ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಕಲ್‌ನಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರ

Last Updated 16 ಮೇ 2017, 9:33 IST
ಅಕ್ಷರ ಗಾತ್ರ

ಕೊಪ್ಪಳ: ‘ತಳಕಲ್‌ನಲ್ಲಿ ಆರಂಭಿಸುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ರಾಷ್ಟ್ರೀಯ ಕೌಶಲ ಅಭಿವೃದ್ಧಿ ಕೇಂದ್ರವನ್ನು 10 ಎಕರೆ ಪ್ರದೇಶದಲ್ಲಿ ₹ 90 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು’ ಎಂದು ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಮುಖ್ಯಮಂತ್ರಿ ಕೌಶಲ್ಯ ಅಭಿವೃದ್ಧಿ ಕರ್ನಾಟಕ ಕಾರ್ಯಕ್ರಮದ ಅಡಿ ಕೌಶಲ್ಯ ತರಬೇತಿ ಆಕಾಂಕ್ಷಿತ ಯುವಜನರ ಬೇಡಿಕೆ ಸಮೀಕ್ಷೆ ಮತ್ತು ನೋಂದಣಿ ಕಾರ್ಯಕ್ರಮದ ವೆಬ್‌ ಪೋರ್ಟಲ್‌ನ್ನು ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ 30 ಕೋಟಿಗೂ ಹೆಚ್ಚು ಯುವಜನರು ಇದ್ದಾರೆ. ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣ ಮಾತ್ರವಲ್ಲ, ಉದ್ಯಮಶೀಲತೆಯನ್ನೂ ಕಲಿಸಬೇಕಿದೆ. ಅದಕ್ಕಾಗಿ ಈ ವರ್ಷ 5 ಲಕ್ಷ ಯುವಜನರಿಗೆ ಕೌಶಲ ತರಬೇತಿ ನೀಡುವ ಗುರಿ ಇದೆ’ ಎಂದರು.

‘ಕೌಶಲ ಅಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಗುರಿ ಇದೆ. ಕುಂಬಾರಿಕೆ, ಕಮ್ಮಾರಿಕೆ, ಕಸೂತಿ ಕಲೆಗಳು, ಶಿಲ್ಪ ಕೆತ್ತನೆ ಉದ್ಯೋಗಕ್ಕೆ ಇತ್ತೀಚೆಗೆ ವ್ಯಾಪಕ ಬೇಡಿಕೆ ಇದೆ.  ಇದಕ್ಕಾಗಿಯೇ 2017-18 ನೇ ಸಾಲಿನಲ್ಲಿ ರಾಜ್ಯದಲ್ಲಿ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಖಾಸಗಿಯವರ ಸಹಭಾಗಿತ್ವದಲ್ಲಿ ಸ್ಥಾಪಿಸಲು ಈಗಾಗಲೇ  ಟಾಟಾ ಕಂಪೆನಿಯ ಸಹಭಾಗಿತ್ವ ಪಡೆಯಲು ಮಾತುಕತೆ ನಡೆಸಲಾಗಿದೆ’ ಎಂದರು.

‘ಹೈದರಾಬಾದ್‌ – ಕರ್ನಾಟಕ ಸಹಿತ ರಾಜ್ಯದ 20 ಜಿಲ್ಲೆಗಳಲ್ಲಿ ವಸತಿಸಹಿತ ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಗುವುದು’ ಎಂದು ಅವರು ಹೇಳಿದರು. ಸಂಸದ ಕರಡಿ ಸಂಗಣ್ಣ ಮಾತನಾಡಿ, ‘ಕೌಶಲ ತರಬೇತಿ ಪಡೆದರೆ, ಅಂಥವರು ಬದುಕು ಕಟ್ಟಿಕೊಳ್ಳಲು ಸಾಧ್ಯ. ಶಿಕ್ಷಣ ಕೇವಲ ಸರ್ಕಾರಿ ನೌಕರಿಗಾಗಿ ಎಂಬ ಮನಸ್ಥಿತಿ ಬದಲಾಗಬೇಕಿದೆ.

ಯಾವುದೇ ಉದ್ಯೋಗವನ್ನು ಕೀಳು ಎಂದು ಭಾವಿಸಬಾರದು. ಕೊಪ್ಪಳಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾತಿಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರೆ ಮಂಜೂರು ಮಾಡಿಸಲು ಸಹಕಾರ ನೀಡಲಾಗುವುದು’ ಎಂದರು.

ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಮಾತನಾಡಿ, ‘18 ರಿಂದ 35 ವರ್ಷದೊಳಗಿನ ಯಾವುದೇ ಯುವಜನರು ಕೌಶಲ ಅಭಿವೃದ್ಧಿಗೆ ನೋಂದಣಿ ಮಾಡಿಸಬಹುದು. ವಿದ್ಯಾರ್ಹತೆಯ ಯಾವುದೇ ಮಿತಿ ಇದರಲ್ಲಿ ಇಲ್ಲ.

ನಾಡಕಚೇರಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಅಥವಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಹಾಗೂ ಮನೆ ವಿಳಾಸ ಇಷ್ಟು ನೀಡಿ, ನೋಂದಣಿ ಮಾಡಿಸಬಹುದು. 225 ವಿಷಯಗಳಲ್ಲಿ ತರಬೇತಿ ನೀಡಲು ಅವಕಾಶವಿದೆ. ಈ ಪೈಕಿ ಗರಿಷ್ಠ 5 ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು.  ತರಬೇತಿಗೆ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು’ ಎಂದರು.

ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹದೇವನ್, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ಉಪವಿಭಾಗಾಧಿಕಾರಿ ಗುರುದತ್ ಹೆಗ್ಡೆ, ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಡಾ.ಪ್ರಮೋದ್ ಗಾಯಿ, ಜಿ.ಪಂ. ಉಪಕಾರ್ಯದರ್ಶಿ ಎನ್.ಕೆ. ತೊರವಿ ಇದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕಲ್ಲೇಶ್ ಅವರು ಸ್ವಾಗತಿಸಿದರು.

*

ದೇಶದಲ್ಲಿ ಯುವಶಕ್ತಿ ಸಮರ್ಪಕ ಬಳಕೆಯಾದರೆ ಮಾತ್ರ ದೇಶದ ಆಂತರಿಕ ಉತ್ಪನ್ನ ಹಾಗೂ ಆರ್ಥಿಕ ವ್ಯವಸ್ಥೆ ಶಕ್ತಿಯುತವಾಗಲಿದೆ.
ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಮತ್ತು  ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT