ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿದ ಹಂದಿ, ಬೀದಿನಾಯಿ, ಬಿಡಾಡಿ ದನ ಕಾಟ

Last Updated 15 ಮೇ 2017, 6:29 IST
ಅಕ್ಷರ ಗಾತ್ರ

ಹಾವೇರಿ: ನೀರಿನ ‘ಬರ’ ಎದುರಿಸುತ್ತಿರುವ ಹಾವೇರಿ ಜನತೆಗೆ ಈಗ ಹಂದಿ, ಬೀದಿನಾಯಿ ಹಾಗೂ ಬಿಡಾಡಿ ದನಗಳ ಕಾಟವು ಆತಂಕ ಸೃಷ್ಟಿಸಿದೆ. ನಗರದಲ್ಲಿ ವರ್ಷದ ಹಿಂದೆ ಹಂದಿ, ಬೀದಿನಾಯಿ, ಬಿಡಾಡಿ ದನಗಳ ಕಾಟ ಹೆಚ್ಚಿತ್ತು. ಹಂದಿಗಳು ಹಾಗೂ ಬೀದಿ ನಾಯಿಗಳು ಮಕ್ಕಳಿಗೆ ಕಚ್ಚಿ ಗಂಭೀರ ಗಾಯಗೊಳಿಸಿದ, ದಾರಿ ಹೋಕರ ಮೇಲೆ ದಾಳಿ ಮಾಡಿದ ಘಣನೆಗಳು ನಡೆದಿದ್ದವು.

ಅವು ವಾಹನಗಳಿಗೆ ಅಡ್ಡ ಬಂದು ಅವಘಢಗಳು ಸಂಭವಿಸಿದ್ದವು. ರೋಗಗಳ ಭೀತಿಯೂ ಕಾಡಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಚಿಕ್ಕಮಕ್ಕಳನ್ನು ಬಿಡುವುದೇ ಅಪಾಯಕಾರಿಯಾಗಿತ್ತು. ಆಗ, ನಗರಸಭೆಯ ಈ ಹಿಂದಿನ ಆಡಳಿತ ಮಂಡಳಿ ದಿಟ್ಟ ಕ್ರಮಕೈಗೊಂಡು ಹಾವಳಿ ನಿಯಂತ್ರಿಸಿತ್ತು. ಸತತ ಕಾರ್ಯಾಚರಣೆ ನಡೆಸಿತ್ತು. ಪೊಲೀಸರ ಸಹಕಾರವು ಕಾರ್ಯಾಚರಣೆ ಯಶಸ್ಸಿಗೆ ಕಾರಣವಾಗಿತ್ತು.

ಆದರೆ, 8 ಮಾರ್ಚ್‌ 2016 ರಂದು ಬೆಳಿಗ್ಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ನಗರಸಭೆಯ ಅಂದಿನ ಅಧ್ಯಕ್ಷ ಮಂಜುನಾಥ (ಗಣೇಶ) ಬಿಷ್ಟಣ್ಣನವರ ಮೇಲೆಯೇ ಹಲ್ಲೆ ನಡೆದಿತ್ತು. ಇದು ಹಾವೇರಿಯಲ್ಲಿ ‘ಹಂದಿ’ ಲಾಬಿಯ ಪ್ರಭಾವವನ್ನು ತೋರಿಸುತ್ತದೆ.

ಮತ್ತೆ ಹೆಚ್ಚಿತು: ಆದರೆ, ಕಳೆದ ಕೆಲವು ತಿಂಗಳಿನಿಂದ ಹಂದಿ ಮತ್ತ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದೆ. ಬಹುತೇಕ ಬಡಾವಣೆಗಳಲ್ಲಿ ಮರಿಗಳೊಂದಿಗಿನ ಹಂದಿಗಳ ಹಿಂಡೇ ಕಾಣಸಿಗುತ್ತಿವೆ. ಇವು ನಗರದ ತ್ಯಾಜ್ಯ, ಕೊಳಚೆಯನ್ನು ರಾಡಿ ಮಾಡಿ ಸ್ವಚ್ಛತೆಗೂ ಮಾರಕವಾಗಿವೆ. ದ್ವಿಚಕ್ರ ವಾಹನಕ್ಕೆ ಹಂದಿ ಅಡ್ಡಬಂದು ಸವಾರರು ಬಿದ್ದು ಗಾಯಗೊಂಡ ಘಟನೆಯೂ ನಡೆದಿದೆ. ಆದರೆ, ಹಂದಿ ನಿಯಂತ್ರಣಕ್ಕೆ ನಗರಸಭೆ ಮುಂದಾಗಿಲ್ಲ.

ತಂದು ಬಿಡುತ್ತಾರೆ: ‘ಎರಡು ವಾರಗಳ ಹಿಂದೆ ರಾತ್ರೋರಾತ್ರಿ ಪ್ರಮುಖ ಬಡಾವಣೆಗಳಲ್ಲಿ ಹಂದಿಗಳನ್ನು ಬಿಡಲಾಗಿದೆ. ಅಲ್ಲದೇ, ಪ್ರತಿನಿತ್ಯ ಅವುಗಳನ್ನು ಗಮನಿಸುತ್ತಾರೆ. ದೊಡ್ಡದಾದ ಬಳಿಕ ಹಿಡಿದುಕೊಂಡು ಹೋಗುತ್ತಾರೆ’ ಎಂದು ಹೆಸರು ಬಹಿರಂಗಪಡಿಲು ಇಚ್ಛಿಸದ ಮಂಜುನಾಥ ನಗರ ನಿವಾಸಿಯೊಬ್ಬರು ತಿಳಿಸಿದರು. 

ಬೀದಿ ನಾಯಿ ಕಾಟ: ನಗರದಲ್ಲಿ ಕೇವಲ ಹಂದಿಗಳು ಮಾತ್ರವಲ್ಲ, ಬೀದಿ ನಾಯಿಗಳ ಕಾಟವೂ ಹೆಚ್ಚಿದೆ. ಹಲವಾರು ಬೀದಿಗಳಲ್ಲಿ ನಾಯಿಗಳು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲೂ ಬಿಡುತ್ತಿಲ್ಲ. ಬೀದಿ ನಾಯಿ ಕಚ್ಚಿದ ಘಟನೆಗಳೂ ನಡೆದಿವೆ. 

ಶಾಪವಾದ ‘ಭಕ್ತಿ’: ‘ಪುಣ್ಯ’ ಪ್ರಾಪ್ತಿಗಾಗಿ ಎಂದು ರಸ್ತೆ ಬದಿ ಆಹಾರ ಹಾಕು ವುದು, ಮೊಸರೆಯನ್ನು ಚರಂಡಿ, ರಸ್ತೆಗೆ ಎಸೆಯುವುದು, ಫ್ಯಾಷನ್, ವಯ್ಯಾರ, ಪ್ರತಿಷ್ಠೆಗಾಗಿ ಬೀದಿ ಬದಿ ನಾಯಿಗಳಿಗೆ ಆಹಾರ ನೀಡುವವರಿಗೇನೂ ಕೊರತೆ ಇಲ್ಲ.

‘ಬೀದಿಯಲ್ಲಿನ ಯಾವುದೇ  ಪ್ರಾಣಿಗಳ ಬಗ್ಗೆ ಪ್ರೀತಿಯಿದ್ದರೆ, ಮನೆಯಲ್ಲಿಟ್ಟುಕೊಂಡು ಸಾಕಬೇಕು. ಅದು ‘ಮಾನವೀಯತೆ’. ರಸ್ತೆ ಬದಿಯಲ್ಲಿ ಅವುಗಳಿಗೆ ಆಹಾರ ಹಾಕಿ ಬೆಳೆಸುವ ಮೂಲಕ ರೋಗ ಹಬ್ಬಿಸಿ, ಸಮಾಜ ಕೆಡಿಸುವ ‘ಮಾರಕ’ ಕೆಲಸ ಮಾಡಬಾರದು’ ಎನ್ನುತ್ತಾರೆ ಬಸವೇಶ್ವರ ನಗರದ ಶಿವಯೋಗಿ ಬೆನ್ನೂರ.

ಅಪಾಯ ಏನು?: ಪ್ರಾಣಿ, ಪಕ್ಷಿಗಳಿಂದ ಮನುಷ್ಯನಿಗೆ ಬರುವ ರೋಗಗಳಿಗೆ ‘ಝೋನೋಸಿಸ್‌’ (zoonosis) ಎನ್ನುತ್ತಾರೆ. ಎಬೋಲಾ, ರೇಬಿಸ್‌, ಆ್ಯಂತ್ರಾಕ್ಸ್‌, ಸೈಸ್ಟಿಸೆರ್ಕೊಸಿಸ್‌, ಬರ್ಡ್‌ ಫ್ಲೂ, ಪ್ಲೇಗ್ ಮತ್ತಿತರ ಮಾರಕ ರೋಗಗಳು  ಪ್ರಾಣಿ, ಪಕ್ಷಿಗಳ ಮೂಲಕ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಮನುಷ್ಯನಿಗೆ ಬರುತ್ತವೆ. ಹಂದಿ, ಬೀದಿ ನಾಯಿಗಳು ರಾಡಿ ಮಾಡುವ ಕಾರಣ ಸೊಳ್ಳೆ, ಕ್ರಿಮಿ–ಕೀಟ ಹೆಚ್ಚಾಗಿ ಇನ್ನಷ್ಟು ರೋಗಗಳು ಬರುವ ಆತಂಕವಿದೆ.

ಬೇಡಿಕೆ: ದಕ್ಷಿಣ ಕರ್ನಾಟಕ ಹಾಗೂ ದಕ್ಷಿಣ ಭಾರತದ ವಿವಿಧ ಜಿಲ್ಲೆಗಳಲ್ಲಿ ಹಂದಿ ಮಾಂಸದ ಖಾದ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಪಂದಿ ಕರಿ, ಫೋರ್ಕ್‌ ಫ್ರೈ, ಫೋರ್ಕ್‌ ಚಿಲ್ಲಿ, ಫೋರ್ಕ್‌ ಡ್ರೈ, ಸರ್ಪತೈಲ್‌, ಗ್ರೀನ್ ಪೋರ್ಕ್‌, ಫೋರ್ಕ್ ಸುಕ್ಕಾ ಮತ್ತಿತರ ಖಾದ್ಯಗಳೂ ಜನಪ್ರಿಯ. ಹಂದಿ ಮಾಂಸಕ್ಕೆ ಕೆ.ಜಿ.ಗೆ ಸುಮಾರು ₹150ಕ್ಕೂ ಹೆಚ್ಚು ದರವಿದೆ. ಹೀಗಾಗಿ ಉತ್ತರ ಕರ್ನಾಟಕದ ಬೀದಿ ಗಳಲ್ಲಿ ಬಿಟ್ಟು ಹಂದಿಗಳನ್ನು ಸಾಕುತ್ತಾರೆ ಎಂಬ ದೂರುಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT