ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಹೊಸ ಕಟ್ಟಡ ನಿರ್ಮಾಣಕ್ಕೆ ಅಡ್ಡಿ

Last Updated 15 ಮೇ 2017, 5:07 IST
ಅಕ್ಷರ ಗಾತ್ರ

ಗುಬ್ಬಿ: ಪಟ್ಟಣದಲ್ಲಿ ಶಿಥಿಲಗೊಂಡ ಸಾರ್ವಜನಿಕ ಗ್ರಂಥಾಲಯ ಕೆಡವಿ, ನೂತನ ಕಟ್ಟಡ ನಿರ್ಮಿಸುವ ಸುಳಿವು ಕಾಣುತ್ತಿಲ್ಲ. ಜಿಲ್ಲಾ ಕೇಂದ್ರ ಗ್ರಂಥಾಲಯದ ಅಡಿಯಲ್ಲಿ ಇಷ್ಟೊತ್ತಿಗೆ ಸಾರ್ವಜನಿಕ ಗ್ರಂಥಾಲಯದ ನೂತನ ಕಟ್ಟಡ ತಲೆ ಎತ್ತಬೇಕಿತ್ತು. ಇದರಿಂದ ಓದುಗರು, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮಂದಿಗೆ ತೊಂದರೆ ಆಗಿದೆ.

ಹಳೇ ಗ್ರಂಥಾಲಯದ ಕಟ್ಟಡ ಕೆಡವಿ, ಜಾಗ ತೆರವು ಮಾಡಿಕೊಡಬೇಕಾದ ತಾಲ್ಲೂಕು ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕೈ ಚೆಲ್ಲಿ ಕುಳಿತಿದ್ದಾರೆ.

ನೂತನ ಕಟ್ಟಡ ನಿರ್ಮಿಸಲು ವಿವಿಧ ಮೂಲಗಳಿಂದ ಬಂದಿರುವ ಲಕ್ಷಾಂತರ ರೂಪಾಯಿ ಅನುದಾನ ಬಳಕೆಯಾಗದೆ ಕೊಳೆಯುತ್ತಿದೆ. ಇದರಿಂದ ಹಣವಿದ್ದರೂ, ಸುಂದರ ಕಟ್ಟಡದ ಕನಸು ನನಸಾಗುತ್ತಿಲ್ಲ. ಹೊಸ ಗ್ರಂಥಾಲಯದ ಕಟ್ಟಡದಲ್ಲಿ ಕುಳಿತು ಓದುವ ಅವಕಾಶ ಯಾವಾಗ ಕೂಡಿ ಬರುತ್ತದೆ ಎಂದು ಓದುಗರು ಕಾಯುತ್ತಿದ್ದಾರೆ. 

ಬೃಹತ್ ಆಗಿದ್ದ ಹಳೇ ಗ್ರಂಥಾಲಯ ಕಟ್ಟಡದಲ್ಲಿದ್ದ ಸಾವಿರಾರು ಪುಸ್ತಕ ಹಾಗೂ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೀಠೋಪಕರಣಗಳನ್ನು ಸ್ಥಳದ ಸಮಸ್ಯೆಯಿಂದ ಗ್ರಾಮ ಮಟ್ಟದ ಗ್ರಂಥಾಲಗಳ ಸುಪರ್ದಿಗೆ ವಹಿಸಲಾಗಿದೆ. ಒಂದೊಷ್ಟು ಪುಸ್ತಕಗಳು, ಪರಮಾರ್ಶನ ಗ್ರಂಥಗಳೊಟ್ಟಿಗೆ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾತ್ಕಾಲಿಕ ತಲೆಯೆತ್ತಿರುವ ಗ್ರಂಥಾಲಯ ಓದುಗರಿಗೆ ನೆರವಾಗಿದೆ.

ಪರಾಮರ್ಶನ ಕೃತಿಗಳು ಹಾಗೂ ದಿನಪತ್ರಿಕೆಗಳನ್ನು ಓದುವವರ ಸಂಖ್ಯೆಗೆ ಅನುಗುಣವಾದ ಸ್ಥಳಾವಕಾಶ  ಕಿರಿದಾಗಿರುವ ಗ್ರಂಥಾಲಯದಿಂದ ತೊಂದರೆ ಆಗಿದೆ. ಬಹುಬೇಗನೆ ನೂತನ ಕಟ್ಟಡ ನಿರ್ಮಾಣ ಪ್ರಾರಂಭವಾಗಿ ಉದ್ಘಾಟನೆಗೊಳ್ಳದಿದ್ದರೆ ಹಲವು ಮೂಲದಿಂದ ಬಂದಿರುವ ಅನುದಾನ ಹಿಂದಕ್ಕೆ ಹೋಗುವ ಸಾಧ್ಯತೆ ಇದೆ. ಅಲ್ಲದೇ ಗ್ರಾಮೀಣ ಗ್ರಂಥಾಲಯಗಳಿಗೆ ನೀಡಿರುವ ಸಾವಿರಾರು ಪುಸ್ತಕಗಳು ಹಾಗೂ ಪೀಠೋಪಕರಗಳು ಹಾಳಾಗುವ ಸಂಭವ ಹೆಚ್ಚು.

ಪ್ರಸ್ತುತ ಬೇಸಿಗೆ ರಜೆಯಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಯುವಕರು ಸಂಬಂಧಿಸಿದ ಪರೀಕ್ಷಾ ಪುಸ್ತಕಗಳಿಗಾಗಿ ಪರದಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರಿಗೆ ಮೀಸಲಿರುವ ಪುಸ್ತಕಗಳು ಈಗ ನಡೆಯುತ್ತಿರುವ ಗ್ರಂಥಾಲಯದಲ್ಲಿ ತಕ್ಷಣ ಸಿಗುತ್ತಿಲ್ಲ ಎಂಬ ಅಪವಾದ ಇದೆ.

ತಕ್ಷಣ ಹಳೇ ಕಟ್ಟಡ ಕೆಡವಿ, ನೂತನ ಕಟ್ಟಡ ನಿರ್ಮಿಸುವತ್ತ ಅಧಿಕಾರಿಗಳು ಗಮನಕೊಡಬೇಕು. ಲಕ್ಷಾಂತರ ಪುಸ್ತಕಗಳು ದೂಳು ಹಿಡಿಯದಂತೆ ನೋಡಿಕೊಳ್ಳಬೇಕು ಎಂದು ಓದುಗರಾದ ಬಸವರಾಜು, ಕೃಪಾ ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT