ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಘಾಟನೆ ಭಾಗ್ಯ’ ಕಾಣದ ಆಸ್ಪತ್ರೆ ಕಟ್ಟಡ

Last Updated 16 ಮೇ 2017, 9:05 IST
ಅಕ್ಷರ ಗಾತ್ರ

ಕವಿತಾಳ: ಸಮೀಪದ ಗೊಲ್ಲದಿನ್ನಿ ಗ್ರಾಮದಲ್ಲಿ ರಸ್ತೆಗಳು ಸರಿಯಿಲ್ಲ. ರಸ್ತೆಗಳಿಲ್ಲದ ಕಾರಣ ಬಸ್‌ ವ್ಯವಸ್ಥೆಯೂ ಇಲ್ಲ. ಆಸ್ಪತ್ರೆ ನಿರ್ಮಾಣವಾದರೂ ಉದ್ಘಾಟನೆಯಾಗಿಲ್ಲ. ಹೀಗೆ ಅನೇಕ ಇಲ್ಲಗಳ ಮಧ್ಯೆ ಗ್ರಾಮಗಳಲ್ಲಿ ಮೂಲ ಸೌಕರ್ಯದ ಸಮಸ್ಯೆಯೂ ಎದ್ದು ಕಾಣುತ್ತಿದೆ.

ಹಿರೇಹಣಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲದಿನ್ನಿ ಗ್ರಾಮವು ಸುಮಾರು ಎರಡು ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮವನ್ನು ಪ್ರತಿನಿಧಿಸುವ ಐದು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಕನಿಷ್ಠ ಗ್ರಾಮದಲ್ಲಿ ರಸ್ತೆಯನ್ನು ಸುವ್ಯವಸ್ಥಿತವಾಗಿ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ರಸ್ತೆಗಳು ಹದಗೆಟ್ಟಿದ್ದರಿಂದ ಸಾರಿಗೆ ಸಂಸ್ಥೆ ಅಧಿಕಾರಿಗಳು ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಆರೋಗ್ಯ ಸಮಸ್ಯೆ ಮತ್ತು ಇನ್ನಿತರೆ ವ್ಯವಹಾರಕ್ಕಾಗಿ ಜನರು ಪಟ್ಟಣಕ್ಕೆ ಹೋಗಬೇಕಾದರೆ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ. ಸ್ವಚ್ಛತೆ ಎಂಬುದು ಗ್ರಾಮದಲ್ಲಿ ಮರೀಚಿಕೆಯಾಗಿದೆ. ಎಲ್ಲಿ ನೋಡಿದರೂ ರಸ್ತೆಗಳಲ್ಲಿ ಹೊಂಡಗಳು ನಿರ್ಮಾಣವಾಗಿವೆ. ಅದರಲ್ಲಿ ಚರಂಡಿ ಗಲೀಜು ಭರ್ತಿಯಾಗಿ ಕೊಳಚೆಯಾಗಿದೆ.

ಕುಡಿಯುವ ನೀರಿನ ತೊಟ್ಟಿಯ ಸುತ್ತಮುತ್ತಲೂ ನೀರು ಹರಿದು ಹೋಗುವುದಕ್ಕೆ ವ್ಯವಸ್ಥೆ ಇಲ್ಲ. ಹೀಗಾಗಿ ಅದು ದುರ್ನಾತ ಬೀರುವ ಕೇಂದ್ರವಾಗಿದೆ. ಸ್ವಚ್ಛತೆಯಿಲ್ಲದೆ ಗಲೀಜು ಹರಡಿದೆ. ಇದರಿಂದ ಆರೋಗ್ಯದ ಸಮಸ್ಯೆಯು ಜನರನ್ನು ಕಾಡುತ್ತಿದೆ. ಸಣ್ಣ ಕಾಯಿಲೆಗೂ ಪಟ್ಟಣದತ್ತ ಹೋಗಬೇಕಾದ ಅನಿವಾರ್ಯತೆ ಇದೆ.

ಸುಮಾರು ₹18 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಆರೋಗ್ಯ ಸಹಾಯಕಿಯ ಉಪ ಕೇಂದ್ರ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷವಾಗಿದೆ. ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ. ಆಸ್ಪತ್ರೆ ನಿರ್ಮಾಣದ ಉದ್ದೇಶ ಈಡೇರದ ಕಾರಣ ಗೊಲ್ಲದಿನ್ನಿ, ಚಿಕ್ಕಬಾದರದಿನ್ನಿ ಮತ್ತು ದೇವತಗಲ್‌ ಗ್ರಾಮಸ್ಥರು ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ.

‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಆರೋಗ್ಯ ಉಪಕೇಂದ್ರದ ಉದ್ಘಾಟನೆ ಮಾಡುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಆದರೂ  ಪ್ರಯೋಜನವಾಗಿಲ್ಲ’ ಎನ್ನುವ ಆರೋಪ ಗ್ರಾಮದ ನಿವಾಸಿಗಳಾದ ಗುರುರಾಜ ತುಗ್ಗಲದಿನ್ನಿ, ನಾಗರಾಜ, ರಮೇಶ ಮತ್ತು ಬಸವರಾಜ ತಳವಾರ ಅವರದ್ದು.

*

ಗ್ರಾಮದ ಜನರು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೇರೆ ಕಡೆಗೆ ಹೋಗಬೇಕಾಗಿದೆ. ಗ್ರಾಮದಲ್ಲಿ ಆಸ್ಪತ್ರೆ ಇದ್ದರೂ ಇಲ್ಲದಂತಾಗಿದೆ. 
ವೆಂಕಟೇಶ ಶಂಕ್ರಿ
ಮುಖಂಡ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT