ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಾಧಾರಿತ ಶಿಕ್ಷಣಕ್ಕೆ ಸರ್ಕಾರದ ಒತ್ತು

Last Updated 16 ಮೇ 2017, 4:52 IST
ಅಕ್ಷರ ಗಾತ್ರ

ತುಮಕೂರು: ‘ಶಿಕ್ಷಣಕ್ಕಾಗಿ ಶಿಕ್ಷಣ ಅಲ್ಲ. ಅದರಿಂದ ಉದ್ಯೋಗ ಲಭಿಸಬೇಕಾಗುತ್ತದೆ. ಉದ್ಯೋಗಾಧಾರಿತ ಶಿಕ್ಷಣ ಕಲ್ಪಿಸುವ ದಿಶೆಯಲ್ಲಿ ಸರ್ಕಾರದ ನೀತಿಗಳು ಬದಲಾಗುತ್ತಿವೆ’ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಸೋಮವಾರ ‘ಮುಖ್ಯಮಂತ್ರಿಗಳ ಕೌಶಲ್ಯ ಅಭಿವೃದ್ಧಿ ಕರ್ನಾಟಕ’ ಕಾರ್ಯಕ್ರಮದಡಿ ‘ಕೌಶಲ್ಯ ತರಬೇತಿ ಆಕಾಂಕ್ಷಿತ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ವೆಬ್‌ಪೋರ್ಟ್’ ಉದ್ಘಾಟಿಸಿ ಮಾತನಾಡಿದರು.

‘ರಾಜ್ಯದಲ್ಲಿ 52 ವಿಶ್ವವಿದ್ಯಾಲಯಗಳು ಶಿಕ್ಷಣ ಕಲ್ಪಿಸುತ್ತವೆ. ಆದರೆ, ಇಲ್ಲಿ ವ್ಯಾಸಂಗ ಮಾಡಿ ಉದ್ಯೋಗ ಪಡೆಯುತ್ತಿರುವವರ ಪ್ರಮಾಣ ಶೇ 29ರಷ್ಟಿದೆ. ಇದನ್ನು ಶೇ 90ಕ್ಕೆ ಹೆಚ್ಚಿಸುವ ಪ್ರಯತ್ನವನ್ನು ಸರ್ಕಾರ ಮಾಡಲಿದೆ. ಇದಕ್ಕಾಗಿ ಶಿಕ್ಷಣ ಪಠ್ಯಕ್ರಮ ಮಾರ್ಪಾಡು ಮಾಡಬೇಕಾಗುತ್ತದೆ. ಉದ್ಯೋಗಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡುವ ಕೆಲಸ ಮಾಡಲಿದೆ’ ಎಂದರು.

‘ಈ ವೆಬ್‌ಪೋರ್ಟ್‌ನಲ್ಲಿ ನಿಮ್ಮ ಆಸಕ್ತಿ ಕ್ಷೇತ್ರ, ತರಬೇತಿ ಅಗತ್ಯ, ಕುಶಲತೆ, ವೈಯಕ್ತಿಕ ವಿವರ ದಾಖಲಿಸಿದರೆ ಸಾಕು. ‘ಕೌಶಲ್ಯ’ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ನಿಮಗೆ ತರಬೇತಿ ಕಲ್ಪಿಸುವ ಕೆಲಸ ಮಾಡಲಿದೆ’ ಎಂದು ತಿಳಿಸಿದರು.

ಶಾಸಕ ಬಿ.ಸುರೇಶಗೌಡ ಮಾತನಾಡಿ,‘ಶೇ 40ರಷ್ಟು ಯುವಶಕ್ತಿ ಹೊಂದಿರುವ ರಾಷ್ಟ್ರ ನಮ್ಮದು. ಇದನ್ನು ಸದ್ಬಳಕೆ ಮಾಡಿಕೊಳ್ಳದೇ ಇದ್ದರೆ ದೇಶಕ್ಕೆ ನಷ್ಟವಾಗಲಿದೆ. ಯುವಕರಿಗೆ ಉದ್ಯೋಗ ಕಲ್ಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಅದರ ಪ್ರಯೋಜನ ಪಡೆಯಬೇಕು’ ಎಂದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಜಿ.ಶಾಂತಾರಾಂ ಮಾತನಾಡಿದರು.

‘ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ’ ಇಲಾಖೆ, ತುಮಕೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ತಾ.ಪಂ. ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉದ್ಯೋಗಾವಕಾಶ
ಶಿರಾ: ‘ಕೌಶಲ ತರಬೇತಿಯಿಂದ ಯುವಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ’ ಎಂದು ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಸೋಮವಾರ ‘ಕೌಶಲ್ಯ ಕರ್ನಾಟಕ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ‘5 ಲಕ್ಷ ಯುವಜನರಿಗೆ ತರಬೇತಿ ನೀಡುವ ಉದ್ದೇಶ ಇದೆ. ಯುವ ಜನರು ತಮ್ಮ ಹೆಸರನ್ನು ತಾಲ್ಲೂಕು ಕೌಶಲ ಶಿಬಿರಗಳಲ್ಲಿ ನೋಂದಾಯಿಸಿಕೊಳ್ಳಬೇಕು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಪೌರಾಯುಕ್ತ ಯೋಗಾನಂದ್, ತಹಶೀಲ್ದಾರ್ ಎಸ್.ಸಿ.ಹೊನ್ನಶ್ಯಾಮೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅಂಬುಜಾ ಎಸ್.ಆರ್.ಗೌಡ, ಗಿರಿಜಮ್ಮ ಶ್ರೀರಂಗಯಾದವ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಹಮದ್ ಮುಬೀನ್ ಇದ್ದರು.

ಯೋಜನೆಗೆ ಕೈಜೋಡಿಸಿ
ಗುಬ್ಬಿ: ‘ತಾಲ್ಲೂಕಿನ ಎಲ್ಲ ನಿರುದ್ಯೋಗಿ ವಿದ್ಯಾವಂತರು ರಾಜ್ಯ ಸರ್ಕಾರದ ಪರಿಚಯಿಸಿರುವ ಯೋಜನೆಗೆ ಕೈ ಜೋಡಿಸಿ’ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಪ್ರಾರಂಭಗೊಂಡ ಮುಖ್ಯಮಂತ್ರಿಗಳ ‘ಕೌಶಲ್ಯ’ ಅಭಿವೃದ್ದಿ ತರಬೇತಿ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪರಿಣಾಮಕಾರಿಯಾಗಿ ಈ ಯೋಜನೆ ಯಶಸ್ವಿಯಾಗಲು ತಾಲ್ಲೂಕು ಮಟ್ಟದ ಅಧಿಕಾರಿಗಳು ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು’ ಎಂದರು.

ತಹಶೀಲ್ದಾರ್ ಎಸ್.ಎಲ್.ವಿಶ್ವನಾಥ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಶೆಟ್ಟಳ್ಳಪ್ಪ, ಸಣ್ಣರಂಗಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಂ.ಕುಮಾರ್, ಸಿಡಿಪಿಒ ಕೆ.ಆರ್.ಹೊನ್ನೇಶಪ್ಪ, ಬಿಇಒ ಸಿ.ನಂಜಯ್ಯ ಇದ್ದರು.
ಅಭಿಯಾನಕ್ಕೆ ಚಾಲನೆ

ಚಿಕ್ಕನಾಯಕನಹಳ್ಳಿ: ‘ರಾಜ್ಯ ಸರ್ಕಾರ ತಡವಾಗಿ ಆದರೂ ನಿರುದ್ಯೋಗ ಯುವಕ ಯುವತಿಯರ ನಿರುದ್ಯೋಗ ನಿವಾರಣೆಗೆ ‘ಕೌಶಲ್ಯ ಅಭಿವೃದ್ಧಿ’ ಯೋಜನೆ ಬಗ್ಗೆ ಗಮನ ಹರಿಸುವುದು ಶ್ಲಾಘನೀಯ’ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೌಶಲ್ಯ ಕರ್ನಾಟಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ‘ಯುವಕ ಯುವತಿಯರು ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತಾಲ್ಲೂಕಿನ 28 ಗ್ರಾಮ ಪಂಚಾಯಿತಿಗಳಲ್ಲೂ ನೋಂದಣಿ ಕಾರ್ಯ ನಡೆಯಲಿದೆ’ ಎಂದರು. ಲೀಡ್‌ಬ್ಯಾಂಕಿನ ಜ್ಯೋತಿಗಣೇಶ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ತಿಮ್ಮಯ್ಯ, ಜಿ.ಪಂ.ಸದಸ್ಯ ಕಲ್ಲೇಶ್, ತಹಶೀಲ್ದಾರ್ ಆರ್.ಗಂಗೇಶ್, ಸದಸ್ಯರಾದ ಇಂದಿರಮ್ಮ , ಪುರಸಭಾ ಸ್ಥಾಯಿ ಸಮಿತಿ ಮಲ್ಲಿಕಾರ್ಜುನಯ್ಯ, ದಯಾನಂದ್, ಉಪಸ್ಥಿತರಿದ್ದರು.

ಅವಕಾಶಕ್ಕೆ ಕೊರತೆ ಇಲ್ಲ
ಯಾವುದೇ ಕೈಗಾರಿಕೆ, ಕಂಪೆನಿಗಳ ಮುಂದೆ ನೋಡಿದರೆ ‘ಬೇಕಾಗಿದ್ದಾರೆ’ ಎಂಬ ಫಲಕಗಳು ಕಾಣಿಸುತ್ತವೆ. ಆದರೆ, ಅವುಗಳು ಕುಶಲತೆ ಮತ್ತು ಅನುಭವವುಳ್ಳವರಿಗೆ, ತರಬೇತಿ ಪಡೆದವರಿಗೆ ಮಾತ್ರ ಅವಕಾಶ ಕೊಡುತ್ತವೆ. ಇದ್ಯಾವುದು ಇಲ್ಲದೇ ಬರೀ ಅಂಕಪಟ್ಟಿಯಷ್ಟೇ ಇದ್ದರೆ ಉದ್ಯೋಗ ಪಡೆಯುವುದು ಕಷ್ಟ. ಕುಶಲತೆ ಮತ್ತು ತರಬೇತಿ ಪಡೆಯಲೇಬೇಕು ಎಂದು ಸಚಿವ ಜಯಚಂದ್ರ ಕಿವಿಮಾತು ಹೇಳಿದರು.

ಬೆಂಗಳೂರಿಂದಲೇ ವಿಮಾನ ಬಿಡಿಭಾಗ ಪೂರೈಕೆ
ಇಂಗ್ಲೆಂಡ್, ಫ್ರಾನ್ಸ್ ದೇಶದಲ್ಲಿ ವಿಮಾನ ತಯಾರಿಕಾ ಕಾರ್ಖಾನೆಗಳಿವೆ. ಆದರೆ, ಅವುಗಳಿಗೆ ಕಚ್ಚಾವಸ್ತು, ಬಿಡಿಭಾಗಗಳು ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರಿನಿಂದಲೇ  ಪೂರೈಕೆ ಆಗುತ್ತಿವೆ. ಕಾರಣ, ಮಾನವ ಸಂಪನ್ಮೂಲ, ನಮ್ಮ ಯುವಕರು ತಾಂತ್ರಿಕ ಕುಶಲತೆ ಹೊಂದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಸಚಿವರು  ತಿಳಿಸಿದರು.

318 ಯುವಕರ ನೋಂದಣಿ
ವೆಬ್‌ಪೋರ್ಟ್‌ನಲ್ಲಿ ಮೊದಲ ದಿನ ಜಿಲ್ಲೆಯ 318 ಯುವಕರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ‘ಕೌಶಲ್ಯಾಭಿವೃದ್ಧಿ ನಿಗಮ’ದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಉದ್ಯೋಗ ವಿನಿಮಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಅವುಗಳನ್ನು ಕೌಶಲ ಕೇಂದ್ರಗಳೆಂದು ಕರೆಯಲಾಗುವುದು ಎಂದರು.

ರಾಜ್ಯದ ಯುವಕರಿಗೆ ಹೊರ ದೇಶಗಳಲ್ಲಿ ಉದ್ಯೋಗಾವಕಾಶ ಒದಗಿಸುವ ಉದ್ದೇಶದಿಂದ ಜರ್ಮನಿ, ಫ್ರಾನ್ಸ್‌, ಇಟಲಿ ದೇಶಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಯತ್ನ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾ, ಯುಎಇ, ಜಪಾನ್‌ ಮೊದಲಾದ ದೇಶಗಳೊಂದಿಗೂ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದರು.

ಯಾವ್ಯಾವುದರಲ್ಲಿ ಕೌಶಲ ತರಬೇತಿ?
ಬಡಿಗತನ (ಕಾರ್ಪೆಂಟರ್), ಲೆಕ್ಕ ಸಹಾಯಕ, ವೆಬ್ ಪ್ರೊಗ್ರಾಮರ್, ಬ್ಯೂಟಿಶಿಯನ್,  ಕಂಪ್ಯೂಟರ್ ಪ್ರೊಗ್ರಾಮಿಂಗ್, ಡಾಟಾ ಎಂಟ್ರಿ ಆಪರೇಟರ್,  ಎಲೆಕ್ಟ್ರಿಶಿಯನ್, ಫಿಟ್ಟಿಂಗ್ಸ್, ಗ್ರಾಫಿಕ್ ಡಿಸೈನರ್, ಮೆಕ್ಯಾನಿಕ್, ಇನ್‌ಶ್ಯೂರನ್ಸ್ ಏಜೆಂಟ್,  ಕಂಪ್ಯೂಟರ್ ಶಿಕ್ಷಕ, ಪ್ಲಂಬಿಂಗ್, ರಿಸ್ಕ್ ಅನಾಲಿಸ್ಟ್, ಹಾರ್ಡ್‌ವೇರ್ ಸಪೋರ್ಟ್ ಟೆಕ್ನಿಷಿಯನ್, ರೇಡಿಯೊ ಟೆಕ್ನಿಷಿಯನ್, ಲ್ಯಾಪ್‌ಟಾಪ್ ರಿಪೇರಿ ಟೆಕ್ನಿಷಿಯನ್, ನರ್ಸರಿ ಮ್ಯಾನೇಜರ್, ಟ್ರ್ಯಾಕ್ಟರ್ ಮೆಕ್ಯಾನಿಕ್, ಗ್ರಾಫಿಕ್ ಡಿಸೈನರ್, ಜೂನಿಯರ್ ಡಿಟಿಪಿ ಆಪರೇಟರ್, ಮಶ್ರೂಮ್ ಪ್ರೊಡಕ್ಷನ್ ಸ್ಪೆಷಾಲಿಸ್ಟ್, ಮೊಬೈಲ್, ದೂರವಾಣಿ ಉಪಕರಣ ತಾಂತ್ರಿಕತೆ  ಸೇರಿ 40ಕ್ಕೂ ಹೆಚ್ಚಿನ ವಿಷಯಗಳ ಬಗ್ಗೆ ಕೌಶಲ ತರಬೇತಿ ಅವಕಾಶವಿದೆ.

ಪರಿಶ್ರಮ, ಪ್ರಾಮಾಣಿಕತೆ ಮತ್ತು ಶ್ರದ್ಧೆ ನಿಮ್ಮಲ್ಲಿದ್ದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಕಾಟಾಚಾರದ ಪ್ರಯತ್ನವಿದ್ದರೆ ಚಂದ್ರಲೋಕ, ದೇವಲೋಕಕ್ಕೆ ಹೋದರೂ ಉದ್ಯೋಗ ಸಿಗುವುದಿಲ್ಲ.
–ಬಿ.ಸುರೇಶಗೌಡ, ಶಾಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT