ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚ ಕೊಡ್ತೀನಿ: ಕಡತ ವಿಲೇವಾರಿ ಮಾಡಿ

Last Updated 16 ಮೇ 2017, 5:03 IST
ಅಕ್ಷರ ಗಾತ್ರ

ಹರಿಹರ: ‘ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಸೌಲಭ್ಯ ನೀಡಲು ಲಂಚ ನೀಡಲು ಸಿದ್ಧನಿದ್ದೇನೆ. ನನ್ನ ಕ್ಷೇತ್ರದ ಫಲಾನುಭವಿಗಳ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ’ ಎಂದು ಸದಸ್ಯ ವೀರಭದ್ರಪ್ಪ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಆಮಿಷವೊಡ್ಡಿದರು.

‘ಸಾಮಾಜಿಕ ಭದತಾ ಯೋಜನೆ ಸೌಲಭ್ಯ ಪಡೆಯಲು ಲಂಚ ನೀಡದಿದ್ದರೆ ಫಲಾನುಭವಿಗಳ ಕಡತಗಳು ವಿಲೇವಾರಿ ಆಗುವುದಿಲ್ಲ.  ನನ್ನ ಕ್ಷೇತ್ರದ ಎಲ್ಲಾ ಕಡಗಳಿಗೆ ತಲಾ ₹ 500ರಂತೆ ಲಂಚ ನೀಡಲು ಸಿದ್ಧನಿದ್ದೇನೆ. ದಯಮಾಡಿ ಬಡವರ ಕಡತಗಳನ್ನು ವಿಲೇವಾರಿ ಮಾಡಿ ಅವರಿಗೆ ಸೌಲಭ್ಯಗಳನ್ನು ದೊರಕಿಸಿಕೊಡಿ’ ಎಂದು ಮನವಿ ಮಾಡಿದರು.

ತಾಲ್ಲೂಕು ಆಡಳಿತದ ಪರವಾಗಿ ಸಭೆಗೆ ಬಂದಿದ್ದ ಸಿಬ್ಬಂದಿ ರೂಪಾ ಉತ್ತರ ನೀಡಲು ತಡವರಿಸಿದರು. ಸೂಕ್ತ ದಾಖಲೆ ಹಾಗೂ ಮಾಹಿತಿಗಳಿಲ್ಲದ ಸಿಬ್ಬಂದಿಯನ್ನು ಸಭೆಗೆ ಕಳುಹಿಸುವ ಅಗತ್ಯವಿಲ್ಲ. ಮಾಹಿತಿ ಗೊತ್ತಿರುವವರನ್ನು ಸಭೆ ಕಳುಹಿಸುವಂತೆ ತಹಶೀಲ್ದಾರ್‌ಗೆ ತಿಳಿಸುವಂತೆ ಅಧ್ಯಕ್ಷೆ ಶ್ರೀದೇವಿ ಸೂಚನೆ ನೀಡಿದರು.

‘ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ಹಲವು ದೂರುಗಳಿವೆ. ಈ ಬಗ್ಗೆ ವಿಚಾರಿಸಲು ಆ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಕಳೆದ ಎರಡು ಸಭೆಗಳಿಗೂ ಗೈರಾಗಿದ್ದಾರೆ. ಈ ಸಭೆಗೂ ಗೈರಾಗಿದ್ದಾರೆ. ಅವರನ್ನು ಸಭೆಗೆ ಹಾಜರಾಗುವಂತೆ ಆದೇಶಿಸಿ’ ಎಂದು ಇಒ ಕೆ.ನೀಲಗಿರಿಯಪ್ಪಗೆ ಸೂಚಿಸಿದರು.

‘ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ಎಂಜಿನಿಯರ್‌ ವೀಣಾ ಹಾಗೂ ಆಶಾ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡದೆ ಕಾಮಗಾರಿಗಳ ಬಗ್ಗೆ ಎಂ.ಬಿ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಖಾತ್ರಿ ಕಾಮಗಾರಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಿದವರಿಗೆ ಬಿಲ್ ಪಾವತಿಸಲು ಸತಾಯಿಸುತ್ತಿದ್ದಾರೆ. ಇದರಿಂದ ತಾಲ್ಲೂಕಿನಲ್ಲಿ ಖಾತ್ರಿ ಯೋಜನೆಗೆ ಹಿನ್ನಡೆಯಾಗುತ್ತಿದೆ’ ಎಂದು ಸದಸ್ಯರಾದ ಕೊಟ್ರಪ್ಪಗೌಡ ಹಾಗೂ ವೀರಭದ್ರಪ್ಪ ಆರೋಪಿಸಿದರು.

‘ಪ್ರತಿ ಗ್ರಾಮ ಪಂಚಾಯ್ತಿಗಳಿಗೆ ಆರೋಗ್ಯ ಇಲಾಖೆಯಿಂದ ನೀಡುವ ₹ 10 ಸಾವಿರ ನೈರ್ಮಲ್ಯ ಅನುದಾನ ದುರ್ಬಳಕೆಯಾಗುತ್ತಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಕೇವಲ ರಸೀದಿಗಳನ್ನು ಜೋಡಿಸಿ ಅನುದಾನ ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ನೈಜವಾಗಿ ಕಾರ್ಯಗಳು ನಡೆಯುತ್ತಿಲ್ಲ. ಈ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಬೇಕು’ ಎಂದು ವೀರಭದ್ರಪ್ಪ ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಲ್.ಹನುಮಾ ನಾಯ್ಕ ಮಾತನಾಡಿ, ‘ನೈರ್ಮಲ್ಯ ನಿಧಿ ಬಳಕೆಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೇರಿದಂತೆ 12 ಜನರ ಸಮಿತಿ ರಚಿಸಲಾಗುತ್ತದೆ. ನಿಧಿ ಬಳಕೆ ಬಗ್ಗೆ ಲೆಕ್ಕ ಪರಿಶೋಧನೆಯ ಸಂದರ್ಭ ಸೂಕ್ತ ಮಾಹಿತಿ ಒದಗಿಸಬೇಕು ಎಂಬ ನಿಯಮವಿದೆ’ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ 14 ಆರೋಗ್ಯ ಕೇಂದ್ರಗಳಿಗೆ ಗ್ರೂಪ್ 'ಡಿ' ನೌಕರರ ಹಾಗೂ ಸ್ಟಾಫ್ ನರ್ಸ್‌ಗಳ ನೇಮಕಾತಿ ಆರಂಭಗೊಂಡಿದೆ. ಶೀಘ್ರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು.

ಸಭೆಯಲ್ಲಿ ಚರ್ಚಿಸಿದ ವಿಷಯ ಹಾಗೂ ಕುಂದುಕೊರತೆಗಳ ಬಗ್ಗೆ  ಸದಸ್ಯರಿಗೆ ಮಾಹಿತಿ ದೊರೆಯುತ್ತಿಲ್ಲ. ಸದಸ್ಯರ ಪ್ರಶ್ನೆಗಳಿಗೆ ಇಲಾಖೆ ಕೈಗೊಂಡ ಕ್ರಮದ ಬಗ್ಗೆ ಲಿಖಿತ ಉತ್ತರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸದಸ್ಯ ಕೊಟ್ರಪ್ಪಗೌಡ ಆಗ್ರಹಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೋವರ್ಧನ್ ಮಾತನಾಡಿ, ‘ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಭತ್ತ ಹಾಗೂ ಮೆಕ್ಕೆಜೋಳವನ್ನು ಕ್ರಮವಾಗಿ 24ಸಾವಿರ ಮತ್ತು 6,773 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದ್ದೇವೆ. ಈವರೆಗೆ 89 ಮಿ.ಮೀ. ಮಳೆಯಾಗಿದೆ. ಹಂಗಾಮಿಗೆ ಅಗತ್ಯವಿರುವಷ್ಟು ರಸಗೊಬ್ಬರ ದಾಸ್ತಾನು ಸಂಗ್ರಹವಿದೆ. ಶೀಘ್ರ ರಿಯಾಯಿತಿ ದರದಲ್ಲಿ ಬಿತ್ತನೆಬೀಜ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಉಕ್ಕಡಗಾತ್ರಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಮ್ಮ ಮಾತನಾಡಿ, ‘ಉಕ್ಕಡಗಾತ್ರಿ ಧಾರ್ಮಿಕ ಕ್ಷೇತ್ರವಾಗಿದ್ದು, ಪ್ರವಾಸಿಗಳ ಸಂಖ್ಯೆ ಹೆಚ್ಚು. ಗ್ರಾಮದ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶ್ರೀದೇವಿ, ಉಪಾಧ್ಯಕ್ಷೆ ಜಯಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಸಿ. ಬಸವರಾಜ್, ಇಒ ಕೆ. ನೀಲಗಿರಿಯಪ್ಪ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

*

ಖಾತ್ರಿ ಯೋಜನೆಯ ಗುತ್ತಿಗೆದಾರರಿಂದ ಹೆಚ್ಚುಕಡಿಮೆ ಹಣ ಪಡೆದು, ಹೊಂದಾಣಿಕೆ ಮಾಡಿಕೊಂಡು, ಬಿಲ್ ಪಾವತಿಸಿ. ಸಂಕಷ್ಟ ನೋಡಲಾಗುತ್ತಿಲ್ಲ.
–ಕೊಟ್ರಪ್ಪಗೌಡ,
ತಾಲ್ಲೂಕು ಪಂಚಾಯ್ತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT