ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೆತೊಟ್ಟಿಯಂತಾದ ನಗರ ರಸ್ತೆಗಳು!

ಮಳೆಗಾಲಕ್ಕೆ ಮಾರಕವಾಗಲಿರುವ ಚರಂಡಿಗಳು
Last Updated 15 ಮೇ 2017, 5:58 IST
ಅಕ್ಷರ ಗಾತ್ರ
ಯಾದಗಿರಿ: ಮಳೆಗಾಲ ಈಗಾಗಲೇ ಅಂಬೆಗಾಲಿಟ್ಟಿದೆ. ಆದರೆ, ನಗರದಲ್ಲಿ ಹೂಳು ತುಂಬಿರುವ ಚರಂಡಿಗಳು ಹಾಗೇ ಇರುವುದರಿಂದ ಮಳೆಗಾಲದಲ್ಲಿ ಜನರ ಬದುಕು ಮತ್ತೆ ನರಕ ಸದೃಶವಾಗುವ ಲಕ್ಷಣ ಹೆಚ್ಚಾಗಿದೆ.
 
ಸ್ವಚ್ಛತೆ ವಿಚಾರದಲ್ಲಿ ಸದಾ ಕಿವಿಹಿಂಡಿಸಿಕೊಳ್ಳುತ್ತಲೇ ಬಂದಿರುವ ನಗರಸಭೆಯ ನಿರ್ಲಕ್ಷ್ಯ ಈಗಲೂ ಮುಂದುವರಿದಿದೆ. ₹ 5 ಕೋಟಿ ಉಳಿತಾಯ ಬಜೆಟ್‌ ಮಂಡಿಸಿರುವ ನಗರಸಭೆ, ಸ್ವಚ್ಛತೆಗೆ ಅನುದಾನ ಮೀಸಲಿಡುವುದು ಬಿಟ್ಟರೆ ಸ್ವಚ್ಛತೆ ಆಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದೇ ಇಲ್ಲ.

ಯಾವುದೇ ಸೌಲಭ್ಯ, ಸಾಮಗ್ರಿ ಇಲ್ಲದೇ ದುಡಿಯುವ ಬೆರಳೆಣಿಕೆಯಷ್ಟು ಪೌರಕಾರ್ಮಿಕರು ಶಕ್ತಾನುಸಾರ ನಗರ ಸ್ವಚ್ಛತೆ ಮಾಡುತ್ತಿದ್ದಾರೆ. ಆದರೂ ಯಾವುದೇ ಬೀದಿ, ಬಡಾವಣೆಗೆ ಹೆಜ್ಜೆ ಇಟ್ಟರೂ ದುರ್ನಾತ ಸೂಸುವ ಚರಂಡಿಗಳು, ಕಸ ತುಂಬಿದ ರಸ್ತೆಗಳು ಕಂಡುಬರುತ್ತವೆ.
 
ಗಾಂಧಿನಗರ, ಕನಕನಗರ, ಚಕ್ರಕಟ್ಟ, ವಿವೇಕಾನಂದ ನಗರ ಅಷ್ಟೇ ಏಕೆ, ನಗರಸಭೆಯ ಸುತ್ತಮುತ್ತಲಿನ ಹಲವು ಬಡಾವಣೆಗಳಲ್ಲಿನ ಚರಂಡಿಗಳು ಹೂಳಿನಿಂದ ತುಂಬಿದ್ದು, ನೀರು ರಸ್ತೆಗಳಿಗೆ ಹರಿಯುತ್ತಿರುವುದು ಸಿಬ್ಬಂದಿ, ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ.
 
ಒಳಚರಂಡಿ ಯೋಜನೆಗೆ ಹಿನ್ನಡೆ: 31ವಾರ್ಡುಗಳಿರುವ ನಗರಸಭೆಯಲ್ಲಿ ಇದುವರೆಗೂ ಒಳಚರಂಡಿ ನಿರ್ಮಾಣ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. 2012–13ನೇ ಸಾಲಿನಲ್ಲಿ ನಗರೋತ್ಥಾನ ಯೋಜನೆಯಡಿ ₹ 28ಕೋಟಿ ಅನುದಾನದಲ್ಲಿ ಬಸವೇಶ್ವರ ನಗರ, ಲಕ್ಷ್ಮೀ ನಗರ, ಹೈದರಾಬಾದ್ ಮುಖ್ಯರಸ್ತೆ, ಸರ್ಕಾರಿ ಜಿಲ್ಲಾ ಆಸ್ಪತ್ರೆ ರಸ್ತೆಗಳಲ್ಲಿ ಯುಜಿಡಿ ಕಾಮಗಾರಿ ಅನುಷ್ಠಾನ ಮಾಡಲಾಯಿತಾದರೂ, ನೀರು ಸರಾಗವಾಗಿ ಹರಿಯದೇ ಹಿನ್ನಡೆ ಆಗಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.
 
ಈಗಲೂ ಈ ಯುಜಿಡಿಯಲ್ಲಿ ಚರಂಡಿ ನೀರು ನಾಲ್ಕು ವರ್ಷಗಳಿಂದ ಸಂಗ್ರಹಗೊಂಡು ರೋಗಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ‘ಪೂರ್ವಸಿದ್ಧತೆ, ಸಮಗ್ರ ಸಮಾಲೋಚನೆ ಇಲ್ಲದೇ ಅನುದಾನ ಬಳಕೆಗೆ ಮುಂದಾಗಿದ್ದೇ ಮುಳುವಾಯಿತು. ಸರ್ಕಾರದ ಹಣವೂ ವ್ಯಯವಾಗಿದೆ; ಜನರಿಗೂ ಕಿರಿಕಿರಿ ತಪ್ಪಲಿಲ್ಲ’ ಎಂದು ನಾಗರಿಕರಾದ ದಿನೇಶ, ಬಸವರಾಜ ದೂರುತ್ತಾರೆ.
 
ಕಾಮಗಾರಿಗೆ ಚಾಲನೆ: ‘ತುರ್ತುಸಭೆ ನಡೆಸಿ ಎಲ್ಲಾ ವಾರ್ಡುಗಳಿಗೆ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನದಲ್ಲಿ ಮಂಜೂರು ನೀಡಲಾಗಿದೆ. ಹೊರಗುತ್ತಿಗೆ ಕಾರ್ಮಿಕರಿಂದ ಬೆಳಿಗ್ಗೆ 6ರಿಂದ 9ಗಂಟೆವರೆಗೆ ನಾನೇ ಖುದ್ದು ಮುಂದೆ ನಿಂತು ಹೂಳೆತ್ತಿಸುವ ಕೆಲಸ ಮಾಡಿಸುತ್ತಿದ್ದೇನೆ.

ಮೂರು ವಾರ್ಡುಗಳಲ್ಲಿ ಚರಂಡಿ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಮಾಹಿತಿ ನೀಡಿದರು.
 
ಯುಜಿಡಿ ಮತ್ತು 24X7 ಗುತ್ತಿಗೆದಾರರ ಸಭೆ ಕರೆದು ಯುಜಿಡಿ ನಿರ್ವಹಣೆ ಮಾಡಲೂ ಸೂಚಿಸಲಾಗುವುದು. ಸಭೆಯಲ್ಲಿ ಚರ್ಚೆಯ ನಂತರ ಸದಸ್ಯರ ಜತೆ ಸಮಾಲೋಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ  ತಿಳಿಸಿದರು.
 
ರಸ್ತೆ ನಿರ್ವಹಣೆಗೆ ₹ 47 ಲಕ್ಷ ಅನುದಾನ: ಬಹುತೇಕ ರಸ್ತೆಗಳಲ್ಲಿ ಚರಂಡಿ ನೀರು ಹಾಗೂ ಕಸ ತುಂಬಿದೆ. ಆದರೆ, ಪ್ರತಿವರ್ಷ ನಗರಸಭೆ ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಮೀಸಲಿಡುತ್ತದೆ ಎಂಬ ಸತ್ಯ ಬಹುತೇಕರಿಗೆ ತಿಳಿದಿಲ್ಲ. ಪ್ರಸಕ್ತ ವರ್ಷ ರಸ್ತೆಗಳ ಸ್ವಚ್ಛತೆ ಹಾಗೂ ನಿರ್ವಹಣೆಗಾಗಿ ₹ 47ಲಕ್ಷ ಅನುದಾನ ಮೀಸಲಿಟ್ಟಿದೆ. ಇಷ್ಟು ಅನುದಾನ ಇದ್ದರೂ ಸಮಸ್ಯೆ ಏಕೆ ನಿವಾರಣೆ ಆಗಿಲ್ಲ ಎಂಬ ಜನರ ಪ್ರಶ್ನೆಗೆ ನಗರಸಭೆಯ ಪುರಪಿತೃಗಳು ಉತ್ತರಿಸಬೇಕಿದೆ.
****
ಬೀದಿರಸ್ತೆಗಳ ದುರವಸ್ಥೆ
ಕನಕ ನಗರವನ್ನೊಮ್ಮೆ ಹೊಕ್ಕರೆ ಉಸಿರುಗಟ್ಟಿಸುವ ವಾತಾವರಣದಿಂದ ಬದುಕು ದುಸ್ತರ ಅನ್ನಿಸುವಷ್ಟು ರಸ್ತೆಗಳು ತಿಪ್ಪೆ ತೊಟ್ಟಿಯಂತಾಗಿವೆ. ಎತ್ತ ನೋಡಿದರೂ ಪ್ಲಾಸ್ಟಿಕ್‌ ಪೇಪರ್, ತ್ಯಾಜ್ಯ ತುಂಬಿದೆ. ಎಲ್ಲೂ ಕಸದ ಡಬ್ಬಿಗಳಿಲ್ಲ. ಹಾಗಾಗಿ, ರಸ್ತೆಬದಿಯಲ್ಲೇ ಕಸ ಎಸೆಯುತ್ತಾರೆ. ಹಂದಿ, ಜಾನುವಾರುಗಳು ಕಸವನ್ನು ರಸ್ತೆಗೆ ಹರಡುತ್ತವೆ. ಇದನ್ನೆಲ್ಲಾ ಪುನಃ ಒಟ್ಟುಗೂಡಿಸಿ ಕಸವಿಲೇವಾರಿ ಮಾಡಲು ವೃಥಾ ಶ್ರಮಿಸಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪೌರಕಾರ್ಮಿಕ.
****
75 ಅಲ್ಲ ಕೇವಲ 16 ಮಂದಿ
ಹೊರಗುತ್ತಿಗೆ ಆಧಾರದ 28 ಮಂದಿ ಸೇರಿ ಒಟ್ಟು 75 ಪೌರಕಾರ್ಮಿಕರು ಇದ್ದಾರೆ. ಆದರೆ, ಕೇವಲ 16 ಮಂದಿ ಮಾತ್ರ ಬೀದಿಗಿಳಿಯುತ್ತಾರೆ. ಕಾಯಂ ಪೌರಕಾರ್ಮಿಕರನ್ನು ಇತರೆ ಕೆಲಸಗಳಿಗೆ ನಿಯೋಜಿಸಿರುವುದೇ ಸಮಸ್ಯೆಗೆ ಕಾರಣವಾಗಿದೆ. ಪೂರ್ಣ ಪ್ರಮಾಣದಲ್ಲಿ ಪೌರಕಾರ್ಮಿಕರು ಬೀದಿಗಿಳಿಯದ ಹೊರತು ನಗರ ಸಂಪೂರ್ಣ ಸ್ವಚ್ಛತೆಗೆ ಅನ್ಯಮಾರ್ಗ ಇಲ್ಲ ಎನ್ನುತ್ತಾರೆ ಇಲ್ಲಿನ ಪೌರಕಾರ್ಮಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT