಾರ್‌ಗೆ ತೆರಳಿ ಖರೀದಿ ಪ್ರಕ್ರಿಯೆ ನಡೆಸುತ್ತಿತ್ತು. ವೈಯಕ್ತಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿತ್ತು.

ನಿತ್ಯ ಸಹಸ್ರ, ಸಹಸ್ರ ಸಂಖ್ಯೆಯ ಜನ ಈ ಎರಡೂ ರಸ್ತೆ ಆಜುಬಾಜು ವಾಹನ ನಿಲುಗಡೆ ಮಾಡುತ್ತಿದ್ದರು. ಈ ಎರಡೂ ರಸ್ತೆಗಳನ್ನು ಈಚೆಗಷ್ಟೇ ಮಾಸ್ಟರ್‌ ಪ್ಲ್ಯಾನ್‌ನಡಿ ಅಭಿವೃದ್ಧಿಗೊಳಿಸಲಾಗಿತ್ತು. ಈ ಯೋಜನೆಯಡಿ ಲಭ್ಯವಿರುವ ಅವಕಾಶ ಬಳಸಿಕೊಂಡು, ಪಾಲಿಕೆಯ ಸಿಬ್ಬಂದಿ ವರ್ಗ ಏಕಾಏಕಿ ಪಾರ್ಕಿಂಗ್‌ ಶುಲ್ಕ ವಸೂಲಿಗೆ ಟೆಂಡರ್‌ ಮೂಲಕ ಅನುಮತಿ ನೀಡಿತ್ತು.

ತೆರಿಗೆ ಸ್ಥಾಯಿ ಸಮಿತಿ ಸೇರಿದಂತೆ, ಪಾಲಿಕೆಯ ಸಾಮಾನ್ಯ ಸಭೆಯ ಗಮ­ನಕ್ಕೂ ತಾರದೆ ಶುಲ್ಕ ವಸೂಲಿಗೆ ಅನುಮತಿ ನೀಡಲಾಗಿತ್ತು. ಗುತ್ತಿಗೆ ಪಡೆದ ಟೆಂಡರ್‌ದಾರರು ಸಾರ್ವಜ­ನಿಕರ ಮನವೊಲಿಸಿ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡುವ ಬದಲು, ಅತ್ಯಂತ ಕೆಟ್ಟ ನಡವಳಿಕೆ ಪ್ರದರ್ಶಿಸುತ್ತಿದ್ದುದು ನಾಗರಿಕರ ಕೆಂಗಣಿಗೆ ಗುರಿಯಾಗಿತ್ತು.

ಪಾಲಿಕೆಯ ಈ ನಿರ್ಧಾರ ಖಂಡಿಸಿ ಹಲ ಸಂಘಟನೆಗಳು ಬೀದಿಗಿಳಿದು ಪ್ರತಿಭಟಿಸಿದ್ದವು. ಸಾರ್ವಜನಿಕರು ಸಹ ಪಾಲಿಕೆಯ ಕಾರ್ಪೋರೇಟರ್‌ಗಳ ಬಳಿ ತಮ್ಮ ಅಸಮಾಧಾನ ದಾಖಲಿಸಿದ್ದರು. ಇದರ ಪರಿಣಾಮ ಇದೇ 11ರ ಗುರುವಾರ ನಡೆದ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀ­ಕರಿ­ಸುವ ಮೂಲಕ ಪಾಲಿಕೆ ಆಡಳಿತ ಶುಲ್ಕ ವಸೂಲಿ ರದ್ದುಗೊಳಿಸಲಾಗಿದೆ.

ನಿರ್ಣಯ ಅಂಗೀಕಾರ­ಗೊಳ್ಳು­ತ್ತಿದ್ದಂತೆ ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಗುತ್ತಿಗೆದಾರರು ಸಹ ಶುಲ್ಕ ವಸೂಲಿಗೆ ಮುಂದಾಗುತ್ತಿಲ್ಲ ಎಂದು ಎರಡೂ ರಸ್ತೆಯ ವ್ಯಾಪಾರಿಗಳು ತಿಳಿಸಿದರು.

ಅನುಕೂಲಕ್ಕಾಗಿ ಟೆಂಡರ್’: ಮಾಸ್ಟರ್‌ ಪ್ಲ್ಯಾನ್‌ನಡಿ ರಸ್ತೆ ಅಭಿವೃದ್ಧಿಗೊಳಿಸಿ­ದರೆ, ಆ ರಸ್ತೆ ಬದಿ ವಾಹನ ಪಾರ್ಕಿಂಗ್‌ ಶುಲ್ಕ ವಸೂಲಿ ಮಾಡಬಹುದು. ಇದು ಯೋಜನೆಯಲ್ಲಿಯೇ ಪ್ರಸ್ತಾಪ­ಗೊಂಡಿರುತ್ತದೆ.

ನಗರದಲ್ಲಿ ರಸ್ತೆ ಅಭಿವೃದ್ಧಿ ಇನ್ನೂ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಮಹಾತ್ಮ­ಗಾಂಧಿ ರಸ್ತೆ, ಸಿದ್ಧೇಶ್ವರ ರಸ್ತೆಯ ಅಭಿವೃದ್ಧಿ ಕಾಮಗಾರಿ ಸಹ ಸಂಪೂರ್ಣಗೊಂಡಿಲ್ಲ. ಇದರ ನಡುವೆಯೇ ನಗರ ಶಾಸಕರ ಬೆಂಬಲಿಗ ಮಹಾನಗರ ಪಾಲಿಕೆಯ ಸದಸ್ಯ­ರೊಬ್ಬರಿಗೆ ಅನುಕೂಲ ಮಾಡಿ­ಕೊಡುವ ಕಾರಣದಿಂದಲೇ ಏಕಾಏಕಿ ಪಾರ್ಕಿಂಗ್‌ ಶುಲ್ಕ ವಸೂಲಿಗೆ ಟೆಂಡರ್‌ ನಡೆಸಿ ಅನುಮತಿ ನೀಡಲಾಗಿತ್ತು.

ಟೆಂಡರ್‌ ನಡೆಸುವ ಸಂದರ್ಭವೂ ಸಹ ಪಾರದರ್ಶಕವಾಗಿಲ್ಲ. ಬಿಡ್‌ನಲ್ಲಿ ಪಾಲ್ಗೊಂಡವರನ್ನು ಹಿಂದೆ ಸರಿಸ­ಲಾಗಿದೆ. ಪಾಲಿಕೆಯ ಕೆಲ ಅಧಿಕಾರಿಗಳು ಸೇರಿಕೊಂಡು ‘ರಿಂಗ್‌’ ಮಾಡಿ ಸದಸ್ಯನಿಗೆ ಅನುಕೂಲ ಮಾಡಿ­ಕೊಟ್ಟಿ­ದ್ದರು’ ಎಂಬ ದೂರು ವ್ಯಾಪಕ ಪ್ರಮಾಣದಲ್ಲಿ ಕೇಳಿ ಬಂದಿತ್ತು. ಈ ಸಂಬಂಧ ‘ಪ್ರಜಾವಾಣಿ’ ವಿಶೇಷ ವರದಿಯನ್ನು ಪ್ರಕಟಿಸಿದ್ದು ಇಲ್ಲಿ ಉಲ್ಲೇಖನಾರ್ಹ.

ಸ್ವಾಗತಾರ್ಹ: ‘ವಿಜಯಪುರ ಬೃಹತ್ ನಗರವಲ್ಲ. ಎರಡೂ ರಸ್ತೆಗಳಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ­ದಿದ್ದರೂ ಪೇ ಪಾರ್ಕಿಂಗ್‌ ವ್ಯವಸ್ಥೆ ಆರಂಭಿಸಿದ್ದಕ್ಕೆ ಮೊದಲಿನಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದೀಗ ಸಾರ್ವಜನಿಕರ ನಿಲುವಿಗೆ ಮನ್ನಣೆ ನೀಡಿರುವುದು ಸ್ವಾಗತಾರ್ಹ. ಪಾರ್ಕಿಂಗ್‌ ಶುಲ್ಕ ರದ್ದುಗೊಳಿಸಿದ್ದಕ್ಕೆ ಮಹಾನಗರ ಪಾಲಿಕೆಯ ಜನಪ್ರತಿನಿಧಿಗಳಿಗೆ ಅಭಿನಂದನೆ’ ಎಂದು ರಾಹುಲ ಗುಪ್ತಾ ತಿಳಿಸಿದರು.

‘ಸಿಸಿ ಟಿವಿ ಕ್ಯಾಮೆರಾದ ಕಣ್ಗಾವಲಿರ­ಲಿಲ್ಲ. ನೆರಳಿನ ವ್ಯವಸ್ಥೆಯಿರಲಿಲ್ಲ. ವಾಹನಗಳಿಗೆ ಯಾವೊಂದು ಭದ್ರ­ತೆಯೂ ಇರಲಿಲ್ಲ. ಇಲ್ಲಗಳ ನಡುವೆಯೇ ಶುಲ್ಕ ವಸೂಲಿ ಮಾಡುತ್ತಿದ್ದುದ್ದಕ್ಕೆ ತೀವ್ರ ವಿರೋಧವಿತ್ತು. ಇದೀಗ ತೆಗೆದುಕೊಂಡ ನಿರ್ಧಾರ ಸ್ವಾಗತಾರ್ಹ. ಅಪಾರ ಸಂಖ್ಯೆಯ ನಗರಿಗರು ಪಾಲಿಕೆಯ ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ’ ಎಂದು ಮಹೇಶ ಚಟ್ಟೇರ ಪ್ರತಿಕ್ರಿಯಿಸಿದರು.

ಜನ ವಿರೋಧಿ ಟೆಂಡರ್‌ ರದ್ದು ಪಡಿಸುವಂತೆ ಸರ್ವಾನುಮತದ ನಿರ್ಣಯ ಅಂಗೀಕರಿಸಿದ್ದೇವೆ
ಪರಶುರಾಮ ರಜಪೂತ
ಪಾಲಿಕೆ ಸದಸ್ಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT